ಕುದುರೆ ವ್ಯಾಪಾರದ ಆರೋಪಕ್ಕೆ ತಿರುಗೇಟು ನೀಡುವಾಗ ಸಿದ್ದು ವಿರುದ್ಧ ಹುಚ್ಚ, ನೀಚ ಎಂಬ ಪದ ಬಳಸಿದ ಸಿಟಿ ರವಿ

ಬೆಂಗಳೂರು: ಆಡಳಿತ ಪಕ್ಷದ ಶಾಸಕರನ್ನು ಖರೀದಿಸಲು ಬಿಜೆಪಿ ಪ್ರತಿ ಶಾಸಕರಿಗೂ 25-30 ಕೋಟಿ ಆಮಿಷ ಒಡ್ಡುತ್ತಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದ ಟ್ವೀಟ್​ಗೆ ರಾಜ್ಯ ಬಿಜೆಪಿ ಮತ್ತು ಬಿಜೆಪಿ ನಾಯಕರು ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಟೀಕೆ ಮಾಡುವ ಭರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಮಾಜಿ ಸಚಿವ ಸಿ.ಟಿ ರವಿ, “ಸಿದ್ದರಾಮಯ್ಯ ನೀಚ ರಾಜಕಾರಣ ಮಾಡಿದ್ದಾರೆ, ಹುಚ್ಚರಾಗಿದ್ದಾರೆ,” ಎಂದು ಕಿಡಿ ಕಾರಿದ್ದಾರೆ.

ಸಿದ್ದರಾಮಯ್ಯ ಏನು ಹೇಳಿದ್ದರು?

“ಕುದುರೆ ವ್ಯಾಪಾರಕ್ಕೆ ನಿಂತಿರುವ ಬಿಜೆಪಿ ಪ್ರತಿ ಶಾಸಕರಿಗೆ ರೂ.25 ರಿಂದ 30 ಕೋಟಿ ಹಣ ನೀಡಿ ಖರೀದಿಸಲು ಮುಂದಾಗಿದೆ.‌ ಅವರು ಭ್ರಷ್ಟಾಚಾರಿಗಳಲ್ಲದೇ ಇದ್ದರೆ ಇಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬರುತ್ತದೆ? ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿರುವುದು ಒಂದನ್ನು ಬಿಟ್ಟು ವಿರೋಧ ಪಕ್ಷವಾಗಿ ರಾಜ್ಯ ಬಿಜೆಪಿ ಇಷ್ಟು ದಿನ ಬೇರೆ ಏನು ಮಾಡಿದೆ? ಎಂದು ಅವರು ಟ್ವಿಟರ್​ನಲ್ಲಿ ಪ್ರಶ್ನಿಸಿದ್ದರು.

ಸಿದ್ದು ಟ್ವೀಟ್​ಗೆ ಬಿಜೆಪಿ ನಾಯಕರಿಂದ ಟೀಕೆ: ಯಾರು ಏನೆಂದರು?

ಚಾಮುಂಡೇಶ್ವರಿ ಮತದಾರರು ಮತ್ತು ಕನ್ನಡಿಗರು ನಿಮ್ಮ ನೀಚ ರಾಜಕಾರಣವನ್ನು ತಿರಸ್ಕರಿಸಿದ್ದಾರೆ. ಎಚ್​ಡಿ ಕುಮಾರಸ್ವಾಮಿ ಎದುರು ನೀವು ಮುಖ್ಯಮಂತ್ರಿ ಸ್ಥಾನ ಸೋತಿದ್ದೀರಿ. ಇದರಿಂದ ನೀವು ಹುಚ್ಚರಾಗಿದ್ದೀರಿ. ನಿಮ್ಮ ಶಾಸಕರ ವಿಚಾರವಾಗಿ ಬಿಜೆಪಿ ವಿರುದ್ಧ ನೀವು ಆಧಾರ ರಹಿತ ಆರೋಪ ಮಾಡುತ್ತಿದ್ದೀರಿ ಎಂದು ಅತ್ಯಂತ ಕಟು ಶಬ್ಧಗಳಿಂದ ಮಾಜಿ ಸಚಿವ ಸಿ.ಟಿ ರವಿ ಟೀಕಿಸಿದ್ದಾರೆ.

