ಅಕಾಡೆಮಿಗಳಿಗೆ ಅನುದಾನ ಕಡಿತ ಸಲ್ಲ

ಹೊಸದುರ್ಗ: ಅಕಾಡೆಮಿಗಳಿಗೆ ಅನುದಾನ ಕಡಿತಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿರುವುದು ಸರಿಯಲ್ಲ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಅಕಾಡೆಮಿಗಳ ಅನುದಾನದಲ್ಲಿ ಶೇ.35ರಷ್ಟು ಕಡಿತಗೊಳಿಸಲಾಗಿದೆ. ಉಳಿದ ಹಣದಲ್ಲಿ ಅರ್ಧದಷ್ಟು ನೌಕರರ ವೇತನಕ್ಕಾಗಿಯೇ ಹೋಗಲಿದೆ. ಇನ್ನುಳಿದ ಶೇ.35ರಷ್ಟು ಹಣದಲ್ಲಿ ಅಕಾಡೆಮಿಗಳು ರಾಜ್ಯಾದ್ಯಂತ ಕೆಲಸ ಮಾಡಲು ಸಾಧ್ಯವಿಲ್ಲ. ವಾರ್ಷಿಕ ಅನುದಾನವನ್ನು ಕನಿಷ್ಟ ಶೇ.10ರಷ್ಟು ಏರಿಸಬೇಕಿದ್ದ ಸರ್ಕಾರ, ಕಡಿತಗೊಳಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಮಾರ್ಚ್ ಅಂತ್ಯದೊಳಗೆ ಸರ್ಕಾರ, ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ವಿವಿಧ ರಂಗ ಸಂಸ್ಥೆಗಳಿಗೆ ಹಣ ಬಿಡುಗಡೆಗೊಳಿಸಬೇಕಿತ್ತು. ಆದರೆ, ಕೆಲವು ನಕಲಿ ಸಂಸ್ಥೆಗಳಿರುವ ಕಾರಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಅನುದಾನದ ಹಣ ವಾಪಸು ಕಳುಹಿಸಿದ್ದಾಗಿ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ, ಅನೇಕ ಸಂಸ್ಥೆಗಳು ಪ್ರಾಮಾಣಿಕವಾಗಿ ರಂಗಸೇವೆ ಸಲ್ಲಿಸುತ್ತಿವೆ ಎಂದಿದ್ದಾರೆ.

ಅನುದಾನಕ್ಕೆ ಆನ್‌ಲೈನ್ ಮೂಲಕವೇ ಅರ್ಜಿ ಪಡೆದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಕಚೇರಿ ಅನುಮೋದನೆಯನ್ನು ಪರಿಗಣಿಸಿಯೇ ಮಂಜೂರಾತಿ ನೀಡಲಾಗುತ್ತಿದೆ. ಹೀಗಿರುವಾಗ ನಕಲಿ ಸಂಸ್ಥೆಗಳಿವೆ ಎನ್ನುವುದಾದಲ್ಲಿ ಅದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಅರ್ಥ ದೂರಿದ್ದಾರೆ.

ಹೀಗಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮತ್ತು ಅಂತಹ ಸಂಸ್ಥೆಗಳ ಅನುದಾನ ತಡೆಹಿಡಿದು ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಿ. ಸಾರಾಸಗಟಾಗಿ ಎಲ್ಲ ಸಂಘಟನೆಗಳ ಅನುದಾನವನ್ನು ತಡೆಹಿಡಿಯುವುದು ಸಂಸ್ಕೃತಿಯನ್ನು ಕಟ್ಟುವ ಕಾರ್ಯವಲ್ಲ.

ಚಿಕ್ಕ-ಪುಟ್ಟ ಸಂಸ್ಥೆಗಳು ಸಾಲ ಮಾಡಿ ರಂಗ ಸೇವೆ ಮಾಡಿವೆ. ಅತ್ತ ಸಾಲ ತೀರಿಸಲೂ ಆಗದೆ ಇತ್ತ ಕಲಾರಾಧನೆಯಲ್ಲೂ ತೊಡಗಿಕೊಳ್ಳದೆ ಕೈಸುಟ್ಟುಕೊಳ್ಳುವ ಸ್ಥಿತಿಯಲ್ಲಿವೆ. ಹೀಗಾದರೆ ನೈಜ ಕಲಾರಾಧಕರು ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ. ಇದರಿಂದ ಕನ್ನಡ ಮತ್ತು ಸಂಸ್ಕೃತಿ ಮೇಲೆ ದುಷ್ಪರಿಣಾಮವಾಗುತ್ತದೆ. ಈ ಸೂಕ್ಷ್ಮವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

ಸಾಣೇಹಳ್ಳಿಯ ಶಿವಕುಮಾರ ಕಲಾ ಸಂಘವೇ ಪ್ರತಿ ವರ್ಷ ರಂಗಭೂಮಿಗಾಗಿ ಒಂದು ಕೋಟಿ ರೂ. ಖರ್ಚು ಮಾಡುತ್ತಿದೆ. ಹೀಗಿರುವಾಗ ಕರ್ನಾಟಕ ನಾಟಕ ಅಕಾಡೆಮಿ ಚಟುವಟಿಕೆಗಳನ್ನು ಕೇವಲ 80 ಲಕ್ಷಕ್ಕೆ ಸೀಮಿತಗೊಳಿಸಿರುವುದು ಸರಿಯಲ್ಲ.

ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಸಂಬಂಧಪಟ್ಟ ಅಧಿಕಾರಿಗಳು ಎಲ್ಲ ತಂಡಗಳಿಗೆ ಮೊದಲಿನಂತೆ ಹಣ ಬಿಡುಗಡೆ ಮಾಡಬೇಕು. ಜತೆಗೆ ಅನುದಾನವನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದ್ದಾರೆ.