ತೊಣಚೆನಹಳ್ಳಿಯಲ್ಲಿ ಮತ್ತೆ ನಾಲ್ವರಿಗೆ ಜ್ವರ

ಹೊಸದುರ್ಗ: ಖಾಸಗಿ ಸಮಾರಂಭದಲ್ಲಿ ಕಲುಷಿತ ನೀರು ಕುಡಿದು 60 ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದ ತಾಲೂಕಿನ ತೊಣಚೆನಹಳ್ಳಿಯಲ್ಲೀಗ ಪರಿಸ್ಥಿತಿ ಸುಧಾರಣೆ ಕಂಡಿದ್ದು, ಮಂಗಳವಾರ ಮತ್ತೆ ನಾಲ್ವರಿಗೆ ಜ್ವರ ಕಾಣಿಸಿಕೊಂಡಿದೆ.

ಗ್ರಾಮದಲ್ಲಿಯೇ ತಾತ್ಕಾಲಿಕ ಚಿಕಿತ್ಸಾ ಘಟಕ ಸ್ಥಾಪಿಸಿಕೊಂಡು ವೈದ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

ತೀವ್ರ ಬಳಲಿಕೆಯಿಂದ ಹೊಸದುರ್ಗ ಹಾಗೂ ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಗ್ರಾಮದಲ್ಲಿ ತುರ್ತು ಚಿಕಿತ್ಸಾ ವಾಹನವನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.

ಸೋಮವಾರ ರಾತ್ರಿ ಡಿಎಚ್‌ಒ ಪಾಲಾಕ್ಷ ಹಾಗೂ ಟಿಎಚ್‌ಒ ಕಂಬಾಳಿಮಠ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರತಿ ಮನೆಗೂ ಭೇಟಿ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿ ರೋಗಿಗಳ ಸರ್ವೆ ನಡೆಸಿದ್ದಾರೆ.

ಆರೋಗ್ಯ ಶಿಕ್ಷಣಾಧಿಕಾರಿ ವೀರೇಂದ್ರ ಪಾಟೀಲ್ ಮಾತನಾಡಿ, ಗ್ರಾಮದ ಕುಡಿವ ನೀರಿನ ಟ್ಯಾಂಕ್‌ಗಳನ್ನು ಕ್ಲೋರಿನೇಷನ್ ಮೂಲಕ ಸ್ವಚ್ಛಗೊಳಿಸಲಾಗಿದೆ. ಮನೆ ಹಾಗೂ ಸುತ್ತಮುತ್ತಲ ಪರಿಸರ ಶುಚಿಯಾಗಿಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಸ್ವಚ್ಛತೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಗ್ರಾಮಾಡಳಿತಕ್ಕೆ ಸೂಚಿಸಲಾಗಿದೆ ಎಂದರು.

Leave a Reply

Your email address will not be published. Required fields are marked *