ಇಪ್ಪತ್ತು ವರ್ಷ ಕಾರಾಗೃಹದಲ್ಲಿ ಕಳೆದ ಕ್ರಾಂತಿಕಾರಿ

ಕೇವಲ ಹದಿಮೂರು ವರ್ಷದ ಬಾಲಕನಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಉತ್ಸಾಹಶಾಲಿಯಾಗಿದ್ದ ಮನ್ಮಥನಾಥ. ನಿಷ್ಠಾವಂತ ಆಸ್ತಿಕ ಕುಟುಂಬಕ್ಕೆ ಸೇರಿದ್ದ ಆತನಲ್ಲಿ ದೇಶಸೇವೆ ಮಾಡುವ ಉತ್ಸುಕತೆ ರಾರಾಜಿಸುತ್ತಿತ್ತು. ಆತ ಚಿಂತನಶೀಲನೂ ಅಧ್ಯಯನಪಟುವೂ ವಾಕ್ಚಾತುರ್ಯದವನೂ ಆಗಿದ್ದು ಸ್ವಾತಂತ್ರ್ಯ ಚಳವಳಿಗಾರರ ವಲಯದಲ್ಲಿ ಹೆಸರು ಗಳಿಸಿದ್ದ.

1997ರ ಡಿಸೆಂಬರ್ 19. ಅಂದಿಗೆ ಸರಿಯಾಗಿ 70 ವರ್ಷಗಳ ಕೆಳಗೆ ಪಂಡಿತ ರಾಮಪ್ರಸಾದ್ ಬಿಸ್ಮಿಲ್​ರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತ್ತು. ಕಾಕೋರಿ ಕಲಿಗಳ ಪೈಕಿ ಅಂದು ಅತ್ಯಂತ ಕಿರಿಯನಾಗಿದ್ದ ಮನ್ಮಥನಾಥ ಗುಪ್ತರು (ಸಂದರ್ಶನದ ವೇಳೆ 90 ವರ್ಷ), ದೂರದರ್ಶನ ರಾಷ್ಟ್ರೀಯ ವಾಹಿನಿಗೆ ‘ಸರ್​ಫರೋಶೀ ಕೀ ತಮನ್ನಾ’ ಎಂಬ ಶೀರ್ಷಿಕೆಯ ಸಂದರ್ಶನದಲ್ಲಿ ಹೀಗೊಂದು ಸ್ಫೋಟ ಮಾಡಿದರು- ‘ಅಂದು ಕಾಕೋರಿಯ ಸನಿಹ ಸರ್ಕಾರಿ ಟ್ರೆಷರಿಯನ್ನು ಲೂಟಿಮಾಡಿದ ಸಂದರ್ಭದಲ್ಲಿ ನನ್ನಿಂದ ಒಂದು ಬಹುದೊಡ್ಡ ತಪ್ಪು ನಡೆದುಹೋಯಿತು. ಅಕಸ್ಮಾತ್ತಾಗಿ ನನ್ನ ಮೌಸರ್ ರಿವಾಲ್ವರ್​ನಿಂದ ಹಾರಿದ ಒಂದು ಗುಂಡು ಒಬ್ಬ ಪ್ರಯಾಣಿಕನನ್ನು ಕೊಂದುಹಾಕಿತು. ನನ್ನ ಒಂದು ತಪ್ಪಿನಿಂದ ನಮ್ಮ ನಾಯಕ ಪಂಡಿತ್ ರಾಮಪ್ರಸಾದ್ ಬಿಸ್ಮಿಲ್ಲರೂ ಸೇರಿದಂತೆ ನಾಲ್ವರು ಗಲ್ಲಿಗೆ ಹೋಗುವಂತಾಯಿತು. ನನಗೆ ನನ್ನ ಕಿಶೋರ ವಯಸ್ಸಿನ ಕಾರಣ ಮರಣದಂಡನೆ ದೊರೆಯಲಿಲ್ಲ ಎಂಬುದಕ್ಕೆ ಈಗಲೂ ನನಗೆ ಖೇದವೆನಿಸುತ್ತದೆ’.

