Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಹದಿಹರೆಯದ ಹುಡುಗ ಭಗತ್ ಸಿಂಗನ ಸ್ಪೂರ್ತಿದಾತ!

Thursday, 10.05.2018, 3:05 AM       No Comments

ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಕರ್ತಾರ್ ಸಿಂಗ್, ಬ್ರಿಟಿಷ್ ಸರ್ಕಾರದ ಕುತಂತ್ರದಿಂದಾಗಿ 19ನೇ ವಯಸ್ಸಿನಲ್ಲೇ ಗಲ್ಲಿಗೇರಬೇಕಾಗಿ ಬಂತು. ಇದಕ್ಕಾಗಿ ಒಂದಿನಿತೂ ಕೊರಗದೆ ನಗುನಗುತ್ತಲೇ ನೇಣಿಗೆ ಕೊರಳೊಡ್ಡಿದ ಕರ್ತಾರ್, ಮುಂದಿನ ಪೀಳಿಗೆಯ ಕ್ರಾಂತಿಕಾರಿಗಳಿಗೆ ಪ್ರೇರಣೆಯ ಸ್ರೋತವಾದ.

‘ಕೇವಲ 19 ವರ್ಷಗಳೊಳಗೇ ಇಂಥ ಸಾಧನೆಯನ್ನು ಯಾರಾದರೂ ಮಾಡಿದ್ದಾರೆಂದು ಕಲ್ಪನೆ ಮಾಡುವುದೂ ಕಷ್ಟಸಾಧ್ಯ. ಕರ್ತಾರ್​ನಲ್ಲಿನ ಧೈರ್ಯ, ಆತ್ಮವಿಶ್ವಾಸ, ತ್ಯಾಗಬುದ್ಧಿ ಇತರರಲ್ಲಿ ಕಾಣುವುದು ಬಹಳ ಅಪರೂಪ. ಕ್ರಾಂತಿಕಾರಿ ಎಂಬ ಪದಕ್ಕೆ ಗೌರವ ತಂದುಕೊಡಬಲ್ಲ ಕೆಲವೇ ಕೆಲವರು ಈ ದೇಶದಲ್ಲಿ ಹುಟ್ಟಿದ್ದಾರೆ. ಅಂಥವರ ಪೈಕಿ ಕರ್ತಾರ್​ನದು ಅಗ್ರಸ್ಥಾನ. ಅವನ ಗುರಿ ದೇಶದ ಸ್ವಾತಂತ್ರ್ಯ. ಅವನ ನಂಬಿಕೆ ಇದ್ದಿದ್ದು ಸಶಸ್ತ್ರ ಕ್ರಾಂತಿಯಲ್ಲಿ. ಅವನು ಬದುಕಿದ್ದು ಪ್ರಾಣಕೊಟ್ಟಿದ್ದೂ ಆ ಧ್ಯೇಯಗಳಿಗಾಗಿಯೇ’- ಇದು ಕ್ರಾಂತಿಕಾರಿಗಳ ಮುಕುಟಮಣಿ ಸರ್ದಾರ್ ಭಗತ್ ಸಿಂಗ್ ಗದರ್ ಪಾರ್ಟಿಯ ಮುಕುಟಮಣಿ ಕರ್ತಾರ್ ಸಿಂಗ್ ಸರಾಭಾ ಕುರಿತು ಹೇಳಿದ ಮಾತು.

19ನೇ ವಯಸ್ಸಿನಲ್ಲಿ ದುಷ್ಟ ಬ್ರಿಟಿಷ್ ಸರ್ಕಾರದ ನ್ಯಾಯಾಲಯದ ಮರಣದಂಡನೆ ಶಿಕ್ಷೆಗೆ ಗುರಿಯಾಗಿ ನಗುನಗುತ್ತ ಗಲ್ಲಿಗೇರಿದ ಕರ್ತಾರ್ ಸಿಂಗ್ ಮುಂದಿನ ಪೀಳಿಗೆಯ ಕ್ರಾಂತಿಕಾರಿ ಹುತಾತ್ಮರಿಗೆ ಪ್ರೇರಣೆಯ ಸ್ರೋತವಾದ. ಅವನ ಜೀವನ ಸಾಹಸಮಯ, ರೋಮಾಂಚಕಾರಿ.

