ತೋಟಗಾರಿಕೆ ಬೆಳೆಗಳಿಂದ ಆರ್ಥಿಕ ಬೆಳವಣಿಗೆ

ಬಾಗಲಕೋಟೆ: ತೋಟಗಾರಿಕೆ ಬೆಳೆಗಳಿಂದ ರೈತರ ಆದಾಯ ವೃದ್ಧಿಯಾಗಲಿದೆ. ಪ್ರತಿಯೊಬ್ಬ ರೈತರು ತಮ್ಮ ಜಮೀನಿನಲ್ಲಿ ಸ್ವಲ್ಪವಾದರೂ ತೋಟಗಾರಿಕೆ ಬೆಳೆ ಬೆಳೆಯುವ ಜತೆಗೆ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕೆಂದು ತೋವಿವಿ ಕುಲಪತಿ ಡಿ.ಎಲ್. ಮಹೇಶ್ವರ ಹೇಳಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ನಗರದ ತೋವಿವಿ ಆವರಣದಲ್ಲಿ ಮಂಗಳವಾರ ನಡೆದ ಸಸ್ಯ ಸಂತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರು ಒಂದಿಲ್ಲೊಂದು ರೀತಿಯಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುತ್ತಾರೆ. ಅದಕ್ಕೆ ವೈಜ್ಞಾನಿಕ ಮಾಗೋಪಾಯಗಳನ್ನು ಕಂಡುಕೊಳ್ಳಬೇಕು. ಆಧುನಿಕ ಕೃಷಿ ಪದ್ಧತಿಗೆ ಒತ್ತು ನೀಡಬೇಕು. ಕೃಷಿ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳು, ಆವಿಷ್ಕಾರಗಳು ನಡೆಯುತ್ತಲಿವೆ. ಅವುಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಸಲಹೆ ನೀಡಿದರು.

ವಿನೂತನ ಶೈಲಿಯಲ್ಲಿ ಅನಾವರಣಗೊಂಡಿರುವ ಇಂದಿನ ಈ ಸಸ್ಯ ಸಂತೆಯನ್ನು ತೋಟಗಾರಿಕೆ ರೈತರ ಸಮೃದ್ಧಿಗಾಗಿ ಏರ್ಪಡಿಸಲಾಗಿದೆ. ಈ ಸಸ್ಯ ಸಂತೆಯು 3 ದಿನಗಳ ಕಾಲ ನಡೆಯುತ್ತಿದ್ದು ಬಾಗಲಕೋಟೆ ಜಿಲ್ಲೆ ಮತ್ತು ಸುತ್ತಮುತ್ತಲಿನ ರೈತರು ಒಂದೇ ಸೂರಿನಡಿ ಎಲ್ಲ ತೋಟಗಾರಿಕೆ ಬೆಳೆಗಳ ಸಸಿಗಳು, ಬೀಜ ಹಾಗೂ ಪುಸ್ತಕಗಳನ್ನು ಖರೀದಿಸಲು ಸದವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ತೋವಿವಿ ಶಿಕ್ಷಣ ನಿರ್ದೇಶಕ ಡಾ.ಎಚ್.ಬಿ. ಲಿಂಗಯ್ಯ, ಕುಲ ಸಚಿವ ಡಾ. ಇಂದಿರೇಶ್, ಸ್ನಾತಕೋತ್ತರ ಡೀನ್ ಡಾ.ಎನ್. ಬಸವರಾಜ, ಆಡಳಿತಾಧಿಕಾರಿ ಡಾ.ಕೆ.ಎನ್. ಕಟ್ಟಿಮನಿ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ.ಎಂ.ಎಚ್. ಕುಲಕರ್ಣಿ, ಡಾ.ಎಚ್.ಬಿ. ಪಾಟೀಲ, ಬೀಜ ವಿಭಾಗದ ವಿಶೇಷ ಅಧಿಕಾರಿ ಡಾ.ಡಿ.ಆರ್. ಪಾಟೀಲ ಮತ್ತಿತರರಿದ್ದರು.

ಈ ಸಸ್ಯ ಸಂತೆ ನೋಡಿ ಖುಷಿಯಾಗಿದೆ. ನಮ್ಮಲ್ಲಿರುವ ತೋವಿವಿಯಿಂದ ರೈತರು ಪ್ರಯೋಜನಗಳನ್ನು ಪಡೆದುಕೊಳ್ಳಬೇಕಾಗಿದೆ. ವಿನೂತನ ತಂತ್ರಜ್ಞಾನಗಳು ಇಂದಿನ ರೈತರಿಗೆ ಅವಶ್ಯಕವಾಗಿವೆ. ಸಸ್ಯ ಸಂತೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭೇಟಿ ನೀಡಬೇಕು. ತೋವಿವಿ ವಿಜ್ಞಾನಿಗಳ ಜತೆ ರೈತರು ನಿರಂತರ ಸಂಪರ್ಕವಿಟ್ಟುಕೊಳ್ಳಬೇಕು. ತೋಟಗಾರಿಕೆ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕು.

| ಕಲ್ಲಪ್ಪ ಮಾಚಕನೂರ ರೈತರು

 

ಸಸ್ಯ ಸಂತೆಯಲ್ಲಿ ಅರಣ್ಯ ಸಸಿಗಳು, ಮಾವು, ಲಿಂಬೆ, ಚಿಕ್ಕು, ಪೇರಲ ಇತ್ಯಾದಿ ಹಣ್ಣಿನ ಬೆಳೆಗಳ ಸಸಿಗಳು, ಗುಲಾಬಿ, ಮಲ್ಲಿಗೆ, ಕನಕಾಂಬರ ಮತ್ತಿತರ ಅಲಂಕಾರಿಕ ಸಸ್ಯಗಳು, ಕರಬೇವು, ಮೆಣಸು, ಕಸಿ ಮಾಡಿದ ಕರಿ ಮೆಣಸು, ಪೊದೆ ಮೆಣಸು, ತೆಂಗು, ಅಡಿಕೆ, ಲವಂಗ, ನುಗ್ಗೆ, ಟೊಮೆಟೋ, ಮೆಣಸಿನಕಾಯಿ, ಬದನೆಕಾಯಿ, ಪೀಡೆನಾಶಕಗಳು, ಜೈವಿಕ ಗೊಬ್ಬರ, ಜೈವಿಕ ರಸಗೊಬ್ಬರ ಮತ್ತು ಕೋಯ್ಲೋತ್ತರ ತಂತ್ರಜ್ಞಾನ ವಿಭಾಗದ ಮಳಿಗೆಯಲ್ಲಿ ಹಣ್ಣಿನ ರಸಗಳು, ಚೀಪ್ಸ್, ನುಗ್ಗೆ ಬಿಸ್ಕೇಟ್ ಇತ್ಯಾದಿ ಪ್ರದರ್ಶನ ಮತ್ತು ಮಾರಾಟಕ್ಕಿವೆ. ಬಾಗಲಕೋಟೆ ಕೃಷಿ ವಿಜ್ಞಾನ ಕೇಂದ್ರದ ಮಳಿಗೆಯಲ್ಲಿ ಉಳ್ಳಾಗಡ್ಡಿ, ತೊಗರಿ, ನವಣೆ, ನುಗ್ಗೆ ಮತ್ತು ಜೈವಿಕ ಗೊಬ್ಬರ, ಅಲಂಕಾರಿಕ ಸಸ್ಯಗಳು ದೊರೆಯಲಿವೆ. ರೈತರು ಪ್ರಯೋಜನ ಪಡೆದುಕೊಳ್ಳಬೇಕು.

ಡಾ.ವೈ.ಕೆ. ಕೋಟಿಕಲ್ಲ ತೋವಿವಿ ವಿಸ್ತರಣಾ ನಿರ್ದೇಶಕ

Leave a Reply

Your email address will not be published. Required fields are marked *