ಬಂಗಾಳದಿಂದ ಬಂದವರು: ಮನ್ಮಥನಾಥ ಗುಪ್ತರದ್ದು ಅನೇಕ ಬಂಗಾಳಿ ಕುಟುಂಬಗಳಂತೆ ಬಂಗಾಳದಿಂದ ವಾರಾಣಸಿಗೆ ಬಂದು ನೆಲೆಸಿದ ಕುಟುಂಬ. ಮನ್ಮಥನಾಥನ ತಾತ ಆದ್ಯಪ್ರಸಾದ್ ಗುಪ್ತ 1880ರಲ್ಲಿ ಹೂಗ್ಲಿ ಜಿಲ್ಲೆಯಿಂದ ವಾರಾಣಸಿಗೆ ಬಂದರು. ಮನ್ಮಥನಾಥನ ತಂದೆ ವೀರೇಶ್ವರ್ ಗುಪ್ತರದು ಅಧ್ಯಾಪಕ ವೃತ್ತಿ. ತಾಯಿ ಆಶಾಲತಾ ದೇವಿ. ಅವರದು ನಿಷ್ಠಾವಂತ ಆಸ್ತಿಕ ಕುಟುಂಬ. ವೀರೆೇಶ್ವರರಿಗೆ ದೇಶಸೇವೆ ಮಾಡುವ ಉತ್ಸುಕತೆ. ವಿದ್ಯಾರ್ಥಿಗಳಿಗೆ ದೇಶಪ್ರೇಮವನ್ನು ಬೋಧಿಸುತ್ತಿದ್ದ ವೀರೇಶ್ವರ್ ಗುಪ್ತ 1921ರ ಅಸಹಕಾರ ಆಂದೋಲನದಲ್ಲಿ ಗಾಂಧೀಜಿಯವರ ಕರೆಯ ಮೇರೆಗೆ ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ ಹೊರಬಂದರು.

ಮನ್ಮಥನಾಥ 1908ರ ಫೆಬ್ರವರಿ 7ನೆಯ ತಾರೀಖು, ವೀರೇಶ್ವರರು ನೇಪಾಳದ ವಿರಾಟ್ ನಗರದಲ್ಲಿ ಹೆಡ್​ವಾಸ್ಟರ್ ಆಗಿದ್ದಾಗ ಹುಟ್ಟಿದ್ದು. ಅವನ ಪ್ರಾರಂಭಿಕ ವಿದ್ಯಾಭ್ಯಾಸ ಕಾಶಿ ವಿದ್ಯಾಪೀಠದಲ್ಲಿ ನಡೆಯಿತು. ಮನ್ಮಥನಾಥ ಕೇವಲ ಹದಿಮೂರು ವರ್ಷದ ಬಾಲಕನಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಉತ್ಸಾಹಶಾಲಿಯಾಗಿದ್ದ.

1921ರಲ್ಲಿ ಬ್ರಿಟನ್ನಿನ ರಾಜಕುಮಾರ ಪ್ರಿನ್ಸ್ ಆಫ್ ವೇಲ್ಸ್ ಕಾಶಿಗೆ ಭೇಟಿ ನೀಡುವವನಿದ್ದ. ಕಾಶಿಯ ಮಹಾರಾಜನು ಅವನಿಗಾಗಿ ಭವ್ಯ ಸ್ವಾಗತ ಸಮಾರಂಭ ಏರ್ಪಡಿಸಿದುದನ್ನು ಕಾಶಿಯ ಸ್ವಾತಂತ್ರ್ಯ ಚಳವಳಿಯ ನಾಯಕರು ಬಹಿಷ್ಕರಿಸಲು ನಿಶ್ಚಯಿಸಿ ಕರಪತ್ರಗಳನ್ನು ಹೊರಡಿಸಿದರು. ಅವನ್ನು ಮನ್ಮಥನಾಥ ಕಾಶಿಯ ಗಡೋದಿಯಾ ಎಂಬ ಸ್ಥಳದಲ್ಲಿ ಸಾರ್ವಜನಿಕರಿಗೆ ವಿತರಿಸುತ್ತಿದ್ದಾಗ ಅವನನ್ನು ಒಬ್ಬ ಪೊಲೀಸ್ ಅಧಿಕಾರಿ ಬಂಧಿಸಿ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸುತ್ತಾನೆ. ಅವನನ್ನು ನ್ಯಾಯಾಧೀಶ ಪ್ರಶ್ನಿಸಿದಾಗ, ‘ನಾನು ಸ್ವಾತಂತ್ರ್ಯ ಚಳವಳಿಗಾರ. ನಿಮ್ಮ ಯಾವುದೇ ಪ್ರಶ್ನೆಗೆ ಉತ್ತರಿಸುವುದಿಲ್ಲ. ನಿಮ್ಮೊಂದಿಗೆ ಸಹಕರಿಸುವುದಿಲ್ಲ’ ಎಂದು ದಿಟ್ಟ ಉತ್ತರ ನೀಡಿ ಮೂರು ತಿಂಗಳ ಜೈಲುವಾಸದ ಶಿಕ್ಷೆಗೆ ಗುರಿಯಾಗುತ್ತಾನೆ. ಅವನ ಇಡೀ ಜೀವಮಾನದಲ್ಲಿ ಒಟ್ಟು ಇಪ್ಪತ್ತು ವರ್ಷಗಳ ಕಾರಾಗೃಹವಾಸಕ್ಕೆ ನಾಂದಿಹಾಡಿದ ಸಂದರ್ಭ ಅದು!

