ಹೊಸದುರ್ಗ: ತಾಲೂಕಿನಲ್ಲಿ ತೀವ್ರ ಕುಡಿವ ನೀರಿನ ಸಮಸ್ಯೆಯಿದ್ದರೂ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಪ್ರಶಂಸೆ ವ್ಯಕ್ತಪಡಿಸಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು, ಗ್ರಾಪಂ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಅಧಿಕಾರಿಗಳ ಕರ್ತವ್ಯ ಪ್ರಜ್ಞೆಯಿಂದ ಸಮಸ್ಯೆ ಉಲ್ಬಣಿಸಿಲ್ಲ. ಕುಡಿವ ನೀರಿಗೆ ಪ್ರಥಮ ಆದ್ಯತೆ ನೀಡಿ. ಸಮಸ್ಯೆ ಕ್ಲಿಷ್ಟವಾಗಿದ್ದರೆ ನನ್ನೊಂದಿಗೆ ಚರ್ಚಿಸಿ ಅಗತ್ಯವಿರುವ ಕಡೆ ಕೊಳವೆಬಾವಿ ಕೊರೆಸಲು ಅನುದಾನ ಒದಗಿಸಲಾಗುವುದು ಎಂದರು.
ಶುದ್ಧ ಕುಡಿವ ನೀರು ಘಟಕಗಳಿಗೆ ನೀರು ಸರಬರಾಜು ನಿಲ್ಲಿಸಬಾರದು.ತುರ್ತು ಸಂದರ್ಭಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಜಿಲ್ಲಾಧಿಕಾರಿ ಮೂಲಕ ಅಗತ್ಯ ಸಂಪನ್ಮೂಲ ಒದಗಿಸಲಾಗುವುದು ಎಂದು ತಿಳಿಸಿದರು.
ಗ್ರಾಪಂ ವ್ಯಾಪ್ತಿ ಕೈಗಾರಿಕೆಗಳು, ಸೋಲಾರ್ ವಿದ್ಯುತ್ ಘಟಕ ಸೇರಿ ಸಂಸ್ಥೆಗಳ ಕಂದಾಯ ಬಾಕಿ ಉಳಿಸಿಕೊಂಡ ಪ್ರಕರಣಗಳು ಕಂಚಿಪುರ, ಜಿ.ಎನ್.ಕೆರೆ, ಕಾರೇಹಳ್ಳಿ ಮೊದಲಾದ ಗ್ರಾಮ ಪಂಚಾಯಿತಿಗಳಲ್ಲಿವೆ. ಕಂದಾಯ ಸಂಗ್ರಹದ ಬಗ್ಗೆ ಕಾಳಜಿ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಚರಂಡಿ ಸ್ವಚ್ಛತೆ, ಗ್ರಾಮ ನೈರ್ಮಲ್ಯಕ್ಕೆ ಗ್ರಾಪಂ ಅನುದಾನ ಬಳಸಿಕೊಳ್ಳಬೇಕು. ವೇದಾವತಿ ನದಿ ಪಾತ್ರದ ಮರಳು ಬ್ಲಾಕ್ ಪರವಾನಗಿ ನೀಡುವಾಗ ಎಚ್ಚರಿಕೆ ವಹಿಸಲು ತಿಳಿಸಿದರು.
ತಾಪಂ ಇಒ ಮಹಮದ್ ಮುಬೀನ್ ಮಾತನಾಡಿ, ಶುದ್ಧ ಕುಡಿವ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡುವುದು ಗ್ರಾಪಂ ಕರ್ತವ್ಯ. ನೀರಿನ ಬಗ್ಗೆ ಯಾವುದೇ ದೂರು ಬಾರದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ವಿವಿಧ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಸಿಬ್ಬಂದಿ ಭಾಗವಹಿಸಿದ್ದರು.