Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಅಸೀಮ ದೇಶಪ್ರೇಮದ ರಾಷ್ಟ್ರಮಾತೆ ವಿದ್ಯಾವತಿ ದೇವಿ

Thursday, 26.07.2018, 3:05 AM       No Comments

ಕುಟುಂಬದಲ್ಲಿ ಒಬ್ಬೊಬ್ಬರೂ ಜೈಲುಪಾಲಾಗುತ್ತಿದ್ದ ಸಂಕಷ್ಟದ ಸಂದರ್ಭದಲ್ಲೂ ಮನೆಯನ್ನು ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದಾಕೆ ವಿದ್ಯಾವತಿ ದೇವಿ. ಮಗ ಭಗತ್ ಸಿಂಗ್​ಗೆ ಸಂಸಾರಕ್ಕಿಂತ ದೇಶಸೇವೆಯ ಕಡೆಗೇ ತುಡಿತವಿದೆ ಎಂಬುದು ಅರಿವಾದಾಗ, ಆ ದಾರಿಯಿಂದ ಹಿಮ್ಮೆಟ್ಟದಂತೆ ಆತನಲ್ಲಿ ಸ್ಪೂರ್ತಿ ತುಂಬಿದ ಧೀಮಂತೆಯೂ ಇವಳೇ.

ಸ್ವಾತಂತ್ರ್ಯ ಸಮರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕಿಶನ್ ಸಿಂಹನ ಆರ್ಥಿಕ ಪರಿಸ್ಥಿತಿ ಸದಾಕಾಲ ಏರುಪೇರಾಗುತ್ತಿತ್ತು. ಮನೆಯನ್ನು ನಡೆಸುವ ಜವಾಬ್ದಾರಿ ವಿದ್ಯಾವತಿಯದೇ. ಮನೆಗೆ ಬಂದುಹೋಗುವವರು ಬಹಳಷ್ಟು ಮಂದಿ; ಅತಿಥಿ ಸತ್ಕಾರ ನಡೆಸಬೇಕಿತ್ತು. ಅದನ್ನು ನಿಭಾಯಿಸುವುದೂ ವಿದ್ಯಾವತಿಯ ಹೊಣೆಗಾರಿಕೆ. ಹರಸಾಹಸಪಟ್ಟು ಹೇಗೋ ಮನೆಯನ್ನು ತೂಗಿಸಿಕೊಂಡು ಹೋಗುತ್ತಿದ್ದಳು. ಆಗ ಮನೆಗೆ ಬೆಳಕಾಗಿದ್ದವನು ಪುಟ್ಟ ಭಗತ್ ಸಿಂಗ್. ಅವನ ಚೇಷ್ಟೆ, ಬಾಲಲೀಲೆಗಳು ಹರ್ಷದ ಹೊನಲನ್ನು ಹರಿಸುತ್ತಿದ್ದವು.

‘ಬಂದೂಕು ಬೆಳೆಯುತ್ತೀನಿ’: ಭಗತ್​ಗೆ ಆಗ ಎರಡೂವರೆ ವರ್ಷ. ಒಂದು ದಿನ ಕಿಶನ್ ಸಿಂಹ ತನ್ನ ಗೆಳೆಯ ಮೆಹ್ತಾ ನಂದಕಿಶೋರ್​ಗೆ ತನ್ನ ತೋಟಗಾರಿಕೆಯನ್ನು ಪರಿಚಯಿಸಲು ತೋಟದಲ್ಲಿ ಸುತ್ತಾಡಿಸುತ್ತಿದ್ದ. ಆಗ ಮಾವಿನ ಸಸಿಗಳನ್ನು ನೆಡಲಾಗುತ್ತಿತ್ತು. ಒಂದು ಕಡೆ ಕುಳಿತ ಪುಟ್ಟ ಭಗತ್ ಅಲ್ಲಿ ಬಿದ್ದಿದ್ದ ಕಡ್ಡಿಗಳನ್ನು ಸಂಗ್ರಹಿಸಿ ಒಂದೊಂದನ್ನೇ ನೆಡುತ್ತ ಅದರಲ್ಲೇ ಏಕಾಗ್ರಚಿತ್ತದಿಂದ ತಲ್ಲೀನನಾದ. ಇದನ್ನು ನೋಡಿ ಗೆಳೆಯರಿಬ್ಬರೂ ಕುತೂಹಲಗೊಂಡರು. ಕಿಶನ್ ಕೇಳಿದ- ‘ಏನು ಮಾಡುತ್ತಿದ್ದೀ ಭಗತ್?!’ ಅವನ ಉತ್ತರ ಕೇಳಿ ಅವರಿಬ್ಬರೂ ನಿಬ್ಬೆರಗಾದರು- ‘ನಾನು ಬಂದೂಕಿನ ಸಸಿಗಳನ್ನು ನೆಡುತ್ತಿದ್ದೀನಿ!’ ಎಂಥ ಉತ್ತರ! ಶೈಶವ ಭವಿಷ್ಯದ ಮುನ್ನುಡಿಯಲ್ಲವೆ? ಮುಂದೆ ಜೀವನಪರ್ಯಂತ ಪಿಸ್ತೂಲು, ಬಂದೂಕು, ಬಾಂಬ್​ಗಳ ಒಡನಾಟದಲ್ಲಿಯೇ ಬೆಳೆದ ಭಗತ್ ಅದನ್ನು ಅಂದೇ ಉದ್ಘೋಷಿಸಿದ್ದನೇ? ಏನೇ ಆಗಲಿ, ಈ ಬಾಲನುಡಿ ಆ ದಿನಗಳಲ್ಲಿ ಮನೆಮಂದಿ ಎಲ್ಲರ ನಾಲಿಗೆಗಳ ಮೇಲೆ ಕುಣಿಯುತ್ತಿತ್ತು. ವಿದ್ಯಾವತಿ ಪುಟ್ಟಮಗನನ್ನು ತೊಡೆಮೇಲೆ ಕೂರಿಸಿಕೊಂಡು ಮುದ್ದಾಡಿದ್ದೂ ಮುದ್ದಾಡಿದ್ದೇ. ಎಷ್ಟಿದ್ದರೂ ಸಿಖ್ ಕ್ಷಾತ್ರ ಪರಂಪರೆಯ ಕುಡಿಯಲ್ಲವೇ ಭಗತ್!

ಹೀಗೇ ಕಾಲ ಸರಿಯಿತು. ಭಗತ್ ಸ್ಪುರದ್ರೂಪಿಯಾಗಿ ಬೆಳೆದು ನಿಂತ. ಅವನ ದೇಹಸೌಷ್ಠವ, ಎದೆಗಾರಿಕೆಗಳು ಪ್ರಸಿದ್ಧಿ ಪಡೆದವು. ಸಹಜವಾಗಿಯೇ ವಿದ್ಯಾವತಿ ಅವನಿಗೆ ಬಾಳಸಂಗಾತಿಯನ್ನು ಹುಡುಕಲಾರಂಭಿಸಿದಳು. ಅವನಿಗೆ ಹೆಣ್ಣು ಕೊಡಲು ಬಯಸುವವರಿಗೇನು ಬರವೇ? ಆರಂಭದಲ್ಲಿ ವಿವಾಹಕ್ಕೆ ಸಮ್ಮತಿ ಇರುವವನಂತೆ ನಟಿಸಿದ ಭಗತ್, ನಿಶ್ಚಿತಾರ್ಥದ ದಿವಸ ಇದ್ದಕ್ಕಿದ್ದಂತೆ ನಾಪತ್ತೆ! ಎಲ್ಲಿ ಹುಡುಕಿದರೂ ಸುಳಿವು ಸಿಗಲಿಲ್ಲ. ಸಮರ್ಥ ರಾಮದಾಸರೂ ಮದುವೆ ಮಂಟಪದಿಂದಲೇ ಓಡಿಹೋಗಿದ್ದರಂತೆ!

ಈ ಘಟನೆಯಿಂದ ವಿದ್ಯಾವತಿಗೆ ತಲೆ ತಗ್ಗಿಸುವಂತಾ ಯಿತು. ಅಷ್ಟೇ ಅಲ್ಲ, ಮಗನ ಈ ವರ್ತನೆ ಅವಳಲ್ಲಿ ಗಾಬರಿ ಹುಟ್ಟಿಸಿತು. ಅವನು ತನ್ನ ಚಿಕ್ಕಪ್ಪಂದಿರ ಹಾದಿ ಹಿಡಿಯುವವನೇ ಎಂದು ಭಾಸವಾಯಿತು. ಒಂದು ಕಡೆ, ಅವನು ಮದುವೆ ಮಾಡಿಕೊಂಡು ಎಲ್ಲರಂತಿರಬೇಕೆಂಬ ಆಸೆ ಇದ್ದರೂ, ಇನ್ನೊಂದು ಕಡೆ ಅವನು ಸ್ವಾತಂತ್ರ್ಯ ಹೋರಾಟದ ಅಪಾಯದ ಹಾದಿ ಹಿಡಿಯುವವನೇ ಎಂಬ ಭಾವನೆ ಮೂಡಿ ದುಃಖತಪ್ತಳಾಗುತ್ತಿದ್ದುದೂ ಉಂಟು.

ಯೌವನಕ್ಕೆ ಬಂದಿದ್ದ ಭಗತ್ ಚಿಕ್ಕಪ್ಪ ಅಜಿತ್ ಸಿಂಹನ ದಾರಿ ಹಿಡಿದಿದ್ದ. ಅವನ ಚಲನವಲನಗಳು ರಹಸ್ಯಮಯವಾಗಿದ್ದವು. ಅವನನ್ನು ಒಮ್ಮೆ ಪೊಲೀಸರು ಹಿಡಿದು ಸೆರೆಗೆ ಅಟ್ಟಿದ್ದರು. ನಿಜಕ್ಕೂ ಪೊಲೀಸರು ನೀಡಿದ ಕಾರಣ ಸರಿ ಇರಲಿಲ್ಲ. ಆಗ ಹಿಂದೂಸ್ಥಾನ್ ರಿಪಬ್ಲಿಕ್​ನ ಆರ್ವಿು, ಪಂಡಿತ್ ರಾಮ್್ರಸಾದ್ ಬಿಸ್ಮಿಲ್ಲರ ನೇತೃತ್ವದಲ್ಲಿ ಕಾಕೋರಿ ರೈಲು ನಿಲ್ದಾಣದಲ್ಲಿ ಸರ್ಕಾರದ ಹಣವನ್ನು ಲೂಟಿಮಾಡುವ ಯೋಜನೆಯಲ್ಲಿ ತೊಡಗಿತ್ತು. ಆ ಕುರಿತು ಮೀರತ್ತಿನಲ್ಲಿ ಒಂದು ರಹಸ್ಯಸಭೆ. ಅದಕ್ಕೆ ಭಗತ್ ಕೂಡ ಅಪೇಕ್ಷಿತ. ಸದಾಕಾಲ ಕಿಶನ್ ಸಿಂಹನ ಮನೆಯ ಮೇಲೆ ಕಣ್ಣಿರಿಸಿದ್ದ ಪೊಲೀಸು ಗುಪ್ತಚರರಿಗೆ ಭಗತ್​ನ

ಚಲನವಲನಗಳ ಮೇಲೂ ಗಮನವಿತ್ತು. ಅದೇ ವೇಳೆ ಲಾಹೋರಿನಲ್ಲಿ ನಡೆಯುತ್ತಿದ್ದ ದಸರಾ ಜಾತ್ರೆಯಲ್ಲಿ ಒಂದು ಬಾಂಬು ಸ್ಪೋಟಿಸಿತು. ಆ ಸ್ಫೋಟ ಪೊಲೀಸರದೇ ಕುತಂತ್ರವಾಗಿತ್ತು. ಆ ಸಂದರ್ಭ ಬಳಸಿಕೊಂಡು ಪೊಲೀಸರು ಬಾಂಬ್ ಸ್ಪೋಟದ ಹುಸಿ ಆರೋಪವನ್ನು ಭಗತ್​ನ ಮೇಲೆ ಹೊರಿಸಿ ಸೆರೆಯಲ್ಲಿ ದೂಡಿದ್ದರು. ಅವನನ್ನು ಹಿಂಸಿಸಿ ಕ್ರಾಂತಿಕಾರಿ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವ ದುಷ್ಟಯೋಜನೆ ಪೊಲೀಸರದಾಗಿತ್ತು.

ತಾಯಿಗೆ ಮಗನ ಚಿಂತೆ: ಭಗತ್​ನ ಬಂಧನದಿಂದ ವಿದ್ಯಾವತಿ ನಡುಗಿಬಿಟ್ಟಳು. ಅವನು ಸೆರೆಯಾಗಿದ್ದುದು ಬಾಂಬ್ ಕೇಸ್​ನಲ್ಲಿ. ನೆರೆಹೊರೆಯವರು ಭಗತ್​ಗೆ

ಗಲ್ಲುಶಿಕ್ಷೆ ಅಥವಾ ಕರಿನೀರು ಶಿಕ್ಷೆ ಆಗಬಹುದೆಂದು ಹೇಳಿ ಅವಳನ್ನು ಇನ್ನಷ್ಟು ಖಿನ್ನತೆಗೆ ದೂಡುತ್ತಿದ್ದರು. ಕರುಳಕುಡಿಯ ಬಂಧನ ಅವಳ ಪಾಲಿಗೆ ಕೇವಲ ಬಂಧನವಲ್ಲ; ಅವಳ ಭವಿಷ್ಯದ ಕಾಮೋಡದ ಮುನ್ಸೂಚನೆಯಾಗಿತ್ತು. ಆಗಿನ ತನ್ನ ಮನಸ್ಥಿತಿ ಕುರಿತ ಅವಳ ಮಾತು ಹೀಗಿತ್ತು- ‘ನಾನು ಒಂದೊಂದು ಕ್ಷಣವನ್ನೂ ಕೆಂಡದ ಮೇಲೆ ಕಾಲಿಟ್ಟಂತೆ ಕಳೆದೆ. ಅವನನ್ನು ಬಿಡಿಸಲು ನನ್ನ ಪತಿದೇವರು ಹಗಲೂ ರಾತ್ರಿ ಎನ್ನದೆ ಪ್ರಯತ್ನಿಸುತ್ತಲೇ ಇದ್ದರು. ನನಗೆ ಸಮಾಧಾನದ ಮಾತು ಹೇಳುತ್ತಿದ್ದರು. ನನಗಂತೂ ಆ ಸಮಾಧಾನ ಒಂದು ನಾಟಕವೆಂದು ಅನಿಸುತ್ತಿತ್ತು. ನನ್ನ ಜೀವನ ಛಿದ್ರವಾಗಿಹೋಗಿದೆ ಅನಿಸುತ್ತಿತ್ತು…’.

ಕಿಶನ್ ಸಿಂಹ ಸ್ನೇಹಿತರಿಂದ ಹೇಗೋ 60 ಸಾವಿರ ರೂಪಾಯಿ ಸಾಲ ಪಡೆದು ಅದನ್ನು ಒತ್ತೆ ಹಣವಾಗಿಟ್ಟು ಭಗತ್​ನನ್ನು ಬಿಡಿಸಿಕೊಂಡು ಬಂದಿದ್ದ. ಆದರೆ ಅದು ತಾತ್ಕಾಲಿಕ ಉಪಶಮನ ಮಾತ್ರ. ಭಗತ್​ನ ಕ್ರಾಂತಿಕಾರಿ ಚಟುವಟಿಕೆಗಳು ಹೆಚ್ಚುತ್ತಲೇ ಹೋದವು. ಒಂದು ದಿನ ಯಾರೋ, ‘ಭಗತ್​ನನ್ನು ಸೆರೆಹಿಡಿದರಂತೆ’ ಎಂದು ಸುದ್ದಿ ಹೇಳಿದರು. ವಿದ್ಯಾವತಿ ಆಗಿನ ಸ್ಥಿತಿಯನ್ನು ನೆನೆಸಿಕೊಂಡಿದ್ದು ಹೀಗೆ- ‘ಎದೆಯಲ್ಲಿ ಬಾಂಬ್ ಸ್ಪೋಟಿಸಿದಂತಾಯಿತು. ನನ್ನ ಕಂಗಳ ಮುಂದೆ ಭಗತ್​ನ ಸುಂದರಮುಖ; ಜೈಲಿನ ಬೇಡಿಗಳು, ಮತ್ತೆ ಅವನ ನಗುಮುಖ… ಎಲ್ಲವೂ ಸುತ್ತಾಡಿದವು’.

ದೆಹಲಿ ಅಸೆಂಬ್ಲಿ ಬಾಂಬ್ ಮೊಕದ್ದಮೆ, ಸ್ಯಾಂಡರ್ಸ್ ಹತ್ಯೆ ಪ್ರಕರಣಗಳ ಆರೋಪಿಯಾಗಿ ಅವನನ್ನು ಜೈಲಿಗೆ ದೂಡಿದಾಗ ಅಲ್ಲಿನ ಅವ್ಯವಸ್ಥೆ, ದುಂಡಾವರ್ತನೆಗಳ ಬಗ್ಗೆ ಉಪವಾಸ ಆರಂಭಿಸಿದ. ಜೈಲಿನಲ್ಲಿ ಏನನ್ನೂ ತಿನ್ನದೆ ಹಸಿವಿನಿಂದ ನರಳುತ್ತಿದ್ದರೂ ಸತ್ಯಾಗ್ರಹ ಕೈಬಿಡಲಿಲ್ಲ. ಅವನ ಸ್ಥಿತಿ ಚಿಂತಾಜನಕವಾಗಿದ್ದ ಸುದ್ದಿ ಹೊರಬೀಳುತ್ತಿತ್ತು. ಪತ್ರಿಕೆಗಳಲ್ಲಿ ವರದಿಗಳು ಬರುತ್ತಿದ್ದವು. ಆಗ ವಿದ್ಯಾವತಿ ಮನಸ್ಥಿತಿ ಹೇಗಿತ್ತು? ‘ನನಗಂತೂ ಆಗ ಏನೂ ತಿನ್ನಲಾಗುತ್ತಿರಲಿಲ್ಲ. ನನ್ನ ಭಗತ್ ಜೈಲಿನಲ್ಲಿ ಉಪವಾಸದಲ್ಲಿದ್ದಾನೆ ಎಂಬ ನೋವು ಮನಸ್ಸನ್ನು ಆವರಿಸಿತ್ತು…’ ಎಂದು ಆಕೆಯೇ ಹೇಳಿಕೊಂಡಿದ್ದಾಳೆ.

ಜನ್ಮನೀಡಿದ ತಾಯಿ ನಾನು: ನೇಣುಶಿಕ್ಷೆಗೆ ಕೆಲವೇ ದಿನಗಳ ಹಿಂದೆ ಮಗನನ್ನು ನೋಡಲು ವಿದ್ಯಾವತಿ ಜೈಲಿಗೆ ಹೋಗಿದ್ದಳು. ಆಗ ಭಗತ್, ‘ಅಮ್ಮ ನನಗೆ ನೇಣುಹಾಕುವ ದಿವಸ ನೀನು ಬರಬೇಡ. ನೀನು ಅಳುತ್ತೀಯೆ, ಜ್ಞಾನತಪ್ಪಿ ಬೀಳುತ್ತೀಯೆ. ಕುಲಬೀರನನ್ನು ಕಳಿಸು. ಜೈಲಿನವರು ಒಪ್ಪಿದರೆ ಅವನೇ ನನ್ನ ಶವವನ್ನು ಪಡೆದುಕೊಂಡು ಹೋಗಲಿ’ ಅಂದ. ಆಗ ಆಕೆ ಅಂದಿದ್ದು- ‘ನಿನಗೆ ಜನ್ಮನೀಡಿದ ತಾಯಿ ಅಷ್ಟು ದುರ್ಬಲ ಮನಸ್ಕಳೆಂದು ತಿಳಿಯಬೇಡ. ಮಗೂ ನೀನು ಅದೃಷ್ಟಶಾಲಿ. ದೇಶಕ್ಕಾಗಿ ಪ್ರಾಣನೀಡುವ ಬಹುದೊಡ್ಡ ಭಾಗ್ಯ ನಿನ್ನ ಪಾಲಿಗೆ ಬಂದಿದೆ. ಒಮ್ಮೆ ಈ ದಾರಿಯಲ್ಲಿ ಹೋಗಲು ಶುರುಮಾಡಿರುವ ನೀನು ಯಾವುದೇ ಕಾರಣಕ್ಕೂ ಹಿಂದಿರುಗಿ ನೋಡಬೇಡ’.

1931ರ ಮಾರ್ಚ್ 23ರಂದು ಭಗತ್ ಸಿಂಗ್, ಸುಖದೇವ್, ರಾಜಗುರು ಇವರನ್ನು ಗಲ್ಲಿಗೇರಿಸಲಾಯಿತು. ಆಗ ಆ ಮಹಾಮಾತೆಯಿಂದ ಹೊಮ್ಮಿದ ನುಡಿಗಳಿವು- ‘ಈ ಸುದ್ದಿ ಕೇಳಿದ ತತ್​ಕ್ಷಣ ನನ್ನೆದೆ ಒಡೆದು ಚೂರುಚೂರಾಯಿತು. ಒಳಗಿನಿಂದ ಕಣ್ಣೀರ ಕೋಡಿ ಉಕ್ಕಿತು. ಆದರೆ ಹನಿಗಳು ಹೊರಬರಲು ಉದ್ಯುಕ್ತವಾಗುತ್ತಿದ್ದಂತೆ ನನ್ನ ಬುದ್ಧಿ ಅವನ್ನು ತಡೆಯುತ್ತಿತ್ತು. ನಗುನಗುತ್ತ ಪ್ರಾಣತ್ಯಾಗ ಮಾಡಿದ ಭಗತ್ ನನಗೆ ಹೇಳಿದ ಅಂತಿಮ ಶಬ್ದಗಳು ಕಿವಿಯಲ್ಲಿ ಗುಂಯ್ಗುಡುತ್ತಿದ್ದವು. ‘ಅಮ್ಮ, ನೀನು ಅಳಬಾರದು. ನೀನು ಹುಚ್ಚಿಯ ರೀತಿಯಲ್ಲಿ ರೋದಿಸುತ್ತ ಓಡಾಡುವಂತೆ ಆಗುವುದು ಬೇಡ. ಜಗತ್ತು ಭಗತ್ ಸಿಂಗ್​ನ ಅಮ್ಮ ಅಳುತ್ತಿದ್ದಾಳೆ, ಅವಳು ಎಂಥ ಹೇಡಿ ಎಂದು ಅಂದುಕೊಳ್ಳುವುದಿಲ್ಲವೇನು?’ ಅವನ ನುಡಿಗಳು ನೆನಪಾದ ಕೂಡಲೇ ಹೃದಯ ಬಾಯಿಗೆ ಬರುತ್ತಿತ್ತು. ಆದರೆ ನನ್ನ ಕಣ್ಣೀರು ಒಳಗೊಳಗೇ ಬತ್ತಿಹೋಗುತ್ತಿತ್ತು’.

ಅಂತೂ ವೀರಪುತ್ರನ ಹೌತಾತ್ಮ್ಯದೊಂದಿಗೆ ವಿದ್ಯಾವತಿಯ ಜೀವನದ ಒಂದು ಅಧ್ಯಾಯ ಮುಗಿದಿತ್ತು. ಅವಳು ಮುಂದಿನ ಸುದೀರ್ಘ ಜೀವನವನ್ನೆಲ್ಲ ಆ ಮಗನ ನೆನಪನ್ನು ಹೊತ್ತೇ ಸವೆಸಬೇಕಿತ್ತು.

ಅಷ್ಟಕ್ಕೇ ಅವಳ ದುಃಖದ ದಿನಗಳು ಮುಗಿದಿರಲಿಲ್ಲ. ಕುಲ್​ಬೀರ್ ಮತ್ತು ಕುಲ್​ತಾರರನ್ನು ಬಂಧಿಸಿದ ಬ್ರಿಟಿಷ್ ಸರ್ಕಾರ ಮಾಂಟ್​ಗೋಮರಿ ಎಂಬಲ್ಲಿನ ಜೈಲಿನಲ್ಲಿರಿಸಿತ್ತು. ಒಮ್ಮೆ ಅವರಿಬ್ಬರನ್ನು ನೋಡಬೇಕೆಂದು ಸಿಹಿತಿಂಡಿ ಮಾಡಿಕೊಂಡು ಜೈಲಿಗೆ ಹೋದಳು. ಆದರೆ ಆಗಲೇ ಜೈಲಿನೊಳಗೆ ಕೈದಿಗಳು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು. ನಿರಾಹಾರ ದೀಕ್ಷೆ. ತನ್ನಿಬ್ಬರು ಮಕ್ಕಳನ್ನು ನೋಡಲು ಅನುಮತಿ ನೀಡಿರೆಂದು ಜೈಲರ್​ನನ್ನು ವಿನಂತಿಸಿಕೊಂಡಳು. ಆ ಮಹಾಶಯ ‘ಇಲ್ಲಮ್ಮ ಹೋಗುಹೋಗು. ನನ್ನ ಚಿಂತೆ ನನಗೆ. ನನ್ನ ಚಿಕ್ಕ ಮಗುವಿಗೆ ಜ್ವರ ಬಂದಿದೆ. ನನಗೆ ತೊಂದರೆ ಕೊಡಬೇಡ. ಬೇಕಾದರೆ ಅವರು ಉಪವಾಸ ನಿಲ್ಲಿಸಿದ ನಂತರ ಬಂದು ನೋಡುವಿಯಂತೆ’ ಎಂದ. ಕುಪಿತಳಾದ ವಿದ್ಯಾವತಿ, ‘ನೀವು ನಿಮ್ಮ ಮಗುವಿನ ಜ್ವರದ ಬಗ್ಗೆ ಚಿಂತಿಸುತ್ತಿದ್ದೀರಿ. ನಾನು ನನ್ನ ಮಗನೊಬ್ಬನನ್ನು ದೇಶಕ್ಕಾಗಿ ಬಲಿ ನೀಡಿದ್ದೀನಿ. ಸಿಂಹದ ಮರಿಗಳಂಥ ಇಬ್ಬರು ಮಕ್ಕಳು ಇಲ್ಲಿದ್ದಾರೆ. ಅವರ ಮುಖದರ್ಶನಕ್ಕೂ ಅವಕಾಶ ನೀಡುವುದಿಲ್ಲವೆ?’ ಎಂದು ಗರ್ಜಿಸಿದಳು.

ಅವನು ಬಿಡುವುದು ಸಾಧ್ಯವಿಲ್ಲವೆಂದಾಗ ಅವಳು ಸಾರ್ವಜನಿಕರ ಮೊರೆಹೊಕ್ಕಳು. ಹೊರಗೆ ಒಂದು ದೊಡ್ಡಸಭೆಯೇ ನೆರೆಯಿತು. ಅವಳು ಅಹವಾಲು ತೋಡಿಕೊಂಡಳು. ಜನ ಅವಳ ಮುಂದಾಳ್ತನದಲ್ಲಿ ಮೆರವಣಿಗೆ ಹೊರಟು ಜೈಲ್ ಸೂಪರಿಂಟೆಂಡೆಂಟ್​ನ ಬಂಗಲೆ ಮುಂದೆ ಜಮಾಯಿಸಿದರು. ಘೊಷಣೆಗಳು ಮುಗಿಲುಮುಟ್ಟಿದವು. ಜೈಲಿನೊಳಗಿಂದಲೂ ಕೈದಿಗಳಿಂದ ಪ್ರತಿಧ್ವನಿ ಮೊಳಗಿತು. ಹೀಗೆ ಹೋರಾಡಿ ಮಕ್ಕಳನ್ನು ನೋಡುವ ಅವಕಾಶ ಗಿಟ್ಟಿಸಿಕೊಂಡಳಾದರೂ ಅವರು ಉಪವಾಸ ಸತ್ಯಾಗ್ರಹದಲ್ಲಿದ್ದುದರಿಂದ ತಾನು ತಂದಿದ್ದ ಸಿಹಿತಿಂಡಿಯನ್ನು ಹಾಗೆಯೇ ಹಿಂದಕ್ಕೊಯ್ಯಬೇಕಾಯಿತು!

ವಿದ್ಯಾವತಿಗೆ ಅದೇನು ಸರ್ಪದೋಷವಿತ್ತೋ ಒಟ್ಟು 4 ಬಾರಿ ನಾಗರಹಾವಿನಿಂದ ಕಚ್ಚಿಸಿಕೊಂಡಿದ್ದಳು. ಒಮ್ಮೆ ಭಗತ್​ನನ್ನು ನೋಡಿಬರಲೆಂದು ಲಾಹೋರಿಗೆ ಹೋಗಿ ಕಾಡುದಾರಿಯಲ್ಲಿ ರಾತ್ರಿ ಮನೆಗೆ ನಡೆದುಕೊಂಡು ಹಿಂದಿರುಗುವಾಗ ನಾಗರಹಾವು ಕಡಿದು ವಿಷವೇರಿತು. ನಾಲ್ಕಾರು ದಿನ ವೈದ್ಯರಿಂದ ತೀವ್ರ ಚಿಕಿತ್ಸೆಯಾದ ಮೇಲೆಯೇ ಅವಳು ಚೇತರಿಸಿಕೊಂಡಿದ್ದು.

ಭಗತ್ ಸಿಂಗ್ ಜತೆ ಅಸೆಂಬ್ಲಿಯಲ್ಲಿ ಬಾಂಬ್ ಎಸೆದಿದ್ದ ಬಿಟುಕೇಶ್ವರ ದತ್​ನಲ್ಲಿ ಅವಳು ಭಗತ್​ನನ್ನು ಕಾಣುತ್ತಿದ್ದಳು. ಅವನ ಮೇಲೆ ಪ್ರೀತಿಯ ಧಾರೆಯನ್ನೇ ಸುರಿಸಿದಳು. ಉಜ್ಜೈನಿಯ ಶ್ರೀಕೃಷ್ಣ, ‘ಸರಲ್’ ಎಂಬ ಕವಿ ಭಗತ್ ಸಿಂಗನ ಮೇಲೆ ಮಹಾಕಾವ್ಯ ಬರೆದಿದ್ದ. ಆಗ ವಿದ್ಯವತಿ, ‘ನೀನು ನನ್ನ ಮಗನ ಬಗ್ಗೆ ಇಂಥ ಮಹಾಕಾವ್ಯ ಬರೆದಿದ್ದೀಯೆ. ಅಂತಹುದೇ ಇನ್ನೊಂದು ಮಹಾಕಾವ್ಯವನ್ನು ಚಂದ್ರಶೇಖರ ಆಜಾದ್​ನ ಮೇಲೆ ಬರೆಯಬೇಕು. ಈಗ ಆಜಾದನ ತಾಯಿ ಇಲ್ಲ. ಆ ಜಾಗದಲ್ಲಿ ನಿಂತು ನಾನು ನಿನ್ನನ್ನು ಕೇಳುತ್ತಿದ್ದೀನಿ. ಬರೆಯುವೆನೆಂದು ವಚನ ಕೊಡು’ ಎಂದಳು. ಆ ಮಹಾಕವಿ ಒಂದು ಚೂರಿಯಿಂದ ತನ್ನ ಹೆಬ್ಬೆರಳನ್ನು ಕತ್ತರಿಸಿ ಹರಿಯುತ್ತಿದ್ದ ರಕ್ತದಿಂದ ವಿದ್ಯಾವತಿಯ ಹಣೆಗೆ ತಿಲಕವನ್ನಿಟ್ಟು ‘ನಿಮ್ಮ ಆಸೆ ಪೂರೈಸುತ್ತೇನೆ’ ಎಂದು ಬರೆದ ಮಹಾಕಾವ್ಯವೇ ‘ಅಜೇಯ್ ಸೇನಾನಿ ಚಂದ್ರಶೇಖರ್ ಆಜಾದ್’. ಹೀಗೆ ವಿದ್ಯಾವತಿ ಎಲ್ಲ ಕ್ರಾಂತಿಕಾರಿಗಳಲ್ಲೂ ತನ್ನ ಹುತಾತ್ಮ ಮಗನನ್ನೇ ಕಾಣುತ್ತಿದ್ದಳು.

1947ರ ಆಗಸ್ಟ್​ನಲ್ಲಿ ಜೈಲಿನಿಂದ ಕುಲ್​ಬೀರ್ ಮತ್ತು ಕುಲ್​ತಾರ್​ರ ಬಿಡುಗಡೆಯಾಯಿತು. 1973ರ ಜನವರಿ 1ರಂದು ಪಂಜಾಬ್ ಸರ್ಕಾರ ಆಕೆಗೆ ‘ಪಂಜಾಬ್ ಮಾತಾ’ ಎಂಬ ಬಿರುದು ನೀಡಿ ಗೌರವಿಸಿತು. ಬೆಂಗಳೂರು ನಾಗರಿಕರು 1970ರ ನವೆಂಬರ್ 8ರಂದು ಅಕೆಯ ದರ್ಶನಭಾಗ್ಯ ಪಡೆದರು. 1975ರ ಜೂನ್ 10ರಂದು ದೆಹಲಿಯಲ್ಲಿ ವಿದ್ಯಾವತಿ ದೇವಿ ವಿಧಿವಶಳಾದಳು. ಎಂಥ ತಾಯಿ! ನಿಜಕ್ಕೂ ಅವಳು ರಾಷ್ಟ್ರಮಾತೆಯೇ ಸರಿ.

(ಲೇಖಕರು ಹಿರಿಯ ಪತ್ರಕರ್ತರು)

(ಈ ಲೇಖನದ ಕುರಿತು ಹೆಚ್ಚಿನ ವಿವರ ಅರಿಯಲು ಇದೇ ಅಂಕಣಕಾರರ ‘ಯುಗದ್ರಷ್ಟ ಭಗತ್ ಸಿಂಗ್’ ಕೃತಿಯನ್ನು ಓದಿ. ವಿವರಗಳಿಗೆ ಸಂರ್ಪಸಿ: 94481-10034)

Leave a Reply

Your email address will not be published. Required fields are marked *

Back To Top