ಮಲ್ಲಪ್ಪ ಪೂಜೆ ವೇಳೆ ಸುರಿದ ಮಳೆ

ಹೊಸದುರ್ಗ: ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಸಂಪ್ರದಾಯದಂತೆ ಮಳೆ ಮಲ್ಲಪ್ಪ ಪೂಜೆ ನೆರವೇರಿಸುತ್ತಿದ್ದಂತೆ ಮಳೆ ಸುರಿದ ಕಾಕತಾಳಿಯ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಮುಂಗಾರು ಮಳೆ ಬರದೆ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ ನಾಗರಕಟ್ಟೆ ಗ್ರಾಮದ ಜನರು, ಮಳೆಗಾಗಿ ಪ್ರಾರ್ಥಿಸಿದರು. ಭಾನುವಾರ ಸಂಪ್ರದಾಯದಂತೆ ಗ್ರಾಮದೇವತೆ ಕರಿಯಮ್ಮ ಹಾಗೂ ಮಲ್ಲಿಕಾರ್ಜುನ ಸ್ವಾಮಿ ದೇವರುಗಳ ನೇತೃತ್ವದಲ್ಲಿ ಮಳೆ ಮಲ್ಲಪ್ಪನ ಪೂಜೆ ಮಾಡಿದರು.

ಮಳೆರಾಯನನ್ನು ಪೂಜೆ ಮಾಡಿ ಗ್ರಾಮದ ಬಾಲಕನ ತಲೆಯ ಮೇಲಿರಿಸಿ ಗ್ರಾಮದ ಮನೆ ಮನೆಗೆ ಮೆರವಣಿಗೆಯ ಮೂಲಕ ತೆರಳಿದರು. ಮಳೆರಾಯನನ್ನು ಹೊತ್ತ ಬಾಲಕನ ಮೇಲೆ ನೀರು ಸುರಿಯುವ ಮೂಲಕ ಮಳೆ ಬರಿಸುವಂತೆ ಜನರು ಪ್ರಾರ್ಥನೆ ಸಲ್ಲಿಸಿದರು. ಪೂಜೆ ನಂತರ ಅನ್ನದಾಸೋಹ ನೆರವೇರಿತು.

ಮಳೆರಾಯನ ಮೆರವಣಿಗೆ ಮುಗಿಯುವ ಹೊತ್ತಿಗೆ ಗ್ರಾಮದಲ್ಲಿ ಜನರ ನಂಬಿಕೆಯಂತೆ ಮಳೆ ಸುರಿದು ಜನರಲ್ಲಿ ನಂಬಿಕೆ, ಸಂಭ್ರಮವನ್ನು ತಂದಿತು.

Leave a Reply

Your email address will not be published. Required fields are marked *