ಎರಡು ದಿನಕ್ಕೊಂದು ಬ್ಯಾರಲ್ ನೀರು..!

ಶಶಿಕಾಂತ ಮೆಂಡೆಗಾರ ವಿಜಯವಾಣಿ

ಬಿರು ಬೇಸಿಗೆ ಉತ್ತರ ಕರ್ನಾಟಕದ ಜನರ ಜೀವ ಹಿಂಡುತ್ತಿದೆ. ಕೆಲವು ಕಡೆಗಳಲ್ಲಿ ಒಂದು ಬಿಂದಿಗೆ ನೀರು ಬೇಕೆಂದರೂ ಮುರ್ನಾಲ್ಕು ಕಿಲೋ ಮೀಟರ್ ಅಲೆಯುವಂತಾಗಿದೆ. ಜಿಲ್ಲಾಡಳಿತ ನೀರು ವಿತರಣೆಗೆ ಕ್ರಮ ತೆಗೆದುಕೊಂಡರೂ ಅದೂ ‘ಬಕಾಸುರನಿಗೆ ಅರೆಕಾಸಿನ ಮಜ್ಜಿಗೆ’ ಎನ್ನುವಂತಾಗಿದೆ.
ಅದರಲ್ಲೂ ಇಂಡಿ ತಾಲೂಕಿನ ಜಿಗಜೇವಣಿ ಗ್ರಾಮದ ತೋಟದ ವಸ್ತಿಗಳ ನಿವಾಸಿಗಳ ನೀರಿನ ಬವಣೆ ಹೇಳ ತೀರದಾಗಿದೆ. ಒಂದು ಬ್ಯಾರಲ್ ನೀರಿಗೆ ಎರಡು ದಿನ ಕಾಯುವಂತಹ ಅನಿವಾರ್ಯತೆ ಉದ್ಭವವಾಗಿರುವುದು ವಿಜಯವಾಣಿ-ದಿಗ್ವಿಜಯ ನ್ಯೂಸ್ ರಿಯಾಲಿಟಿ ಚೆಕ್‌ನಲ್ಲಿ ಬೆಳಕಿಗೆ ಬಂದಿದೆ.
ಹೊರ್ತಿಯಿಂದ ಜಿಗಜೇವಣಿ ಕಡೆ ಹೊರಟರೆ ಸಾಕು ರಸ್ತೆ ಇಕ್ಕೆಲಗಳಲ್ಲಿ ಪ್ರತಿಯೊಂದು ತೋಟದ ವಸ್ತಿ ಮನೆಗಳ ಬಳಿ ಸಾಲು ಸಾಲು ನೀರಿನ ಬ್ಯಾರಲ್ ಇಟ್ಟಿರುವುದು ಕಾಣಿಸುತ್ತದೆ. ನೀರು ಸಂಗ್ರಹಕ್ಕಾಗಿ ಖಾಲಿ ಬ್ಯಾರಲ್ ಒಂದಕ್ಕೆ 600 ದಿಂದ 800 ರೂ. ಕೊಟ್ಟು ಖರೀದಿ ಮಾಡು ತಂದಿದ್ದು ಅದನ್ನೂ ರಾತ್ರಿಯಿಡೀ ಕಾಯುವುದೇ ಕೆಲಸವಾಗಿದೆ ಎಂದು ನಿವಾಸಿಗಳು ಹೇಳುತ್ತಾರೆ.
ಜೀಗಜೇವಣಿ ಗ್ರಾಮಗಳ ಒಂದೊಂದು ವಸ್ತಿಗಳ ಮನೆಯಲ್ಲಿ ಕನಿಷ್ಠ ಐದರಿಂದ ಆರು ಜನರು, ಎತ್ತು, ಎಮ್ಮೆ ಸೇರಿ ಮೂರ್ನಾಲ್ಕು ಜಾನುವಾರುಗಳು ಇದ್ದು, ಎಲ್ಲರಿಗೂ ಸೇರಿ ಎರಡು ದಿನಕ್ಕೊಮ್ಮೆ 150 ರಿಂದ 200 ಲೀಟರ್‌ವರೆಗಿನ ಒಂದು ಬ್ಯಾರಲ್ ನೀರು ಕೊಡುತ್ತಿದ್ದಾರೆ. ದಿನ ಬಳಕೆಗೆ, ಅಡುಗೆ, ಸ್ನಾನ, ಜಾನುವಾರುಗಳಿಗೂ ಬೇಕಾಗುವುದರಿಂದ ಇದು ಯಾವುದಕ್ಕೂ ಸಾಕಾಗುತ್ತಿಲ್ಲ. ಹೀಗಾಗಿ ಹೆಚ್ಚಿಗೆ ನೀರು ಕೇಳಿದರೆ, ‘ನಾವು ಇಷ್ಟೇ ಕೊಡಲಾಗುವುದು. ಬೇಕಿದ್ರೆ ತಗೊಳ್ರಿ. ಇಲ್ಲಾಂದ್ರೆ ಬಿಡಿ. ನಾಳೆಯಿಂದ ನಿಮಗೇ ನೀರೇ ಹಾಕಲ್ಲ’ ಎಂದು ಟ್ಯಾಂಕರ್‌ನಲ್ಲಿ ನೀರು ತರುವವರು ಬೈಯುತ್ತಿದ್ದು, ಅನಿವಾರ್ಯತೆಯಿಂದ ನಾವು ಸುಮ್ಮನಿದ್ದೇವೆ ಎಂದು ನಿವಾಸಿಗಳು ಗೋಳು ತೋಡಿಕೊಂಡರು.
ಹೆಚ್ವುವರಿ ನೀರಿಗಾಗಿ ನಿತ್ಯ ಕೆಲಸ ಬಿಟ್ಟು ಹುಡುಕಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದ್ದು, ಇನ್ನಾದರೂ ಈ ಬಗ್ಗೆ ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಂಡು, ಕೊನೆಯ ಪಕ್ಷ ದಿನಕ್ಕೆರಡು ಬ್ಯಾರಲ್ ನೀರು ವಿತರಿಸುವ ನಿಟ್ಟಿನಲ್ಲಾದರೂ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಒಂದು ವಸ್ತಿಗೆ ಒಂದು ದಿನಕ್ಕೆ ಕೇವಲ 100 ಲೀಟರ್ ನೀರು ಸಿಕ್ಕಂತಾಗುತ್ತಿದೆ. ಇಷ್ಟು ನೀರು ಕುಡಿಯಲು, ಅಡುಗೆ ಮಾಡಲು ಸಾಕಾಗುತ್ತಿಲ್ಲ. ಸ್ನಾನಕ್ಕಾಗಿ ನೀರು ಹುಡುಕಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಗೌರಮ್ಮ, ತೋಟದ ವಸ್ತಿ ನಿವಾಸಿ

