ಕುಂಚಿಟಿಗ ಸಂಸ್ಥಾನ ಮಠದಲ್ಲಿ ಸಂಧಾನ ಸಭೆ

ಹೊಸದುರ್ಗ: ಪಟ್ಟಣದ ಕುಂಚಿಟಿಗ ಸಂಸ್ಥಾನ ಮಠದಲ್ಲಿ ನಡೆದ ರಾಜಿ ಸಂಧಾನ ಸಭೆಯಲ್ಲಿ ಕುಂಚಿಟಿಗ ಶ್ರೀಗಳು ನಡೆಸಿದ ಸಂಧಾನ ಸೂತ್ರದಿಂದ ಕಳೆದ ನಾಲ್ಕು ವರ್ಷದಿಂದ ಪರಸ್ಪರ ದ್ವೇಷ ಸಾಧಿಸುತ್ತ ನ್ಯಾಯಾಲಯದಲ್ಲಿ ಬಡಿದಾಡುತ್ತಿದ್ದ ಎರಡು ಕೋಮುಗಳಿಗೆ ಸೇರಿದ ಕುಟುಂಬಗಳು ಮತ್ತೆ ಒಂದಾಗಿ ಬದುಕುವ ಪ್ರತಿಜ್ಞೆ ಮಾಡಿದವು.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕುಳೇನೂರಿನ ಕುಂಚಿಟಿಗ ಸಮುದಾಯದ ಈಶಣ್ಣ ಹಾಗೂ ಉಪ್ಪಾರ ಸಮುದಾಯದ ಬಜ್ಜಿ ಬಸಪ್ಪ ಕುಟುಂಬಗಳ ನಡುವೆ ಕಳೆದ 4 ವರ್ಷದಿಂದ ಸಂಘರ್ಷ ನಡೆಯುತ್ತಿದ್ದು ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು. ಎರಡೂ ಕುಟುಂಬಗಳ ನಡುವಿನ ದ್ವೇಷ ಕುಟುಂಬದ ಸದಸ್ಯರನ್ನು ನ್ಯಾಯಾಲಯದ ಮೇಟ್ಟಿಲೇರುವಂತೆ ಮಾಡಿತ್ತು.

ಈ ವಿಚಾರ ತಿಳಿದ ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ, ಉಪ್ಪಾರ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹಾಗೂ ಕನಕಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಪರಸ್ಪರ ಚರ್ಚೆ ನಡೆಸಿ ಮಂಗಳವಾರ ಎರಡು ಕುಟುಂಬದವರನ್ನು ಕರೆಸಿ ಸಂಧಾನ ಸಭೆ ನಡೆಸಿದರು.

ಮೂವರು ಶ್ರೀಗಳು ಸಂಧಾನ ಸಭೆಯಲ್ಲಿ ದ್ವೇಷ ಬಿಟ್ಟು ಎರಡು ಕುಟುಂಬಗಳ ನಡುವೆ ಉಂಟಾಗಿರುವ ಸಮಸ್ಯೆಯನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಂಡು ಸೌರ್ಹಾದತೆಯಿಂದ ಬದುಕುವಂತೆ ಸಲಹೆ ನೀಡಿದರು. ಶ್ರೀಗಳ ಮಾರ್ಗದರ್ಶನದಲ್ಲಿ ಎರಡು ಕುಟುಂಬಗಳು ಪರಸ್ಪರ ಮಾತುಕತೆ ಮೂಲಕ ಜಗಳ ಇತ್ಯರ್ಥ ಪಡಿಸಿಕೊಂಡು ಒಂದಾಗಿ ಬಾಳುವ ಪ್ರತಿಜ್ಞೆ ಮಾಡಿದವು.

ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಹಳ್ಳಿಗರು ನಿತ್ಯವೂ ಒಬ್ಬರ ಮುಖವನ್ನು ಒಬ್ಬರು ನೋಡಿಯೇ ಬದುಕಬೇಕಿದೆ. ಜಗಳ, ಕಲಹ ಹಾಗೂ ದ್ವೇಷ ಸಾಧಿಸುವುದನ್ನು ಬಿಟ್ಟು ಪ್ರೀತಿ, ಸಹಕಾರದಿಂದ ಬದುಕು ಸಾಗಿಸಿದರೆ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ. ಸಣ್ಣ ವಿಚಾರಗಳನ್ನು ದೊಡ್ಡದಾಗಿಸದೆ ವಿವೇಚನೆಯಿಂದ ಬದುಕಬೇಕು ಎಂದರು.

ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಹಿಂದುಳಿದ ವರ್ಗಗಳು ಪರಸ್ಪರ ಕಿತ್ತಾಡಿಕೊಳ್ಳುವ ಬದಲು ಸಹಕಾರದಿಂದ ಅಭಿವೃದ್ಧಿಯತ್ತ ಹೆಜ್ಜೆಹಾಕಬೇಕು. ಜಗಳ, ಕಿತ್ತಾಟದಿಂದ ಕಾಲಹರಣವಾಗುತ್ತದೆ. ಇದರ ಬದಲು ಕಾಯಕದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ನಿಮ್ಮ ಸಮಸ್ಯೆ ಏನೇ ಇದ್ದರೂ ಹಿಂದುಳಿದ ಸಮುದಾಯದ ಮಠಾಧೀಶರ ಒಕ್ಕೂಟ ಅಥವಾ ಮಠಗಳಿಗೆ ತಿಳಿಸುವ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಂಡು ಧರ್ಮಕ್ಕೆ ವಿನಮ್ರರಾಗಿ ನಡೆದುಕೊಳ್ಳಬೇಕು. ಉಪ್ಪಾರ ಹಾಗೂ ಕುಂಚಿಟಿಗ ಸಹೋದರ ಸಮುದಾಯಗಳು ಎಂದು ತಿಳಿಸಿದರು.

ಕನಕಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಹಳ್ಳಿಗಳಲ್ಲಿ ರಾಜಕೀಯಕ್ಕೆ ಹೆಚ್ಚಿನ ಅವಕಾಶ ನೀಡಬಾರದು. ರಾಜಕಾರಣವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಗುರುಪೀಠಗಳ ಮಾರ್ಗದರ್ಶನದಲ್ಲಿ ಒಂದಾಗಿ ನಡೆಯಬೇಕು. ಪರಸ್ಪರ ಪ್ರೀತಿ, ವಿಶ್ವಾಸದಿಂದ ಜೀವಿಸಿದರೆ ಬದುಕು ಬಂಗಾರವಾಗುತ್ತದೆ ಎಂದರು.