ಸೀತಾರಾಘವ ಬ್ಯಾಂಕ್‌ಗೆ 72.63 ಲಕ್ಷ ರೂ. ಲಾಭ

ಹೊಸದುರ್ಗ: ಸತತ ಬರಗಾಲ, ಆರ್ಥಿಕ ಹಿನ್ನೆಡೆ ನಡುವೆಯೂ ಸೀತಾರಾಘವ ಬ್ಯಾಂಕ್ 2018-19 ನೇ ಆರ್ಥಿಕ ವರ್ಷದಲ್ಲಿ 72.63 ಲಕ್ಷ ರೂ. ಲಾಭಗಳಿಸಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಂಜಿ ಶಿವಸ್ವಾಮಿ ತಿಳಿಸಿದರು.

ಪಟ್ಟಣದ ಗಣೇಶ ಸದನದಲ್ಲಿ ಗುರುವಾರ ಆಯೋಜಿಸಿದ್ದ ಸೀತಾರಾಘವ ಸೌಹಾರ್ದ ಸಹಕಾರ ಬ್ಯಾಂಕಿನ 21ನೇ ಸರ್ವಸದಸ್ಯರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2018-19ರಲ್ಲಿ ಸಾಲ ವಸೂಲಾತಿಯಲ್ಲಿ ಸಮಸ್ಯೆ ಎದುರಾದರೂ ಬ್ಯಾಂಕಿನ ಪ್ರಗತಿಯಲ್ಲಿ ಹಿನ್ನೆಡೆನ ಆಗದಂತೆ ಆಡಳಿತ ಮಂಡಳಿ, ಸಿಬ್ಬಂದಿ ಶ್ರಮವಹಿಸಿದ್ದರಿಂದ 72.63 ಲಕ್ಷ ರೂ.ಲಾಭ ಬಂದಿತು. ಇದರಲ್ಲಿ 22.46 ಲಕ್ಷ ರೂ. ಆದಾಯ ತೆರಿಗೆ ಪಾವತಿಸಿದ ಬಳಿಕ 50.17 ಲಕ್ಷ ರೂ. ನಿವ್ವಳ ಲಾಭ ಬಂದಿದೆ ಎಂದರು.

ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ತೆಗೆದುಕೊಂಡ ಕಠಿಣ ನಿರ್ಧಾರಗಳ ನಡುವೆಯೂ ಉತ್ತಮ ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ವರ್ಷ ಬ್ಯಾಂಕ್ 118 ಕೋಟಿ ರೂ.ಗೂ ಹೆಚ್ಚಿನ ದುಡಿಯುವ ಬಂಡವಾಳ ಹೊಂದಿದೆ. ಆರ್ಥಿಕವಾಗಿ ಹಿಂದುಳಿದ ಜನರಿಗೆ ಆರ್ಥಿಕ ಚೈತನ್ಯ ತುಂಬುವ ಮೂಲಕ ಅಭಿವೃದ್ಧಿ ಪೂರಕ ಕಾರ್ಯ ದಲ್ಲಿ ತೊಡಗಿಸಿಕೊಂಡಿದೆ.

ನಿತ್ಯದ ವ್ಯವಹಾರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ. ಆರ್‌ಟಿಜಿಎಸ್ ಹಾಗೂ ಎನ್‌ಇಎಫ್‌ಟಿ ಸೌಲಭ್ಯದ ಜತೆಗೆ ತನ್ನದೆ ಎಟಿಎಂ ವ್ಯವಸ್ಥೆ ಹೊಂದಿದೆ. ಕಳೆದ ಎರಡು ವರ್ಷಗಳಿಂದ ದೊಡ್ಡಮೊತ್ತದ ಸಾಲಗಳ ವಸೂಲಾತಿಯಲ್ಲಿ ಸಮಸ್ಯೆ ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ವ್ಯವಹಾರ ನಡೆಸುವವರಿಗೆ ಸಾಲ ನೀಡಲು ಯೋಚಿಸಲಾಗಿದೆ ಎಂದರು.

ಬ್ಯಾಂಕ್ ಸದಸ್ಯರಿಗೆ ಕಡೂರಿನ ಚೇತನ ಆಸ್ಪತ್ರೆ ಮೂಲಕ ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ಒದಗಿಸಲು ಆಲೋಚಿಸಲಾಗಿದೆ. ಸದಸ್ಯರು ಹಾಗೂ ಗ್ರಾಹಕರಿಗಾಗಿ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.ಬ್ಯಾಂಕ್ ಕಾರ್ಯಕ್ರಮಗಳನ್ನು ಸಮಾಜಮುಖಿಯಾಗಿಸುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.

ಬ್ಯಾಂಕ್ ಉಪಾಧ್ಯಕ್ಷ ಡಿ.ಆದಿರಾಜಯ್ಯ, ನಿರ್ದೇಶಕರಾದ ಗಂಗಾಧರ ಗುಪ್ತಾ, ಟಿ.ಎನ್.ಗುರುಮೂರ್ತಿ, ಬಿ.ವಿ.ಕುಶಕುಮಾರ್, ಓ.ನಾಗೇಂದ್ರಯ್ಯ, ಓಬಯ್ಯ, ವೀಣಾ ಎಸ್.ರಾವ್, ಸರಸ್ವತಿ, ರಮೇಶ್, ಪ್ರಕಾಶ್, ಮೋಹನ್, ಕೆ.ಆರ್.ರಾಜಣ್ಣ ಇತರರಿದ್ದರು.

ಕಡೂರಲ್ಲಿ ಬ್ಯಾಂಕ್ ಉದ್ಘಾಟನೆ: ಕಡೂರು, ಭದ್ರಾವತಿ, ಬೆಂಗಳೂರಿನಲ್ಲಿ ಶಾಖೆಗಳಿವೆ.ಹೊಸದುರ್ಗ, ಬೆಂಗಳೂರು, ಭದ್ರಾವತಿಯಲ್ಲಿ ್ರಾಹಕ ಸ್ನೇಹಿ ಸ್ವಂತ ಬ್ಯಾಂಕ್ ಕಟ್ಟಡಗಳನ್ನು ಹೊಂದಲಾಗಿದೆ. ಆ.9ರಂದು ಕಡೂರಿನ ನೂತನ ಕಟ್ಟಡ ಉದ್ಘಾಟನೆಗೊಳ್ಳಲಿದೆ ಎಂದರು.

ಸೀತಾರಾಘವ ಬ್ಯಾಂಕ್ ಮಧ್ಯ ಕರ್ನಾಟಕದ ಅಗ್ರಗಣ್ಯ ಸಹಕಾರಿ ಬ್ಯಾಂಕ್ ಆಗಿ ಹೊರಹೊಮ್ಮಿದೆ. ಇದಕ್ಕೆ ಗ್ರಾಹಕರು, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಸಹಕಾರ ಕಾರಣ. ಪ್ರಸಕ್ತ ಆರ್ಥಿಕ ವರ್ಷವೂ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ ಎಂದು ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎನ್.ಮಂಜುನಾಥ್ ತಿಳಿಸಿದರು.