1896ರ ಮೇ 24ರಂದು ಪಂಜಾಬಿನ ಲೂಧಿಯಾನ ಜಿಲ್ಲೆಯ ಸರಾಭಾ ಎಂಬ ಗ್ರಾಮದಲ್ಲಿ ಮಂಗಲ್ ಸಿಂಗ್ ಮತ್ತು ಸಾಹಿಬ್ ಕೌರ್ ದಂಪತಿಯ ಮಗನಾಗಿ ಜನನ. ಅವನು ಚಿಕ್ಕವನಿರುವಾಗಲೇ ಅಪ್ಪ-ಅಮ್ಮ ಮರಣಿಸಿದ್ದರಿಂದ ತಾತ ಬದನ್ ಸಿಂಗ್ ಗ್ರೇವಾಲ್​ನೇ ಅವನನ್ನು ಪೋಷಿಸಿ ಬೆಳೆಸಿದ. ಅವರದು ಪಂಜಾಬಿನ ಸಿಖ್ ಜಾಟ್ ಗ್ರೇವಾಲ್ ಜಾತಿ. ತಾತ ಪೋಷಕನಾದರೂ ಅವನ ಒಡನಾಟ ಚಿಕ್ಕಪ್ಪನೊಂದಿಗೆ ಹೆಚ್ಚು. ಅವನೂ, ಪ್ರೀತಿಯ ಅಮೃತಧಾರೆಯನ್ನೇ ಸುರಿಸಿದ.

ಚೂಟಿ ಹುಡುಗ: 8ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ ಕರ್ತಾರ್ ಬಲು ಚೂಟಿಹುಡುಗ, ಬುದ್ಧಿವಂತ. ಚೇಷ್ಟೆ ಮಾಡದಿದ್ದರೂ ಸಹಪಾಠಿಗಳನ್ನು ತಮಾಷೆ ಮಾಡುವುದರಲ್ಲಿ ಎತ್ತಿದ ಕೈ. ಪಂಜಾಬ್​ನಲ್ಲಿ ದಯಾನಂದ ಸರಸ್ವತಿಗಳ ಆರ್ಯಸಮಾಜ ಬಹಳ ಪ್ರಭಾವಿಯಾಗಿದ್ದ ಕಾಲ ಅದು. ಕರ್ತಾರ್​ಗೂ ಅದರ ಪ್ರಭಾವ ತಟ್ಟದಿರಲಿಲ್ಲ. ಅದು ಅವನಿಗೆ ದೇಶಭಕ್ತಿಯ ಮೊದಲ ಪಾಠವನ್ನು ಕಲಿಸಿತು.

ಅದು ಪಂಜಾಬಿನ ಸಾವಿರಾರು ಸಿಖ್ಖರು ಹಾಗೂ ಇತರರು ಅಮೆರಿಕ, ಕೆನಡಾಗಳಿಗೆ ವಲಸೆ ಹೋಗುತ್ತಿದ್ದ ಕಾಲ. ಅಲ್ಲಿ ದುಡಿಮೆಗೆ ಅವಕಾಶವಿದ್ದುದರಿಂದ ಜನ ಗುಂಪುಗುಂಪಾಗಿ ವಲಸೆ ಹೋಗುತ್ತಿದ್ದರು. ಆ ಪೈಕಿ ಉನ್ನತ ಶಿಕ್ಷಣಕ್ಕೆ ಹೋಗುತ್ತಿದ್ದ ಯುವಕರೂ ಇದ್ದರು. ಆದರೆ ಹಾಗೆ ವಲಸೆ ಹೋಗುವುದು ಅಷ್ಟು ಸುಲಭವಿರಲಿಲ್ಲ. ಭಾರತೀಯರ ವಲಸೆ ತಡೆಯಲು ಆ ದೇಶಗಳು ಅನೇಕ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದವು.

ಮಾಳ್ವಾ ಖಾಲ್ಸಾ ಹೈಸ್ಕೂಲ್​ನಲ್ಲಿ ವಿದ್ಯಾಭ್ಯಾಸ ಮಾಡಿ 8ನೇ ತರಗತಿ ಪಾಸು ಮಾಡಿದಾಗಲೇ ಮಹತಾ್ವಕಾಂಕ್ಷೆಯ ಕರ್ತಾರ್ ಚಿಕ್ಕಪ್ಪನ ಮನವೊಲಿಸಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗಲು ಒಪ್ಪಿಗೆ ಗಿಟ್ಟಿಸಿದ, ಹೊರಟೂಬಿಟ್ಟ. ಅಮೆರಿಕದ ಸ್ಯಾನ್​ಫ್ರಾನ್ಸಿಸ್ಕೋದಲ್ಲಿ ಇಮಿಗ್ರೇಷನ್ ಕಚೇರಿಯ ಅಧಿಕಾರಿಗಳು ಅವನನ್ನು ಪರೀಕ್ಷಿಸಿದರು. ಅವನ ಚುರುಕು ಉತ್ತರಗಳಿಂದ ಬೆರಗಾದ ಅವರು ಥಟ್ಟನೆ ಅನುಮತಿ ಪತ್ರಕ್ಕೆ ಸಹಿಹಾಕಿ ಅಮೆರಿಕಕ್ಕೆ ಬರಮಾಡಿಕೊಂಡರು.

