ಆಡಳಿತಾತ್ಮಕ ಹುದ್ದೆಗಳಿಂದ ಸೇವೆ ಸಾಧ್ಯ

ಹೊಸದುರ್ಗ: ಯುವಪೀಳಿಗೆ ಹಾಲುಮತ ಸಂಪ್ರದಾಯ ಹಾಗೂ ಗುರುಪೀಠದ ಸಂಸ್ಕೃತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ನಿರೀಕ್ಷಿತ ಸಾಧನೆ ಸಾಧ್ಯವಾಗುತ್ತದೆ ಎಂದು ಕಾಗಿನೆಲೆ ಕನಕ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಕೆಲ್ಲೋಡು ಬಳಿಯ ಕನಕ ಮಠದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ ಕನಕ ಚೇತನ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಹಾಲುಮತ ಸಮುದಾಯದ ಅಭಿವೃದ್ಧಿಗಾಗಿ ಕನಕ ಮಠ ಹಲವು ಕಾರ್ಯಕ್ರಮ ಕೈಗೊಂಡಿದೆ. ಇದರಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅತ್ಯಂತ ಶ್ರೇಷ್ಠತೆ ಪಡೆದಿದೆ. ಕೇವಲ ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣಕ್ಕೆ ಸೀಮಿತಗೊಳಿಸದೆ ಕೆಪಿಎಸ್‌ಸಿ, ಯುಪಿಎಸ್‌ಸಿ ಪರೀಕ್ಷೆಗಳತ್ತಲೂ ಗಮನ ಹರಿಸಬೇಕು ಎಂದರು.

ಆಡಳಿತಾತ್ಮಕ ಹುದ್ದೆಗಳಿಂದ ಮಾತ್ರ ಹೆಚ್ಚು ಜನರಿಗೆ, ಸಮಾಜಕ್ಕೆ ಸಹಾಯ ಮಾಡಲು ಸಾಧ್ಯ. ಅಂತಹ ಹುದ್ದೆಗಳನ್ನು ಪಡೆಯುವ ಮೂಲಕ ಹಿಂದುಳಿದ ವರ್ಗವನ್ನು ಮೇಲೆತ್ತುವ ಕೆಲಸ ಸಮುದಾಯದ ಮಕ್ಕಳಿಂದಾಗಬೇಕು ಎಂದು ತಿಳಿಸಿದರು.

ವಿವಿ ಮಟ್ಟದದಲ್ಲಿ ಚಿನ್ನದ ಪದಕ ಪಡೆದ ದಾವಣಗೆರೆಯ ಕೆ.ಸಿ.ತೇಜಸ್ವನಿ, ತುಮಕೂರಿನ ಜೆ.ಬಾಲಾಜಿ ಅವರಿಗೆ ಕನಕ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾಗಿನೆಲೆ ಮಠದಿಂದ ಶೋಷಿತರ ಪ್ರಗತಿ: ಕಾಗಿನೆಲೆ ಕನಕ ಮಠದ ಸ್ಥಾಪನೆ ನಂತರ ಕುರುಬ ಸಮುದಾಯ ಸೇರಿ ಶೋಷಿತ ವರ್ಗದ ಸುವರ್ಣಯುಗ ಅರಂಭವಾಗಿದೆ ಎಂದು ಬೆಂಗಳೂರು ವಿವಿ ಕುಲಸಚಿವ ಡಾ.ಬಿ.ಕೆ.ರವಿ ತಿಳಿಸಿದರು. ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಕನಕ ಗುರುಪೀಠ ಶ್ರಮಿಸುತ್ತಿದೆ. ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿರುವ ಸಮಾಜದ ಪ್ರಗತಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಪೂರಕವಾಗಿದೆ. ವಿನಯ, ವಿಧೇಯತೆ, ಶ್ರದ್ಧೆ ಹಾಗೂ ಗುರುವಿನ ಮಾರ್ಗದರ್ಶನ ಹೊಂದಿರುವ ಪ್ರತಿಯೊಬ್ಬರು ಬದುಕಿನಲ್ಲಿ ಯಶಸ್ಸುಗಳಿಸುತ್ತಾರೆ ಎಂದರು.

ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡುವ ಕನಸು ಕಾಣಬೇಕು. ಅದರ ಸಾಕಾರಕ್ಕೆ ನಿರಂತರ ಪ್ರಯತ್ನ ಪಡಬೇಕು. ಪ್ರತಿಭೆಗಳಿಗೆ ಕೊರತೆಯಿಲ್ಲ ಆದರೆ, ಆರ್ಥಿಕ ಸಮಸ್ಯೆ ಇದೆ. ಇವರ ಅಭ್ಯುದಯಕ್ಕಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.

ತಿಂಥಣಿ ಕನಕ ಮಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ, ಕಾಗಿನೆಲೆ ಮಠದ ಶ್ರೀ ಅಮೋಘ ಸಿದ್ದೇಶ್ವರ ಸ್ವಾಮೀಜಿ, ರೇವಣಸಿದ್ದೇಶ್ವರ ಮಠದ ಶ್ರೀ ಬಿದುಶೇಖರ್ ಒಡೆಯರ್, ಕೆಪಿಸಿಸಿ ಕಾರ್ಯದರ್ಶಿ ಡಾ.ನಾಗಲಕ್ಷ್ಮಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನಂತ್, ಕುರುಬರ ಸಂಘದ ಅಧ್ಯಕ್ಷ ಮಂಜುನಾಥ್, ಎಸ್.ಶ್ರೀರಾಮ್, ಕಾಂಗ್ರೆಸ್ ಮುಖಂಡ ಕೆ.ಟಿ.ಮಂಜುನಾಥ್ ಇತರರಿದ್ದರು.

 

Leave a Reply

Your email address will not be published. Required fields are marked *