ಊಟ ಮಾಡಿದವರಿಗೆ ಬೇಧಿ, ಜ್ವರ

ಹೊಸದುರ್ಗ: ತಾಲೂಕಿನ ಶ್ರೀರಾಂಪುರ ಹೋಬಳಿಯ ತೊಣಚೆನಹಳ್ಳಿ ಗ್ರಾಮದಲ್ಲಿ ಭಾನುವಾರ ಜರುಗಿದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಊಟ ಮಾಡಿದವರಲ್ಲಿ 60ಕ್ಕೂ ಹೆಚ್ಚು ಮಂದಿ ಬೇಧಿ, ಜ್ವರದಿಂದ ಅಸ್ವಸ್ಥಗೊಂಡಿದ್ದಾರೆ.

ಭಾನುವಾರ ಮಧ್ಯಾಹ್ನ ಸಮಾರಂಭದಲ್ಲಿ ಊಟ ಮಾಡಿದ್ದು, ಸೋಮವಾರ ಬೆಳಗ್ಗೆ ಜ್ವರ, ಬೇಧಿ ಕಾಣಿಸಿಕೊಂಡಿದೆ. ಮಧ್ಯಾಹ್ನದ ವೇಳೆಗೆ ಬಳಲುತ್ತಿದ್ದವರ ಸಂಖ್ಯೆ ಹೆಚ್ಚಾಗಿದೆ. ಸಂಜೆ ವೇಳೆಗೆ ಇವರೆಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ.

ಕುಡಿಯುವ ನೀರು ಕಲುಷಿತಗೊಂಡಿರುವ ಸಂಶಯ ವ್ಯಕ್ತವಾಗಿದ್ದು, ಹತ್ತು ಮಕ್ಕಳು ಸೇರಿ 60ಕ್ಕೂ ಹೆಚ್ಚು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತೀವ್ರ ಅನಾರೋಗ್ಯಕ್ಕೆ ತುತ್ತಾದ 8 ಜನರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಿಎಚ್‌ಒ ಕಂಭಾಳಿಮಠ ನೇತೃತ್ವದ ವೈದ್ಯಕೀಯ ತಂಡ ತೊಣಚೆನಹಳ್ಳಿಗೆ ಭೇಟಿ ನೀಡಿದ್ದು, ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ಮುಂಜಾಗ್ರತ ಕ್ರಮವಾಗಿ ಸಮಾರಂಭದಲ್ಲಿ ಊಟ ಮಾಡಿದ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ರಜೆಯಲ್ಲಿದ್ದ ಕೀಲುಮೂಳೆ ತಜ್ಞ ಡಾ.ಸಂಜಯ್ ಸೇರಿ ವೈದ್ಯರ ತಂಡ ಆಸ್ಪತ್ರೆಗೆ ಆಗಮಿಸಿ ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡಿದರು. ಆಯುಷ್ ಆರೋಗ್ಯಾಧಿಕಾರಿ ಡಾ.ನದಾಫ್ ಚಿಕಿತ್ಸೆಯ ಉಸ್ತುವಾರಿ ವಹಿಸಿದ್ದಾರೆ.

Leave a Reply

Your email address will not be published. Required fields are marked *