ಅನಾಥವಾಗುತ್ತಿದೆ ತೋಟಗಾರಿಕಾ ನಿಗಮದ ಡೇರಿ ಫಾರ್ಮ್

ಪುರುಷೋತ್ತಮ ಪೆರ್ಲ ಕಾಸರಗೋಡು

ಕೇರಳ ತೋಟಗಾರಿಕಾ ನಿಗಮ(ಪಿ.ಸಿ.ಕೆ)ದ ಪೆರ್ಲ ವಿಭಾಗ ವ್ಯಾಪ್ತಿಯ ಉಕ್ಕಿನಡ್ಕ ಸನಿಹದ ಕುದ್ವದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಡೇರಿ ಫಾರ್ಮ್ ಸರ್ಕಾರದ ನಿರ್ಲಕ್ಷ್ಯದಿಂದ ಸೊರಗಲಾರಂಭಿಸಿದೆ. 100 ದನಗಳನ್ನು ಪೋಷಿಸುವ ನಿಟ್ಟಿನಲ್ಲಿ 2015ರಲ್ಲಿ ಡೇರಿ ಆರಂಭಗೊಂಡಿದೆ. ಡೇರಿ ಆರಂಭವಾಗಿ ನಾಲ್ಕು ವರ್ಷ ಸಮೀಪಿಸುತ್ತಿದ್ದರೂ, ಫಾರ್ಮ್‌ನಲ್ಲಿ ದನಗಳ ಸಂಖ್ಯೆ 50ರ ಅಂಚಿಗೂ ತಲುಪಿಲ್ಲ. ಪ್ರಸಕ್ತ 29 ದನಗಳಿದ್ದು, ಇವುಗಳಿಗೆ ಮೇವಿನ ಕೊರತೆಯೂ ಕಾಡುತ್ತಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ಯೋಜನೆ ಆರಂಭಿಸಿದ್ದರೂ, ನಿಗಮದ ಅಧಿಕಾರಿಗಳ ನಿರ್ಲಕ್ಷೃ ಧೋರಣೆಯಿಂದ ಪೆರ್ಲದ ಡೇರಿ ಫಾರ್ಮ್ ಸೊರಗುತ್ತಿದೆ. ಸಾರ್ವಜನಿಕ ರಂಗದ ಸಂಸ್ಥೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮುಚ್ಚುವ ಸ್ಥಿತಿಗೆ ತಲುಪಿದೆ.

ನಷ್ಟದ ಹಾದಿ: ಕೋಟ್ಯಂತರ ರೂ. ಖರ್ಚು ಮಾಡಿರುವ ಡೇರಿ ಫಾರ್ಮ್‌ಗೆ ನಿರೀಕ್ಷಿತ ಆದಾಯ ಲಭ್ಯವಾಗದೆ, ದಿನಕ್ಕೆ ಐದು ಸಾವಿರ ರೂ. ಹೆಚ್ಚು ನಿಗಮಕ್ಕೆ ನಷ್ಟ ಉಂಟಾಗುತ್ತಿದೆ. ಇಲ್ಲಿ ಏಳು ದನಗಳಿಂದ ಮಾತ್ರ ಹಾಲು ಕರೆಯಲಾಗುತ್ತಿದೆ. ದಿನವೊಂದಕ್ಕೆ ಸರಾಸರಿ 70 ಲೀಟರ್ ಹಾಲು ಮಾತ್ರ ಇಲ್ಲಿ ಲಭಿಸುತ್ತಿದ್ದು, ದನಗಳ ಪೋಷಣೆಗೆ 10ಕ್ಕೂ ಹೆಚ್ಚು ಕಾರ್ಮಿಕರು ಕೆಲಸಕ್ಕಿದ್ದಾರೆ! 100 ದನ ಸಾಕುವ ಮೂಲಕ ಪ್ರತಿದಿನ ಒಂದು ಸಾವಿರ ಲೀಟರ್ ಹಾಲು ಸಂಸ್ಕರಿಸುವ ಯೋಜನೆಯಿರಿಸಿಕೊಳ್ಳಲಾಗಿದ್ದರೂ, ಶೇ.15ರ ಅಂಚನ್ನೂ ದಾಟಿಲ್ಲ. ಹಾಲು ಕರೆಯುವುದರಿಂದ ತೊಡಗಿ, ಹಾಲಿನ ಪ್ಯಾಕೆಟ್ ತಯಾರಿ, ಹಾಲಿನಿಂದ ಬೆಣ್ಣೆ ಬೇರ್ಪಡಿಸುವ ಯಂತ್ರ, ಕೋಲ್ಡ್ ಸ್ಟೋರೇಜ್, ಹುಲ್ಲು ಕಟಾವು ಸಲಕರಣೆ ಸಹಿತ ವಿವಿಧ ಯಂತ್ರಗಳು ಇಲ್ಲಿದ್ದು, ಇವೆಲ್ಲವೂ ತುಕ್ಕು ಹಿಡಿದು ನಾಶವಾಗುತ್ತಿದೆ.

