ಯಾದವರಲ್ಲಿ ಮೌಢ್ಯತೆ ಜೀವಂತ: ಜಿಪಂ ಸಿಇಒ ಸತ್ಯಭಾಮಾ ವಿಷಾದ

ಹೊಳಲ್ಕೆರೆ: 21ನೇ ಶತಮಾನಕ್ಕೆ ಕಾಲಿಟ್ಟಿದ್ದರೂ ಯಾದವ ಸಮುದಾಯದ ಮಹಿಳೆಯರು ಮೂಢ ನಂಬಿಕೆ, ಕಂದಾಚಾರಗಳಿಂದ ಹೊರಬಾರದಿರುವುದು ನೋವಿನ ಸಂಗತಿ ಎಂದು ಜಿಪಂ ಸಿಇಒ ಸಿ. ಸತ್ಯಭಾಮಾ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಸಂಸದರ ಆದರ್ಶ ಗ್ರಾಮ ಗಂಗಸಮುದ್ರದಲ್ಲಿ ಈಚೆಗೆ ಆಯೋಜಿಸಿದ್ದ ಯಾದವ ಸಮಾಜದ ಮಹಿಳೆಯರಿಗೆ ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಋತುಸ್ರಾವ ಸೂತಕ ಎಂಬ ಭಾವನೆ ಎಲ್ಲ ಸಮುದಾಯದ ಮಹಿಳೆಯರಲ್ಲಿ ಪೂರ್ವದಿಂದಲೂ ಇದೆ. ಕಾಲ ಬದಲಾದಂತೆ ಸಂಪ್ರದಾಯಗಳ ಬಗ್ಗೆ ಅರಿತು ಬಹುತೇಕರು ಬದಲಾಗಿದ್ದಾರೆ. ಯಾದವ ಸಮುದಾಯ ಮಾತ್ರ ಮೂಢನಂಬಿಕೆ ತ್ಯಜಿಸಿಲ್ಲ. ಹಿರಿಯರು ಈ ನಂಬಿಕೆಗೆ ಇತಿಶ್ರೀ ಹಾಡಬೇಕು ಎಂದರು.

ಸಂಪ್ರದಾಯ, ಆಚಾರ, ವಿಚಾರ, ಆಚರಣೆ ಅಗತ್ಯ. ಅದೇ ಅತಿಯಾಗಬಾರದು. ಸಂಪ್ರದಾಯಗಳಿಂದ ಹೆಣ್ಣು ಮಕ್ಕಳಿಗೆ ಕಳಂಕವಾಗುವುದು ಸರಿಯಲ್ಲ. ಋತುಮತಿ, ಮಾಸಿಕ ಋತುಸ್ರಾವವಾದ ಮಹಿಳೆಯರನ್ನು ಹೊರಗಿಡುವ ಪದ್ಧತಿ ನಿಲ್ಲಿಸಬೇಕು. ಈ ಬಗ್ಗೆ ಸಮುದಾಯದ ಹಿರಿಯರು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮವನ್ನು ಬಯಲು ಶೌಚ ಮುಕ್ತಗೊಳಿಸಿ, ರಸ್ತೆ ಬದಿ ತಿಪ್ಪೆಗುಂಡಿಗಳನ್ನು ತೆರವುಗೊಳಿಸಿ ಮಾದರಿ ಗ್ರಾಮವನ್ನಾಗಿಸಬೇಕು. ಖಾತ್ರಿ ಯೋಜನೆಯಡಿ ಸಿಸಿ ರಸ್ತೆ, ಬಾಕ್ಸ್ ಚರಂಡಿ, ಕೃಷಿ ಹೊಂಡ ನಿರ್ಮಿಸಬೇಕು. ಸಮಗ್ರ ಅಭಿವೃದ್ಧಿಗೆ ಜಿಪಂ ಸಿದ್ದವಿದ್ದು, ಜನಪ್ರತಿನಿಧಿಗಳು, ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ತಾಪಂ ಸದಸ್ಯ ರಾಮಚಂದ್ರಪ್ಪ, ಗ್ರಾಪಂ ಅಧ್ಯಕ್ಷೆ ಅಕ್ಕಮಹಾದೇವಿ, ಸದಸ್ಯರಾದ ಚಂದ್ರಶೇಖರಪ್ಪ, ಈಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ರಾಜನಾಯ್ಕ, ಪಿಡಿಒ ಶುಭಾ ಇತರರಿದ್ದರು.

Leave a Reply

Your email address will not be published. Required fields are marked *