Friday, 16th November 2018  

Vijayavani

Breaking News

ವೈಸ್ರಾಯ್ ಮೇಲೆ ಬಾಂಬ್ ಎಸೆದ ಧೀರ ಬಿಶ್ವಾಸ್

Thursday, 13.09.2018, 2:05 AM       No Comments

ಬಸಂತ್ ಕುಮಾರ್ ಬಿಶ್ವಾಸ್ ಕೇವಲ 17 ವರ್ಷದವನಾಗಿದ್ದರೂ, ಗವರ್ನರ್​ನನ್ನು ಸಮಾಧಾನಪಡಿಸಲು ಪೊಲೀಸರು ದಾಖಲೆ ತಿದ್ದಿ, ಸುಳ್ಳುದಾಖಲೆ ಸೃಷ್ಟಿಸಿ ಅವನ ವಯಸ್ಸನ್ನು 20 ಎಂದು ನಮೂದಿಸಿದರು. 1915ರ ಮೇ 11ರಂದು ಪಂಜಾಬಿನ ಅಂಬಾಲಾ ಕೇಂದ್ರ ಕಾರಾಗೃಹದಲ್ಲಿ ಬಿಶ್ವಾಸನನ್ನು ಗಲ್ಲಿಗೇರಿಸಲಾಯಿತು.

ಇಪ್ಪತ್ತನೆಯ ಶತಮಾನದ ಮೊದಲ ದಶಕದಲ್ಲಿ ಕಾಂಗ್ರೆಸ್​ನಲ್ಲಿ ಬ್ರಿಟಿಷ್​ಪರ ಮಂದಗಾಮಿಗಳಿಗಿಂತಲೂ ಲಾಲ್-ಬಾಲ್-ಪಾಲ್ ಎಂಬ ತ್ರಿಮೂರ್ತಿಗಳ ತೀವ್ರಗಾಮಿ ಪ್ರಭಾವ ಹೆಚ್ಚಾಗುತ್ತಿದ್ದುದು ಇಡೀ ದೇಶದ ಮೇಲೆ ಪರಿಣಾಮ ಬೀರುತ್ತಿದ್ದುದನ್ನು ಬ್ರಿಟಿಷ್ ಆಡಳಿತ ಬಹಳ ಗಮನವಿರಿಸಿ ನೋಡುತ್ತಿತ್ತು. ತೀವ್ರಗಾಮಿಗಳ ಬೆಳವಣಿಗೆ ಮುಂದೊಮ್ಮೆ ತಮ್ಮ ಆಡಳಿತಕ್ಕೇ ಪೆಟ್ಟು ಕೊಡುವುದೆಂಬ ಆತಂಕವನ್ನು ಅವರಲ್ಲಿ ಉಂಟುಮಾಡಿತ್ತು. ಅಂತೆಯೇ ಇನ್ನೊಂದು ಕಡೆ ಕ್ರಾಂತಿಕಾರಿಗಳ ಚಟುವಟಿಕೆಗಳೂ ಬ್ರಿಟಿಷ್ ಆಡಳಿತದ ನಿದ್ದೆ ಕಸಿದಿತ್ತು. ಅದರಲ್ಲೂ 18 ವರ್ಷದ ಕಿಶೋರ ಖುದಿರಾಮ್ ಬೋಸ್ ಮುಝುಫ್ಪರ್​ಪುರದಲ್ಲಿ ಮ್ಯಾಜಿಸ್ಟ್ರೇಟ್ ಕಿಂಗ್ಸ್​ಫೋರ್ಡ್​ನ ಮೇಲೆ ನಡೆಸಿದ ಹತ್ಯಾ ಪ್ರಯತ್ನದಲ್ಲಿ ಇಬ್ಬರು ಐರೋಪ್ಯ ಸ್ತ್ರೀಯರ ಸಾವು ಆಗಿದ್ದ ಘಟನೆ ಅಲ್ಲೋಲಕಲ್ಲೋಲ ಉಂಟುಮಾಡಿತ್ತು. ಅತ್ತ ಲಂಡನ್ನಿನಲ್ಲೂ ಮದನ್​ಲಾಲ್ ಧಿಂಗ್ರಾ ಕರ್ಜನ್ ವಾಯಿಲಿ ಎಂಬ ಆಂಗ್ಲ ಶಕುನಿಯನ್ನು ಕೊಂದು ಕಂಪನ ಹುಟ್ಟಿಸಿದ್ದ. ತಾನು ಗಲ್ಲಿಗೇರಿ ಕ್ರಾಂತಿಕಾರಿ ಚಟುವಟಿಕೆಗಳಿಗೆ ಇಂಬು ನೀಡಿದ್ದ. ಇತ್ತ ದಕ್ಷಿಣ ಭಾರತದ ಮಾಣಿಯಾಚ್ಚಿಯಲ್ಲಿ ವಾಂಚಿನಾಥನ್ ಎಂಬ ಧಿರ ಕಲೆಕ್ಟರ್ ಆಷ್​ನನ್ನು ಸಂಹರಿಸಿ ಆತಂಕದ ಅಲೆಗಳನ್ನು ಪಸರಿಸಿದ್ದ.

ಅದ್ದೂರಿ ದೆಹಲಿ ದರ್ಬಾರ್: ಈ ಹಿನ್ನೆಲೆಯಲ್ಲಿ ಬ್ರಿಟಿಷ್ ಆಡಳಿತವು ಭಾರತದಲ್ಲಿ ತನ್ನ ಶಕ್ತಿ ಸಾಮರ್ಥ್ಯಗಳ ಪರಿಚಯವನ್ನು ಭಾರತೀಯರಿಗೆ ಮಾಡಿಕೊಟ್ಟು ಅವರನ್ನು ತನ್ನ ನಿಷ್ಠಾವಂತರನ್ನಾಗಿ ಮಾಡಿಕೊಳ್ಳಬೇಕೆಂಬ ಪ್ರತಿತಂತ್ರ ಕುರಿತು ಯೋಚಿಸಿದಾಗ ಅವರ ಸಹಾಯಕ್ಕೆ ಬಂದಿದ್ದೇ 1910ರಲ್ಲಿ ನಡೆದ ಇಂಗ್ಲೆಂಡಿನ ನೂತನ ದೊರೆ ಪಂಚಮ ಜಾರ್ಜ್​ನ ಸಿಂಹಾಸನಾರೋಹಣ ಸಂದರ್ಭ.

ಅದನ್ನು ನೆವ ಮಾಡಿಕೊಂಡು ಪಂಚಮ ಜಾರ್ಜ್ ಮತ್ತು ರಾಣಿ ಮೇರಿಯನ್ನು ಭಾರತಕ್ಕೆ ಸ್ವಾಗತಿಸಲು ಅದ್ದೂರಿ ದೆಹಲಿ ದರ್ಬಾರ್ ಹಮ್ಮಿಕೊಳ್ಳಲಾಯಿತು. ಭಾರತದ ರಾಜ-ಮಹಾರಾಜರಿಗೆ, ಅಪಾರ ಸಂಖ್ಯೆಯಲ್ಲಿದ್ದ ಜಮೀನುದಾರರು ಮತ್ತು ಇತರ ಸಾಹುಕಾರರಿಗೆ ಕಡ್ಡಾಯದ ಆಮಂತ್ರಣ ಕಳುಹಿಸಿ ಅವರೆಲ್ಲರೂ ಇಂಗ್ಲೆಂಡಿನ ರಾಜ-ರಾಣಿಯರಿಗೆ ಮುಜುರೆಯನ್ನು ಸಲ್ಲಿಸಿ ರಾಜಭಕ್ತಿ ತೋರ್ಪಡಿಸಬೇಕೆಂದು ಫರ್ವನು ಹೊರಡಿಸಲಾಗಿತ್ತು. ಅದಕ್ಕೆ ರಾಜ-ಮಹಾರಾಜರ ಬೊಕ್ಕಸದಿಂದಲೇ ಹಣವನ್ನು ಕಕ್ಕಿಸಲಾಗಿತ್ತು.

ಇದು ಪ್ರಚ್ಛನ್ನ ರಾಜನಿಷ್ಠ ಕಾಂಗ್ರೆಸ್ಸಿಗರಿಗೆ ಒಳಗೊಳಗೇ ಸಂತೋಷವನ್ನುಂಟು ಮಾಡಿದ್ದರೂ ದೇಶಭಕ್ತ ಭಾರತೀಯರಿಗೆ ಅಪಮಾನಕಾರಕವೆನ್ನಿಸಿತ್ತು. ಗುರುದೇವ ರವೀಂದ್ರನಾಥ ಟಾಗೋರರ ಅಪಕೀರ್ತಿಗೆ ಕಾರಣವಾದ ‘ಜನಗಣಮನ…’ ಗೀತೆ 1911ರ ಡಿಸೆಂಬರ್ 11ರಂದು, ಇಂಗ್ಲೆಂಡಿನ ರಾಜರಾಣಿಯರನ್ನು ಸ್ವಾಗತಿಸಲೆಂದೇ ರಚಿಸಿದ ಗೀತೆ. ರಾಜರಾಣಿಯರ ದೆಹಲಿ ದರ್ಬಾರ್ ದಿನಾಂಕ 1911ರ ಡಿ. 12!

ಆ ದಿನಗಳಲ್ಲಿ ಕ್ರಾಂತಿಕಾರಿ ನಾಯಕರೆನ್ನಿಸಿಕೊಂಡಿದ್ದ ರಾಸ್​ಬಿಹಾರಿ ಬೋಸ್ ಈ ದೆಹಲಿ ದರ್ಬಾರ್ ಶಕ್ತಿ ಪ್ರದರ್ಶನಕ್ಕೆ ಪ್ರತ್ಯುತ್ತರ ನೀಡಲು ಸಂದರ್ಭ ಹುಡುಕಲಾರಂಭಿಸಿದಾಗ ಸಿಕ್ಕ ಅವಕಾಶ 1912ರ ಡಿಸೆಂಬರ್​ನಲ್ಲಿ ವೈಸ್ರಾಯ್ ಲಾರ್ಡ್ ಹಾರ್ಡಿಂಜನ ದೆಹಲಿ ಪುರ ಪ್ರವೇಶ ಸಂದರ್ಭ!

ಪಂಚಮ ಜಾರ್ಜ್ ಆ ಸಂದರ್ಭದಲ್ಲಿ ಭಾರತೀಯರ ಕಣ್ಣೊರೆಸಲು ಬಂಗಾಳ ವಿಭಜನೆ ರದ್ದತಿ, ದೆಹಲಿಯಲ್ಲಿ ನೂತನ ರಾಜಧಾನಿಯ ಶಂಕುಸ್ಥಾಪನೆ, ಆಡಳಿತದ ರಾಜಧಾನಿ ಕಲ್ಕತ್ತದಿಂದ ದೆಹಲಿಗೆ ವರ್ಗಾವಣೆ ಮುಂತಾದ ಕೆಲಸಗಳನ್ನು ಜಾರಿಗೊಳಿಸಿದ. ಅವುಗಳ ಹಿಂದಿನ ದುರಾಲೋಚನೆಗಳನ್ನು ಕ್ರಾಂತಿಕಾರಿಗಳು ಅರಿತುಕೊಂಡು ವೈಸ್ರಾಯ್ ಲಾರ್ಡ್ ಹಾರ್ಡಿಂಜನ ದೆಹಲಿ ಪುರಪ್ರವೇಶ ದಿನವನ್ನು ಪ್ರತಿಭಟನೆಯ ಮುಹೂರ್ತವನ್ನಾಗಿ ಆಯ್ಕೆ ಮಾಡಿಕೊಂಡರು.

ಆ ದಿನಕ್ಕಾಗಿ ತಯಾರಿ: 1912ರ ಅ.13ರಂದು ಲಾಹೋರ್​ಗೆ ಆಗಮಿಸಿದ ರಾಸ್​ಬಿಹಾರಿ ಬೋಸ್ ಅಗರ್​ವಾಲ್ ಆಶ್ರಮದಲ್ಲಿ ಸಭೆ ನಡೆಸಿ ಭಾಯಿ ಬಾಲ್​ವುುಕುಂದ್, ಅವಧ್​ಬಿಹಾರಿ, ದೀನಾನಾಥರಿಗೆ ತನ್ನ ಯೋಜನೆಯನ್ನು ವಿವರಿಸಿದ. ಅಲ್ಲಿಂದ ದೆಹಲಿಗೆ ಹೋಗಿ ಮಾಸ್ಟರ್ ಅಮೀರ್​ಚಂದ್, ಲಾಲಾ ಹನುಮಂತ್ ಸಹಾಯರಿಗೆ ಯೋಜನೆಯನ್ನು ಹೇಳಿ ಕಲ್ಕತ್ತೆಗೆ ಹಿಂದಿರುಗಿದ. ಕಲ್ಕತ್ತೆಯ ಕ್ರಾಂತಿಕಾರಿ ಕೇಂದ್ರವಾದ ‘ಶ್ರಮಜೀವಿ ಸಮಬಾಯ’ದಲ್ಲಿ ಬಾಘಾ ಜತೀನ್, ಶ್ರಮಜೀವಿ ಸಮಬಾಯದ ಸಂಸ್ಥಾಪಕ ಅಮರೇಂದ್ರನಾಥ ಚಟರ್ಜಿ ರಾಸ್​ಬಿಹಾರಿಯ ಬರುವಿಗಾಗಿ ಕಾದಿದ್ದರು. ಅವರು ಮೂವರ ರಹಸ್ಯ ಸಭೆಯಲ್ಲಿ ಲಾಹೋರ್ ಮತ್ತು ದೆಹಲಿಗಳಲ್ಲಿ ತಾನು ನಡೆಸಿಬಂದ ಪೂರ್ವಭಾವಿ ಸಿದ್ಧತೆಗಳ ವರದಿ ನೀಡಿ ಮುಂದಿನ ಕೆಲಸಗಳನ್ನು ಕುರಿತು ರಾಸ್​ಬಿಹಾರಿ ರ್ಚಚಿಸಿದ.