ಅದು 1912ನೇ ಇಸವಿ. ಆಗ ಅಲ್ಲಿಗೆ ಹೋದ ಭಾರತೀಯರು ಯಾವುದೋ ಒಂದು ದುಡಿಮೆ ಮಾಡಿಕೊಂಡು ಹಣ ಸಂಪಾದಿಸುತ್ತಿದ್ದರು. ವಿದ್ಯಾಭ್ಯಾಸಕ್ಕಾಗಿ ವಲಸೆ ಹೋದವರೂ ಅಷ್ಟೆ. ಹೋಟೆಲ್​ಗಳಲ್ಲಿ ಪ್ಲೇಟು ತೊಳೆಯುತ್ತಲೋ, ಕೂಲಿ ಮಾಡುತ್ತಲೋ ಹಣ ಗಳಿಸಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಹಣ್ಣು ಮಾರುವ ಅಂಗಡಿಯೊಂದರಲ್ಲಿ ಕರ್ತಾರ್ ಕೆಲಸಕ್ಕೆ ಸೇರಿದ.

ಆ ದಿನಗಳಲ್ಲಿ ಅಮೆರಿಕದಲ್ಲಿ ಲಾಲಾ ಹರ್​ದಯಾಳರ ಸುನಾಮಿಯೇ ಎದ್ದಿತ್ತು. ಅವರ ಪ್ರೇರಣಾದಾಯಿ ಭಾಷಣಗಳಿಂದ ಅಲ್ಲಿನ ಭಾರತೀಯ ವಿದ್ಯಾರ್ಥಿಗಳ ಹೃದಯಗಳಲ್ಲಿ ದೇಶಭಕ್ತಿಯ ಮಹಾಪೂರವನ್ನೇ ಹರಿಸಿದ್ದರು. ಹಾಗೆ ಹರ್​ದಯಾಳರ ವಾಗ್ಝರಿಗೆ ಸೋತು ಶಿಷ್ಯನಾಗಿ ಅವರನ್ನು ಸೇರಿಕೊಂಡವರ ಪೈಕಿ ಮೊದಲಿಗ ಕರ್ತಾರ್. ಅವನು ಅವರ ಬಲಗೈ ಬಂಟನಾದ.

ಆಗ ಹರ್​ದಯಾಳರು ಸ್ಯಾನ್​ಫ್ರಾನ್ಸಿಸ್ಕೋದ ಹಿಲ್​ಸ್ಟ್ರೀಟ್ ಎಂಬಲ್ಲಿ ಗುಡ್ಡದ ಮೇಲಿನ ಸುಂದರ ಪರಿಸರದಲ್ಲಿ ‘ಯುಗಾಂತರ್’ ಎಂಬ ಹೆಸರಿನಲ್ಲಿ ಕ್ರಾಂತಿಕಾರ್ಯಕ್ಕಾಗಿ ಆಶ್ರಮ ಆರಂಭಿಸಿದರು. ಗದರ್ ಪತ್ರಿಕೆ ಶುರುಮಾಡಿದರು. ಅದರಲ್ಲಿನ ಒಂದು ಪ್ರಕಟಣೆ ಅಮೆರಿಕದ ಅನಿವಾಸಿ ಭಾರತೀಯರ ಭಾವನೆಗಳನ್ನು ಬಡಿದೆಬ್ಬಿಸಿತು. ಅದು ಹೀಗಿತ್ತು: ‘ನಮ್ಮ ಹೆಸರು?… ಬಂಡಾಯ! ನಮ್ಮ ಕೆಲಸ?… ಬಂಡಾಯ! ಬಂಡಾಯ ಎಲ್ಲಿ?… ಭಾರತದಲ್ಲಿ! ಯಾವಾಗ?… ಇನ್ನು ಕೆಲವು ವರ್ಷಗಳಲ್ಲಿ! ಬಂಡಾಯದ ಕಾರಣಗಳು?… ಬ್ರಿಟಿಷ್ ಆಡಳಿತ, ದಬ್ಬಾಳಿಕೆ ಹಾಗೂ ಪ್ರಜಾಪೀಡನೆಗಳು ದುಸ್ಸಹನೀಯವಾಗಿರುವುದಕ್ಕಾಗಿ’.

