Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ವೀರ ಹುತಾತ್ಮನ ಧೀರ ತಂದೆಯ ಕಥನ

Thursday, 14.06.2018, 3:05 AM       No Comments

ಕ್ರಾಂತಿಕಾರಿ ಭಗತ್ ಸಿಂಗ್ ಜೀವನದಲ್ಲಿ ಆತನ ಕುಟುಂಬದ ಪಾತ್ರ ಮಹತ್ವದ್ದಾಗಿತ್ತು. ಆತನ ತಂದೆ ಕಿಶನ್ ಕೂಡ ಅಪಾರ ಸಾಹಸಿ ಹೋರಾಟಗಾರನಾಗಿದ್ದ, ಸಾಮಾಜಿಕ ಕಾರ್ಯಕರ್ತನಾಗಿದ್ದ. ತನ್ನ ಚತುರ ತಂತ್ರಗಳ ಮೂಲಕ ಬ್ರಿಟಿಷ್ ಆಳರಸರಿಗೆ ತಲೆನೋವಾಗಿದ್ದ.

ಹುತಾತ್ಮ ಭಗತ್ ಸಿಂಗ್ ಅಷ್ಟು ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಚಳವಳಿಯ ಕ್ರಾಂತಿಮಾರ್ಗ ಹಿಡಿದು ಧೀರೋದಾತ್ತನಾಗಿ ಹೋರಾಡಿ, ಕೇವಲ 23 ವರ್ಷಗಳಿಗೆ ನಗುನಗುತ್ತ ಗಲ್ಲುಗಂಬ ಹೇಗೆ ಏರಿದ ಎಂದು ಚಿಂತಿಸಿದಾಗ ತತ್​ಕ್ಷಣ

ಹೊಳೆಯುವುದು ಅವನ ಮನೆತನದ ಮಹತ್ವದ ಪಾತ್ರ. ಅವನ ಇಡೀ ಕುಟುಂಬವೇ ದೇಶಭಕ್ತ, ಧರ್ಮವೀರರದಾಗಿತ್ತು. ತಾತ ಅರ್ಜುನ ಸಿಂಗ್(ಸಿಂಹ) ಸಿಖ್ ಆಗಿದ್ದರೂ ಸ್ವತಃ ದಯಾನಂದ ಸರಸ್ವತಿಗಳಿಂದಲೇ ಆರ್ಯ ಸಮಾಜ ದೀಕ್ಷೆ ಸ್ವೀಕರಿಸಿ ಕ್ರಾಂತಿ ಮಾಡಿದ್ದ. ಅವನ ಹಿರಿಯ ಮಗ ಕಿಶನ್ ಸಿಂಗ್ ತಂದೆಯಂತೆ ಎತ್ತರದ ದೃಢಕಾಯ ಹೊಂದಿದ್ದ ಹಾಗೂ ಚಿಂತನಶೀಲ ಕ್ರಾಂತಿಕಾರಿಯಾಗಿದ್ದ. ಅಷ್ಟೇ ಅಲ್ಲದೆ ಸಹೋದರ ಅಜಿತ್ ಸಿಂಗ್​ನಂತೆ ತನ್ನ ಮಗ ಭಗತ್ ಸಿಂಗ್​ಗೆ ಕೂಡ ಪೋ›ತ್ಸಾಹ ನೀಡಿದವನಾಗಿದ್ದ.

ಸಮಾಜಸೇವೆ ಸಹಜ ಪ್ರವೃತ್ತಿ: 1878ರಲ್ಲಿ ಕಿಶನ್ ಸಿಂಗ್​ನ ಜನನವಾಯಿತು. ಅವನಿಗೆ ನಾಮಕರಣ ಮಾಡಿದ್ದು ಗುರು ಗೋವಿಂದ ಸಿಂಗ್​ನ ಹೆಸರನ್ನು. ಆದರೆ ಅವನನ್ನು ‘ಗೋವಿಂದ, ಗೋವಿಂದ’ ಎಂದು ಎಲ್ಲರೂ ಕರೆಯುತ್ತಿದ್ದರೆ ಅದೇನೋ ದಶಮ ಗುರುವಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಮನೆಯಲ್ಲಿ ಯಾರಿಗೋ ಅನ್ನಿಸಿತಂತೆ. ಆಗ ಗುರುಗೋವಿಂದ ಸಿಂಗ್​ರ ಪುಣ್ಯಕ್ಷೇತ್ರವಾಗಿದ್ದ ಆನಂದಪುರಕ್ಕೆ ಹೋಗಿ ಅಮೃತಪ್ರಾಶನ ಮಾಡಬೇಕಾದ ಸಂದರ್ಭದಲ್ಲಿ ಕಿಶನ್ ಸಿಂಗ್ ಎಂದು ಹೆಸರು ಬದಲಾಯಿಸಿದರಂತೆ.