ಆಗ ತನಗೊಬ್ಬ ಕಿಶೋರ ಕ್ರಾಂತಿಕಾರಿ ಬೇಕಾಗಿದ್ದಾನೆಂದೂ ಅವನು ಸುಂದರಿಯಾದ ಹುಡುಗಿಯಂತೆ ಕೋಮಲವಾಗಿರಬೇಕೆಂದೂ, ಚುರುಕು ಬುದ್ಧಿಯ ಚಟುವಟಿಕೆಯವನಾಗಿರಬೇಕೆಂದೂ ವರ್ಣಿಸಿದ. ಆಗ ಅಮರೇಂದ್ರ ಚಟರ್ಜಿ ತನ್ನ ಬಳಿ ಅಂಥ ಹುಡುಗ ಇದ್ದಾನೆಂದು ಉತ್ತರಿಸಿ, ಶ್ರಮಜೀವಿ ಸಮಬಾಯದ ಅಡುಗೆ ಮನೆಯಿಂದ ಒಬ್ಬ ಕಿಶೋರನನ್ನು ಕರೆತಂದು ಹಾಜರುಪಡಿಸಿದ. ಅವನೇ ತಾನು ಅರಸುತ್ತಿದ್ದ ಹುಡುಗನೆಂದು ರಾಸ್​ಬಿಹಾರಿಗೆ ಭಾಸವಾಗಿ ಖುಷಿಯಾಯಿತು.

ಆ ಹುಡುಗನೇ ಬಸಂತ್ ಕುಮಾರ್ ಬಿಶ್ವಾಸ್! ಈ ಬಸಂತ ಕುಮಾರ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಪೊರಾಗಾಚ್ಚಾ ಎಂಬಲ್ಲಿ ಹುಟ್ಟಿದವನು. ಅವನ ಮನೆತನವೂ ಸ್ವಾತಂತ್ರ್ಯಯೋಧರದೇ. ತಂದೆ ಮತಿಲಾಲ್ ಬಿಶ್ವಾಸ್. ತಾಯಿ ಕುಂಜು ಬಾಲಾ. ಅವನ ಅಣ್ಣ ದಿಗಂಬರ್ ಬಿಶ್ವಾಸ್ 1856ರಲ್ಲಿ ನಡೆದ ‘ನೀಲಿ ವಿದ್ರೋಹ’ ಹೋರಾಟದಲ್ಲಿ ಭಾಗವಹಿಸಿದ್ದ. ಬಸಂತ ಕುಮಾರ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಗಗನಚಂದ್ರ ಬಿಶ್ವಾಸನ ಶಾಲೆಯಲ್ಲಿ ಮುಗಿಸಿದ. 1906ರಲ್ಲಿ ಮುರಗಾಚ್ಚಾ ಶಾಲೆಯಲ್ಲಿ ಕಲಿಯುವಾಗ ಕ್ಷಿರೋಧ್​ಚಂದ್ರ ಗಂಗೂಲಿ ಎಂಬ ಮುಖ್ಯೋಪಾಧ್ಯಾಯನ ಪ್ರಭಾವಕ್ಕೆ ಒಳಗಾದ. ಅವರು ದೇಶಪ್ರೇಮವನ್ನು, ಸ್ವಾತಂತ್ರ್ಯದ ಬೆಲೆಯನ್ನು ಬೋಧಿಸಿ ಅವನಲ್ಲಿ ಸ್ವಾತಂತ್ರ್ಯ ಹೋರಾಟದ ಅಂಕುರ ಮಾಡಿಸಿದರು. ಆಗಲೇ ಯುಗಾಂತರದ ಅಮರೇಂದ್ರನಾಥ ಚಟರ್ಜಿಯ ಪರಿಚಯವಾಗಿ ಕ್ರಾಂತಿಕಾರಿ ದೀಕ್ಷೆ ಪಡೆದ. ಅವನ ಕೆಲಸ ಶ್ರಮಜೀವಿ ಸಮುಬಾಯದಲ್ಲಿ ಅಡುಗೆ ಮಾಡುವುದೆಂದು ಆರಂಭದಲ್ಲಿ ಅಮರೇಂದ್ರ ನಿಯೋಜಿಸಿದ.

