ಸೂಜಿಗಲ್ಲಂತೆ ಭಕ್ತರ ಸೆಳೆವ ಬಾಬಾ ಮಂದಿರ

ಹೊಸದುರ್ಗ: ಪಟ್ಟಣದ ಹುಳಿಯಾರು ರಸ್ತೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಸಾಕ್ಷಾತ್ ಶಿರಡಿ ಕ್ಷೇತ್ರದಂತೆಯೇ ಭಕ್ತರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ.

ಜಿಲ್ಲೆಯ ಪುಣ್ಯಕ್ಷೇತ್ರಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದಿರುವ ಮಂದಿರಕ್ಕೆ ಪ್ರತಿ ದಿನ ನೂರಾರು ಭಕ್ತರು ಭೇಟಿ ನೀಡುತ್ತಾರೆ.
2007ರಲ್ಲಿ ಅಧರ್ ಎಕರೆ ವಿಸ್ತೀರ್ಣದಲ್ಲಿ ಸಾಯಿಬಾಬಾ ಮಂದಿರ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಯಿತು. ಭಕ್ತರಿಂದ ಕೋಟ್ಯಂತರ ರೂ. ದೇಣಿಗೆ ಸಂಗ್ರಹಿಸಿ ಮಂದಿರ ನಿರ್ಮಿಸಿ 2010ರಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಅಮೃತ ಶಿಲೆಯಲ್ಲಿ ನಿರ್ಮಿಸಿರುವ ಆರು ಆಡಿ ಎತ್ತರದ ನಯನ ಮನೋಹರ ಬಾಬಾ ಮೂರ್ತಿ ಪ್ರಮುಖ ಆಕರ್ಷಣೆ. ದೇವಾಲಯ ಆವರಣದಲ್ಲಿ ಪ್ರಶಾಂತತೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಪ್ರಾಂಗಣದಲ್ಲಿನ ಅಲಂಕಾರಿಕ ಗಿಡಗಳು ದೇವಸ್ಥಾನದ ಅಂದ ಹೆಚ್ಚಿಸಿವೆ. ಮೊದಲ ಮಹಡಿಯಲ್ಲಿ ಮುಖ್ಯ ಮಂದಿರವಿದ್ದು, ಕೆಳ ಅಂತಸ್ತಿನಲ್ಲಿ ಹಳೇ ಮೂರ್ತಿ ಇರುವ ಧ್ಯಾನ ಮಂದಿರವಿದೆ. ಹಿಂಭಾಗದಲ್ಲಿ ಮಹಾಗಣಪತಿ, ಈಶ್ವರ ಹಾಗೂ ದತ್ತಾತ್ರೆಯ ಸ್ವಾಮಿ ದೇವಾಲಯಗಳಿವೆ.

ದ್ವಾರಕಾಮಯಿ: ಮುಖ್ಯ ಮಂದಿರದ ಹಿಂಭಾಗದಲ್ಲಿ ದ್ವಾರಕಾಮಯಿ ಹೆಸರಿನ, ನಿರಂತರ ಉರಿಯುತ್ತಿರುವ ಅಗ್ನಿಷ್ಟಿಕೆ ಸ್ಥಾಪಿಸಲಾಗಿದೆ. ಈ ಅಗ್ನಿಷ್ಟಿಕೆಗೆ ಶಿರಡಿಯಲ್ಲಿ ಸಾಯಿಬಾಬಾ ಹೊತ್ತಿಸಿದ ಅಗ್ನಿಷ್ಟಿಕೆಯ ಬೆಂಕಿ ತಂದು ಹೊತ್ತಿಸಲಾಗಿದೆ. ಇಲ್ಲಿನ ಬೂದಿಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತಿದೆ. ಇಲ್ಲಿ ಸಾಯಿಬಾಬಾರ ನಿಜವಾದ ಬೃಹತ್ ಭಾವಚಿತ್ರ ಸ್ಥಾಪಿಸಲಾಗಿದೆ.

