ವಿದೇಶಿ ನೆಲೆಯಿಂದ ಹಂಗಾಮಿ ಸರ್ಕಾರ ರಚಿಸಿದ ಮುತ್ಸದ್ದಿ

ಸುಭಾಷ್ ಚಂದ್ರ ಬೋಸ್ ಎರಡನೆಯ ಮಹಾಯುದ್ಧದ ವೇಳೆ ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ ರಚಿಸುವ ಸಮಯದಲ್ಲಿ ಮಹೇಂದ್ರ ಪ್ರತಾಪರ ಅಫ್ಘಾನಿಸ್ತಾನದ ಹಂಗಾಮಿ ಸರ್ಕಾರದ ಉದಾಹರಣೆ ಕಣ್ಣಮುಂದಿತ್ತು. ಹೀಗೆ ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ವಿದೇಶಗಳಲ್ಲಿ ಕಾರ್ಯಗತರಾದ ಹಲವಾರು ಧೀರರ ಪೈಕಿ ಅಗ್ರಗಾಮಿ ಮಹೇಂದ್ರ ಪ್ರತಾಪ್.

ಉತ್ತರ ಪ್ರದೇಶದ ಅಲಿಗಢ್ ಮುಸ್ಲಿಂ ಯೂನಿವರ್ಸಿಟಿಯಲ್ಲಿ 2014ರಲ್ಲಿ ಒಂದು ಘರ್ಷಣೆ ನಡೆಯಿತು. ಅದು ರಾಜಾ ಮಹೇಂದ್ರ ಪ್ರತಾಪ್ ಎಂಬ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರನ 128ನೆಯ ಜನ್ಮೋತ್ಸವ ವರ್ಷವಾಗಿತ್ತು. ಕೆಲ ರಾಷ್ಟ್ರವಾದಿ ನಾಯಕರು ಹಾಗೂ ಮಹೇಂದ್ರ ಪ್ರತಾಪರ ಜಾಟ್ ಜಾತಿಯ ಮುಖಂಡರು ಸದರಿ ಜನ್ಮದಿನವನ್ನು ಅಲಿಗಢ್ ಮುಸ್ಲಿಂ ವಿವಿಯಲ್ಲಿ ಅದ್ದೂರಿಯಾಗಿ ಆಚರಿಸಬೇಕೆಂದು ಆಗಿನ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಜಮೀರುದ್ದೀನ್ ಷಾ ಅವರನ್ನು ಸಂರ್ಪಸಿದಾಗ ಅವರು ಸಾರಾಸಗಟಾಗಿ ಈ ಬೇಡಿಕೆಯನ್ನು ತಳ್ಳಿಹಾಕಿದರು.

ಮಹೇಂದ್ರ ಪ್ರತಾಪರು ಆ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿದ್ದು ಅದಕ್ಕೆ ಸುಮಾರು 3 ಎಕರೆ ಭೂಮಿಯನ್ನು ದಾನವಾಗಿ ಕೊಟ್ಟಿದ್ದರು. ಯೂನಿವರ್ಸಿಟಿಯ ಪುರೋಭಿವೃದ್ಧಿಗಾಗಿ ಮನಸಾರೆ ಶ್ರಮಿಸಿದ್ದರು. ಈ ಕಾರಣಕ್ಕಾಗಿ ಅವರ ಜನ್ಮದಿನ ಆಚರಿಸಬೇಕೆಂಬುದು ಇವರ ವಾದವಾಗಿತ್ತು.

ಫೋಟೋ ಹಾಕಲು ತಿರಸ್ಕರಿಸಿದ ವಿ.ವಿ.: 2018ರ ಮೇ ತಿಂಗಳಲ್ಲಿ ಮಹೇಂದ್ರ ಪ್ರತಾಪರ ಮೊಮ್ಮಗ ಗರುನ್​ಧ್ವಜ್ ಸಿಂಗ್ ಯೂನಿವರ್ಸಿಟಿಯಲ್ಲಿ ಮಹಮದಾಲಿ ಜಿನ್ನಾ ಚಿತ್ರದ ಬದಲು ಮಹಾನ್ ದೇಶಭಕ್ತ, ವಿಶ್ವಪ್ರೇಮಿ ತನ್ನ ತಾತನ ಭಾವಚಿತ್ರ ಹಾಕಬೇಕೆಂದೂ, ವಿ.ವಿ.ಯ ಹೆಸರು ಬದಲಾಯಿಸಿ ಅದರ ಪುರೋಭಿವೃದ್ಧಿಗಾಗಿ ಅಪಾರ ಶ್ರಮ ವಹಿಸಿದ್ದ ತನ್ನ ತಾತನ ಹೆಸರಿಡಬೇಕೆಂದೂ ಚಳವಳಿಯನ್ನೇ ನಡೆಸಿದ. ಭಾರತದ ವಿಭಜನೆಯ ಸೂತ್ರಧಾರಿ, ಪಾಕಿಸ್ತಾನದ ನಿರ್ವಪಕ ಮಹಮದಾಲಿ ಜಿನ್ನಾರ ಭಾವಚಿತ್ರವನ್ನು ವಿ.ವಿ.ಯಲ್ಲಿ ತೂಗುಹಾಕಿರುವುದು ಸೂಕ್ತವಲ್ಲವೆಂದೂ, ಅವರಿಗೂ ಅಲಿಗಢ್ ಮುಸ್ಲಿಂ ಯೂನಿವರ್ಸಿಟಿಗೂ ಯಾವುದೇ ಸಂಬಂಧವಿಲ್ಲವೆಂದೂ ಆತ ಪಟ್ಟುಹಿಡಿದ. ವಿ.ವಿ.ಯ ಪಟ್ಟಭದ್ರರು ಈ ಸಲಹೆಯನ್ನೂ ತಿರಸ್ಕರಿಸಿದರು. ಈ ರೀತಿ ಮಾಡುವುದು ರಾಷ್ಟ್ರೀಯ ಕರ್ತವ್ಯ ಹಾಗೂ ಕೋಮು ಸೌಹಾರ್ದವನ್ನು ಉತ್ತೇಜಿಸಲು ಸುವರ್ಣಾವಕಾಶವೆಂದು ರಾಷ್ಟ್ರವಾದಿಗಳು, ಉತ್ತರ ಪ್ರದೇಶದ ಜಾಟ್ ಮುಖಂಡರು ಎಷ್ಟೇ ತಿಳಿಹೇಳಿದರೂ ‘ಬುದ್ಧಿಜೀವಿ’ಗಳೆಂಬ ಏಕಪಕ್ಷೀಯ ಪತ್ರಕರ್ತರು ಈ ಚಳವಳಿಗೆ ಕೋಮುವಾದಿ ಎಂಬ ಬಣ್ಣ ನೀಡಿ, ತಮ್ಮ ಎಂದಿನ ಅಭ್ಯಾಸದಂತೆ ‘ಮಹೇಂದ್ರ ಪ್ರತಾಪ ಮಾರ್ಕ್ಸ್​ವಾದಿಯಾಗಿದ್ದ’ ಎಂದು ಕೆಂಪುಬಣ್ಣ ಹಚ್ಚಲು ಪ್ರಯತ್ನಿಸಿದರು.

ಮಹೇಂದ್ರ ಪ್ರತಾಪ ಮಾರ್ಕ್ಸಿಸ್ಟ್ ಆಗಿದ್ದರೆಂಬುದು ಎಷ್ಟು ಸುಳ್ಳೆಂಬುದನ್ನು ಅವರ ಒಂದು ಹೇಳಿಕೆಯಿಂದಲೇ ರಾಷ್ಟ್ರವಾದಿಗಳು ಅಲ್ಲಗಳೆದರು. ಖುಷ್ವಂತ್ ಸಿಂಗರು ‘ದಿ ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ದ ಸಂಪಾದಕರಾಗಿದ್ದಾಗ ಖುರ್ರಾತುಲೈನ್ ಹೈದರ್ ಎಂಬ ವಾಮಪಂಥೀಯನ ಲೇಖನಮಾಲೆಯನ್ನು ಪ್ರಕಟಿಸುತ್ತಿದ್ದರು. ಗಾಂಧೀಜಿ ಗುಂಪಿಗೆ ಸೇರದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರನ್ನು ಕುರಿತ ಈ ಲೇಖನಮಾಲೆಗೆ ‘ದಿ ಟೆರರಿಸ್ಟ್ ್ಸ’ ಎಂಬ ವಿವಾದಾತ್ಮಕ ಅಂಕಣ ಶೀರ್ಷಿಕೆಯನ್ನೂ ನೀಡಿದ್ದರು. ಖುರ್ರಾತುಲೈನ್ ಹೈದರ್ ಅವರ ಲೇಖನದಲ್ಲಿ ತಮ್ಮನ್ನು ಮಾರ್ಕ್ಸಿಸ್ಟ್ ಎಂದೂ ಕರೆದಿದ್ದಕ್ಕೂ ಮತ್ತು ಲೇಖನದ ಹಲವಾರು ತಪ್ಪು ಮಾಹಿತಿಗಳನ್ನು ತಿದ್ದಲಿಕ್ಕೂ ಆಗ ಜೀವಂತರಿದ್ದ ಮಹೇಂದ್ರ ಪ್ರತಾಪರು 1971ರ ಜುಲೈ 25ರಂದು ಆ ಪತ್ರಿಕೆಗೆ ಒಂದು ತಿದ್ದುಪಡಿ ಪತ್ರವನ್ನು ಬರೆದರು. ಅದರಲ್ಲಿ ಮಾರ್ಕ್ಸ್​ವಾದದ ಬಗೆಗಿನ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದರು- ‘ನಾನು ಈಗಲೂ ರಷ್ಯಾ ಮತ್ತು ಚೀನಾಗಳ ಸ್ನೇಹಿತನೇ. ಆದರೆ ಆ ದೇಶಗಳು ಕಾರ್ಲ್​ವಾರ್ಕ್ಸ್​ನ ವಿಚಾರಗಳಿಂದ ಬಿಡುಗಡೆ ಹೊಂದಬೇಕೆಂಬುದೇ ನನ್ನ ಅಭಿಪ್ರಾಯ….’. ಇದು ಅವರನ್ನು ಮಾರ್ಕ್ಸ್​ವಾದಿ ಎಂದವರ ಬಾಯಿಮುಚ್ಚಿಸಲು ಸಾಕಾಗಿತ್ತು.

ಸ್ವಾತಂತ್ರಾ್ಯನಂತರ ಇಷ್ಟು ವಾದ-ವಿವಾದಗಳಿಗೆ ಕಾರಣರಾದ ಈ ರಾಜಾ ಮಹೇಂದ್ರ ಪ್ರತಾಪ್ ಯಾರು? ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಏನು? ಎಂಬುದನ್ನು ಸಂಕ್ಷಿಪ್ತವಾಗಿ ಇಲ್ಲಿ ನೆನೆಯೋಣ.

ಉತ್ತರ ಪ್ರದೇಶದ ಮಥುರಾ, ವೃಂದಾವನಗಳಿರುವ ಪ್ರದೇಶವನ್ನು ವ್ರಜಭೂಮಿ ಎಂದು ಕರೆಯುವುದು ವಾಡಿಕೆ. ಅಲ್ಲಿ ಹತ್​ರಸ್ ಎಂಬ ಒಂದು ಸಂಸ್ಥಾನ. ಅಲಿಗಢ ಜಿಲ್ಲೆಗೆ ಸೇರಿದ ಹತ್​ರಸ್ ಸಂಸ್ಥಾನದ ದೊರೆ ರಾಜಾ ಹರ್​ನಾರಾಯಣ್ ಸಿಂಗ್​ಗೆ ದತ್ತುಮಗನನ್ನು ಪಡೆಯಬೇಕಾದ ಸನ್ನಿವೇಶ ಏರ್ಪಟ್ಟಾಗ ಅವನ ಗಮನ ಹರಿದಿದ್ದು ಅದೇ ಜಿಲ್ಲೆಯ ಮುರ್ಸಾನ್ ಎಂಬ ಪ್ರದೇಶದ ರಾಜಾ ಬಹದ್ದೂರ್ ಘನಶ್ಯಾಮ್ಂಗ್​ನ, ಖಡಕ್​ಸಿಂಗ್ ಎಂಬ ಮೂರನೆಯ ಮಗುವಿನ ಕಡೆಗೆ. ಅವನನ್ನು 1889ರಲ್ಲಿ ದತ್ತು ತೆಗೆದುಕೊಳ್ಳುತ್ತಾನೆ. ಆ ಮಗು ಹುಟ್ಟಿದ್ದು 1886ರ ಡಿಸೆಂಬರ್ 1ರಂದು. ದತ್ತು ಪಡೆದ ನಂತರ ಆ ಮಗುವಿಗೆ ರಾಜಾ ಮಹೇಂದ್ರ ಪ್ರತಾಪ ಸಿಂಹ ಎಂದು ನಾಮಕರಣ ಮಾಡಲಾಗುತ್ತದೆ. ಮಹೇಂದ್ರನಿಗೆ 1902ರಲ್ಲಿ ವಿವಾಹವಾಗುತ್ತದೆ. ಇಬ್ಬರು ಮಕ್ಕಳೂ ಜನಿಸುತ್ತಾರೆ. ಹತ್​ರಸ್ ಸಂಸ್ಥಾನದ ಅರಮನೆಯ ರಾಜಕೀಯದ ಕಾರಣ ಅವನಿಗೆ ಪ್ರಾಣಾಪಾಯವಿದ್ದುದರಿಂದ ಕೆಲಕಾಲ ಮುರ್ಸಾನ್​ನಲ್ಲೂ ಕೆಲಕಾಲ ಹತ್​ರಸ್​ನಲ್ಲೂ ಆತ ಕಾಲ ಕಳೆಯಬೇಕಾಗುತ್ತದೆ. ಹತ್​ರಸ್ ಹಿಂದೂ ಸಂಸ್ಥಾನ. ಆ ಮನೆತನ ಮಥುರಾ-ವೃಂದಾವನಗಳ ಶ್ರೀಕೃಷ್ಣನ ಅವಿಚ್ಛಿನ್ನ ಭಕ್ತ ಪರಂಪರೆಗೆ ಸೇರಿದ್ದಾದುದರಿಂದ ಮಹೇಂದ್ರನಿಗೆ ವ್ರಜಭೂಮಿ ಎಂದರೆ ಪ್ರಾಣ. ಅದರ ಅಭಿವೃದ್ಧಿ ತನ್ನ ಜವಾಬ್ದಾರಿ ಎಂದು ತಿಳಿದು ಅಲ್ಲಿ ಶಿಕ್ಷಣ, ಸಾಮಾಜಿಕ ಕ್ಷೇತ್ರ ಮುಂತಾದವುಗಳ ಅಭಿವೃದ್ಧಿಗೆ ಅಪೂರ್ವ ಕೊಡುಗೆ ನೀಡಿದ ಮಹೇಂದ್ರ, ಪ್ರೇಮ್ ಮಹಾವಿದ್ಯಾಲಯ ಎಂಬ ಶಿಕ್ಷಣ ಸಂಸ್ಥೆಯನ್ನು ಮಗನ ಹೆಸರಿನಲ್ಲಿ 1909ರಲ್ಲಿ ಹುಟ್ಟುಹಾಕಿದ.

ಸ್ವದೇಶಿ ಚಳವಳಿಯಿಂದ ಪ್ರೇರಣೆ: ಸರ್ ಸೈಯದ್ ಅಹಮದ್​ಖಾನ್ 1875ರಲ್ಲಿ ಶುರುಮಾಡಿದ್ದ ಮಹಮಡನ್ ಆಂಗ್ಲೊ ಓರಿಯಂಟಲ್ ಕಾಲೇಜಿನ ವಿದ್ಯಾರ್ಥಿಯಾಗಿ ಸೇರಿಕೊಂಡು ಮಹೇಂದ್ರ ಅಹಮದ್​ಖಾನ್​ಗೂ ಪ್ರೀತಿಪಾತ್ರನಾಗಿ ವಿದ್ಯಾರ್ಥಿ ಜೀವನವನ್ನು ಸಾಕಷ್ಟು ವೈಭವದಿಂದಲೇ ಕಳೆದ. ಅಹಮದ್ ಖಾನ್ ಹೇಳಿಕೇಳಿ ಮಹಾನ್ ಕೋಮುವಾದಿಯಾಗಿದ್ದರೂ ಮಹೇಂದ್ರ ಪ್ರತಾಪನಿಂದ ಕಾಲೇಜಿಗೆ ನೀಡಲಾದ ಕೊಡುಗೆಗಳ ಕಾರಣವೋ ಏನೋ ಅವನ ಜತೆ ಉತ್ತಮವಾಗಿ ವ್ಯವಹರಿಸುತ್ತಿದ್ದ. 1920ರಲ್ಲಿ ಇದೇ ವಿಶ್ವವಿದ್ಯಾಲಯ ಅಲಿಗಢ ಮುಸ್ಲಿಂ ಯೂನಿವರ್ಸಿಟಿ ಆಯಿತು.

ಸ್ವಾಭಿಮಾನಿಯಾಗಿದ್ದ ಮಹೇಂದ್ರ ಪ್ರತಾಪನಿಗೆ ಬ್ರಿಟಿಷ್ ರಾಜರ ಧೂರ್ತತನ, ಮೋಸಗಾರಿಕೆ ಹಾಗೂ ಹಿಂಸಾ ಮನೋಭಾವಗಳು ಅಸಹ್ಯವೆನಿಸಿ ಆಗ ಕ್ರಿಯಾಶೀಲವಾಗಿದ್ದ ಕಾಂಗ್ರೆಸ್​ನ ಚಟುವಟಿಕೆಗಳಲ್ಲಿ ಭಾಗವಹಿಸತೊಡಗಿದ. ಲೋಕಮಾನ್ಯ ತಿಲಕ್, ಬಿಪಿನ್​ಚಂದ್ರಪಾಲ್, ಬರೋಡಾದ ಮಹಾರಾಜಾ ಗಾಯಕ್​ವಾಡ್, ದಾದಾಭಾಯ್ ನವರೋಜಿ ಮುಂತಾದ ಶ್ರೇಷ್ಠ ನಾಯಕರ ಭಾಷಣಗಳಿಂದ ಪ್ರೇರಿತನಾಗಿ 1906 ಮತ್ತು 1910ರ ಕಾಂಗ್ರೆಸ್ ಅಧಿವೇಶನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ. ಆರ್ಥಿಕವಾಗಿಯೂ ಕೊಡುಗೆ ನೀಡಿದ. 28ರ ಹರೆಯದ ವೇಳೆಗೆ ಆತನಲ್ಲಿ ಸ್ವಾತಂತ್ರ್ಯ ಹೋರಾಟ ಕುರಿತಾದ ಭಾವನೆಗಳು ತೀವ್ರಗೊಂಡವು. ಆ ನಿಟ್ಟಿನಲ್ಲಿ ಏನಾದರೂ ಸಾಧಿಸಬೇಕೆಂಬ ಆಂತರಿಕ ತುಮುಲ ಹೆಚ್ಚಾಯಿತು. 1906ರ ವಂಗ ಭಂಗ ಹಾಗೂ ಸ್ವದೇಶಿ ಚಳವಳಿಯಿಂದಾಗಿ ಆತನಲ್ಲಿ ಸ್ವದೇಶಿ ಭಾವನೆಗಳು ಬಲಗೊಂಡವು. ವಿದೇಶಗಳ ಬೆಂಬಲವನ್ನು ಪಡೆದು ಅಲ್ಲಿಂದಲೇ ಸ್ವಾತಂತ್ರ್ಯ ಹೋರಾಟ ಮುಂದುವರಿಸುವ ಯೋಜನೆಯನ್ನೂ ಹಾಕಿಕೊಂಡ. 1914ರ ಡಿಸೆಂಬರ್ 20ರಂದು ವಿದೇಶಕ್ಕೆ ತೆರಳಿದ. ಸ್ವಾಮಿ ವಿವೇಕಾನಂದರ ತಮ್ಮ ಭೂಪೇಂದ್ರನಾಥದತ್ತ, ಸರೋಜಿನಿ ನಾಯ್ಡು ಸೋದರ ವೀರೇಂದ್ರನಾಥ ಚಟ್ಟೋಪಾಧ್ಯಾಯ, ತಾರಕ್​ನಾಥ್ ದಾಸ್ ಮುಂತಾದವರಿದ್ದ ಜರ್ಮನಿ ಕೇಂದ್ರವಾಗಿದ್ದ ಬರ್ಲಿನ್ ಕಮಿಟಿಯಲ್ಲೂ ಆತ ಪ್ರವೇಶಿಸಿದ.

ಹಂಗಾಮಿ ಸರ್ಕಾರದ ಅಧ್ಯಕ್ಷ: ಭಾರತದ ಬದಿಯಲ್ಲಿದ್ದ ಅಫ್ಘಾನಿಸ್ತಾನದಿಂದ ಹೋರಾಟ ನಡೆಸುವುದು ಸೂಕ್ತವೆಂದು ಮಹೇಂದ್ರ ಪ್ರತಾಪ್ ಹಾಗೂ ಅವನು ಕಟ್ಟಿಕೊಂಡಿದ್ದ ಗೆಳೆಯರ ಬಳಗ ನಿರ್ಧರಿಸಿ ಕಾಬೂಲನ್ನು ಕೇಂದ್ರವಾಗಿರಿಸಿಕೊಂಡು ಸ್ವತಂತ್ರ ಭಾರತ ಸರ್ಕಾರವನ್ನು ರಚಿಸಿದ. ಅದಕ್ಕೆ ಜರ್ಮನಿ, ಜಪಾನ್ ಮುಂತಾದ ದೇಶಗಳು ಮಾನ್ಯತೆ ನೀಡಿದವು. ಮಹೇಂದ್ರ ಪ್ರತಾಪನೇ ಅಧ್ಯಕ್ಷನಾಗಿದ್ದ ಈ ಹಂಗಾಮಿ ಸರ್ಕಾರಕ್ಕೆ ಮೌಲಾನಾ ಬರ್ಕತುಲ್ಲಾ ಪ್ರಧಾನಮಂತ್ರಿಯಾಗಿಯೂ, ಮೌಲವಿ ಒಬೀದುಲ್ಲಾ ಸಿಂಧಿ (ಸಿಖ್ ಮತದಿಂದ ಇಸ್ಲಾಂಗೆ ಮತಾಂತರಗೊಂಡಿದ್ದವನು) ಗೃಹ ಮಂತ್ರಿಯಾಗಿಯೂ, ಚಂಪಕರಮಣ್ ಪಿಳ್ಳೆ ವಿದೇಶಾಂಗ ಸಚಿವನಾಗಿಯೂ ನೇಮಕಗೊಂಡಿದ್ದರು. ಈ ಹಂಗಾಮಿ ಸರ್ಕಾರ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಮೊಟ್ಟ ಮೊದಲನೆಯದು ಎಂಬ ದಾಖಲೆ ಸ್ಥಾಪಿಸಿತು. ಮೊದಲ ಮಹಾಯುದ್ಧದ ಮಿತ್ರಪಕ್ಷಗಳಾಗಿದ್ದ ಜರ್ಮನಿ ಮತ್ತು ಟರ್ಕಿ ದೇಶಗಳ ಕಾರಣ ಅವನು ಅಫ್ಘಾನಿಸ್ತಾನದಲ್ಲಿ ಈ ಸರ್ಕಾರ ರಚಿಸಬೇಕಾಗಿ ಬಂತು. ಅಲ್ಲಿ ಮುಸಲ್ಮಾನರ ಪ್ರಾಬಲ್ಯ ಹೆಚ್ಚಾಗಿದ್ದರೂ ಮಹೇಂದ್ರ ಪ್ರತಾಪನ ಘನವ್ಯಕ್ತಿತ್ವ, ಚಿಂತನಾ ಶೈಲಿ, ಕಾರ್ಯಕ್ಷಮತೆ ಮತ್ತು ಸ್ನೇಹಶೀಲ ಮನೋಭಾವಗಳು ಆತ ಸ್ವತಂತ್ರ ಸರ್ಕಾರದ ಅಧ್ಯಕ್ಷನಾಗುವಂತೆ ಮಾಡಿದ್ದವು. ಪ್ರಥಮ ಮಹಾಯುದ್ಧದ ಆ ದಿನಗಳಲ್ಲಿ ಭಾರತವನ್ನು ಮಿತ್ರಪಕ್ಷಗಳು ಗೆದ್ದ ಪಕ್ಷದಲ್ಲಿ ಜರ್ಮನಿ ಏನಾದರೂ ಮುಖ್ಯ ಮುಸ್ಲಿಂ ರಾಷ್ಟ್ರವಾಗಿದ್ದ ಟರ್ಕಿಯ ವಶಕ್ಕೆ ಭಾರತವನ್ನು ನೀಡಿದ ಪಕ್ಷದಲ್ಲಿ ‘ಇಪ್ಪತ್ತೆರಡು ಕೋಟಿ ಹಿಂದೂಗಳ ದುರವಸ್ಥೆ ಬ್ರಿಟಿಷರ ಕಾಲಕ್ಕಿಂತಲೂ ಕೆಟ್ಟದ್ದಾಗಿರುತ್ತದೆ’ ಎಂದು ಮಹೇಂದ್ರ ಪ್ರತಾಪ್ ಉದ್ಗರಿಸಿದ್ದು ಆತನ ದೂರದೃಷ್ಟಿಗೆ ಕನ್ನಡಿ ಹಿಡಿಯುವಂಥದ್ದಾಗಿದೆ.

ಸ್ವತಂತ್ರ ಭಾರತದ ಹಂಗಾಮಿ ಸರ್ಕಾರದ ಪ್ರಧಾನ ಮಂತ್ರಿ ಒಬೀದುಲ್ಲಾ ಮೂಲಭೂತವಾದಿ ಮುಸಲ್ಮಾನ. ಮೌಲಾನಾ ಬರ್ಕತುಲ್ಲಾ ವಿಶಾಲದೃಷ್ಟಿಯ ಮುಸಲ್ಮಾನ. ಬರ್ಕತುಲ್ಲಾ ಮಹೇಂದ್ರ ಪ್ರತಾಪನ ಆಪ್ತಮಿತ್ರ. ಇಬ್ಬರದೂ ಭಾರತ ಮುಕ್ತಗೊಳ್ಳಬೇಕೆಂಬ ಒಂದೇ ಗುರಿ. ಆದರೆ ಮುಂದೆ ಬರ್ಕತುಲ್ಲಾನ ನಡೆ ಏನಾಗುವುದೋ ಎಂಬ ಸಂದೇಹವೂ ಮಹೇಂದ್ರ ಪ್ರತಾಪನಿಗಿತ್ತು. ಆ ಹಂಗಾಮಿ ಸರ್ಕಾರ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಇತರ ದೇಶಗಳ ಸಹಾಯ, ಬೆಂಬಲಗಳನ್ನು ಗಳಿಸುವ ಪ್ರಯತ್ನ ಮಾಡಿತ್ತು.

ರಷ್ಯಾದಲ್ಲಿ ಅಕ್ಟೋಬರ್ ಕ್ರಾಂತಿಗೆ ಮುನ್ನ ಮಹೇಂದ್ರ ಪ್ರತಾಪ ಲೆನಿನ್​ನನ್ನು ಭೇಟಿಯಾಗಿದ್ದ. ಅವನಿಗೆ ಸೈದ್ಧಾಂತಿಕವಾಗಿ ಲೆನಿನ್ ವಿಚಾರಗಳೊಂದಿಗೆ ಸಹಮತವಿಲ್ಲದಿದ್ದರೂ ಲೆನಿನ್ ಮತ್ತು ಟ್ರಾಟ್​ಸ್ಕಿಯವರಿಂದ ಭಾರತದ ಹೋರಾಟಕ್ಕೆ ಯಾವ ಬಗೆಯ ಸಹಾಯ ದೊರೆಯಬಹುದೆಂಬ ಸಂಗತಿಯನ್ನು ರ್ಚಚಿಸಲು ಈ ಭೇಟಿಮಾಡಿದ್ದ.

ನೊಬೆಲ್ ಪ್ರಶಸ್ತಿಗೆ ಹೆಸರು ಸೂಚಿತವಾಗಿತ್ತು: 1920ರಲ್ಲಿ ಬ್ರಿಟಿಷರ ಒತ್ತಡಕ್ಕೆ ಮಣಿದು ಅಫ್ಘಾನಿಸ್ತಾನದ ಅಮೀರ್ ಭಾರತದ ಹಂಗಾಮಿ ಸ್ವತಂತ್ರ ಸರ್ಕಾರವನ್ನು ಉಚ್ಚಾಟಿಸಿದ. ಹೀಗಾಗಿ ಮಹೇಂದ್ರ ಜಪಾನ್​ಗೆ ತನ್ನ ಚಟುವಟಿಕೆಯನ್ನು ಸ್ಥಳಾಂತರಿಸಿದ. ಅಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಸ್ಥಾಪಿಸಿದ್ದ, ಜಪಾನ್ ಹಿಂದೂ ಮಹಾಸಭಾ ಅಧ್ಯಕ್ಷ ರಾಸ್​ಬಿಹಾರಿ ಬೋಸ್​ರೊಂದಿಗೆ ಕೈಜೋಡಿಸಿದ. ಸುಭಾಷ್​ಚಂದ್ರ ಬೋಸ್ ಜಪಾನ್​ಗೆ ಬಂದಾಗ ಅವರಿಗೆ ಅದನ್ನು ‘ಆಜಾದ್ ಹಿಂದ್ ಫೌಜ್’ ಎಂಬ ಹೆಸರಿನಲ್ಲಿ ಹಸ್ತಾಂತರ ಮಾಡಿದ್ದರಲ್ಲಿ ಮಹೇಂದ್ರ ಪ್ರತಾಪನ ಕೊಡುಗೆಯೂ ಇತ್ತು. ಬೋಸ್ ಎರಡನೆಯ ಮಹಾಯುದ್ಧದ ವೇಳೆ ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ ರಚಿಸುವ ಸಮಯದಲ್ಲಿ ಮಹೇಂದ್ರ ಪ್ರತಾಪನ ಅಫ್ಘಾನಿಸ್ತಾನದ ಹಂಗಾಮಿ ಸರ್ಕಾರದ ಉದಾಹರಣೆ ಕಣ್ಣಮುಂದಿತ್ತು. ಎರಡನೆಯ ಮಹಾಯುದ್ಧದ ಬ್ರಿಟಿಷ್ ಶತ್ರು ಮಿತ್ರ ಪಕ್ಷಗಳ ಬೆಂಬಲವೂ ‘ಆಜಾದ್ ಹಿಂದ್ ಫೌಜ್’ಗೆ ದೊರೆತಿತ್ತು. ಹೀಗೆ ಹಲವಾರು ಮಾರ್ಗಗಳಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ವಿದೇಶಗಳಲ್ಲಿ ಕಾರ್ಯಗತರಾದ ಹಲವಾರು ಧೀರರ ಪೈಕಿ ಅಗ್ರಗಾಮಿ ಮಹೇಂದ್ರ ಪ್ರತಾಪ್.

