ವಿಜಯವಾಣಿ ಸುದ್ದಿಜಾಲ ಹಿರೇಕೆರೂರ
ಪಟ್ಟಣ ಸೇರಿ ವಿವಿಧ ಗ್ರಾಮಗಳಲ್ಲಿ ಬಿಡಾಡಿ ಕುದುರೆಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆಯುಂಟಾಗುತ್ತಿದೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ.
ಹಲವು ತಿಂಗಳುಗಳಿಂದ ಪಟ್ಟಣ ಹಾಗೂ ಗ್ರಾಮಗಳಲ್ಲಿ 8 ಕುದುರೆಗಳು ನಿಂತಲ್ಲೇ ನಿಂತಿರುತ್ತವೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ ಅಲ್ಲದೆ, ಟ್ರಾಫಿಕ್ ಜಾಮ್ ಸಹ ಆಗುತ್ತಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಕುದುರೆಗಳು ಲದ್ದಿ ಹಾಕಿ ಗಲೀಜು ಮಾಡುವುದರಿಂದ ಪರಿಸರ ಕಲ್ಮಶವಾಗುತ್ತಿದೆ. ಅಕ್ಕಪಕ್ಕದ ಹಳ್ಳಿಗಳ ಜಮೀನುಗಳಿಗೆ ನುಗ್ಗುತ್ತಿರುವ ಈ ಕುದುರೆಗಳು ಫಸಲಿಗೆ ಬಂದಿರುವ ಬೆಳೆಗಳನ್ನು ತಿಂದು ಹಾಳು ಮಾಡುತ್ತಿವೆ. ಹೀಗಾಗಿ ಕುದುರೆಗಳ ಮಾಲೀಕರನ್ನು ಪತ್ತೆ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯ ರಾಜು ಮಡಿವಾಳರ ಹಾಗೂ ಇತರರು ಒತ್ತಾಯಿಸಿದ್ದಾರೆ.
ಈ ಹಿಂದೆ ಕುದುರೆಗಳನ್ನು ಚಿಕ್ಕೇರೂರ ಬಳಿ ಬಿಟ್ಟು ಬರಲಾಗಿತ್ತು. ಆದರೆ, ಮತ್ತೆ ಪಟ್ಟಣಕ್ಕೆ ಆಗಮಿಸಿವೆ. ಕೆಲ ದಿನಗಳ ಹಿಂದೆ ಕುದುರೆಯ ಮೇಲೆ ಅಪರಿಚಿತ ವಾಹನ ಹತ್ತಿಸಿಕೊಂಡು ಹೋಗಿದ್ದರಿಂದ ಕುದುರೆಯ ಒಂದು ಕಾಲು ಮುರಿದಿದೆ. ಇವುಗಳ ಹಾವಳಿ ಹೆಚ್ಚಾಗಿದ್ದು, ಪಪಂ ಮುಖ್ಯಾಧಿಕಾರಿಗೆ ತಿಳಿಸಲಾಗಿದೆ. ಅವುಗಳ ಮಾಲೀಕರನ್ನು ಪತ್ತೆಮಾಡಿ, ಅವರಿಗೆ ಕುದುರೆಗಳನ್ನು ಒಯ್ಯುವಂತೆ ಕಟ್ಟುನಿಟ್ಟಾಗಿ ಹೇಳಬೇಕು. ಒಂದು ವೇಳೆ ಪತ್ತೆಯಾಗದಿದ್ದಲ್ಲಿ ಕುದುರೆಗಳನ್ನು ಸ್ಥಳಾಂತರಿಸುವಂತೆ ಸೂಚಿಸಲಾಗಿದೆ.
| ರಿಯಾಜುದ್ದಿನ್ ಭಾಗವಾನ್ ತಹಸೀಲ್ದಾರ್