ಚಿಕ್ಕಂದಿನಲ್ಲಿಯೇ ಅವನಿಗೆ ಆರ್ಯ ಸಮಾಜದ ಮಹಾನ್ ಸಂತ, ಸಮಾಜ ಸೇವಕ ಮಹಾತ್ಮ ಹಂಸರಾಜರ ಸಾಮೀಪ್ಯ, ಸಹವಾಸ ದೊರೆಯಿತು. ಅದರಿಂದ ತನ್ನ ಜೀವನವನ್ನು ಸಮಾಜಕ್ಕಾಗಿ ಸವೆಸಬೇಕೆಂಬ ಪ್ರೇರಣೆ ಸಿಕ್ಕಿತು. ಜಲಂಧರ್​ನ ಸಾಯಿದಾಸ್ ಆಂಗ್ಲೋ ಸಂಸ್ಕೃತ ಹೈಸ್ಕೂಲ್​ನಲ್ಲಿ ಪ್ರೌಢಶಾಲಾ ಶಿಕ್ಷಣದ ಅನಂತರ ಅವನ ಮುಖ್ಯಕಾರ್ಯ ಮನೆತನದ ವ್ಯವಸಾಯ ವೃತ್ತಿಯೊಂದಿಗೆ ಸಮಾಜಸೇವೆ.

ಅವನ ಯೌವನದಲ್ಲಿ ಒಮ್ಮೆ ವಿದರ್ಭ ಪ್ರದೇಶದಲ್ಲಿ (ಈಗಿನ ಮಹಾರಾಷ್ಟ್ರದ ಭಾಗ) ಭೀಕರ ಕ್ಷಾಮ ಉಂಟಾಗಿದೆ ಎಂದು ತಿಳಿದು ಯುವಕರ ತಂಡವನ್ನು ಸಂಘಟಿಸಿ ಅಲ್ಲಿಗೆ ಹೋಗಿ ಕ್ಷಾಮದಿಂದ ನರಳುತ್ತಿದ್ದ ಜನರ ಸೇವೆ ಮಾಡಿದ. ಅಲ್ಲಿ ಅನೇಕ ತಂದೆತಾಯಿಯರು ಕ್ಷಾಮದ ಮಾರಿಗೆ ಆಹಾರವಾಗಿ ತಮ್ಮ ಚಿಕ್ಕ ಮಕ್ಕಳನ್ನು ಅನಾಥರನ್ನಾಗಿ ಮಾಡಿದ್ದರು. ಆ ಪೈಕಿ ಸುಮಾರು ಐವತ್ತು ಮಕ್ಕಳಿಗೆ ಕಿಶನ್ ಸಿಂಗ್​ನೇ ತಂದೆಯಾಗಿ ವಿದರ್ಭದಿಂದ ಜಲಂಧರ್​ಗೆ ಕರೆತಂದು ಫಿರೋಜ್​ಪುರದಲ್ಲಿ ಆ ಮಕ್ಕಳಿಗಾಗಿಯೇ ಅನಾಥಾಶ್ರಮವನ್ನು ಆರಂಭಿಸಿದ. ವಿದರ್ಭದ ಕ್ಷಾಮದ ಹಿಂದೆಯೇ ಗುಜರಾತಿನ ಕ್ಷಾಮ ಅವನನ್ನು ಕೈ ಬೀಸಿ ಕರೆಯಿತು. ಅವನು ಗುಜರಾತ್​ನಿಂದಲೂ ಅನಾಥ ಮಕ್ಕಳ ಒಂದು ತಂಡವನ್ನೇ ಬೆನ್ನ ಹಿಂದೆ ಕಟ್ಟಿಕೊಂಡು ಬಂದು ಅನಾಥಾಶ್ರಮದಲ್ಲಿ ಸೇರಿಸಿದ.

ಕಿಶನ್ ಸಿಂಗ್​ನ ಸೇವಾ ಮನೋಭಾವವನ್ನು ಕಂಡ ಜನ ಅವನನ್ನು ದೇವದೂತನೆಂದು ಕರೆಯಲಾರಂಭಿಸಿದರು.

