ಜ್ಞಾನಮಾರ್ಗದಿಂದ ಬದುಕು ಪರಿಪೂರ್ಣತೆ: ಶ್ರೀ ಶಾಂತವೀರ ಸ್ವಾಮೀಜಿ ಅಭಿಮತ

ಹೊಸದುರ್ಗ: ಆಸೆಯ ಬೆನ್ನು ಹತ್ತದೆ ಜ್ಞಾನ ಮಾರ್ಗದಲ್ಲಿ ನಡೆದರೆ ಬದುಕು ಪರಿಪೂರ್ಣತೆ ಹೊಂದುತ್ತದೆ ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಕುಂಚಿಟಿಗ ಮಠದಲ್ಲಿ ಆಯೋಜಿಸಿದ್ದ 26ನೇ ಸುಜ್ಞಾನ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಧರ್ಮ, ರಾಜಕೀಯ, ಶಿಕ್ಷಣ, ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳು ಕಲುಷಿತಗೊಂಡು ಬದುಕು ಹಾದಿ ತಪ್ಪಿದೆ ಎಂದು ವಿಷಾದಿಸಿದರು.

ಸಮಾಜವನ್ನು ಒಗ್ಗೂಡಿಸಿ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುವರ ಸಂಖ್ಯೆ ಕಡಿಮೆಯಾಗುತ್ತಿದೆ. ಧರ್ಮ, ಜಾತಿಯ ನಡುವೆ ಕೊಂಡಿಯಂತೆ ಕೆಲಸ ಮಾಡುವುದು ನಮ್ಮ ಆದ್ಯತೆಯಾಗಬೇಕು. ಕತ್ತರಿ ಬದಲು ಸೂಜಿಯಾಗಿ ಸಮಾಜವೆಂಬ ಹರಿದ ಕೌದಿ ಹೊಲಿಯುವ ಪ್ರಯತ್ನ ಎಲ್ಲರಿಂದಲೂ ಆಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಇಂದಿರಾಗಾಂಧಿ ಶಿಕ್ಷಣ ಸಂಸ್ಥೆ ಪ್ರಾಚಾರ್ಯ ಬಸಪ್ಪ ಮಾತನಾಡಿ, ಬದುಕಿನಲ್ಲಿ ಎದುರಾಗುವ ಸೋಲು ಮತ್ತು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿದರೆ ಯಶಸ್ಸು ಗಳಿಸಬಹುದು. ಮಕ್ಕಳಿಗೆ ವಿನಯ, ಉತ್ತಮ ಸಂಸ್ಕಾರ ನೀಡಬೇಕು ಎಂದು ಸಲಹೆ ನೀಡಿದರು.

ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಶಾಂತಮೂರ್ತಿ ಮಾತನಾಡಿ, ಮಕ್ಕಳಲ್ಲಿ ಡಾಕ್ಟರ್, ಇಂಜಿನಿಯರ್ ಆಗುವ ಆಸೆ ತುಂಬುವ ಬದಲು ಸಮಾಜ ಸೇವೆಯಲ್ಲಿ ತೊಡಗುವ ಗುಣ ಬೆಳೆಸಿದರೆ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದರು.

ಪರಿಸರ ಸಂರಕ್ಷಣೆಯಲ್ಲಿ ಜನಸಾಮಾನ್ಯರ ಪಾತ್ರ ಕುರಿತು ಚಿಂತಕ ನವೀನ್ ಕುಮಾರ್ ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡೆದ ಅಂಕಿತಾ, ಭೂಮಿಕಾ, ವಿನಯ್ ಇತರರನ್ನು ಗೌರವಿಸಲಾಯಿತು.

ಬಿಜೆಪಿ ಮುಖಂಡ ಆರ್.ಡಿ. ಸೀತಾರಾಂ, ಪುರಸಭೆ ಸದಸ್ಯ ಆರ್.ಎಸ್. ಪ್ರಶಾಂತ್, ಬಿಇಒ ಎಲ್. ಜಯಪ್ಪ, ಅಜ್ಜಪ್ಪ, ಕೃಷಿ ಸಾಧಕ ಹಾಲು ಸಿದ್ದಪ್ಪ ಮತ್ತಿತರರಿದ್ದರು.