ಹರ್​ದಯಾಳ್ ವಿದ್ಯಾರ್ಥಿಗಳಿಗಾಗಿ ನಳಂದಾ ಕ್ಲಬ್ ಎಂಬ ಹಾಸ್ಟೆಲ್ ಆರಂಭಿಸಿದ್ದರು. ಕರ್ತಾರ್ ಅಲ್ಲಿಗೆ ದಾಖಲಾದ. ಅವನೇ ಒಂದು ಸಣ್ಣ ಲಿಥೋ ಮುದ್ರಣಾಲಯ ಆರಂಭಿಸಿ ಅಲ್ಲೇ ಗದರ್ ಪತ್ರಿಕೆ ಮುದ್ರಿಸಿದ. ಅದರಲ್ಲಿ ತಾನೇ ಲೇಖನ, ಕವನ ಬರೆದ. ಎಲ್ಲೆಡೆ ಅದನ್ನು ವಿತರಿಸಿದ. ಅದರ ವ್ಯವಹಾರ ಪೂರ್ತಿ ಅವನದೇ. ಹರ್​ದಯಾಳರು ಈ ಅದ್ಭುತ ಕಿಶೋರನಿಗೆ ವಿಮಾನ ಚಾಲನೆ ಕಲಿಸುವುದಕ್ಕಾಗಿ ನ್ಯೂರ್ಯಾಗೆ ಕಳಿಸಿದ್ದರು.

ಉತ್ಸಾಹಿ ಕಾರ್ಯಕರ್ತ: ಕರ್ತಾರ್ ಸಂಪಾದಕತ್ವದ ಗದರ್​ನಲ್ಲಿ ‘ಗದರ್ ಸೈನಿಕರ ಘೊಷಣಾಪತ್ರ’ ಪ್ರಕಟಗೊಂಡಿತ್ತು. ಅದರ ಲೇಖಕ ಹರ್​ದಯಾಳ್. ಅದರ ಒಂದು ಭಾಗ ಹೀಗಿತ್ತು: ‘ಓ ಭಾರತದ ಮಣ್ಣಿನ ಮಕ್ಕಳೇ! ನನ್ನ ಬಳಿ ಬನ್ನಿ. ನನ್ನನ್ನು ಸೇವಿಸಿರಿ. ನನ್ನ ದೀಪವನ್ನು ಎಲ್ಲ ಮನೆಗಳಲ್ಲಿ ಬೆಳಗಿರಿ. ನನ್ನ ಸಂದೇಶವನ್ನು ಮನನ ಮಾಡಿ. ನನ್ನ ಹಿರಿಮೆ ಗರಿಮೆಗಳಿಂದ ಜಗತ್ತನ್ನೇ ದೇದೀಪ್ಯಮಾನಗೊಳಿಸಿರಿ! ನಾನು ಕ್ರಾಂತಿದೇವತೆ! ದೀನ-ದುರ್ಬಲರ ರಕ್ಷಕಿ. ಗುಬ್ಬಿಗಳನ್ನು ಗಿಡುಗಗಳನ್ನಾಗಿ ಮಾಡಬಲ್ಲ ಶಕ್ತಿದೇವತೆ. ಬನ್ನಿ, ನನ್ನ ಬಳಿ ಬನ್ನಿ. ನನ್ನ ಉಪಾಸನೆ ಮಾಡಿ. ನನ್ನನ್ನು ಅಪ್ಪಿಕೊಳ್ಳಿ. ಭಾರತವನ್ನು ಸ್ವತಂತ್ರಗೊಳಿಸಿ’.

ಕೊಮಾಗಾಟ ಮಾರು ಪ್ರಕರಣದ ಹಿನ್ನೆಲೆಯಲ್ಲಿ ಅಪಾರಶ್ರಮ ವಹಿಸಿದ ಕರ್ತಾರ್ ನ್ಯೂಯಾರ್ಕ್​ನಿಂದ ಕೋಬೆಗೆ ವಿಮಾನದಲ್ಲಿ ಹೋಗಿ ಮುಂದಿನ ಯೋಜನೆಗಳ ಕುರಿತು ಗುರುದಿತ್ ಸಿಂಗ್​ನೊಡನೆ ಗಾಢಚಿಂತನೆ ನಡೆಸಿದ. ಅವರಿಗೆ ಕೆಲವು ಸಲಹೆಗಳನ್ನು ನೀಡಿದ.