ಈ ನಡುವೆ ಆತನ ಅನುಭವಕ್ಕೆ ಬಂದಿದ್ದು ಜನರ ಕುರಿತು ನಿರ್ದಯಿ ಬ್ರಿಟಿಷ್ ಸರ್ಕಾರದ ದಿವ್ಯ ನಿರ್ಲಕ್ಷ್ಯ. ದುರಾಡಳಿತದ ಪ್ರತ್ಯಕ್ಷ ಅನುಭವ. ಅದರಿಂದ ರೋಸಿಹೋದ ಆತ ಆಗ ಸ್ವಾತಂತ್ರ್ಯ ಚಳವಳಿಯತ್ತ ತಿರುಗುತ್ತಿದ್ದ ಕಾಂಗ್ರೆಸ್ ಸೇರಿದ. ಲೋಕಮಾನ್ಯ ತಿಲಕರ ನಿಷ್ಠ ಅನುಯಾಯಿಯಾದ. ಅವನೇ ತಮ್ಮ ಅಜಿತ್​ಸಿಂಗ್​ನನ್ನು ತಿಲಕರಿಗೆ ಮೊದಲು ಪರಿಚಯಿಸಿದವನು. ಕ್ರಾಂತಿಜ್ಯೋತಿ ಸೂಫಿ ಅಂಬಾ ಪ್ರಸಾದ್ ಕಿಶನ್ ಸಿಂಗ್​ನ ಆಪ್ತಮಿತ್ರ. ಅವರದೇ ಒಂದು ಯುವಜನರ ಸ್ನೇಹಕೂಟವಿತ್ತು. ಅದು ಪ್ರಕಟಿಸಿದ ಉಗ್ರ ವಿಚಾರಗಳ ರಾಜಕೀಯ ಪತ್ರಿಕೆ ‘ಸಹಾಯಕ್’ ಎಂಬುದರ ಸಂಪಾದಕನ ಕೆಲಸ ಕಿಶನ್ ಸಿಂಗ್​ನ ಪಾಲಿಗೆ ಬಂತು. ಅದನ್ನು ಉತ್ತಮವಾಗಿ ಮುನ್ನಡೆಸಿದ.

ತ್ರಿಮೂರ್ತಿ ಸೋದರರು: ಕಿಶನ್ ಸಿಂಗ್​ನಿಗೆ ತಮ್ಮಂದಿರು ಇಬ್ಬರು. ಅಜಿತ್ ಮತ್ತು ಸ್ವರ್ಣಸಿಂಗ್. ಅಜಿತ್ ತನ್ನ ಭಾಷಣಗಳಿಂದ ಜನರಲ್ಲಿ ದೇಶಭಕ್ತಿಯ ಭಾವನೆಗಳನ್ನು ಪ್ರಚೋದಿಸುತ್ತಿದ್ದರೆ ‘ಸಹಾಯಕ್’ ಮೂಲಕ ಹೋರಾಟದ ಸುದ್ದಿ ಪಸರಿಸುವ ಕೆಲಸ ಕಿಶನ್ ಸಿಂಗ್​ನದು. ಹಳ್ಳಿ ಹಳ್ಳಿಗಳಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಒಟ್ಟುಗೂಡಿಸುವ ಹೊಣೆಯನ್ನು ಹೊತ್ತವನು ಸ್ವರ್ಣಸಿಂಗ್. ಈ ಮೂವರನ್ನು ಜನ ಹೋರಾಟದ ತ್ರಿಮೂರ್ತಿ-ಬ್ರಹ್ಮ, ವಿಷ್ಣು, ಮಹೇಶ್ವರ-ಎಂದು ಕರೆಯುತ್ತಿದ್ದರು.

ಹೋರಾಟ ಪ್ರಬಲಗೊಂಡಾಗ ಅಜಿತ್ ಸಿಂಗ್​ನಂತೆ ಕಿಶನ್ ಸಿಂಗ್​ನ ಮೇಲೂ ಪೊಲೀಸರ ಗೃದ್ರದೃಷ್ಟಿ ಬಿತ್ತು. ಒಬ್ಬ ತಮ್ಮ ಮುನ್ನುಗ್ಗಿ ಹೋಗಬೇಕೆಂದೂ ಉಳಿದವರು ಜಾಣತನದಿಂದ ಸ್ವಾತಂತ್ರ್ಯ ಹೋರಾಟದ ಕೆಲಸ ಮುಂದುವರಿಸಿಕೊಂಡು ಹೋಗಬೇಕೆಂದೂ ಅವರಲ್ಲಿ ತೀರ್ವನವಾಗಿತ್ತು.