ಟ್ವಿಟರ್​ರಾಮಯ್ಯ ಅವರೇ, ಕಳೆದ ಆರು ತಿಂಗಳಿನಿಂದಲೂ ನೀವು ಇದೇ ವಿಚಾರವಾಗಿ ಅಳುತಿದ್ದೀರಿ. ದಲಿತರೊಬ್ಬರು ಡಿಸಿಎಂ ಆಗಿದ್ದನ್ನು ಸಹಿಸದ ಕಾಂಗ್ರೆಸ್​ನ ನಡೆಗೆ ಶಾಸಕರು ಅಸಮಾಧಾನಗೊಂಡಿದ್ದಾರೆ. ಅಧಿಕಾರದ ಮೇಲೆ ಹಿಡಿತ ಸಾಧಿಸುತ್ತಿರುವ ನಿಮ್ಮ ಪ್ರಯತ್ನದಿಂದ ಪಕ್ಷ ಅದಃಪತನದತ್ತ ತಳ್ಳಲ್ಪಟ್ಟಿದೆ. ನಿಮ್ಮ ಹುಳುಕು ಮುಚ್ಚಿಕೊಳ್ಳಲೆಂದು ಬಿಜೆಪಿ ವಿರುದ್ಧ ಮಾಡುತ್ತಿರುವ ಟೀಕೆಗಳನ್ನು ನಿಲ್ಲಿಸಿ ಎಂದು ರಾಜ್ಯ ಬಿಜೆಪಿ ಟ್ವೀಟ್​ ಮಾಡಿದೆ. ಬಿಜೆಪಿ ವತಿಯಿಂದ ಮಾಡಲಾದ ಈ ಟ್ವೀಟ್​ ಅನ್ನು ಬಹುತೇಕ ಬಿಜೆಪಿ ನಾಯಕರೂ ರೀ ಟ್ವೀಟ್​ ಮಾಡಿದ್ದಾರೆ.

ಇದಾದ ನಂತರ ಟ್ವಿಟರ್​ನಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿ ಕಾರಿರುವ ಕೇಂದ್ರ ಸಚಿವ ಸದಾನಂದ ಗೌಡ, “ಕುದುರೆ ಏರಲಾರದವನು ಧೀರನೂ ಅಲ್ಲ ಶೂರನೂ ಅಲ್ಲ . ನಿಮ್ಮ ಪಕ್ಷದ ಹುಳುಕು ಮುಚ್ಚಿಕೊಳ್ಳಲು ಇದೊಂದು ಹೊಸ ಪ್ರಹಸನ. ಮುಲಾಜಿನ ಸರಕಾರ ನಡೆಸಲು ಮುಖ್ಯಮಂತ್ರಿಗಳಿಗೆ ಕೈ ಜೋಡಿಸಿದ್ದೀರಿ. ಕನ್ನಡಿಗರು ಮುಗ್ದರು. ಆದರೆ ಮೂರ್ಖರಲ್ಲ ನಿಮ್ಮ ಗಿಲೀಟು ಮಾತು ನಂಬಲು,” ಎಂದು ತಿವಿದಿದ್ದಾರೆ.

ಇನ್ನೊಂದೆಡೆ ಸಂಸದೆ ಶೋಭಾ ಕರಂದ್ಲಾಜೆ ಅವರೂ ಟ್ವೀಟ್​ ಮಾಡಿದ್ದು, ಕಾಂಗ್ರೆಸ್​ನಲ್ಲಿ ಪರಮಾಧಿಕಾರ ಸಾಧಿಸಿಕೊಳ್ಳಲು ಸಿದ್ದರಾಮಯ್ಯ ಅವರು ಕೆಲ ಸಚಿವರನ್ನು ಕೆಳಗಿಳಿಸಿ ತಮ್ಮವರನ್ನು ನೇಮಿಸಿಕೊಂಡರು. ಇದರಿಂದಾದ ಉಂಟಾದ ಭಿನ್ನಮತ ಶಮನ ಮಾಡಲಾಗದೆ ಈಗ ಬ್ಲೇಮ್​ ಗೇಮ್​ (ನಿಂದನೆ) ಆಡುತ್ತಿದ್ದಾರೆ. ಇದು ಕಾಂಗ್ರೆಸ್​ನಲ್ಲಿ ಭಿನ್ನಮತದ ಬಿರುಕು ದೊಡ್ಡದಾಗುತ್ತಿರುವುದರ ಸ್ಪಷ್ಟ ಮುನ್ಸೂಚನೆ ಎಂದು ಕಿಡಿ ಕಾರಿದ್ದಾರೆ.