ಆ ವಯಸ್ಸಿಗೇ ಅವನು ಚಿಂತನಶೀಲನೂ ಅಧ್ಯಯನಪಟುವೂ ವಾಕ್ಚಾತುರ್ಯದವನೂ ಆಗಿದ್ದನೆಂದು ಸ್ವಾತಂತ್ರ್ಯ ಚಳವಳಿಗಾರರ ವಲಯದಲ್ಲಿ ಹೆಸರು ಗಳಿಸಿದ್ದ. ಕಾಂಗ್ರೆಸ್ ಕಾರ್ಯಕರ್ತನಾಗಿ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ ಅವನಿಗೆ ಆ ದಿನಗಳಲ್ಲೇ ಚಂದ್ರಶೇಖರ ಆಜಾದನೂ ಆಪ್ತ ಬಾಲ್ಯಮಿತ್ರನಾದ. ಚೌರಿಚೌರಾ ಕಾಂಡದ ಸಂದರ್ಭ ಸ್ವಾತಂತ್ರ್ಯ ಚಳವಳಿಯಲ್ಲಿ ಹಿಂಸೆ ತಲೆಹಾಕಿತೆಂದು ಗಾಂಧೀಜಿ ಅಸಹಕಾರ ಚಳವಳಿಯನ್ನೇ ಹಿಂದಕ್ಕೆ ತೆಗೆದುಕೊಂಡಾಗ ಸಾವಿರಾರು ತರುಣರಂತೆ ನಿರಾಶೆಗೊಂಡ ಮನ್ಮಥನಾಥ ಮತ್ತು ಅವನ ಓರಿಗೆಯ ಮಿತ್ರರೂ ಗಾಂಧೀಮಾರ್ಗಕ್ಕೆ ತಿಲಾಂಜಲಿ ನೀಡಿ ಕ್ರಾಂತಿಮಾರ್ಗವನ್ನು ಸ್ವೀಕರಿಸಿದರು. ಆ ವೇಳೆಗೆ ಸ್ಥಾಪನೆಗೊಂಡಿದ್ದ ಹಿಂದೂಸ್ಥಾನ್ ರಿಪಬ್ಲಿಕನ್ ಆರ್ವಿು (ಎಚ್.ಆರ್.ಎ) ಕಾಶಿಯಲ್ಲಿ ತೀವ್ರಗತಿಯಲ್ಲಿ ಬಲಗೊಳ್ಳುತ್ತಿತ್ತು. ಅದರ ಪ್ರಮುಖರಾದ ಶಚೀಂದ್ರನಾಥ ಭಕ್ಷಿ, ಶಚೀಂದ್ರನಾಥ ಸನ್ಯಾಲ್, ರಾಜೇಂದ್ರ ಲಾಹಿರಿ ಮುಂತಾದವರೆಲ್ಲ ಕಾಶಿ ನಿವಾಸಿಗಳೇ. ಹೀಗಾಗಿ ಮನ್ಮಥನಾಥ ಆ ಸಂಘಟನೆಯಲ್ಲಿ ಸೇರಿಕೊಂಡ.

ಅಪಾಯದ ಅಂಚಿನಲ್ಲಿ ಜೀವಿಸಿದವರು: ‘ನಮ್ಮನ್ನು ಕ್ರಾಂತಿಕಾರಿಗಳೆಂದು ಕರೆದುಕೊಳ್ಳುತ್ತಿದ್ದರೂ ನಾವು ಸರ್ವೆಸಾಮಾನ್ಯ ಕಿಶೋರರಾಗಿದ್ದೆವು. ಆದರೆ ಭಾವನಾತ್ಮಕವಾಗಿ ಸ್ವಾತಂತ್ರ್ಯದ ಸಲುವಾಗಿ ಸರ್ವತ್ಯಾಗಗಳಿಗೂ ಅಂತಿಮವಾಗಿ ಪ್ರಾಣಾರ್ಪಣೆಗೂ ತಯಾರಿದ್ದವರಾಗಿದ್ದೆವು’ ಎಂದು ಆತ ಆತ್ಮಕಥಾ ಸ್ವರೂಪದ ಕ್ರಾಂತಿ ಚಳವಳಿಯ ಇತಿಹಾಸದ ದಾಖಲೆಯ ‘ಖಜಛಿಢ ್ಝಡಛಿಛ ಈಚ್ಞಜಛ್ಟಿಟ್ಠಠ್ಝಢ’ ಎಂಬ ತನ್ನ ಪುಸ್ತಕದಲ್ಲಿ ಬರೆದಿದ್ದಾನೆ. ಆಗ ನಾಯಕರು ಈ ಕಿಶೋರನಿಗೆ ಪಿಸ್ತೂಲು, ರಿವಾಲ್ವರ್ ಚಾಲನೆಯ ಶಿಕ್ಷಣ ನೀಡುತ್ತಿದ್ದರು. ಹೀಗಾಗಿ ಆ ಶಸ್ತ್ರಗಳ ಒಡನಾಟವೂ ಆರಂಭಗೊಂಡಿತ್ತು.

ಮೇಲೆ ಉಲ್ಲೇಖವಾಗಿರುವ ಪುಸ್ತಕದಲ್ಲಿ ಹೀಗೊಂದು ಘಟನೆಯನ್ನು ಮನ್ಮಥನಾಥರು ನೆನೆಸಿಕೊಂಡಿದ್ದಾರೆ- ‘ಚಂದ್ರಶೇಖರ ಆಜಾದ್ ಆಗಷ್ಟೇ ಕೊಟ್ಟಿದ್ದಂಥ ಒಂದು ಮೌಸರ್ ಪಿಸ್ತೂಲ್​ನಲ್ಲಿ ಬುಲೆಟ್​ಗಳನ್ನು ತುಂಬುವುದೂ ತೆಗೆಯುವುದೂ ಹೇಗೆಂದು ಅಭ್ಯಾಸ ಮಾಡುತ್ತಿದ್ದ. ಅವನು ಆ ವೇಳೆಗೆ ಇತರ ಹಲವು ಬ್ರಾ್ಯಂಡ್​ಗಳ ಪಿಸ್ತೂಲು ಮತ್ತು ರಿವಾಲ್ವರ್​ಗಳನ್ನು ಬಳಕೆ ಮಾಡಿದ್ದನಾದರೂ ಹೊಸದಾಗಿ ಕೈ ಸೇರಿದ್ದ ಮೌಸರ್ ಪಿಸ್ತೂಲನ್ನು ಅವನು ಬಹಳವಾಗಿ ಇಷ್ಟಪಟ್ಟಿದ್ದ. ಆಗ ನಾನು ಯಾವುದೋ ಪುಸ್ತಕದ ಪುಟಗಳನ್ನು ತಿರುವಿಹಾಕುವುದರಲ್ಲಿ ಮಗ್ನನಾಗಿದ್ದೆ. ಆ ಮೌಸರ್ ಪಿಸ್ತೂಲು ಅವನ ಕೈಗೆ ಬಂದು ಕೇವಲ ಅರ್ಧಗಂಟೆ ಆಗಿತ್ತಷ್ಟೆ. ಅವನ ಮನಸ್ಸಿನಲ್ಲಿ ಪಿಸ್ತೂಲು ಖಾಲಿಯಾಗಿದೆ ಎಂಬ ಭಾವನೆ ಇತ್ತು. ತಮಾಷೆಯಾಗಿ ಪಿಸ್ತೂಲನ್ನು ನನ್ನ ಕಡೆ ಗುರಿ ಇಟ್ಟು ‘ಹುಷಾರ್, ನಾನು ನಿನ್ನ ನಿನ್ನನ್ನು ಶೂಟ್ ಮಾಡುತ್ತಿದ್ದೀನಿ’ ಎಂದು ಹೇಳುತ್ತಲೇ ಟ್ರಿಗ್ಗರ್ ಒತ್ತಿದ! ನಾನೇನನ್ನಾದರು ಹೇಳುವ ಮೊದಲೇ ಅವನ ಗಮನಕ್ಕೆ ಬಾರದೇ ಪಿಸ್ತೂಲಿನಲ್ಲಿ ಉಳಿದಿದ್ದ ಒಂದು ಗುಂಡು ರೊಯ್ಯನೆ ಹೊರಬಂತು. ನನ್ನ ಅದೃಷ್ಟ! ಆಜಾದ್ ಇನ್ನೂ ನಿಷ್ಣಾತ ಗುರಿಕಾರನಾಗಿರಲಿಲ್ಲ. ಆದ್ದರಿಂದ ಪಿಸ್ತೂಲಿನಿಂದ ಹಾರಿದ ಗುಂಡು ನನ್ನ ತಲೆಯಿಂದ ಎರಡು ಇಂಚು ಪಕ್ಕದಲ್ಲಿ ಗೋಡೆಯಲ್ಲಿ ಹೊಕ್ಕಿ ಸಿಕ್ಕಿಹಾಕಿಕೊಂಡಿತು. ಆಜಾದ್​ನ ಗಾಬರಿಯನ್ನು ನೋಡಬೇಕಿತ್ತು. ಗುಂಡು ನನಗೆ ತಾಗಲಿಲ್ಲವೆಂದು ನಾನು ಎಷ್ಟು ಸಮಾಧಾನ ಮಾಡಿದರೂ ಅವನು ಸಹಜಸ್ಥಿತಿಗೆ ಮರಳಲಿಲ್ಲ, ಕಣ್ಣೀರು ಚಿಮ್ಮಿ ಹರಿಯಲಾರಂಭಿಸಿತು. ಅವನನ್ನು ಸಮಾಧಾನಪಡಿಸುವ ಹೊತ್ತಿಗೆ ನನಗೆ ಸಾಕು ಸಾಕಾಗಿ ಹೋಯಿತು’.

ಆ ಐತಿಹಾಸಿಕ ರಾತ್ರಿ ಕಾಕೋರಿ ಘಟನೆ ನಡೆದುಹೋಯಿತು. ಲೂಟಿ ಮಾಡಿದ ಹಣದ ಚೀಲವನ್ನು ಬಿಸ್ಮಿಲ್​ರು ಆಜಾದನ ಕೈಗೆ ಒಪ್ಪಿಸಿದರು. ಮನ್ಮಥನಾಥ ಮತ್ತು ಆಜಾದ್ ಕಾಕೋರಿಯನ್ನು ತೊರೆದು ಲಖನೌಗೆ ಬಂದರು. ಅದು ಅವರಿಗೆ ತೀರಾ ಅಪರಿಚಿತ ಸ್ಥಳ. ರಾತ್ರಿಯನ್ನು ಯಾವುದೋ ರ್ಪಾನಲ್ಲಿ ಕಳೆದು ಹಾಗೂ ಹೀಗೂ ಕಾಶಿಯನ್ನು ತಲುಪಿದರು. ಕಾಶಿಯಲ್ಲಿ ಕ್ರಾಂತಿಕಾರಿಗಳ ಚಟುವಟಿಕೆ ಬಿರುಸಾಗಿದ್ದುದು ತಿಳಿದಿದ್ದ ಪೊಲೀಸರು ಮೊದಲಿನಿಂದಲೇ ಗುಮಾನಿಯಲ್ಲಿದ್ದ ಕಾಶಿಯ ಕ್ರಾಂತಿಕಾರಿಗಳ ಬೇಟೆ ಆರಂಭಿಸಿಕೊಂಡರು. ಆಜಾದನೇನೋ ಅವರ ಕೈಗೆ ಸಿಗದೆ ಜಾರಿಕೊಂಡ.