1907ರಲ್ಲಿ ಕಿಶನ್ ಸಿಂಗ್​ನ ಮೇಲೂ ಪೊಲೀಸ್ ವಾರಂಟ್ ಹೊರಬಿತ್ತು. ಅವನು ರಾತ್ರೋರಾತ್ರಿ ನೇಪಾಳಕ್ಕೆ ಓಡಿಹೋದ. ನೇಪಾಳದ ಪ್ರಧಾನಮಂತ್ರಿ ಚಂದ್ರ ಶಂಷೇರ್ ಜಂಗ್ ಬಹದ್ದೂರ್ ರಾಣಾ ಆತನ ವ್ಯಕ್ತಿತ್ವದಿಂದ ಪ್ರಭಾವಿತನಾಗಿ ಅವನ ಆಪ್ತಮಿತ್ರನಾಗಿ ನೇಪಾಳದಲ್ಲಿದ್ದಷ್ಟು ಕಾಲ ರಾಜಾತಿಥ್ಯವನ್ನು ನೀಡಿ, ಕೊನೆಗೆ ಬ್ರಿಟಿಷರ ಒತ್ತಡಕ್ಕೆ ಮಣಿದು ಕಿಶನ್ ಸಿಂಗ್​ನನ್ನು ಭಾರತಕ್ಕೆ ಕಳುಹಿಸಿಕೊಡಬೇಕಾಗಿ ಬಂದಾಗ ಅವನನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಸರಹದ್ದಿನವರೆಗೆ ತಲುಪಿಸಿ ಬ್ರಿಟಿಷ್ ಪೊಲೀಸರ ವಶಕ್ಕೆ ಒಪ್ಪಿಸಿದ್ದ. ಬ್ರಿಟಿಷ್ ಪೊಲೀಸರು ಅವನನ್ನು ಬಂಧಿಸಿ ಜೈಲಿನಲ್ಲಿಟ್ಟರು. ಆಗ ಕಿರಿಯ ತಮ್ಮ ಸ್ವರ್ಣಸಿಂಗ್​ನೂ ಮಾಂಡಲೆ ಜೈಲಿನಲ್ಲಿದ್ದ.

1907ರಲ್ಲೇ ಕಿಶನ್ ಸಿಂಗ್-ವಿದ್ಯಾವತಿ ದಂಪತಿಗೆ ಭಗತ್ ಸಿಂಗ್ ಜನಿಸಿದ. ಅವನು ಹುಟ್ಟಿದ ದಿನವೇ ತ್ರಿಮೂರ್ತಿಗಳೆನ್ನಿಸಿಕೊಂಡ ಮೂವರು ಸೋದರರ ಬಿಡುಗಡೆಯಾದ ಕಾರಣ ಭಗತ್ ಸಿಂಗ್ ಅದೃಷ್ಟ ಜಾತಕನೆಂದು ಅಜ್ಜಿ ಜಯ ಕೌರ್ ಬೀಗಿದಳು. ಕುಟುಂಬದಲ್ಲಿ ಸಂತಸದ ಹೊನಲು ಹರಿಯಿತು.

ಕಿಶನ್ ಸಿಂಗ್ ಎಲ್ಲ ಉಗ್ರ ಕ್ರಾಂತಿಕಾರಿಗಳಿಗೂ ಆಪದ್ಬಾಂಧವನಾಗಿದ್ದ. ಲಾರ್ಡ್ ಹಾರ್ಡಿಂಜನ ಮೇಲೆ ಬಾಂಬ್ ಎಸೆದ ಪ್ರಕರಣದ ರೂವಾರಿಯಾಗಿದ್ದ ರಾಸ್ ಬಿಹಾರಿ ಬೋಸನನ್ನು ರಕ್ಷಿಸಿ ಜೋಪಾನವಾಗಿ ಪಂಜಾಬ್​ನಿಂದ ಹೊರಕ್ಕೆ ಕಳುಹಿಸುವುದರಲ್ಲಾಗಲಿ, ಕೊಮಾಗಾಟ ಮಾರು ಪ್ರಕರಣದ ಬಾಬಾ ಗುರುದಿತ್ ಸಿಂಗ್ ಭೂಗತರಾದಾಗ ಅವರ ಎಲ್ಲ ಜವಾಬ್ದಾರಿಯನ್ನು ಹೊತ್ತು ಕಾಪಾಡುವುದರಲ್ಲಾಗಲಿ ಕಿಶನ್ ಸಿಂಗ್​ನದೇ ಮುಖ್ಯ ಪಾತ್ರ. ಮೊದಲನೆಯ ದೆಹಲಿ ಷಡ್ಯಂತ್ರ ಕೇಸ್ ಎಂದು ಪ್ರಖ್ಯಾತವಾದ ಮೊಕದ್ದಮೆಗೆ ಆಪಾದಿತರ ಪರ ಚಿತ್ತರಂಜನ ದಾಸರಂಥ ಶ್ರೇಷ್ಠ ವಕೀಲರನ್ನು ನೇಮಿಸಿದ. ಪ್ರತಿ ಬಾರಿ ಪೊಲೀಸರ ಕೈಗೆ ಸಿಕ್ಕಿದಾಗಲೂ ಜಾಣತನದಿಂದ ಬಲೆಯಿಂದ ಬಿಡಿಸಿಕೊಳ್ಳುತ್ತಿದ್ದ ಆತನಿಗೆ ತಾನು ಹೊರಗಿದ್ದೇ ಕ್ರಾಂತಿ ಕೆಲಸ ಮಾಡುವುದು ಮುಖ್ಯ ಎನ್ನುವುದರ ಅರಿವಿತ್ತು.

