ಹೊಸದುರ್ಗ: ಇಲ್ಲಿನ ವಿನಾಯಕ ರಂಗಮಂದಿರದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ದುರ್ಗಾ ಮಂಟಪದಲ್ಲಿ ಮಂಗಳವಾರ ರಾತ್ರಿ ದೀಪೋತ್ಸವ ನೆರವೇರಿತು.
ಸಂಜೆ ವೇದಬ್ರಹ್ಮ ಕೃಷ್ಣಮೂರ್ತಿ ಘನಪಾಠಿ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಂಟಪದ ಮುಂದೆ ಬೃಹತ್ ರಂಗೋಲಿ ಹಾಕಿ ಬಣ್ಣ ಹಾಗೂ ದೀಪಗಳಿಂದ ಅಲಂಕರಿಸಲಾಗಿತ್ತು.
ಮಂಟಪದ ಮೇಲೆ ದರ್ಶನದ ಸಾಲಿನ ಎರಡು ಕಡೆಗಳಲ್ಲಿಯೂ ವಿವಿಧ ಬಗೆಯ ದೀಪಗಳನ್ನು ಇರಿಸಲಾಗಿತ್ತು. ದುರ್ಗಾ ಸೇವಾ ಸಮಿತಿ ಅಧ್ಯಕ್ಷ ಟಿ.ಮಂಜುನಾಥ್ ಉತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಹಣತೆಗಳ ಬೆಳಕಿನಲ್ಲಿ ದುರ್ಗಾ ದೇವಿ ಮಂಟಪ ಕಂಗೊಳಿಸಿತು. ನೆರೆದಿದ್ದ ಭಕ್ತರು ವೈಭವವನ್ನು ಕಣ್ತುಂಬಿಕೊಂಡರು.
ಏಕಾರತಿ, ಪಂಚಾರತಿ, ಕುಂಬಾರತಿ, ದಶಾರತಿ ಸೇರಿ 21 ಬಗೆಯ ಆರತಿಗಳಿಂದ ದೇವಿಗೆ ಮಂಗಳಾರತಿ ನೆರವೇರಿಸಲಾಯಿತು.
ಪ್ರಸಾದ ರೂಪದಲ್ಲಿ ಮಾಸ್ಕ್ ವಿತರಣೆ: ದುರ್ಗಾ ಪರಮೇಶ್ವರಿ ಅಮ್ಮನವರ ದಸರಾ ಮಹೋತ್ಸವ ಪಟ್ಟಣದ ಜನರ ಸಹಕಾರದಿಂದ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಕರೊನಾ ಕಾರಣದಿಂದ ಸರಳವಾಗಿ ಆಚರಿಸಲಾಗುತ್ತಿದ್ದರೂ ಧಾರ್ಮಿಕ ಆಚರಣೆಗಳಿಗೆ ಹಿನ್ನೆಡೆಯಾಗದಂತೆ ಕ್ರಮ ವಹಿಸಲಾಗಿದೆ. ಸರ್ಕಾರದ ನಿಯಮ ಅನುಸರಿಸಲಾಗುತ್ತಿದೆ. ಭಕ್ತರಿಗೆ ಅಮ್ಮನವರ ಪ್ರಸಾದ ರೂಪದಲ್ಲಿ ಮಾಸ್ಕ್ ವಿತರಿಸಲಾಗುತ್ತಿದೆ ಎಂದು ದುರ್ಗಾ ಸೇವಾ ಸಮಿತಿ ಅಧ್ಯಕ್ಷ ಟಿ.ಮಂಜುನಾಥ್ ತಿಳಿಸಿದರು.
ದುರ್ಗಾ ಸೇವಾ ಸಮಿತಿ ಅಧ್ಯಕ್ಷ ಟಿ.ಮಂಜುನಾಥ್, ಪುರಸಭೆ ಸದಸ್ಯರಾದ ದಾಳಿಂಬೆ ಗಿರೀಶ್, ಮಂಜುನಾಥ್, ರಾಮಚಂದ್ರಪ್ಪ, ಮಾಜಿ ಸದಸ್ಯ ಪ್ರವೀಣ್, ರಾಘವೇಂದ್ರ, ಪ್ರಸನ್ನ, ನಾಗರಾಜ್ ಇದ್ದರು.