ಅನಾಥ ಮಕ್ಕಳನ್ನು ದತ್ತು ಪಡೆದ ಸ್ವಾಮೀಜಿಗಳು

ಹೊಸದುರ್ಗ: ಇತ್ತೀಚೆಗೆ ನೀರಿನ ಹೊಂಡಕ್ಕೆ ಬಿದ್ದು ಅಸುನೀಗಿದ್ದ ತಾಲೂಕಿನ ಅತ್ತಿಮಗ್ಗೆ ಬೋವಿಹಟ್ಟಿಯ ದಂಪತಿಯ ಮೂವರು ಪುಟ್ಟ ಮಕ್ಕಳನ್ನು ದತ್ತು ಪಡೆಯುವುದಾಗಿ ಹಿಂದುಳಿದ ಹಾಗೂ ದಲಿತ ಮಠಾಧೀಶರ ಒಕ್ಕೂಟದ ಶ್ರೀಗಳು ಪ್ರಕಟಿಸಿದ್ದಾರೆ.

ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಭೋವಿ ಪೀಠದ ಇಮ್ಮಡಿ ಸಿದ್ದರಾಮ ಶ್ರೀ, ಕುಂಚಿಟಿಗ ಪೀಠದ ಶ್ರೀ ಶಾಂತವೀರ ಶ್ರೀ, ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಶ್ರೀ, ಕನಕ ಪೀಠದ ಶ್ರೀ ಈಶ್ವರಾನಂದಪುರಿ ಶ್ರೀಗಳ ತಂಡ, ಕ್ಕಳ ಭವಿಷ್ಯದ ಬಗ್ಗೆ ಮೃತರ ಕುಟುಂಬದವರೊಂದಿಗೆ ಚರ್ಚಿಸಿ, ಪಾಲಕರಿಲ್ಲದ ಮೂವರು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿತು.

ಭೋವಿ ಪೀಠದ ಇಮ್ಮಡಿ ಸಿದ್ದರಾಮ ಸ್ವಾಮೀಜಿ ಮಾತನಾಡಿ, ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಭವಿಷ್ಯ ರೂಪಿಸುವುದು ನಮ್ಮ ಕರ್ತವ್ಯ. ಹಿಂದುಳಿದ ಹಾಗೂ ದಲಿತ ಮಠಾಧೀಶರ ಒಕ್ಕೂಟದ ಪೂಜ್ಯರ ಸಲಹೆ ಮತ್ತು ಮಾರ್ಗದರ್ಶನದಂತೆ ಮಕ್ಕಳಿಗೆ ಮಠದಲ್ಲೇ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿ, ಮಕ್ಕಳ ಭವಿಷ್ಯವನ್ನು ರೂಪಿಸಲಾಗುವುದು ಎಂದರು.

ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ ಮಾತನಾಡಿ, ದಂಪತಿ ಸಾವು ಅತ್ಯಂತ ನೋವಿನ ಸಂಗತಿ. ಇದರ ಪರಿಣಾಮ ಅನಾಥ ಮಕ್ಕಳ ಮೇಲಾಗದಂತೆ ಎಚ್ಚರ ವಹಿಸಬೇಕಾಗಿದೆ. ಮಠ ಹಾಗೂ ಮಠಾಧೀಶರಿಗೆ ಸಮಾಜವೇ ಬಂಧು ಬಳಗ. ಶೋಷಿತರು, ಸಮಸ್ಯೆಗೆ ಸಿಲುಕಿದವರಿಗೆ ಮಮತೆಯ ಮಡಿಲಿನಂತೆ ಅಶ್ರಯ ನೀಡುತ್ತಾರೆ ಎಂದರು.

ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಜೊತೆಗೆ ಅವರ ಬದುಕು ರೂಪಿಸುವ ಜವಾಬ್ಧಾರಿಯನ್ನು ಹಿಂದುಳಿದ ಹಾಗೂ ದಲಿತ ಮಠಾಧೀಶರ ಒಕ್ಕೂಟ ನಿರ್ವಹಿಸಲಿದೆ ಎಂದರು.

ಕನಕ ಗುರು ಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಮಕ್ಕಳು ಭೋವಿ ಗುರು ಪೀಠದ ಆಶ್ರಯದಲ್ಲಿ ಬೆಳೆಯಲು ಅವಕಾಶ ಕಲ್ಪಿಸಬೇಕು. ಮಠದಂಗಳದಲ್ಲಿ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ನಿರ್ದೇಶಕರಾದ ನೇರ‌್ಲಕುಂಟೆ ರಾಮಪ್ಪ, ಮೋಹನ್, ನಟೇಶ್, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಇತರರಿದ್ದರು.

ವಿದ್ಯಾಭ್ಯಾಸಕ್ಕೆ ಸಹಾಯ: ಮೃತರ ಮಕ್ಕಳಾದ ಅಂಜನಮೂರ್ತಿ, ಮನುಕುಮಾರ ವೈದಕೀಯ ಶಿಕ್ಷಣ ಹಾಗೂ ರಾಧಿಕಾ ಶಿಕ್ಷಕಿಯಾಗುವ ಇಂಗಿತ ವ್ಯಕ್ತಪಡಿಸಿದರು. ಶ್ರೀಗಳು ಮಕ್ಕಳ ಅಭಿಲಾಷೆ ಈಡೇರಿಸುವ ಭರವಸೆ ನೀಡಿದರು. ನೇರ‌್ಲಕುಂಟೆ ರಾಮಪ್ಪ ಹಾಗೂ ತಿಪ್ಪೇಸ್ವಾಮಿ ಮಕ್ಕಳಿಗೆ 15 ಸಾವಿರ ರೂ. ನೀಡಿ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುವಂತೆ ಸೂಚಿಸಿದರು.