ಕ್ರಾಂತಿ ಚಟುವಟಿಕೆಗಳ ಆಧಾರಸ್ತಂಭ: ಕಿಶನ್ ಸಿಂಗ್​ನು ಸೂಫಿ ಅಂಬಾ ಪ್ರಸಾದ್, ಅಜಿತ್​ಸಿಂಗ್ ಸ್ಥಾಪಿಸಿದ ಭಾರತ ಮಾತಾ ಸೊಸೈಟಿಯ ಆಧಾರಸ್ತಂಭವೇ ಆಗಿದ್ದ. ಅಮೆರಿಕದಲ್ಲಿ ಗದರ್ ಪಾರ್ಟಿ ಸಂಘಟಿತಗೊಂಡು, ಅಲ್ಲಿಂದ ಭಾರತದಲ್ಲಿ ಕ್ರಾಂತಿ ಮಾಡುವ ಉದ್ದೇಶದಿಂದ ಪಂಜಾಬಿಗೆ ಆಗಮಿಸಿದ ಸಾವಿರಾರು ಸಿಖ್ ಯೋಧರ ವ್ಯವಸ್ಥೆಯ ನೇತೃತ್ವ ಕಿಶನ್ ಸಿಂಗ್​ನದೇ.

ಸರ್ಕಾರಿ ಗುಪ್ತಚರ ವಿಭಾಗ ಸದಾ ಕಾಲ ಅವನ ಚಟುವಟಿಕೆಗಳ ಮೇಲೆ ಕಣ್ಣು ಇರಿಸಿಯೇ ಇತ್ತು. ಗುಪ್ತಚರ ವರದಿ ದಾಖಲೆಗಳಲ್ಲಿ ‘ಸೂಫಿ ಅಂಬಾ ಪ್ರಸಾದ್ ಕ್ರಾಂತಿಕಾರಿ ಸಾಹಿತ್ಯದ ಲೇಖಕನಾದರೆ ಅದನ್ನು ಅಚ್ಚು ಮಾಡಿಸಿ ಊರೂರಿನಲ್ಲಿ ಮನೆಮನೆಗೂ ತಲಪಿಸುವ ಪ್ರಸಾರಕನೇ ಕಿಶನ್ ಸಿಂಗ್’ ಎಂದು ಬರೆಯಲಾಗಿತ್ತು.

ಕಿಶನ್ ಸಿಂಗ್​ನಿಗೆ ಒಂದು ಬಾರಿ ಎರಡು ವರ್ಷದ ಜೈಲು ಶಿಕ್ಷೆಯಾಗಿತ್ತು. ಆವೇಳೆ ಕ್ರಾಂತಿ ಚಟುವಟಿಕೆ ತುಸು ಮಂದವಾಗಿದ್ದು, ಸರ್ಕಾರ ಸ್ವಲ್ಪ ನಿಶ್ಚಿಂತೆಯಲ್ಲಿತ್ತು. ಅವನು ಹೊರ ಬಂದ ಮೇಲೆ ಒಮ್ಮೆಲೆ ಕ್ರಾಂತಿ ಚಟುವಟಿಕೆಗಳು ತೀವ್ರಗೊಂಡವು. ಆಗ ಕಿಶನ್ ಸಿಂಗ್​ನೇ ಅದಕ್ಕೆ ಕಾರಣ ಎಂದು ತೀರ್ವನಿಸಿದ ಸರ್ಕಾರ ಅವನ ಮೇಲೆ ಸಾಲು ಸಾಲು ಮೊಕದ್ದಮೆಗಳನ್ನು ಹೂಡಿತು. ಈ ಮೊಕದ್ದಮೆಗಳ ತೀರ್ಪಗಳಂತೆ ಅವನ ಶಿಕ್ಷೆ ಅನುಭವಿಸಬೇಕಾಗಿ ಬಂದಿದ್ದರೆ ಅದು ಒಟ್ಟು 120 ವರ್ಷಗಳಾಗುತ್ತಿತ್ತಂತೆ!!