ಪೊಲೀಸರ ದಂಡು ಮನ್ಮಥನಾಥನನ್ನು ಹುಡುಕಿಕೊಂಡು ಅವನ ಮನೆಗೂ ಬಂತು. ಅವನೇನೋ ತನ್ನ ಬಗ್ಗೆ ಪೊಲೀಸರಿಗೆ ಯಾವ ಪುರಾವೆಯೂ ಸಿಗದು ಎಂಬ ಹುಂಬಧೈರ್ಯದಲ್ಲಿದ್ದ. ಪೊಲೀಸರು ಅವನನ್ನು ಹಿಡಿದುಕೊಂಡು ‘ಸ್ಟೇಷನ್ನಿಗೆ ನಡೆ’ ಎಂದರು. ಅವನು ಅಲ್ಲಿಯೇ ನಿಂತಿದ್ದ ತಂದೆ ವೀರೇಶ್ವರರ ಕಾಲುಮುಟ್ಟಿ ನಮಿಸಿ ಹೇಳಿದ, ‘ದಾದಾ, ನೀವೇನೂ ಚಿಂತಿಸಬೇಡಿ. ಬಹುಶಃ ಇವತ್ತು ರಾತ್ರಿಯೇ ಬಂದುಬಿಡ್ತೀನಿ. ಪೊಲೀಸರ ಬಳಿ ನನ್ನ ಬಗ್ಗೆ ಯಾವ ಸಾಕ್ಷ್ಯವೂ ಇಲ್ಲ’. ನಂತರ ತನ್ನ ಚಿಕ್ಕಮ್ಮನಿಗೂ ನಮಿಸಿ ಪೊಲೀಸರ ಹಿಂದೆ ಹೋದ. ಅವನು ಹಿಂದಿರುಗಿದ್ದು ಹನ್ನೆರಡು ವರ್ಷಗಳು ಕಳೆದ ಮೇಲೆ! ಆ ವೇಳೆಗೆ ಅವನ ತಂದೆ, ಚಿಕ್ಕಮ್ಮ ಇಬ್ಬರೂ ಪರಲೋಕವಾಸಿಗಳಾಗಿದ್ದರು!

ಹದಿನಾಲ್ಕು ವರ್ಷಗಳ ಕಠಿಣಶಿಕ್ಷೆ!: ಕಾಕೋರಿ ಆರೋಪಿಗಳ ಪಟ್ಟಿಯಲ್ಲಿ ಮನ್ಮಥನಾಥನೂ ಒಬ್ಬನಾಗಿದ್ದ. ಎಲ್ಲರಿಗಿಂತ ಕಿರಿಯ! ಅವನ ಮೇಲೆ ಸರ್ಕಾರ ಗುರುತರ ಆರೋಪ ಹೊರಿಸಿತು. ಅಹಮದ್ ಅಲಿ ಎಂಬ ಪ್ರಯಾಣಿಕನ ಆಕಸ್ಮಿಕ ಸಾವು ಸಂಭವಿಸಿತ್ತು. ಅವನನ್ನು ಕೊಂದವನು ಮನ್ಮಥನಾಥನೇ ಎಂದು ಪ್ರಾಸಿಕ್ಯೂಷನ್ ಸಾಬೀತುಗೊಳಿಸಿತು. ಬಿಸ್ಮಿಲ್ ಮತ್ತು ಇತರ ಮೂವರೊಂದಿಗೆ ಇವನೂ ಗಲ್ಲಗಂಬವೇರವಾಗಬೇಕಾಗಿತ್ತು. ಆದರೆ ಮರಣದಂಡನೆಗೆ ಅಪ್ರಾಪ್ತ ವಯಸ್ಕನೆಂದು ಮನ್ಮಥನಾಥನಿಗೆ ಹದಿನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯ ತೀರ್ಪನ್ನು ನೀಡಲಾಯಿತು. ಕೆಲಕಾಲ ಅಂಡಮಾನಿನ ಕರಿನೀರು ಶಿಕ್ಷೆಯನ್ನೂ ಅನುಭವಿಸಿದ ಮನ್ಮಥನಾಥ 1937ರಲ್ಲಿ ಬಿಡುಗಡೆಗೊಂಡ. ಆವರೆಗೆ ಪಿಸ್ತೂಲು ಹಿಡಿದ ಕೈಯಲ್ಲಿ ಲೇಖನಿ ಹಿಡಿದು ಬ್ರಿಟಿಷ್ ಸರ್ಕಾರದ ಅತ್ಯಾಚಾರಗಳ ವಿರುದ್ಧ ಪುಂಖಾನುಪುಂಖವಾಗಿ ಲೇಖನಗಳನ್ನು ಬರೆಯಲಾರಂಭಿಸಿದ. ಅದರ ಪರಿಣಾಮವಾಗಿ ಮತ್ತೆ ಅವನಿಗೆ ಜೈಲುವಾಸ!