ವಸ್ತಿ ನಿವಾಸಿಗಳ ಪರದಾಟ ದೇವರಿಗೆ ಪ್ರೀತಿ. ರಸ್ತೆ ಪಕ್ಕದಲ್ಲಿ ಬ್ಯಾರಲ್ ಇಟ್ಟು ನೀರಿಗಾಗಿ ಕಾಯುವಂತಾಗಿದೆ. ಎರಡು ದಿನಕ್ಕೊಂದು ಬ್ಯಾರಲ್ ನೀರಿನ ಬದಲಾಗಿ ದಿನಕ್ಕೆರಡು ಬ್ಯಾರಲ್ ನೀರು ಕೊಡುವ ವ್ಯವಸ್ಥೆ ಮಾಡಬೇಕು.
ವಿಠ್ಠಲ, ತೋಟದ ವಸ್ತಿ ನಿವಾಸಿ.

ಎಲ್ಲಿಯೂ ಸಹ ನೀರು ಸಿಗುತ್ತಿಲ್ಲ. ಹೀಗಾಗಿ ಒಬ್ಬ ಮನುಷ್ಯನಿಗೆ ದಿನಕ್ಕೆ 25 ಲೀಟರ್ ಹಾಗೂ ಒಂದು ಜಾನುವಾರಿಗೆ ದಿನಕ್ಕೆ 30 ಲೀಟರ್ ಲೆಕ್ಕಾಚಾರದಲ್ಲಿ ನೀರು ಒದಗಿಸಲಾಗುತ್ತಿದೆ. ಇದು ಸಾಕಾಗುವುದಿಲ್ಲ ಎಂಬುದು ನಮಗೂ ಗೊತ್ತು, ಆದರೆ ನಮಗೂ ಸಹ ಅನಿವಾರ್ಯ ಎಂಬಂತಾಗಿದೆ. ಹೆಚ್ಚಿಗೆ ನೀರು ಕೊಡುವ ಕುರಿತು ಶೀಘ್ರದಲ್ಲೇ ತೀರ್ಮಾನಿಸಿ ದಿನಕ್ಕೆ ಒಬ್ಬರಿಗೆ 40 ಲೀಟರ್ ನೀರು ಕೊಡುವ ವ್ಯವಸ್ಥೆ ಮಾಡಲಾಗುವುದು.
ವಿಜಯಕುಮಾರ ಅಜೂರ್, ಇಂಡಿ ತಾ.ಪಂ. ಇಒ

Leave a Reply

Your email address will not be published. Required fields are marked *