ಕಿಶನ್ ಸಿಂಗ್ ಮತ್ತು ಭಗತ್ ಸಿಂಗರ ತಂದೆ ಮಗ ಸಂಬಂಧ ಅಪೂರ್ವ. ಮಗನ ಕ್ರಾಂತಿ ಚಟುವಟಿಕೆಗಳಿಗೆ ಪೂರ್ಣ ಕುಮ್ಮಕ್ಕು ನೀಡಿ ಅಪಾಯದ ರಸ್ತೆಯಲ್ಲಿ ಕಳಿಸಿದವನು ತಂದೆ. ಆದರೆ ಮುದ್ದಿನ ಮಗನ ಪ್ರಾಣವನ್ನು ಉಳಿಸಲು ಭೂಮಿ ಆಕಾಶ ಒಂದು ಮಾಡಿದ್ದೂ ಅವನೇ.

ಅದು ಕಾಕೋರಿಯ ಸರ್ಕಾರಿ ಖಜಾನೆ ಲೂಟಿ ಪ್ರಸಂಗ ನಡೆದ ಸಮಯ. ಪೊಲೀಸರಿಗೆ ಸುಳಿವು ದೊರೆತು ಭಗತ್ ಸಿಂಗ್​ಗಾಗಿ ಶೋಧ ನಡೆಸಿದ್ದರು. ಅವನು ಒಂದು ರಾತ್ರಿ ಬಸವಳಿದು ಮನೆಗೆ ಬಂದಿದ್ದ. ಕಿಶನ್ ಸಿಂಗ್ ಅವನನ್ನು ಮನೆಯಲ್ಲಿ ಇರಲು ಬಿಡದೆ ಕರೆದುಕೊಂಡು ಹೊರಗೆ ಹೋದ. ಬೆಳಗಿನ ಜಾವ ಒಬ್ಬನೇ ಮನೆಗೆ ಹಿಂದಿರುಗಿದ. ಬೆನ್ನ ಹಿಂದೆಯೇ ಪೊಲೀಸರು ಅವನ ಮನೆಯನ್ನು ಮುತ್ತಿದರು. ಭಗತ್​ನಿಗಾಗಿ ಬಂದಿದ್ದರು. ಅವನು ಸಿಕ್ಕಿಬಿದ್ದಿದ್ದರೆ ಕಾಕೋರಿ ಕಾಂಡದ ಒಬ್ಬ ಮುಖ್ಯ ಆರೋಪಿಯಾಗುವ ಸಾಧ್ಯತೆಗಳಿದ್ದವು.

ಭಗತ್ ಸಿಂಗ್ ದೆಹಲಿಯ ಅಸೆಂಬ್ಲಿ ಭವನದಲ್ಲಿ ಬಾಂಬ್ ಸ್ಪೋಟಿಸಿದ ಸಮಾಚಾರ ಅವನ ಫೋಟೋಸಹಿತ ಪತ್ರಿಕೆಗಳಲ್ಲಿ ಪ್ರಕಟವಾದದ್ದನ್ನು ನೋಡಿ ಅಲ್ಲಿಯವರೆಗೆ ಎಲ್ಲೋ ಅಡಗಿಕೊಂಡಿದ್ದ ಅವನ ಪುತ್ರಪ್ರೇಮ ಮುಂಚೂಣಿಗೆ ಬಂತು. ಪತ್ರಿಕೆ ಕೈಯಲ್ಲಿ ಹಿಡಿದುಕೊಂಡು ಅದರಲ್ಲಿದ್ದ ತನ್ನ ಮಗನ ಸುಂದರ ಚಿತ್ರವನ್ನು ನೋಡುತ್ತ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ.

ಆದರೆ ಅವನಲ್ಲಿ ಇನ್ನೊಬ್ಬ ಕಿಶನ್ ಸಿಂಗ್ ಹುದುಗಿದ್ದ. ಅವನೇ ರಾಷ್ಟ್ರಭಕ್ತ, ಕ್ರಾಂತಿಕಲಿ ಕಿಶನ್ ಸಿಂಗ್! ‘ಸರ್ಕಾರ ಭಗತ್ ಸಿಂಗನನ್ನು ಕರೆದೊಯ್ದು ಯಾವುದೋ ಗುಡ್ಡದಲ್ಲಿ ಕೊಂದುಹಾಕುತ್ತದೆ. ಆಗ ಅವನನ್ನು ಎಂದಿಗೂ ನೋಡಲಾಗುವುದಿಲ್ಲ’ ಎಂದು ಮಮ್ಮಲ ಮರುಗಿದ ಆತ ಕ್ರಾಂತಿಕಾರಿಯಾಗಿ ಯೋಚನೆ ಮಾಡಿದ್ದು ಹೀಗೆ; ‘ಮೊಕದ್ದಮೆ ನಡೆಯುತ್ತದೆ. ಪೇಪರ್​ಗಳಲ್ಲಿ ಕೋರ್ಟು ವಿಚಾರಣೆಯ ವರದಿಗಳು ಬರುತ್ತವೆ. ದೇಶದಲ್ಲಿ ಹೊಸ ಪೀಳಿಗೆ ಅದರಿಂದ ಪ್ರೇರಣೆ ಪಡೆದು ಕ್ರಾಂತಿ ಮುಂದುವರಿಸುತ್ತದೆ. ಅಂತಿಮವಾಗಿ ಕ್ರಾಂತಿಕಾರಿಗಳ ಉದ್ದೇಶಕ್ಕೆ ಹೊಸ ತೇಜಸ್ಸು ಬರುತ್ತದೆ. ಕೊನೆಗೆ ಗುರಿ ಸಾಧನೆ ಆಗುತ್ತದೆ’. ಈ ಚಿಂತನೆಯಿಂದ ಮಗನ ಬಗ್ಗೆ ಹೆಮ್ಮೆ ಮೂಡಿ ಕಿಶನ್ ಸಿಂಗ್​ನ ಎದೆ ಉಬ್ಬುತ್ತಿತ್ತು.

ಭಗತ್ ಸಿಂಗ್​ಗೆ ಗಲ್ಲು ಶಿಕ್ಷೆ: ಕಿಶನ್ ಸಿಂಗ್ ಅಗ್ನಿಪರೀಕ್ಷೆ ಎದುರಾಗಬೇಕಾಗಿ ಬಂದದ್ದು ಭಗತ್​ಗೆ ಗಲ್ಲು ಶಿಕ್ಷೆ ಘೊಷಣೆಯಾದಾಗ, ಸುಂದರಾಂಗ, ಪ್ರತಿಭಾ ಸಂಪನ್ನ, ತೇಜಸ್ವಿ ಮಗ ಗಲ್ಲುಗಂಬವೇರಿ ಹುತಾತ್ಮನಾಗಿ ಇನ್ನು ಮುಂದೆಂದೂ ಕಾಣಸಿಗುವುದಿಲ್ಲ ಎಂಬ ಕಟುಸತ್ಯ ಎದುರಾದಾಗ.

1931 ಮಾರ್ಚ್ 24ರಂದು ಭಗತ್ ಸಿಂಗ್​ನನ್ನು ನೇಣಿಗೆ ಹಾಕಬೇಕೆಂದು ಕೋರ್ಟು ತೀರ್ಪು ನೀಡಿತ್ತು. 23ನೆಯ ತಾರೀಕಿನಂದು ಮಧ್ಯಾಹ್ನ ತನ್ನ ತಂದೆ ವಯೋವೃದ್ಧ ಅರ್ಜುನ ಸಿಂಗ್, ತಾಯಿ ಜಯಾಕೌರ್, ಮಡದಿ ವಿದ್ಯಾವತಿ ಸೇರಿದಂತೆ ಮನೆಮಂದಿಯನ್ನೆಲ್ಲ ಕರೆದುಕೊಂಡು ಲಾಹೋರ್ ಜೈಲಿಗೆ ಹೋದ. ಅವರಿಗೆ ತಮ್ಮ ಮನೆಯ ಹೆಮ್ಮೆಯ ಮಗನನ್ನು ಕೊನೆಯ ಬಾರಿ ನೋಡಲು ಪರವಾನಗಿ ದೊರೆಯಲಿಲ್ಲ. ಅವರು ಜೈಲಿನ ಹೊರಗಡೆಯೇ ನಿಲ್ಲಬೇಕಾಗಿ ಬಂತು. ಅವರೆಲ್ಲರ ಹೃದಯಗಳು ದುಃಖಭರಿತವಾಗಿದ್ದವು. ಅವರನ್ನೆಲ್ಲ ಸಾಂತ್ವನಗೊಳಿಸುತ್ತಿದ್ದ ಕಿಶನ್ ಸಿಂಗ್ ಉಕ್ಕುಕ್ಕಿ ಬರುತ್ತಿದ್ದ ಭಾವನೆಗಳನ್ನು ಅದುಮಿಟ್ಟುಕೊಂಡಿದ್ದ. ಕೋರ್ಟ್ ಹೇಳಿದ ಸಮಯಕ್ಕೆ ಹತ್ತು ಗಂಟೆ ಮೊದಲೇ 23ರ ಸಂಜೆಯೇ ಮೂವರು ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸುವ ಅನ್ಯಾಯದ ನಿರ್ಣಯವನ್ನು ಸರ್ಕಾರ ತಳೆದಿತ್ತು. ಈ ಸುದ್ದಿ ತಿಳಿದು ಅಲ್ಲಿಗೆ ಜನಸಾಗರ ಹರಿದು ಬಂತು. ಜನ ಉದ್ವೇಗದಿಂದ ‘ಭಗತ್ ಸಿಂಗ್ ಕೀ ಜೈ…. ರಾಜಗುರು ಕೀ ಜೈ… ಸುಖದೇವ್ ಕೀ ಜೈ’ ಎಂದು ಘೊಷಿಸಲಾರಂಭಿಸಿದ್ದರು.

ಭಗತ್ ಸಿಂಗ್​ನ ಇಡೀ ಕುಟುಂಬ ಜೈಲು ಹೊರಗಡೆ ಚಡಪಡಿಸುತ್ತ ನಿಂತಿತ್ತು. ಆಗ ಜೈಲಿನಿಂದ ಹೊರಕ್ಕೆ ಬಂದ ಜೈಲಿಗೆ ಹಾಲು ಸರಬರಾಜು ಮಾಡುವ ಗೊಲ್ಲ ಕಿಶನ್ ಸಿಂಗ್​ನಿಗೆ ಹೇಳಿದ, ‘ನೇಣು ಹಾಕಿದ್ದಾಯಿತು. ಹೋಗಿ ಶವಗಳನ್ನು ತೆಗೆದುಕೊಂಡು ಬನ್ನಿ!’ ಕಿಶನ್ ಸಿಂಗ್ ಅತ್ತನೇ? ಇಲ್ಲ. ತನ್ನನ್ನು ತಾನು ಸಂಭಾಳಿಸಿಕೊಂಡ. ಅವನ ಎದೆ ಹೆಮ್ಮೆಯಿಂದ ಬೀಗುತ್ತಿತ್ತು. ಆದರೆ ಎಲ್ಲ ಮುಗಿದ ಅನಂತರ ಮನೆಗೆ ಹೋಗಿ ಕಣ್ಣೀರಧಾರೆ ಸುರಿಸಿದ.

1939ರಲ್ಲಿ ಕಿಶನ್ ಸಿಂಗ್​ನಿಗೆ ಪಾರ್ಶ್ವವಾಯು ಬಡಿಯಿತು. ಹೀಗೆಯೇ ಅವನ ತ್ಯಾಗಮಯೀ ಜೀವನ ಸಮಾಜಸೇವೆ ಮಾಡುತ್ತ ಮುಂದುವರಿಯಿತು. 1950ರಲ್ಲಿ ಭಾರತದ ಸಂವಿಧಾನ ಜಾರಿಗೆ ಬಂದು ಅದೊಂದು ಪ್ರಜಾತಂತ್ರೀಯ ಸಾರ್ವಭೌಮ ರಾಷ್ಟ್ರವಾಯಿತು. ಅದನ್ನು ಕೇಳಿ ಸಂತೋಷ ವ್ಯಕ್ತಪಡಿಸಿದ ಕಿಶನ್ ಸಿಂಗ್ 1951ರ ಮೇ 30ರಂದು ತನ್ನ 73ನೆಯ ವಯಸ್ಸಿನಲ್ಲಿ ಕೊನೆಯುಸಿರೆಳೆದ. ವೀರ ಹುತಾತ್ಮನ ಧೀರ ತಂದೆ ಎನ್ನಿಸಿಕೊಂಡ. ಈ ಕುಟುಂಬದ ಶೌರ್ಯಗಾಥೆಯ ಮತ್ತಷ್ಟು ವಿವರ ಮುಂದೆ ನೋಡೋಣ.

(ಸರ್ದಾರ್ ಕಿಶನ್ ಸಿಂಗ್​ನ ರೋಮಾಂಚಕಾರಿ ಜೀವನದ ಹೆಚ್ಚಿನ ವಿವರಗಳನ್ನು ಅರಿಯಲು ಇದೇ ಅಂಕಣಕಾರರ ‘ಯುಗದ್ರಷ್ಟ ಭಗತ್ ಸಿಂಗ್’ ಓದಿ. ವಿವರಗಳಿಗೆ ಸಂರ್ಪಸಿ: 94481-10034)

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top