ಅವನು ಅಡುಗೆ ಕೆಲಸ ಮಾಡುತ್ತಿದ್ದಾಗಲೇ ರಾಸ್​ಬಿಹಾರಿ ಅವನನ್ನು ಜತೆಯಲ್ಲಿ ಕರೆದುಕೊಂಡು ಹೋಗಿದ್ದು. ಅವರಿಬ್ಬರು ಫ್ರೆಂಚ್ ವಸಾಹತಾಗಿದ್ದ ಚಂದನ್​ನಗರಕ್ಕೆ ತೆರಳಿ ಅಲ್ಲಿನ ‘ಟಾಗೋರ್ ವಿಲ್ಲಾ’ ಎಂಬ ತೋಟದ ಮನೆಯಲ್ಲಿ ತಂಗಿದರು. ಮೋತಿಲಾಲ್ ರಾಯ್ ಮತ್ತು ಚಂದನ್ ನಗರದ ಇತರ ಕ್ರಾಂತಿಕಾರಿಗಳನ್ನು ಕರೆಸಿದ ರಾಸ್​ಬಿಹಾರಿ ಅವರಿಗೆ ತನ್ನ ಯೋಜನೆಯ ಮುಂದಿನ ಮುಖ್ಯ ಪಾತ್ರಧಾರಿಯಾದ ಬಸಂತ ಕುಮಾರನನ್ನು ಪರಿಚಯಿಸಿದ. ಎಲ್ಲರಿಗೂ ಅವನು ಒಪ್ಪಿಗೆಯಾದ. ಮೋತಿಲಾಲ್ ರಾಯ್ ಹಾಗೂ ಇತರರಿಗೆ ಬಾಂಬುಗಳನ್ನು ಸಿದ್ಧಪಡಿಸಲು ತಿಳಿಸಿ ಡೆಹ್ರಾಡೂನ್​ಗೆ ಹೋದ. ಡೆಹ್ರಾಡೂನ್​ನಲ್ಲಿ ರಾಸ್​ಬಿಹಾರಿ ಕೆಲಸ ಮಾಡುತ್ತಿದ್ದ ಫಾರೆಸ್ಟ್ ರೀಸರ್ಚ್ ಇನ್​ಸ್ಟಿಟ್ಯೂಟ್​ನಲ್ಲಿ ಬಸಂತ ಕುಮಾರನನ್ನು ತನ್ನ ಪರಿಚಾರಕ ಅಡುಗೆ ಭಟ್ಟನೆಂದು ಪರಿಚಯಿಸಿ ಜೊತೆಯಲ್ಲಿರಿಸಿಕೊಂಡ.

ಕ್ರಾಂತಿಕಾರಿಗಳ ಸಿದ್ಧತೆ: ಕೆಲ ದಿನಗಳಲ್ಲೇ ಚಂದನ್ ನಗರದಲ್ಲಿ ಸಿದ್ಧವಾದ ಬಾಂಬ್​ಗಳು ಡೆಹ್ರಾಡೂನ್ ತಲಪಿದವು. ಅವನ್ನು ಒಂದು ಮರದ ಪೆಟ್ಟಿಗೆಯಲ್ಲಿ ಸುರಕ್ಷಿತವಾಗಿ ಜೋಡಿಸಿಟ್ಟು ಪೆಟ್ಟಿಗೆಯ ಮೇಲೆ ‘ಔಷಧ ಶೀಶೆ’ಗಳು ಎಂದು ದೊಡ್ಡಕ್ಷರದಲ್ಲಿ ಬರೆದು ಬಸಂತ್ ಕುಮಾರ್​ಗೆ ಅವನ್ನು ಲಾಹೋರ್​ಗೆ ಕೊಂಡೊಯ್ಯುವಂತೆ ರಾಸ್​ಬಿಹಾರಿ ತಿಳಿಸಿದ. ಜತೆಗೆ ಲಾಹೋರ್​ನಲ್ಲಿದ್ದ ಬಾಲ್​ವುುಕುಂದ್​ಗೆ ಬಸಂತನಿಗೆ ವಸತಿ ಹಾಗೂ ತಾತ್ಕಾಲಿಕ ಕೆಲಸ ಕೊಡಿಸಲು ಸೂಚನೆ ಕಳಿಸಿದ. ಅಂತೆಯೇ ಬಾಲ್​ವುುಕುಂದ್ ಬಸಂತನನ್ನು ರೈಲು ನಿಲ್ದಾಣದಲ್ಲಿ ಸ್ವಾಗತಿಸಿ ನೇರ ತನ್ನ ಗೆಳೆಯ ವೈದ್ಯನೊಬ್ಬನ ದವಾಖಾನೆಗೆ ಕರೆದೊಯ್ದು ಅಲ್ಲಿಯೇ ‘ಔಷಧ ಶೀಷೆ’ಗಳ ಪೆಟ್ಟಿಗೆಯನ್ನು ಒಂದು ಕಡೆ ಇರಿಸಿದ. ಬಸಂತ ಅಲ್ಲಿ ಕಾಂಪೌಂಡರ್ ಆದ.

ಹೀಗೆಯೇ ಒಂದು ತಿಂಗಳು ಉರುಳಿತು. ಡಿಸೆಂಬರ್ 1ರಂದು ಆ ‘ಔಷಧ ಶೀಷೆ’ಗಳ ಸಮೇತ ಬಸಂತನನ್ನು ದೆಹಲಿಗೆ ರವಾನಿಸಲಾಯಿತು. ಅಲ್ಲಿ ಅವನಿಗೆ ಚಾಂದಿನಿ ಚೌಕ್​ದಲ್ಲಿದ್ದ ಅಮೀರ್​ಚಂದ್ ಮನೆಯಲ್ಲಿ ತಂಗಲು ವ್ಯವಸ್ಥೆ ಮಾಡಲಾಯಿತು.

1912ರ ಡಿ.23! ವೈಸ್ರಾಯ್ ದೆಹಲಿ ಪುರಪ್ರವೇಶದ ವಿಜೃಂಭಣೆಯ ದಿನ. ಇಡೀ ಚಾಂದನಿ ಚೌಕ್ ತಳಿರು ತೋರಣಗಳಿಂದ, ವಿಶೇಷ ಅಲಂಕಾರಗಳಿಂದ ಕಣ್ಕೋರೈಸುತ್ತಿತ್ತು. ಆದರೆ ವೈಸ್ರಾಯ್ ಹಾರ್ಡಿಂಜನಿಗೆ ಸಮಾಧಾನವಿರಲಿಲ್ಲ. ಏನೋ ಅವ್ಯಕ್ತ ಭಯ, ಆತಂಕ. ವೈಸ್ರಾಯ್ ದಂಪತಿ ದೆಹಲಿ ರೈಲು ನಿಲ್ದಾಣ ತಲಪಿದಾಗಿನಿಂದಲೂ ಅಪಾರ ಸೈನಿಕರ ರಕ್ಷಣಾ ವ್ಯೂಹದ ನಡುವೆ ಭವ್ಯ ಮೆರವಣಿಗೆ ಆರಂಭಗೊಂಡಿತು.

ಡಿ.23ರ ಬೆಳಗ್ಗೆ 10 ಗಂಟೆ. ಅಮೀರ್​ಚಂದ್ ಮನೆಗೆ ರಾಸ್​ಬಿಹಾರಿ ಹಾಗೂ ಅವನ ಸಹಕಾರಿ ಅವಧ್ ಬಿಹಾರಿ ಹಠಾತ್ತನೆ ಪ್ರವೇಶಿಸಿದರು. ರಾಸ್​ಬಿಹಾರಿ ‘ಹೆಣ್ಣನ್ನು ಶೃಂಗರಿಸಿಯಾಯಿತೇ?’ ‘ಆಭರಣಗಳ ಪೆಟ್ಟಿಗೆ ಎಲ್ಲಿ?’ ಎಂದ. ಒಂದು ಮರದ ಪೆಟ್ಟಿಗೆ ತಂದು ಮುಚ್ಚಳ ತೆಗೆದಾಗ ಅದರಲ್ಲಿ ಜೋಪಾನವಾಗಿ ಜೋಡಿಸಿಟ್ಟ ಬಾಂಬುಗಳು ಕಂಡವು. ಶೃಂಗರಿಸಲಾದ ‘ಹೆಣ್ಣು’ ಬಂದಳು. ಅವಳನ್ನು ಆಪಾದಮಸ್ತಕ ನೋಡಿದ ರಾಸ್​ಬಿಹಾರಿ ಮುಗುಳ್ನಗುತ್ತ ‘ವೆರಿ ಗುಡ್’ ಎಂದು ಮೆಚ್ಚುಗೆ ಸೂಚಿಸಿದ. ‘ಅವಳ’ ಕೈಯಲ್ಲಿ ಒಂದು ಕೈಚೀಲ. ಅದರಲ್ಲಿ ‘ಆಭರಣ’ಗಳನ್ನು ಜೋಡಿಸಲಾಯಿತು. ಇಬ್ಬರೂ ಕುದುರೆ ಟಾಂಗಾ ಏರಿ ಅಲ್ಲಿಂದ ಹೊರಟರು.

ಚಾಂದನಿ ಚೌಕದಲ್ಲಿ ವೈಸ್ರಾಯ್ ಮೆರವಣಿಗೆ ಹಾದು ಹೋಗಬೇಕಾಗಿದ್ದ ಮನೆಯ ಮುಂದೆ ಟಾಂಗಾ ನಿಂತಿತು. ಆ ‘ಹೆಣ್ಣು’ ಒಂದು ಮನೆಯ ಉಪ್ಪರಿಗೆಯ ಮೇಲೆ ಮೆರವಣಿಗೆ ನೋಡಲು ಕಾದು ನಿಂತಿದ್ದ ಮಹಿಳಾಮಣಿಗಳ ಜತೆ ಸೇರಿಕೊಂಡಳು. ಕಚ್ಚೆ ಪಂಚೆ, ಕೋಟು ಧರಿಸಿದ್ದ ರಾಸ್​ಬಿಹಾರಿ ಕೆಳಗೆ ರಸ್ತೆಯಲ್ಲಿ ಜನರ ಗುಂಪಿನಲ್ಲಿ ಬೆರೆತು ನಿಂತ. ವೈಸ್ರಾಯ್ ಮೆರವಣಿಗೆ ಸಮಯಕ್ಕೆ ಸರಿಯಾಗಿ ಆ ಉಪ್ಪರಿಗೆ ಮನೆಯ ಸಮೀಪಕ್ಕೆ ಬಂತು. ಕ್ಷಣಾರ್ಧದಲ್ಲಿ ಉಪ್ಪರಿಗೆಯಲ್ಲಿದ್ದ ಮಹಿಳಾಮಣಿಗಳ ನಡುವಿನಿಂದ ಹಾರಿ ಬಂದ ಒಂದು ಬಾಂಬು ನೇರ ವೈಸ್ರಾಯ್ ಕುಳಿತಿದ್ದ ಅಂಬಾರಿಗೆ ಬಡಿಯಿತು! ಭಾರಿ ಆಸ್ಪೋಟ ಆಯಿತು! ವೈಸ್ರಾಯ್ಗೆ ಬಾಂಬ್ ಸ್ಪೋಟದಿಂದ ಗಾಯಗಳಾದರೂ ಬದುಕಿಕೊಂಡ. ಅವನ ಎ.ಡಿ.ಸಿ ಆನೆಯಿಂದ ನೆಲಕ್ಕೆ ಬಿದ್ದು ಅಸುನೀಗಿದ.

‘ಹೆಣ್ಣಿ’ನ ವೇಷದಲ್ಲಿದ್ದ ಬಸಂತ ಹಾಗೂ ರಾಸ್​ಬಿಹಾರಿ ಅಲ್ಲಿಂದ ಓಡಿ ಹೋದರು. ಬಸಂತ ದೆಹಲಿಯಿಂದ ಕಲ್ಕತ್ತೆಗೆ ಹೋಗಿ ಅಲ್ಲಿಂದ ಮಂಗಮಾಯವಾದ. ರಾಸ್​ಬಿಹಾರಿ ಜಪಾನ್​ಗೆ ತೆರಳಿದ. ದೀನಾನಾಥನೆಂಬ ಕ್ರಾಂತಿಕಾರಿ ಅಪೂ›ವರ್ ಆದುದರಿಂದ ಈ ಕೃತ್ಯದ ರೂವಾರಿ ರಾಸ್​ಬಿಹಾರಿ ಬೋಸ್ ಎಂಬುದು ಪೊಲೀಸರಿಗೆ ಖಚಿತವಾಯಿತು. ಬಾಲ್​ವುುಕುಂದ್, ಅಮೀರ್​ಚಂದ್, ಅವಧ್ ಬಿಹಾರಿ ಅವರನ್ನು ರಾಸ್​ಬಿಹಾರಿಯ ಸಹಾಯಕರೆಂದು ಬಂಧಿಸಲಾಯಿತು.

ಬಸಂತನ ಮೇಲೆ ಬಂಧನದ ವಾರಂಟ್ ಹೊರಡಿಸಿ ದೊಡ್ಡಮೊತ್ತದ ಬಹುಮಾನ ಘೊಷಿಸಲಾಯಿತು. ಆದರೆ 1914ರ ಫೆಬ್ರವರಿವರೆಗೆ ಅವನ ಸುಳಿವು ಸಿಗಲಿಲ್ಲ. ಅವನು ತನ್ನ ಹುಟ್ಟೂರು ಪೊರಾಗಚ್ಚಾದಲ್ಲಿ ಅಡಗಿಕೊಂಡಿದ್ದ. ಅಲ್ಲಿಗೆ ಹೋದ ಪೊಲೀಸರು 1914ರ ಫೆ.26ರಂದು ಅವನನ್ನು ಬಂಧಿಸಿ ದೆಹಲಿಗೆ ಕರೆದೊಯ್ದು ಅವನ ಮೇಲೆ ಲಾಹೋರ್-ದೆಹಲಿ ಪಿತೂರಿ ಮೊಕದ್ದಮೆಯಲ್ಲಿ ಭಾಗಿ ಎಂದು ಮೊಕದ್ದಮೆ ಹೂಡಿದರು. 1914ರ ಮೇ 23ರಂದು ಆರಂಭಗೊಂಡ ಮೊಕದ್ದಮೆ 1914ರ ಅ.5ರಂದು ಮುಕ್ತಾಯಗೊಂಡಿತು. ಬಸಂತನಿಗೆ ಕಿರಿಯ ವಯಸ್ಸಿನವನೆಂದು ಜೀವಾವಧಿ ತೀರ್ಪಾಯಿತು.

ಆದರೆ ಪಂಜಾಬಿನ ಗವರ್ನರ್ ಮೈಕೆಲ್ ಓಡ್ವೈಯರ್​ಗೆ ತೃಪ್ತಿಯಾಗಲಿಲ್ಲ. ಗವರ್ನರ್​ನನ್ನು ಸಂತುಷ್ಟಪಡಿಸಲು ಬಸಂತ್ ಕುಮಾರ್ ಕೇವಲ 17 ವರ್ಷದವನಾಗಿದ್ದರೂ ಸರ್ಟಿಫಿಕೇಟುಗಳನ್ನು ತಿದ್ದಿ, 20 ವಯಸ್ಸಿನವನೆಂದು ಪೊಲೀಸರು ಸುಳ್ಳುದಾಖಲೆ ಸೃಷ್ಟಿಸಿದರು. ಅದರ ಆಧಾರದ ಮೇಲೆ ಬಿಶ್ವಾಸ್​ಗೆ ಗಲ್ಲುಶಿಕ್ಷೆ ಘೊಷಿಸಲಾಯಿತು. 1915ರ ಮೇ 11ರಂದು ಪಂಜಾಬಿನ ಅಂಬಾಲಾ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು. ಇದರಿಂದ, ಸುಳ್ಳುದಾಖಲೆ ಸೃಷ್ಟಿಸಿದ ಪೊಲೀಸರು ತೃಪ್ತಿಪಟ್ಟುಕೊಂಡರೂ ಪತ್ರಿಕೆಗಳು ಈ ಗಲ್ಲು ಶಿಕ್ಷೆ ‘ಸತ್ಯಕ್ಕೆ ಬಗೆದ ದ್ರೋಹ’ ಎಂದು ಬರೆದವು.

(ಈ ಘಟನೆಗಳ ಹೆಚ್ಚಿನ ವಿವರಗಳಿಗಾಗಿ ಓದಿರಿ ಇದೇ ಅಂಕಣಕಾರರ ರುಧಿರಾಭಿಷೇಕ ಮಹಾ ಕಾದಂಬರಿ.)

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top