ಹೊಸಾಡು ಕಾಲುಸಂಕ ಮರೀಚಿಕೆ

ಬೈಂದೂರು: ಕಾಲ್ತೋಡು ಗ್ರಾಪಂ ವ್ಯಾಪ್ತಿಯ ಬೋಳಂಬಳ್ಳಿ ಸಮೀಪದ ಹೊಸಾಡು ಗ್ರಾಮದ ಜನರಿಗೆ ಈ ವರ್ಷವು ಕಾಲುಸಂಕ ರಚನೆ ಮರೀಚಿಕೆಯಾಗಿದ್ದು, ಕಳೆದ ವರ್ಷ ಇಲಾಖೆ ಜನರ ಬೇಡಿಕೆಗಳಿಗೆ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿದರೂ ಸಹ ಇದುವರಗೆ ಅನುಷ್ಠಾನವಾಗಿಲ್ಲದಿರುವುದರಿಂದ ಆತಂಕದಿಂದಲೆ ಮಳೆಗಾಲ ಕಳೆಯಬೇಕಾಗಿದೆ.

ಇಲ್ಲಿನ ಸಮಸ್ಯೆ ಬಗ್ಗೆ ವಿಜಯವಾಣಿ ಇತ್ತೀಚೆಗೆ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಕಾಲುಸಂಕ ನಿರ್ಮಿಸಲು ಅಂದಾಜು ಪಟ್ಟಿ ರಚಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಅಲ್ಲದೆ ಶಾಸಕರು 10 ಲಕ್ಷ ರೂ. ಅನುದಾನ ಮೀಸಲಿರಿಸಿದ್ದರು. ಇಲಾಖೆಯ ಮಂದಗತಿಯ ಪ್ರಕ್ರಿಯೆಯಿಂದ ಕೆಲಸವಿನ್ನೂ ಆರಂಭವಾಗಿಲ್ಲ. ಹೊಸಾಡು ಭಾಗದಲ್ಲಿ 40ಕ್ಕೂ ಅಧಿಕ ಕುಟುಂಬಗಳಿದ್ದು, 1500ಕ್ಕೂ ಹೆಚ್ಚು ಜನ ಈ ಕಾಲುಸಂಕದಲ್ಲೇ ನದಿ ದಾಟಬೇಕು. ಇಲ್ಲಿನ ಹೊಸಾಡು, ಕಾಡಿನಹೊಳೆ, ಮುತ್ತಣ್ಕಿ, ಕೇಂಜಿ, ಕೂಡಾಲು ಭಾಗದ ಜನರು ಕಾಲ್ತೋಡಿಗೆ ತೆರಳಬೇಕಾದರೆ ಈ ನದಿ ದಾಟಬೇಕು.

ನಾಲ್ಕು ವರ್ಷ ಹಿಂದೆ ನದಿ ಪಾಲಾದ ಸಂಕ: ಹಳೆಯ ಕಾಲುಸಂಕ ನಾಲ್ಕು ವರ್ಷ ಹಿಂದೆ ನದಿಪಾಲಾಗಿದೆ. ಹೀಗಾಗಿ ಸ್ಥಳೀಯರು ತಾತ್ಕಾಲಿಕವಾಗಿ ಮಕ್ಕಳ ಸುರಕ್ಷೆ ದೃಷ್ಟಿಯಿಂದ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ.

ಹೊಸಾಡುವಿನಿಂದ ಶಾಲಾ, ಕಾಲೇಜು, ಆಸ್ಪತ್ರೆಗೆ ತೆರಳಬೇಕಾದರೆ ಬೈಂದೂರು, ಕಾಲ್ತೋಡು, ಕುಂದಾಪುರಕ್ಕೆ ತೆರಳಬೇಕು. ಹೊಸಾಡು-ಬೋಳಂಬಳ್ಳಿ ನಡುವೆ ಹರಿಯುವ ಸುಮನಾವತಿಯ ಉಪನದಿ ಜನರ ಸಂಚಾರಕ್ಕೆ ತೊಡಕಾಗಿದೆ. ಪ್ರೌಢಶಾಲೆ ಹಾಗೂ ಕಾಲೇಜಿಗೆ ತೆರಳಬೇಕಾದರೆ 10 ಕಿ.ಮೀ ದೂರ ನಡೆಯಬೇಕು. ಜನಪ್ರತಿನಿಧಿಗಳ ನಿರ್ಲಕ್ಷೃವೇ ಇಲ್ಲಿನ ಅಭಿವೃದ್ಧಿ ಹಿನ್ನಡೆಗೆ ಕಾರಣ ಎನ್ನುವುದು ಸ್ಥಳೀಯರ ಅಭಿಪ್ರಾಯ. ಮಳೆಗಾಲದಲ್ಲಿ ದೊಡ್ಡ ಮಳೆ ಬಂದರೆ ಮಕ್ಕಳು ಶಾಲೆಗೆ ತೆರಳುವಂತಿಲ್ಲ. ಪ್ರತಿದಿನ ಪಾಲಕರಿಗೆ ಮಕ್ಕಳನ್ನು ನದಿ ದಾಟಿಸಿ ಬರುವುದೇ ಆತಂಕದ ಕೆಲಸ. ಕಾಡು ಪ್ರದೇಶ ಹಾಗೂ ಕಾಲುಸಂಕದ ಮೇಲೆ ನದಿ ದಾಟಬೇಕಾಗಿರುವುದು ಇಲ್ಲಿನ ಜನರ ನಿತ್ಯ ಸಮಸ್ಯೆ.

ಸದ್ಯದ ಮಟ್ಟಿಗೆ ತಾತ್ಕಾಲಿಕ ಕಾಲುಸಂಕವನ್ನು ಸ್ಥಳೀಯರೇ ಸೇರಿ ನಿರ್ಮಿಸಿಕೊಂಡಿದ್ದಾರೆ. ಹೊಳೆ ಸುಮಾರು 30 ಅಡಿ ಆಳವಿದೆ. ನೀರು ಅತ್ಯಂತ ರಭಸವಾಗಿ ಹರಿಯುತ್ತದೆ. ಕಳೆದ ವರ್ಷ ಶಾಸಕರನ್ನು ಭೇಟಿ ನೀಡಿ ಮನವಿ ಮಾಡಿದ್ದು ಸೇತುವೆಗೆ ಅನುದಾನ ಘೋಷಿಸಿದ್ದಾರೆ. ಆದರೆ ಕಾಮಗಾರಿ ಪ್ರಕ್ರಿಯೆ ಆದಷ್ಟು ಬೇಗ ಆರಂಭವಾಗಬೇಕಿದೆ.
– ಸುರೇಂದ್ರ ಗೌಡ ಹೊಸಾಡು ಸ್ಥಳೀಯ ನಿವಾಸಿ

ಕಳೆದ ವರ್ಷ ಹೊಸಾಡು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸ್ಥಳೀಯರ ಜತೆ ಚರ್ಚಿಸಿ ಅನುದಾನ ಮೀಸಲಿರಿಸಿದ್ದೇನೆ. ಇಲಾಖೆಯಿಂದ ಪ್ರಕ್ರಿಯೆ ನಡೆಯುತ್ತಿದೆ. ಸಂಬಂಧಿತ ಅಧಿಕಾರಿಗಳಿಂದ ವಿವರ ಪಡೆದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ.
-ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕರು ಬೈಂದೂರು ಕ್ಷೇತ್ರ

Leave a Reply

Your email address will not be published. Required fields are marked *