ಬೇಟೆಗಾರರ ಆಟಕ್ಕೆ ಎರಡು ಕರಡಿ ಬಲಿ?

ಹೊಸದುರ್ಗ: ತಾಯಿ ಮತ್ತು ಮರಿ ಸೇರಿ ಎರಡು ಕರಡಿಗಳು ದಾರುಣವಾಗಿ ಸಾವಿಗೀಡಾಗಿರುವ ಘಟನೆ ತಾಲೂಕಿನ ಶ್ರೀರಾಂಪುರ ಹೋಬಳಿಯ ಮೈಲಾರಪುರದಲ್ಲಿ ಗುರುವಾರ ಬೆಳಕಿಗೆ ಬಂದಿದೆ.

ಗ್ರಾಮದ ಅಮೃತ ಮಹಲ್ ಕಾವಲಿನಲ್ಲಿ ಕಳ್ಳರು ವನ್ಯಜೀವಿಗಳ ಬೇಟೆಗಾಗಿ ಅನಧಿಕೃತವಾಗಿ ಹರಿಸಿದ್ದ ವಿದ್ಯುತ್ ತಂತಿಗೆ ಸಿಲುಕಿ ಕರಡಿಗಳು ಸಾವಿಗೀಡಾಗಿವೆ ಎನ್ನಲಾಗಿದೆ.

ತಾಯಿ ಬೆನ್ನಿಗೆ ಅವುಚಿಕೊಂಡಿರುವ ಸ್ಥಿತಿಯಲ್ಲಿ ಮರಿ ಕರಡಿ ಸಾವಿಗೀಡಾಗಿರುವುದು ಮನ ಕಲಕುವಂತಿದೆ. ಸ್ಥಳದಲ್ಲಿ ತಂತಿ ಎಳೆಯಲು ಬಳಸಲಾಗಿರುವ ಮರದ ಕೊಂಬೆಗಳು, ನೆಲದಲ್ಲಿ ತೆಗೆದಿರುವ ಗುಂಡಿಗಳು ಬೇಟೆಗಾರರ ಕೃತ್ಯಕ್ಕೆ ಸಾಕ್ಷಿಯಾಗಿವೆ.

ಅಮೃತ ಮಹಲ್ ಕಾವಲಿಗೆ ದನ ಮೇಯಿಸಲು ಹೋಗಿದ್ದ ಜನರಿಂದ ಕರಡಿ ಸತ್ತಿರುವ ವಿಷಯ ಬೆಳಕಿಗೆ ಬಂದಿದೆ. ಎರಡು ದಿನದ ಹಿಂದೆಯೇ ಸತ್ತಿರುವ ಕಾರಣ ಕರಡಿಗಳ ಕಳೇಬರಗಳು ದುರ್ನಾತ ಬೀರುತ್ತಿವೆ.

ಈಚೆಗೆ ಚಿರತೆಯೊಂದು ಜನರ ಆಕ್ರೋಶಕ್ಕೆ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೆರಡು ವನ್ಯಜೀವಿಗಳ ಸಾವಾಗಿರುವುದು ಅರಣ್ಯ ಇಲಾಖೆ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಆರಣ್ಯ ಇಲಾಖೆ ಸಿಬ್ಬಂದಿ ಹಾಗೂ ಶ್ರೀರಾಂಪುರ ಪೋಲಿಸರು, ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *