ಚೆನ್ನೈನಲ್ಲಿ ಹಾರಿದ ಅಮೃತಸರದ ಗುಂಡುಗಳು…

ಹಾಲು ತರುವೆನೆಂದು ಹೇಳಿ ಹೋದ ಗಂಡ ಜನ್ಮಭೂಮಿಗೆ ನೆತ್ತರಿನ ಅಭಿಷೇಕ ಮಾಡುತ್ತಿದ್ದನೆಂದು ಅಮೃತಸರದಲ್ಲಿದ್ದ ಆ ಯುವತಿಗೇನು ಗೊತ್ತಿತ್ತು? ಗೋವಿಂದರಾಮ ಜನತೆಗೆ ಕೈ ಜೋಡಿಸಿ ನಮಸ್ಕರಿಸಿ ಕ್ಷೀಣದನಿಯಲ್ಲಿ-‘ಸೋದರರೇ, ನಮ್ಮ ನಾಡಿನ ಬಿಡುಗಡೆಗಾಗಿ ನಿರ್ಭೀತರಾಗಿ ಹೋರಾಡಿ. ಅಂತಿಮ ವಿಜಯ ನಮ್ಮದೇ…’ ಎಂದು ಹೇಳಿದ.

ಪಂಜಾಬ್ ಪ್ರಾಂತ್ಯದ ಅಮೃತಸರ. ಇಸವಿ 1932. ತಿಂಗಳು ಅಕ್ಟೋಬರ್. ಅದೊಂದು ಗುಪ್ತಸ್ಥಳ. ನಾಲ್ವರು ವ್ಯಕ್ತಿಗಳು ಒಟ್ಟುಗೂಡಿದ್ದಾರೆ. ಅವರವರಲ್ಲೇ ಮಾತುಕತೆ ನಡೆಯುತ್ತಿದೆ.

‘ಈಗ ನಮ್ಮ ಕಾರ್ಯವನ್ನು ದಕ್ಷಿಣ ಭಾರತಕ್ಕೆ ಹಬ್ಬಿಸುವುದು ಆವಶ್ಯಕವೆಂದು ನನಗೆ ತೋರುತ್ತದೆ. ನಾವು ಒಟ್ಟಿಗೆ ಅಲ್ಲಿಗೆ ಹೋಗೋಣ. ಸಂಘಟನೆ ಪ್ರಾರಂಭಿಸೋಣ’. ‘ಹೌದು! ನನಗೂ ಅದೇ ಸರಿ ಅನ್ನಿಸುತ್ತದೆ’.

‘ಮುಂದಿನ ಪ್ರಶ್ನೆ ದುಡ್ಡಿನದು. ಇದನ್ನು ಬಗೆಹರಿಸುವುದು ಹೇಗೆ?’ ಕೂಡಲೆ ಆ ನಾಲ್ವರ ಪೈಕಿ ಇಬ್ಬರು ಎದ್ದು ನಿಂತರು. ಇಬ್ಬರು ಒಂದೇ ದನಿಯಲ್ಲಿ; ‘ನಮ್ಮ ಮಾತೃಭೂಮಿಯ ಬಿಡುಗಡೆಯ ಈ ಹೋರಾಟದಲ್ಲಿ ನಾವು ನಮ್ಮ ಸರ್ವಸ್ವವನ್ನು ಇದಕ್ಕಾಗಿಯೇ ವಿನಿಯೋಗಿಸಲು ಪಣ ತೊಟ್ಟಿದ್ದೇವೆ. ಹಣವನ್ನೂ ನಾವೇ ಒದಗಿಸುತ್ತೇವೆ’ ಎಂದರು. ಸೇರಿದ್ದ ಉದ್ದೇಶ ನೆರವೇರಿತ್ತು. ನಾಲ್ವರೂ ಅಲ್ಲಿಂದ ಬೇರೆ ಬೇರೆಯಾಗಿ ಹೊರಟರು.

ಆ ನಾಲ್ವರೂ ಕ್ರಾಂತಿಕಾರಿಗಳು. ಬಂಟಾ ಸಿಂಗ್, ಗೋವಿಂದರಾಮ ವರ್ಮ, ರೋಶನ್​ಲಾಲ್ ಮೆಹ್ತಾ ಮತ್ತು ಶಂಭುನಾಥ ಆಜಾದ್. ಈ ಪೈಕಿ ಗೋವಿಂದ ರಾಮ ಮತ್ತು ರೋಶನ್​ಲಾಲ್ ತುಸು ಸ್ಥಿತಿವಂತರು. ಆದ್ದರಿಂದಲೇ ಅವರು ಸಂಸ್ಥೆಗಾಗಿ ಹಣವನ್ನು ಒದಗಿಸುವ ಹೊಣೆ ಹೊತ್ತರು. ಗೋವಿಂದರಾಮನ ತಂದೆ ಅಮೃತಸರದ ಶ್ರೀಮಂತ ವ್ಯಾಪಾರಿ. ಅವರದು ‘ಲಾಲಾ ತಾರಾಚಂದ್ ಗೋಪಾಲ್​ದಾಸ್’ ಎಂಬ ಹೆಸರಿನ ಸಗಟು ಬಟ್ಟೆ ವ್ಯಾಪಾರದ ಅಂಗಡಿ ಇತ್ತು. ಅಮೃಸರದಲ್ಲೆಲ್ಲ ಅವರ ಅಂಗಡಿ ಸುಪ್ರಸಿದ್ಧ.

ಆ ನಾಲ್ವರು ಗೆಳೆಯರು 1933 ಏ.26ರ ವೇಳೆಗೆ ಸರ್ವಸಿದ್ಧತೆಗಳನ್ನೂ ಮುಗಿಸಿಕೊಂಡು ಪಂಜಾಬಿನಿಂದ ದಕ್ಷಿಣಕ್ಕೆ ಪ್ರಯಾಣ ಬೆಳೆಸುವುದೆಂದು ನಿರ್ಧರಿಸಿದರು. ಆದರೆ ಬರಬರುತ್ತ ಹಣದ ಅಡಚಣೆ ಹೆಚ್ಚಾಯಿತು. ಗೋವಿಂದರಾಮನಿಗೂ ಅಪ್ಪನ ಕಣ್ಣು ತಪ್ಪಿಸಿ ಹಣ ತರುವುದು ಕಷ್ಟವಿತ್ತು. ಆದ್ದರಿಂದ ಏಪ್ರಿಲ್ ಎರಡನೆಯ ವಾರದಲ್ಲಿ ರೋಶನ್​ಲಾಲ್ ಮತ್ತು ಇಂದ್ರಸಿಂಹಮುನಿ ಎಂಬಿಬ್ಬರು ಕ್ರಾಂತಿಕಾರಿಗಳನ್ನು ಅಮೃತಸರಕ್ಕೆ ಕಳಿಸಿದರು. ಅಲ್ಲಿ ರಾಮಬಿಲಾಸ ಶರ್ಮ ಎಂಬ ಒಬ್ಬನ ಬಳಿ ಸಂಸ್ಥೆಯ ಮೂರುವರೆ ಸಹಸ್ರ ರೂಪಾಯಿಗಳನ್ನು ಅವಿತಿಡಲಾಗಿತ್ತು. ಅದನ್ನು ತರಲೆಂದೇ ಅವರು ಅಲ್ಲಿಗೆ ಹೋಗಿದ್ದು. ದಕ್ಷಿಣ ಭಾರತಕ್ಕೆ ಹೋಗುವ ಸಿದ್ಧತೆಗಳಲ್ಲಿ ಅದು ಅಂತಿಮ ಘಟ್ಟ.

ಆದರೆ ದುರದೃಷ್ಟ. ಅಷ್ಟರಲ್ಲೇ ಅಂತರ ಪ್ರಾಂತೀಯ ಷಡ್ಯಂತ್ರದ ಮೊಕದ್ದಮೆ ಸಂಬಂಧದಲ್ಲಿ ಲಾಹೋರಿನಲ್ಲಿ ಅನೇಕ ಮನೆಗಳನ್ನು ಜಪ್ತಿ ಮಾಡಲಾಯಿತು. ಆಗ ರಾಮಬಿಲಾಸ್ ಶರ್ಮ ಸಿಕ್ಕಿಬಿದ್ದ. ಅವನ ಬಳಿ ಇದ್ದ ಸಂಸ್ಥೆಯ ಬಾಂಬು, ಪಿಸ್ತೂಲುಗಳ ಜತೆಯಲ್ಲಿ ಮೂರುವರೆ ಸಹಸ್ರ ರೂಪಾಯಿಗಳ ಮೊತ್ತವೂ ಪೊಲೀಸರ ಪಾಲಾಯಿತು. ಪೊಲೀಸರ ಒತ್ತಡಕ್ಕೆ ಬಗ್ಗಿ ಶರ್ಮ ಅಪೂ›ವರ್ ಆಗಿಹೋದ. ಸಂಸ್ಥೆಯ ಅನೇಕ ವಿಳಾಸಗಳು ಪೊಲೀಸರಿಗೆ ಸಿಕ್ಕಿದವು. ಹುಡುಕಾಟ ತೀವ್ರವಾಯಿತು, ಅದೇ ಸಮಯದಲ್ಲೇ ಶರ್ಮನನ್ನು ಹುಡುಕಿಕೊಂಡು ಬಂದ ಇಂದ್ರ ಸಿಂಹ ಮತ್ತು ರೋಶನ್​ಲಾಲ್​ರು ಪೊಲೀಸರ ಕೈಗೆ ಸಿಕ್ಕಿಬಿದ್ದರು. ಆದರೆ ರೋಶನ್​ಲಾಲರ ಅಂಗಡಿಯ ಗುಮಾಸ್ತರಾದ ಕೇಶವರಾಮ ಮತ್ತು ಹೀರಾಲಾಲ್ ಕಪೂರರ ಮುನ್ನೆಚ್ಚರಿಕೆಯಿಂದ ಆ ಅಪಾಯದಿಂದ ಅವರು ಪಾರಾದರು. ಆದರೆ ಹಣ ಮಾತ್ರ ಅವರಿಗೆ ದಕ್ಕಲಿಲ್ಲ.

ಪರಿಣಾಮ ಸಂಸ್ಥೆಯ ಹಣದ ಸಮಸ್ಯೆ ಉಲ್ಬಣ. ಶಂಭನಾಥ್ ಆಜಾದ್ ಮತ್ತು ಗೆಳೆಯರು, ಸಾಕಷ್ಟು ಹಣ ಎತ್ತಿಕೊಂಡು ಎರಡು ದಿವಸಗಳಲ್ಲಿ ಮನೆ ತೊರೆದು ಬರುವಂತೆ ಗೋವಿಂದರಾಮ ವರ್ಮನಿಗೆ ಸಂದೇಶ ಕಳಿಸಿದರು.

ಗೋವಿಂದರಾಮ ