ಗ್ರಾಪಂ ಅಧ್ಯಕ್ಷ ಸೇರಿ 12 ಮಂದಿ ರಾಜೀನಾಮೆ

ಹೊಸದುರ್ಗ: ನಮ್ಮ ಪಂಚಾಯಿತಿಗೆ ಪಿಡಿಒ ಇಲ್ಲ. ಪರಿಣಾಮ ಕುಡಿವ ನೀರು ಪೂರೈಕೆ ಸೇರಿ ಮೂಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿವೆ. ಇದರಿಂದ ನಾವು ಬೇಸತ್ತು ರಾಜೀನಾಮೆ ಸಲ್ಲಿಸುತ್ತಿದ್ದೇವೆ.

ಇದು ತಾಲೂಕಿನ ದೇವಪುರ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷೆ ಸೇರಿ ಪಂಚಾಯಿತಿಯ ಒಟ್ಟು 12 ಸದಸ್ಯರು ಗುರುವಾರ ಎಡಿಸಿ ಸಂಗಪ್ಪ ಅವರಿಗೆ ಸಲ್ಲಿಸಿದ ತಮ್ಮ ರಾಜೀನಾಮೆಗೆ ನೀಡಿದ ಪ್ರಮುಖ ಕಾರಣ.

ದೇವಪುರ ಗ್ರಾಪಂ ಪಿಡಿಒ ತಾಪಂ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ಸ್ಥಾನಕ್ಕೆ ನಿಯುಕ್ತಿಗೊಂಡ ಪ್ರಭಾರ ಪಿಡಿಒ ಕೂಡ ಅನಾರೋಗ್ಯದ ಕಾರಣ ನೀಡಿ ಒಂದು ತಿಂಗಳಿಂದ ಗ್ರಾಮ ಪಂಚಾಯಿತಿಗೆ ಬಂದಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯವಷ್ಟೇ ಅಲ್ಲದೇ ಸ್ವಚ್ಛತೆ, ಕುಡಿವ ನೀರು ಪೂರಕೆ ಸೇರಿ ಮೂಲ ಸೌಲಭ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದೇವೆ.

ದೇವಪುರ, ದೇವಪುರ ಬೋವಿ ಕಾಲನಿ, ನರಸೀಪುರ, ಹಕ್ಕಿತಿಮ್ಮಯ್ಯನಹಟ್ಟಿ, ಕೋಡಿಹಳ್ಳಿ, ಹೊನ್ನೆನಹಳ್ಳಿ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಸೇರಿ ಅಗತ್ಯ ಸೌಲಭ್ಯ ಒದಗಿಸಲು ಸಾಧ್ಯವಾಗದೆ ಜನರ ಆಶೋತ್ತರಗಳಿಗೆ ಸ್ಪಂದಿಸಲು ಆಗಿಲ್ಲ.

ತೀವ್ರ ಬರಗಾಲದಿಂದ ಕುಡಿಯಲು ನೀರಿಲ್ಲ, ಮಾಡಲು ಕೆಲಸವಿಲ್ಲದೆ ಪಟ್ಟಣಕ್ಕೆ ಜನ ಗುಳೆ ಹೋಗುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಕೂಡ ಸ್ಥಗಿತಗೊಂಡಿದೆ. ಜನ ಸಮಾನ್ಯರು ನಮ್ಮ ವಿರುದ್ಧ ಆಕ್ರೋಶಗೊಂಡಿದ್ದಾರೆ. ಜನರ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಜಿಪಂ ಸಿಇಒ ಸತ್ಯಭಾಮಾ, ತಾಪಂ ಇಒ ಮಹಮ್ಮದ್ ಮುಬೀನ್ ಸೇರಿ ಎಲ್ಲ ಮೇಲಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಪ್ರಯೋಜವಾಗಿಲ್ಲ.

ಸಿಇಒ ಅವರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸುವಂತೆ ಮಾಡಿಕೊಂಡ ಮನವಿಗೆ ಸ್ಪಂದನೆ ಸಿಕ್ಕಿಲ್ಲ. ಬೇಕಾದರೆ ರಾಜೀನಾಮೆ ನೀಡಿ ಹೋಗಿ ಎಂದು ಉದಾಸೀನವಾಗಿ ಉತ್ತರಿಸಿದ್ದಾರೆ. ಇದರಿಂದ ಮನನೊಂದು ರಾಜೀನಾಮೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ರತ್ನಮ್ಮ ಶಿವರಾಂ, ಉಪಾಧ್ಯಕ್ಷೆ ಶೀಲಾ ವಿರುಪಾಕ್ಷಪ್ಪ, ಸದಸ್ಯರಾದ ಮಲ್ಲೇಶ್, ಮಾರುತಿ, ನಾಗರಾಜು, ರಾಧಾ ರಂಗನಾಥ, ಜಯಮ್ಮ ಶಂಕರಪ್ಪ, ರೂಪಾ ಸಿದ್ದಪ್ಪ, ಟಿ.ವಿ.ವಿರುಪಾಕ್ಷಪ್ಪ, ರಾಜಮ್ಮ ಹಾಲೇಶ್, ಜಯಾಬಾಯಿ, ಬಿ.ಆರ್.ರುದ್ರಪ್ಪ ಇದ್ದರು.

ರಾಜೀನಾಮೆ ಕೊಟ್ಟಿದ್ರೆ ಅಂಗೀಕಾರ: ದೇವಪುರ ಸದಸ್ಯರ ಆರೋಪ ನನಗೆ ಗೊತ್ತಿಲ್ಲ. ಅವರ ರಾಜೀನಾಮೆಗೆ ಕಾರಣ ಅವರನ್ನೇ ಕೇಳಬೇಕು. ನನಗೆ ಈ ಸಂಬಂಧ ಯಾವುದೇ ಮಾಹಿತಿ ಇಲ್ಲ. ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ್ದರೆ ಅಂಗೀಕರಿಸಲಾಗುವುದು ಎಂದು ಜಿಪಂ ಸಿಇಒ ಸತ್ಯಭಾಮಾ ಪತ್ರಿಕೆಗೆ ತಿಳಿಸಿದ್ದಾರೆ.