ಭದ್ರಾ ನೀರು ವೇದಾವತಿ ನದಿಗೆ ಹರಿಸಲು ಪಟ್ಟು

ಹೊಸದುರ್ಗ: ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಾಗೂ ಭದ್ರಾ ನೀರನ್ನು ವೇದಾವತಿ ನದಿಗೆ ಹರಿಸಬೇಕೆಂದು ರೈತ ಸಂಘ ಕಾರ್ಯಕರ್ತರು ತಾಲೂಕಿನ ಹಾಗಲಕೆರೆ ಹ್ಯಾಂಡ್ ಪೋಸ್ಟ್ ಬಳಿ ಸೋಮವಾರ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ರಾಜ್ಯದ ಮೈತ್ರಿ ಸರ್ಕಾರ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆ ತಿದ್ದುಪಡಿಯು ರೈತರಿಗೆ ಮರಣ ಶಾಸನವಾಗಿದೆ. ಕೃಷಿ ಭೂಮಿಯನ್ನು ಅಭಿವೃದ್ಧಿ ನೆಪ ಮಾಡಿ ರೈತರಿಂದ ಕಿತ್ತುಕೊಳ್ಳುವುದು ಸರಿಯಲ್ಲ. ದಿನದಿಂದ ದಿನಕ್ಕೆ ಕೃಷಿ ಭೂಮಿ ವಿಸ್ತಾರ ಕಡಿಮೆಯಾಗುತ್ತಿದೆ. ಸರ್ಕಾರ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಕೈಬಿಡಬೇಕು ಎಂದು ಒತ್ತಾಯಿಸಿದರು.

ಮಳೆ ಬೆಳೆ ಇಲ್ಲದೆ ಜನ ಗುಳೆ ಹೋಗುತ್ತಿದ್ದಾರೆ. ಶೀಘ್ರವೇ ಬರಗಾಲ ಪರಿಹಾರ ಕಾಮಗಾರಿ ಆರಂಭಿಸಬೇಕು. ವೇದಾವತಿ ನದಿ ಮೂಲಕ ಭದ್ರಾ ನೀರು ಹರಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಎರಡು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಹಿನ್ನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ರಸ್ತೆ ತಡೆ ಕೈಬಿಡುವಂತೆ ಪೋಲಿಸರು ಕೋರಿದರು. ಇದಕ್ಕೆ ರೈತರು ಸ್ಪಂದಿಸದ ಕಾರಣ 60ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ, ಕೆಲ ಸಮಯದ ನಂತರ ಬಿಡುಗಡೆಗೊಳಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬಯಲಪ್ಪ, ಸೋಮೇನಹಳ್ಳಿ ಸ್ವಾಮಿ, ಕರಿಸಿದ್ದಯ್ಯ, ಲಿಂಗರಾಜು, ದೇವೇಂದ್ರಪ್ಪ, ನಾಗಲಿಂಗಮೂರ್ತಿ, ಜಯಣ್ಣ, ಮುರುಘೇಂದ್ರಪ್ಪ ಮತ್ತಿತರರಿದ್ದರು.

Leave a Reply

Your email address will not be published. Required fields are marked *