1939ರಲ್ಲಿ ಬಂಧನಕ್ಕೊಳಗಾದಾಗ ಅವರಿಗೆ ಮತ್ತೆ ಜೀವಾವಧಿ ಶಿಕ್ಷೆ. ಚಿಂತನಶೀಲ ಅಧ್ಯಯನಪಟು ಆಗಿದ್ದ ಮನ್ಮಥನಾಥರು ಬರವಣಿಗೆಯಲ್ಲೂ ಎತ್ತಿದಕೈ. ಇಂಗ್ಲಿಷ್, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಒಟ್ಟು 120 ಪುಸ್ತಕಗಳು ಇವರ ಲೇಖನಿಯಿಂದ ಹೊರಹೊಮ್ಮಿದವು. ಅವರ ಖಜಛಿಢ ್ಝಡಛಿಛ ಈಚ್ಞಜಛ್ಟಿಟ್ಠಠ್ಝಢ ಪುಸ್ತಕದಲ್ಲಿ ಒಬ್ಬ ಕ್ರಾಂತಿಕಾರಿಯ ದೃಷ್ಟಿಯಿಂದ ಸ್ವಾತಂತ್ರ್ಯ ಚಳವಳಿಯನ್ನು ನೋಡಿದ್ದಾರೆ. ಚೌರಿಚೌರಾ ಘಟನೆಯನ್ನು ಉಲ್ಲೇಖಿಸುತ್ತ, ‘1922ರಲ್ಲಿ ಚೌರಿಚೌರಾ ಪ್ರಕರಣದ ಸಂದರ್ಭದಲ್ಲಿ ಗಾಂಧೀಜಿಯವರ ಎಡಬಿಡಂಗಿ ನಿರ್ಣಯದಿಂದಾಗಿ ಆಗಲೇ ನಮಗೆ ದೊರೆಯಬೇಕಿದ್ದ ಸ್ವಾತಂತ್ರ್ಯ ದಕ್ಕದೇಹೋಯಿತು. ಅನೇಕ ಸಮರ್ಥ ಲೇಖಕರು ಹೇಳಿರುವಂತೆ ಗಾಂಧೀಜಿ ಆ ಸಂದರ್ಭದಲ್ಲಿ ಸರಿಯಾದ ನಿರ್ಣಯ ತಳೆಯುವುದರಲ್ಲಿ ಸಂಪೂರ್ಣ ವಿಫಲರಾದರು’ ಎಂದಿದ್ದಾರೆ. ಸ್ವಾತಂತ್ರಾ್ಯನಂತರ ಅವರು ಅವಿಭಜಿತ ಭಾರತ ಕಮ್ಯುನಿಸ್ಟ್ ಪಕ್ಷದ ಸದಸ್ಯರಾದರು. ರಾಜಕೀಯವಾಗಿ ಸಕ್ರಿಯವಾಗಿದ್ದರು. ಜೀವನ ನಿರ್ವಹಣೆಗಾಗಿ ಪತ್ರಿಕೋದ್ಯಮವನ್ನು ಅವಲಂಬಿಸಿದರು. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದಿಂದ ಪ್ರಕಟಗೊಳ್ಳುತ್ತಿದ್ದ ‘ಯೋಜನಾ’ ಮಾಸಪತ್ರಿಕೆ ಸಂಪಾದಕರಾಗಿದ್ದರು. ‘ಬಾಲಭಾರತಿ’ ಎಂಬ ಮಕ್ಕಳ ನಿಯತಕಾಲಿಕದ ಸಂಪಾದಕರಾಗಿದ್ದರು. ಹಲವು ಕಾದಂಬರಿಗಳನ್ನು, ವೈಚಾರಿಕ ಕೃತಿಗಳನ್ನು ಕೂಡ ರಚಿಸಿರುವ ಮನ್ಮಥನಾಥ ಗುಪ್ತ ಹಿಂದಿ ಸಾಹಿತ್ಯದ ಒಂದು ಉಲ್ಲೇಖನೀಯ ಹೆಸರು. ಅವರು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆದ ಭಾರತದ ಕ್ರಾಂತಿಕಾರಿ ಚಳವಳಿಯ ಇತಿಹಾಸ ಕುರಿತ ದೊಡ್ಡ ಪುಸ್ತಕಗಳು ಆ ವಿಷಯವನ್ನು ಕುರಿತ ಉತ್ತಮ ಆಕರ ಗ್ರಂಥಗಳು. 2000ನೇ ಇಸವಿ ಅಕ್ಟೋಬರ್ 26ರಂದು ದೀಪಾವಳಿಯ ರಾತ್ರಿ 92ನೆಯ ವಯಸ್ಸಿನಲ್ಲಿ ದೆಹಲಿಯ ನಿಜಾಮುದ್ದೀನ್ ಈಸ್ಟ್​ನ ಸ್ವಗೃಹದಲ್ಲಿ ಅವರು ಕೊನೆಯುಸಿರೆಳೆದರು.