ಶಿರಡಿ ಮಾದರಿ ಪೂಜಾ ಕ್ರಮ: ಶಿರಡಿ ಸಾಯಿಬಾಬಾ ಮಂದಿರದ ರೀತಿಯೇ ಪಟ್ಟಣದ ದೇಗುಲದಲ್ಲೂ ನಿತ್ಯ ಪೂಜಾ ಕಾರ್ಯಗಳು ನೆರವೇರುತ್ತವೆ. ಪ್ರತಿದಿನ ಮುಂಜಾನೆ 5.45ಕ್ಕೆ ಕಾಕಡಾರತಿ, ಮಧ್ಯಾಹ್ನ 12ಕ್ಕೆ ಮಧ್ಯಾಹ್ನಾರತಿ, ಸಂಜೆ 6ಕ್ಕೆ ಧೂಪಾರತಿ, ರಾತ್ರಿ 8ಕ್ಕೆ ಶೇಜಾರತಿ ಹಾಗೂ ಗುಲಾಬಿ ಅಲಂಕಾರ ಪೂಜೆ ನೆರವೇರಿಸಲಾಗುತ್ತದೆ.

ಗುರುವಾರ ವಿಶೇಷ ಪೂಜೆ: ಪ್ರತಿ ಗುರುವಾರ ವಿಶೇಷ ಪೂಜಾ ಕಾರ್ಯಗಳು ನಡೆಯುತ್ತವೆ. ಮುಂಜಾನೆಯಿಂದ ಸಂಜೆ ವರೆಗೆ ಸಾವಿರಾರು ಜನ ಸರದಿ ಸಾಲಲ್ಲಿ ನಿಂತು ದರ್ಶನ ಪಡೆಯುತ್ತಾರೆ. ಮಧ್ಯಾಹ್ನದಾರತಿ, ಪೂಜೆ ನಂತರ ಅನ್ನ ಸಂತರ್ಪಣೆ, ಸಂಜೆ 6ಕ್ಕೆ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಸಮಾಜಸೇವಕ ಹಂಜಿ ಶಿವಸ್ವಾಮಿ ನೇತೃತ್ವದಲ್ಲಿ ಸ್ಥಾಪನೆಯಾಗಿರುವ ಶಿರಡಿ ಸಾಯಿಬಾಬಾ ವಿಶ್ವಸ್ಥ ಮಂಡಳಿ, ದೇವಾಲಯವನ್ನು ಉತ್ತಮ ನಿರ್ವಹಣೆ ಜತೆಗೆ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ಉಪಾಧ್ಯಕ್ಷ ಆದಿರಾಜಯ್ಯ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಸೇರಿದಂತೆ ವಿಶ್ವಸ್ಥ ಮಂಡಳಿಯ ಸದಸ್ಯರು ದೇವಾಲಯ ಪ್ರಗತಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.

ಬಾಬಾ ಅವರ ಆಶೀರ್ವಾದ, ಭಕ್ತರ ಸಹಕಾರದಿಂದ ದೇವಾಲಯದಲ್ಲಿ ಎಲ್ಲ ಕಾರ್ಯವೂ ಸುಸೂತ್ರವಾಗಿ ನಡೆಯುತ್ತಿವೆ. ನಾವಿಲ್ಲಿ ನೆಪಮಾತ್ರ. ಎಲ್ಲವನ್ನೂ ಬಾಬಾನೆ ನಡೆಸಿಕೊಡುತ್ತಾನೆ. ದೇಗುಲದಿಂದ ಬಡಮಕ್ಕಳಿಗೆ ಉಚಿತ ವಸತಿ, ಊಟ ಒದಗಿಸುವ ಯೋಜನೆಯಿದೆ. ಧಾರ್ಮಿಕ ಕಾರ್ಯಗಳ ಜತೆಗೆ ಉಚಿತ ಚಿಕಿತ್ಸಾಲಯದ ಮೂಲಕ ಆರೋಗ್ಯ ತಪಾಸಣೆ ಕಾರ್ಯ ನಡೆಸಲಾಗುತ್ತಿದೆ ಎನ್ನುತ್ತಾರೆ ಶಿರಡಿ ಸಾಯಿಬಾಬಾ ವಿಶ್ವಸ್ಥ ಮಂಡಳಿ ಅಧ್ಯಕ್ಷ ಹಂಜಿ ಶಿವಸ್ವಾಮಿ.

Leave a Reply

Your email address will not be published. Required fields are marked *