ಡೇರಿ ಫಾರ್ಮ್ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡ ಸ್ಥಳವೂ ಯೋಗ್ಯವಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಜಾನುವಾರುಗಳಿಗೆ ಮೇವಿನ ಹುಲ್ಲು ಬೆಳೆಸುವ ಯೋಜನೆಯೂ ಯಶಸ್ವಿಯಾಗಿಲ್ಲ. ನೀರಿಲ್ಲದೆ ಮೇವಿನ ಹುಲ್ಲು ಕರಟುವ ಸ್ಥಿತಿ ಇದೆ. ಇದರಿಂದ ಬೈಹುಲ್ಲು ಖರೀದಿಸಬೇಕಾಗುತ್ತಿದ್ದು, ಇದು ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಿಸಿದೆ.

ಭ್ರಷ್ಟಾಚಾರದ ಆರೋಪ: ಐದು ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಡೇರಿ ಫಾರ್ಮ್ ಯೋಜನೆ ತಯಾರಿಸಲಾಗಿದ್ದು, ಮೂರೂವರೆ ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಸಹಿತ ವಿವಿಧ ಕಾಮಗಾರಿ ಮಾಡಲಾಗಿದೆ. ಕಾಮಗಾರಿಗೆ ಸಂಬಂಧಿತ ಲೆಕ್ಕಾಚಾರದ ಬಗ್ಗೆ ನಿರ್ದೇಶಕ ಮಂಡಳಿಯೂ ಅಸಮಾಧಾನ ವ್ಯಕ್ತಪಡಿಸಿತ್ತು. ಅಂತರ್ಜಲ ಹೆಚ್ಚಳ ಹಾಗೂ ನೀರಿಂಗಿಸುವ ಪ್ರಕ್ರಿಯೆಗಾಗಿ ನಿರ್ಮಿಸಲಾದ ಚೆಕ್‌ಡ್ಯಾಂ ನಿರ್ಮಿಸಲಾಗಿದ್ದು, ಇಲ್ಲೂ ಭ್ರಷ್ಟಾಚಾರದ ಕೂಗು ಕೇಳಿಸುತ್ತಿದೆ. ಚೆಕ್‌ಡ್ಯಾಂ ಹಾಗೂ ಮಳೆ ನೀರು ಸಂಗ್ರಹಾಗಾರಕ್ಕಾಗಿ 99 ಲಕ್ಷ ರೂ. ವ್ಯಯಿಸಿರುವ ಬಗ್ಗೆ ದಾಖಲೆ ಸೂಚಿಸುತ್ತಿದೆ. 60 ಮೀ. ಉದ್ದಕ್ಕೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿರುವುದು ಬಿಟ್ಟರೆ, ಜಲಸಂರಕ್ಷಣೆಗೆ ಬೇರೇನೂ ಕೆಲಸ ಇಲ್ಲಿ ನಡೆದಿಲ್ಲ. ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ವಿಜಿಲೆನ್ಸ್‌ಗೂ ದೂರು ಸಲ್ಲಿಕೆಯಾಗಿದೆ.

ತೋಟಗಾರಿಕಾ ನಿಗಮ ಮುಖ್ಯವಾಗಿ ರಬ್ಬರ್ ಕೃಷಿ ಆಶ್ರಯಿಸಿ ಚಟುವಟಿಕೆ ನಡೆಸುತ್ತಿದ್ದು, ರಬ್ಬರ್ ಧಾರಣೆ ಕುಸಿತದಿಂದ ಒಂದಷ್ಟು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಇದು ಪೆರ್ಲದ ಡೇರಿ ಫಾರ್ಮನ್ನೂ ಬಾಧಿಸುವಂತಾಗಿದೆ. ಗೇರು ತೋಟದಿಂದ ಆದಾಯ ಕಡಿಮೆಯಾಗುತ್ತಿದ್ದಂತೆ ಕಾರ್ಮಿಕರಿಗೆ ಕೆಲಸ ನೀಡುವುದರ ಜತೆಗೆ ನಿಗಮವನ್ನು ವೈವಿಧ್ಯಮಯ ರಂಗಗಳಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಪೆರ್ಲ ಕುದ್ವದಲ್ಲಿ ಡೇರಿ ಫಾರ್ಮ್ ಆರಂಭಿಸಲಾಗಿದೆ. ಡೇರಿ ಅಭಿವೃದ್ಧಿಗೆ ಸರ್ಕಾರದ ನೆರವು ಕೇಳಲಾಗುವುದು. ಈ ಬಗ್ಗೆ ಮನವಿ ಸಲ್ಲಿಸಲಾಗಿದೆ.
ಸಜೀವನ್, ಮಹಾಪ್ರಬಂಧಕ ಗೇರು ತೋಟ ನಿಗಮ, ಕಾಸರಗೋಡು ಗ್ರೂಪ್