ದಾರ್ಶನಿಕರು ಜಾತಿಗೆ ಸೀಮಿತರಲ್ಲ

ಹೊಸದುರ್ಗ: ಬಸವ, ಮಹಾವೀರ, ಕನಕದಾಸರ ಜಯಂತಿಗಳನ್ನು ಜಾತಿಗೆ ಸೀಮಿತಗೊಳಿಸಿ ಆಚರಿಸ ಬಾರದು ಎಂದು ಹೊಸದುರ್ಗ ಕುಂಚಿಟಿಗ ಸಂಸ್ಥಾನ ಮಠದ ಡಾ.ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಕುಂಚಿಟಿಗ ಸಂಸ್ಥಾನ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಸುಜ್ಞಾನ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜಾತಿಯ ಸಂಕೋಲೆಗಳಿಂದ ಹೊರಬಂದು ಸಮ ಸಮಾಜದ ನಿರ್ಮಾಣದ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ದಾರ್ಶನಿಕರನ್ನು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಯುವ ಪೀಳಿಗೆಗೆ ಅವರ ಸಂದೇಶಗಳನ್ನು ತಿಳಿಸುವ ಮೂಲಕ ಜಾತಿ ರಹಿತ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದರು.

ಪಠ್ಯಪುಸ್ತಕಗಳು ಕೂಡ ರಾಜಕೀಯ ಪಕ್ಷಗಳು ಪ್ರತಿಪಾದಿಸುವ ಸಿದ್ಧಾಂತದ ಪ್ರಭಾವಕ್ಕೆ ಒಳಗಾಗಿವೆ. ಮಕ್ಕಳಿಗೆ ವಚನ ಸಾಹಿತ್ಯ, ದಾಸ ಸಾಹಿತ್ಯ ಪರಿಚಯಿಸಿದರೆ ಬದುಕು ಅರಳುತ್ತದೆ ಎಂದು ತಿಳಿಸಿದರು.

ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ತ್ಯಾಗರಾಜ್ ಮಾತನಾಡಿ, ಬಸವಣ್ಣ ಸರ್ವ ಸಮುದಾಯಕ್ಕೂ ಬೇಕಾದವರು. ಅವರು ಸಮಾಜ ಆಸ್ತಿ. ವಚನ ಚಳವಳಿ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಸ್ವಾತಂತ್ರೃ ಹಾಗೂ ಸ್ವಾಭಿಮಾನ ನೀಡುವ ಶಕ್ತಿ ಹೊಂದಿದೆ. ಈ ಬಗ್ಗೆ ಪರಿಷತ್ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದೆ ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಬಿ. ಮಂಜುನಾಥ್, ಎಪಿಎಂಸಿ ಅಧ್ಯಕ್ಷ ಎಚ್.ಸಿ. ಮಲ್ಲಿಕಾರ್ಜುನ್, ತಾಪಂ ಸದಸ್ಯ ಹಾಲಪ್ಪ, ಕೃಷಿ ಅಧಿಕಾರಿ ಡಾ. ಈಶ, ವೀರಕ್ಯಾತಯ್ಯ ಮತ್ತಿತರರಿದ್ದರು.