ಸ್ವಲ್ಪ ಸ್ವಗತ: ಈ ಅಂಕಣಕಾರ ‘ಅಜೇಯ’ ಕೃತಿಯನ್ನು ಬರೆಯಲಾರಂಭಿಸಿದಾಗಿನಿಂದ ಪತ್ರಮುಖೇನ ಸಲಹೆ ನೀಡುತ್ತಿದ್ದ ಮನ್ಮಥನಾಥ ಗುಪ್ತರನ್ನು ಈತನ ‘ಅದಮ್ಯ’ ಪುಸ್ತಕ ಬಿಡುಗಡೆ ಮಾಡಲು ರಾಷ್ಟ್ರೋತ್ಥಾನ ಸಾಹಿತ್ಯ ಆಹ್ವಾನಿಸಿದಾಗ 1984ರ ಆಗಸ್ಟ್ 15ರಂದು ಸಹರ್ಷ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ‘ಉತ್ತರ ಭಾರತದ ಯಾವ ಲೇಖಕನೂ ಮಾಡದ ಅದ್ಭುತ ಬೃಹತ್ ಬರವಣಿಗೆಯ ಕೆಲಸವನ್ನು ಈ ಲೇಖಕರು ಮಾಡಿ ಚಂದ್ರಶೇಖರ ಆಜಾದರನ್ನು ಸಾಹಿತ್ಯದಲ್ಲಿ ಚಿರಸ್ಥಾಯಿಗೊಳಿಸಿದ್ದಾರೆ’ ಎಂದು ಸಂತಸದಿಂದ ‘ಅಜೇಯ’ ಕುರಿತು ಉದ್ಗರಿಸಿದರು. 1989-90ರಲ್ಲಿ ಪ್ರಸಿದ್ಧ ಬಾಲಿವುಡ್ ನಟ, ನಿರ್ದೇಶಕ, ನಿರ್ವಪಕ ಮನೋಜ್ ಕುಮಾರ್ ‘ಅಜೇಯ’ವನ್ನು ಆಧರಿಸಿ ನೂರೊಂದು ಕಂತುಗಳ ಟಿವಿ ಧಾರಾವಾಹಿ ಮಾಡಲು ಹೊರಟಾಗ ಮನ್ಮಥನಾಥರನ್ನು, ಈ ಅಂಕಣಕಾರನನ್ನು ವಿಷಯತಜ್ಞರಾಗಿ ಮುಂಬಯಿಗೆ ಕರೆಸಿದ್ದಾಗ, ಅವರ ಜತೆ 4-5 ದಿವಸಗಳನ್ನು ಆತ್ಮೀಯವಾಗಿ ಒಂದೇ ಕೋಣೆಯಲ್ಲಿ ಕಳೆಯುವ ಸಂದರ್ಭ ಈ ಅಂಕಣಕಾರನ ಜೀವನದ ಅವಿಸ್ಮರಣೀಯ ದಿನಗಳೆನ್ನಬಹುದು.

(ಲೇಖಕರು ಹಿರಿಯ ಪತ್ರಕರ್ತರು)