1913ರ ಡಿಸೆಂಬರ್ 31ರಂದು ಸ್ಯಾಕ್ರಮೆಂಟೋ ಎಂಬಲ್ಲಿ ಹರ್​ದಯಾಳ್ ನಡೆಸಿದ ಬೃಹತ್ ಸಮಾವೇಶ ಗದರ್ ಚರಿತ್ರೆಯಲ್ಲಿ ಒಂದು ಮಹತ್ವದ ಬೆಳವಣಿಗೆ. ಅದು ಮಹಾಯುದ್ಧದ ಸ್ಪಷ್ಟ ಸೂಚನೆಗಳು ದೊರೆತಿದ್ದ ಕಾಲ. ಅಂದಿನ ಸಭೆಯಲ್ಲಿ ಹರ್​ದಯಾಳ್ ಹೀಗೆ ಕರೆ ನೀಡಿದರು: ‘ಭಾರತಕ್ಕೆ ಮುಂದೆಂದೂ ದೊರೆಯದಂಥ ಅದೃಷ್ಟದ ಕ್ಷಣ ಬಳಿ ಸಾರಿದೆ. ಅದೇ ಜಾಗತಿಕ ಮಹಾಯುದ್ಧ. ಇಂಗ್ಲೆಂಡ್ ಮತ್ತು ಜರ್ಮನಿಗಳ ನಡುವಿನ ಯುದ್ಧದ ಮಧ್ಯೆ ಭಾರತ ತನ್ನ ಉದ್ದೇಶ ಈಡೇರಿಸಿಕೊಳ್ಳಬೇಕು. ಜರ್ಮನಿ ನಮಗೆ ಸಹಕಾರ ನೀಡಲು ತಯಾರಾಗಿದೆ. ಅದನ್ನು ಪುಷ್ಟೀಕರಿಸುವ ಸಲುವಾಗಿ ಸ್ವತಃ ಜರ್ಮನಿ ರಾಯಭಾರಿಗಳೇ ಈ ಸಭೆಯಲ್ಲಿ ಉಪಸ್ಥಿತರಿದ್ದಾರೆ. ನಾವೆಲ್ಲರೂ ಶಸ್ತ್ರಪಾಣಿಗಳಾಗಿ ಭಾರತಕ್ಕೆ ತೆರಳಬೇಕು. ಭಾರತದಲ್ಲಿ ಕ್ರಾಂತಿ ಎಬ್ಬಿಸಿ ಇಂಗ್ಲಿಷರನ್ನು ಭಾರತದ ಪವಿತ್ರ ಮಣ್ಣಿನಿಂದ ಮೂಲೋತ್ಪಾಟನೆ ಮಾಡಬೇಕು. ನಡೆಯಿರಿ! ತಾಯಿನಾಡಿನತ್ತ ಸಾಗಿರಿ. ಶಸ್ತ್ರಗಳನ್ನು ಮೇಲೆತ್ತಿ ‘ವಂದೇ ಮಾತರಂ’ ರಣಗರ್ಜನೆ ಮೊಳಗಿಸಿ. ‘ಮಾರೋ ಫಿರಂಗಿ ಕೋ’ ಎಂಬ 1857ರ ಸಮರಘೊಷ ಮತ್ತೊಮ್ಮೆ ಮಾರ್ದನಿಗೊಳ್ಳಲಿ’.

ಹೀಗೆ ಇಡೀ ಸಭೆ ದೇಶಭಕ್ತಿಯಿಂದ ಉತ್ಪೂರ್ತಗೊಂಡಿದ್ದಾಗ ವೇದಿಕೆಗೆ ಚಿಮ್ಮಿ ಬಂದ ಕರ್ತಾರ್ ಗಟ್ಟಿ ಧ್ವನಿಯಲ್ಲಿ ಹಾಡಿದ: ‘ಚಲೋ ಚಲೀಯೇ ದೇಶ್ನು ಯುದ್ಧ ಕರನ್, ಏಹೋ ಆಕಿರಿ ವಚನ್ ಫರ್ವನ್ ಹೋಗಯಾ’. ಅವನ ದನಿಯೊಂದಿಗೆ ಇಡೀ ಸಭೆ ದನಿಗೂಡಿಸಿತು.

ಈ ಹಿನ್ನೆಲೆಯಲ್ಲಿ ಕರ್ತಾರ್ ತನ್ನ ಗೆಳೆಯ ಮಹಾರಾಷ್ಟ್ರದ ವಿಷ್ಣು ಗಣೇಶ ಪಿಂಗಳೆಯೊಂದಿಗೆ ಭಾರತಕ್ಕೆ ಬಂದ. ಕೊಲ್ಕತಾ ಬಂದರಿನಲ್ಲಿ ಹಡಗಿನಿಂದ ಇಳಿದು ಆಗ ಭೂಗತನಾಗಿದ್ದ ಯುಗಾಂತರದ ನಾಯಕ ಬಾಘಾ ಜತೀನನನ್ನು ಭೇಟಿಮಾಡಿದ. ಅವನಿಂದ ಒಂದು ಪರಿಚಯ ಪತ್ರ ಪಡೆದ ಅವರಿಬ್ಬರು ಕಾಶಿಗೆ ಹೋಗಿ ಅಲ್ಲಿ ರಾಸ್​ಬಿಹಾರಿ ಬೋಸರನ್ನು ಭೇಟಿ ಮಾಡಿ ಸೂಚನೆಗಳನ್ನು ಪಡೆದು ಪಂಜಾಬಿಗೆ ತೆರಳಿದರು.

ಮನೆಮುರುಕ ಕೃಪಾಲ್: ಪಂಜಾಬಿನ ಕ್ರಾಂತಿಕಾರಿಗಳಿಗೆ ಆಗ ನಾಯಕನ ಕೊರತೆ ಇತ್ತು. ಅವರು ನಾಯಕತ್ವ ವಹಿಸಲು ರಾಸ್ ಬಿಹಾರಿ ಬೋಸರನ್ನು ಪ್ರಾರ್ಥಿಸಿದರು. ಆದರೆ ಅವರು ಬರುವ ಸ್ಥಿತಿಯಲ್ಲಿರಲಿಲ್ಲ. ಅವರಿಗೆ ಬದಲು ಶಚೀಂದ್ರನಾಥ್ ಸನ್ಯಾಲ್ ಎಂಬ ಹಿರಿಯ ಕ್ರಾಂತಿಕಾರಿಯನ್ನು ಕಳಿಸಿದರು. ಅವರಿಗೂ ಕರ್ತಾರ್ ಸಿಂಗ್ ಬಲು ಮೆಚ್ಚುಗೆಯಾದ. ಸನ್ಯಾಲ್ ಹೇಗಾದರೂ ರಾಸ್ ಬಿಹಾರಿ ಬೋಸ್ ಪಂಜಾಬಿಗೆ ಬಂದು ಕ್ರಾಂತಿಕಾರಿಗಳ ನೇತೃತ್ವ ವಹಿಸಿಕೊಳ್ಳಬೇಕೆಂದು ಸುದ್ದಿ ಕಳಿಸಿದ. ಅನಂತರ ಮಾರುವೇಷದಲ್ಲಿ ಪಂಜಾಬಿಗೆ ಬಂದ ಬೋಸ್ ಕ್ರಾಂತಿಕಾರಿಗಳಲ್ಲಿ ಹೊಸ ಸಂಚಲನ ಉಂಟುಮಾಡಿದರು. 1915ರ ಫೆಬ್ರವರಿ 21ಕ್ಕೆ ಪಂಜಾಬಿನಿಂದ ಹಿಡಿದು ಬಂಗಾಳದವರೆಗೆ ಒಮ್ಮೆಲೆ ಕ್ರಾಂತಿ ಏಳಬೇಕೆಂದು ನಿಗದಿಗೊಳಿಸಿ ತಯಾರಿ ನಡೆಸಿದರು.

ಆಗ ಕರ್ತಾರನ ಕರ್ತೃತ್ವ ಗರಿಬಿಚ್ಚಿ ಹಾರಿತು. ಸೈಕಲ್ ಹತ್ತಿ ವಿವಿಧ ಸೈನ್ಯದ ಪಾಳಯಗಳಿಗೆ ಹೋಗಿ ಸೈನಿಕರಿಗೆ ಹೋರಾಟದ ದಿನ ಹಾಗೂ ಅದರ ಸಂದೇಶ ತಲಪಿಸುತ್ತಿದ್ದ. ಪ್ರತಿದಿನ 30-35 ಮೈಲು ಅವಿರತ ಸೈಕಲ್ ಪಯಣ!

ಆದರೆ ದುರ್ದೈವ. ತಾನೂ ಕ್ರಾಂತಿಕಾರಿಯಂತೆ ನಟಿಸುತ್ತಿದ್ದ ಕೃಪಾಲ್ ಸಿಂಗ್ ಎಂಬ ದ್ರೋಹಿ ಮನೆಮುರುಕನಾದ. ಪೊಲೀಸರಿಗೆ ಕ್ರಾಂತಿಕಾರಿಗಳ ಮಾಹಿತಿ ನೀಡಲಾರಂಭಿಸಿದ.

ಫೆಬ್ರವರಿ 19ರಂದು ಬೆಳಗ್ಗೆ ಕರ್ತಾರ್, ಫಿರೋಜ್​ಪುರದ ಸೈನಿಕಪಾಳಯಕ್ಕೆ ಸಂಗಾತಿಗಳೊಂದಿಗೆ ಹೋದಾಗ ಅಲ್ಲಿ ಬ್ರಿಟಿಷ್ ಸೈನ್ಯಾಧಿಕಾರಿಗಳು ಭಾರತೀಯ ಸೈನಿಕರನ್ನು ನಿಶ್ಶಸ್ತ್ರರನ್ನಾಗಿ ಮಾಡಿದ್ದರು. ಇದು ತಿಳಿದು ಖಿನ್ನನಾದ ಕರ್ತಾರ್ ಅಲ್ಲಿಂದ ಹಿಂದಿರುಗಿದ. ರಾಸ್ ಬಿಹಾರಿಯವರನ್ನು ಗುಪ್ತತಾಣದಲ್ಲಿ ಭೇಟಿಯಾಗಿ ಅವರನ್ನು ಸುರಕ್ಷಿತವಾಗಿ ಪೊಲೀಸ್ ವ್ಯೂಹದಿಂದ ಪಾರುಮಾಡಿ ಹೊರಕ್ಕೆ ಕಳುಹಿಸಿಬಿಟ್ಟ. ಅವನು ಜಗತ್ ಸಿಂಗ್ ಮತ್ತು ಹರ್​ನಾಮ್ ಸಿಂಗ್ ಎಂಬ ಸಂಗಾತಿಗಳೊಡನೆ ಸಗೋಧಾ ಎಂಬಲ್ಲಿನ ದಂಡು ಪಾಳಯಕ್ಕೆ ಮತ್ತೊಮ್ಮೆ ಕ್ರಾಂತಿ ಚಿಗುರಿಸುವ ಉದ್ದೇಶದಿಂದ ಹೋದ. ಆಗ ಪೊಲೀಸರಿಗೆ ಅನುಮಾನ ಬಂದು ಹಿಂಬಾಲಿಸಿದರು. ಅಷ್ಟೇ ಅಲ್ಲ. ಮೂವರನ್ನೂ ಬಂಧಿಸಿಯೂಬಿಟ್ಟರು. ಅಂದು 1915ರ ಮಾರ್ಚ್ 2.

ಅಲ್ಲಿಂದ ಪ್ರಸಿದ್ಧವಾದ ಪ್ರಥಮ ಲಾಹೋರ್ ಮೊಕದ್ದಮೆ ಶುರುವಾಯಿತು. ಕರ್ತಾರ್ ಸಿಂಗನೇ ಈ ಕ್ರಾಂತಿಯ ಮುಂಚೂಣಿಯ ನಾಯಕ ಎಂದು ನ್ಯಾಯಾಧೀಶರು ಗುರುತಿಸಿದ್ದರು. ಕೋರ್ಟಿನಲ್ಲಿ ತನ್ನ ಎಲ್ಲ ಸಾಹಸಗಳನ್ನೂ ತನ್ನ ವಕ್ತವ್ಯದಲ್ಲಿ ಬಿಚ್ಚಿಟ್ಟ. ಅದನ್ನು ಕೇಳಿ ದಂಗಾದ ನ್ಯಾಯಾಧೀಶ ಇಂಥ ಮಾತುಗಳು ಅವನನ್ನು ಗಲ್ಲುಶಿಕ್ಷೆಗೆ ಗುರಿಮಾಡುತ್ತವೆಂದು ಹೇಳಿದಾಗ, ‘ನೀವೇನು ತಾನೇ ಮಾಡಬಲ್ಲಿರಿ? ಹೆಚ್ಚೆಂದರೆ ಮರಣದಂಡನೆ ವಿಧಿಸಬಲ್ಲಿರಿ. ಅದಕ್ಕೆ ಎಂದಿನಿಂದಲೋ ನಾನು ಸಿದ್ಧನಾಗಿದ್ದೀನಿ’ ಎಂದು ಮಾರುತ್ತರ ನೀಡಿದ ಆ ಗಂಡುಗಲಿ!

ಕರ್ತಾರ್ ಸ್ಥಾನಕ್ಕೆ ಭಗತ್!: ಅನೇಕ ದಿನಗಳ ವಿಚಾರಣೆ ನಂತರ ನ್ಯಾಯಾಧೀಶರು ತೀರ್ಪು ನೀಡಿದರು. ತೀರ್ಪನ್ನು ಓದಿದ ಮೇಲೆ ‘ಇವನು ಚಿಕ್ಕ ವಯಸ್ಸಿನವನಿರಬಹುದು. ಆದರೆ ಷಡ್ಯಂತ್ರದ ಮುಂಚೂಣಿಯ ಖಳನಾಯಕ ಇವನೇ. ಇವನ ವರ್ತನೆ ನ್ಯಾಯಾಲಯವನ್ನೇ ಧಿಕ್ಕರಿಸುವಂತಿದೆ. ತಾನು ಮಾಡಿದ ಅಪರಾಧ ಶ್ರೇಷ್ಠವಾದುದೆಂಬ ಹೆಮ್ಮೆಯಿಂದ ಬೀಗುತ್ತ ಅದರ ನಶೆಯಲ್ಲೇ ಇರುವ ಇವನಿಗೆ ಯಾವ ಕರುಣೆಯನ್ನೂ ತೋರಿಸಬಾರದು’ ಎಂದು ತೀರ್ಪಿಗೆ ಬಾಲಂಗೋಚಿ ಸೇರಿಸಿದ.

ಅದಕ್ಕೆ ಪ್ರತಿಯಾಗಿ ನಕ್ಕು ‘ಥ್ಯಾಂಕ್ಯೂ ಸರ್’ ಎಂದು ನ್ಯಾಯಾಧೀಶರಿಗೆ ಧನ್ಯವಾದ ಅರ್ಪಿಸಿದ ಕರ್ತಾರ್. ದಯಾಭಿಕ್ಷೆ ಬೇಡೆಂದು ಹಿತೈಷಿಗಳನೇಕರು ಒತ್ತಾಯಿಸಿದರು. ‘ದಯಾಭಿಕ್ಷೆಯೇ? ನಾನೇಕೆ ಅದನ್ನು ಬೇಡಲಿ! ನಾನು ಮಾಡಿರುವುದು ದೇಶ ಬಿಡುಗಡೆಯ ಶ್ರೇಷ್ಠಕೆಲಸ. ಈಗ ನನಗಿರುವುದು ಒಂದೇ ಜೀವ. ಅದನ್ನು ದೇಶಕ್ಕಾಗಿ ನೀಡುತ್ತಿದ್ದೇನೆ. ಎಷ್ಟೇ ಜನ್ಮಗಳು ಬರಲಿ ಅದನ್ನು ದೇಶಕ್ಕೆ ಮುಡಿಪು ಮಾಡುತ್ತೇನೆ’ ಎಂಬುದು ಅವರಿಗೆ ಉತ್ತರವಾಗಿತ್ತು.

ಕೊನೆಗೆ ಗಲ್ಲಿನ ಕತ್ತಲುಕೋಣೆಯಲ್ಲಿದ್ದ ಅವನನ್ನು ಕಾಣಲು ತಾತ ಬದನ್ ಸಿಂಗ್ ಬಂದು ಕಣ್ಣೀರು ಸುರಿಸುತ್ತ ಕೈಜೋಡಿಸಿ ನಿಂತು ದಯಾಭಿಕ್ಷೆ ಕೇಳು ಎಂದಾಗ, ‘ಪ್ಲೇಗ್, ಕಾಲರಾಗಳಿಂದ ನರಳುತ್ತ ಹಾಸಿಗೆ ಹಿಡಿದು ಸಾಯುವ ಬದಲು ದೇಶಕ್ಕಾಗಿ ಬಲಿಯಾಗುವುದೇ ಒಳಿತಲ್ಲವೇ? ನಮ್ಮ ಹಿಂದಿನ ಗುರುಗಳು ಧರ್ಮಕ್ಕಾಗಿ ಪ್ರಾಣ ನೀಡಲಿಲ್ಲವೇ’ ಎಂದುತ್ತರಿಸಿ ತಾತನ ಬಾಯಿಗೆ ಬೀಗಹಾಕಿದ.

ಸಿಖ್ ಗುರು ತೇಗಬಹದ್ದೂರರಂತೆ ಹಾಗೂ ಗುರುಗೋವಿಂದ ಸಿಂಹನ ಮಕ್ಕಳಂತೆ ದೇಶ ಧರ್ಮಗಳಿಗಾಗಿ ಜೀವ ತೊರೆಯಲು ಸಿದ್ಧನಾಗಿ ಆ ದಿನಕ್ಕಾಗಿ ಕಾಯುತ್ತಿದ್ದ. 1915ರ ನವೆಂಬರ್ 15 ಬಂತು. ಲಾಹೋರ್ ಜೈಲಿನಲ್ಲಿ ಕರ್ತಾರ್ ಸಿಂಗ್ ಗಲ್ಲುಗಂಬವೇರಿದಾಗ ವಯಸ್ಸಿನ್ನೂ 19! ಅವನು ಮರಣಿಸಿದರೇನು? ಅವನ ಸ್ಥಾನವನ್ನು ಭಗತ್ ಸಿಂಗ್ ತುಂಬಿ ಅವನ ಕಾರ್ಯವನ್ನು ಮತ್ತಷ್ಟು ಮುಂದುವರಿಸಲಿಲ್ಲವೇ? ಇತಿಹಾಸ ಸೃಷ್ಟಿಸಲಿಲ್ಲವೇ?

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top