1946ರಲ್ಲಿ ಈ ಧೀರನಿಗೆ ಭಾರತಕ್ಕೆ ಬರಲು ಅವಕಾಶ ದೊರೆಯಿತು. ಭಾರತಕ್ಕೆ ಹಿಂದಿರುಗಿದ ರಾಜಾ ಆಧುನಿಕ ತಾಂತ್ರಿಕ ಶಿಕ್ಷಣ ನೀಡಲು ಆ ಮೊದಲೇ ವೃಂದಾವನದಲ್ಲಿ ಸ್ಥಾಪಿಸಿದ್ದ ಪ್ರೇಮ್ ಮಹಾವಿದ್ಯಾಲಯದ ಮೂಲಕ ಅನೇಕ ಬೆಳವಣಿಗೆಗಳನ್ನು ಮಾಡಿ ಹಲವು ಹತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. 1957ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮಥುರಾದಿಂದ ಸ್ಪರ್ಧಿಸಿ ಮುಂದೆ ಭಾರತದ ಪ್ರಧಾನಿಯಾದ ಎದುರಾಳಿ ಅಭ್ಯರ್ಥಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಅಧಿಕ ಅಂತರದಿಂದ ಸೋಲಿಸಿ ಲೋಕಸಭಾ ಸದಸ್ಯರೂ ಆಗಿದ್ದರು.

1979ರ ಏಪ್ರಿಲ್ 29ರಂದು 93ನೆಯ ವಯಸ್ಸಿನಲ್ಲಿ ಅಸುನೀಗಿದ ರಾಜಾ ಮಹೇಂದ್ರ ಪ್ರತಾಪರ ಸಮಾಧಿಯನ್ನು ಅವರಿಚ್ಛೆಯಂತೆ ವೃಂದಾವನದ ಯಮುನಾ ನದಿಯ ಕೇನ್ಹಿ ಘಾಟ್​ನಲ್ಲಿ ನಿರ್ವಿುಸಲಾಯಿತು. 1932ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೆ ಅವರ ಹೆಸರು ಸೂಚಿತವಾಗಿತ್ತು. ಆ ಕುರಿತು ನೊಬೆಲ್ ಸಮಿತಿ ಹೇಳಿಕೆಯನ್ನೂ ನೀಡಿತ್ತು.

ಅಫ್ಘಾನಿಸ್ತಾನದ ಸ್ಟೋರ್ ಅರಮನೆಯಿಂದಲೇ ಅವರು ಭಾರತದ ಸ್ವತಂತ್ರ ಹಂಗಾಮಿ ಸರ್ಕಾರವನ್ನು ನಡೆಸುತ್ತಿದ್ದುದುಂಟು. 2016ರ ಆಗಸ್ಟ್​ನಲ್ಲಿ ಈ ಸ್ಟೋರ್ ಅರಮನೆಯನ್ನು ಪುನರುಜ್ಜೀವನಗೊಳಿಸಲಾಯಿತು. ಅದರ ಉದ್ಘಾಟನೆ ಮಾಡುತ್ತ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಅದೇ ಸ್ಟೋರ್ ಅರಮನೆಯಲ್ಲಿ ಹಂಗಾಮಿ ಸರ್ಕಾರದ ಕೇಂದ್ರವನ್ನು ಸ್ಥಾಪಿಸಿದ್ದರೆಂಬುದನ್ನು ನೆನೆಸಿಕೊಂಡು ಶ್ರದ್ಧಾಂಜಲಿ ಸಲ್ಲಿಸಿ, ಅಂಥ ಮರೆತುಹೋದ ಹೀರೋಗಳನ್ನು ಭಾರತೀಯರು ನೆನೆಯಬೇಕೆಂದು ಕರೆನೀಡಿದರು.

ಈ ಅಂಕಣಕಾರ 1975ರಲ್ಲಿ ಮುಂಬಯಿಯಲ್ಲಿ ಸಂಶೋಧನಾ ಕಾರ್ಯದಲ್ಲಿ ತೊಡಗಿದ್ದಾಗ ಬೃಹತ್ ಭಾರತ್ ಸಮಾಜದ ಕಾರ್ಯದರ್ಶಿಯಾಗಿದ್ದ ಡಾ. ರವೀಂದ್ರ ರಾಮದಾಸರ ಮೂಲಕ ಮಹೇಂದ್ರ ಪ್ರತಾಪರ ಭೇಟಿ ನಿಯೋಜಿತವಾಗಿತ್ತು. ಆದರೆ ಅನಿವಾರ್ಯವಾಗಿ ಭೇಟಿಯ ಹಿಂದಿನ ದಿನವೇ ಅವರು ಮುಂಬಯಿಯಿಂದ ಹೊರಟುಹೋದುದರಿಂದ ಆ ಮಹಾನ್ ಐತಿಹಾಸಿಕ ವ್ಯಕ್ತಿಯ ದರ್ಶನಭಾಗ್ಯ ತಪ್ಪಿಹೋಯಿತು.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *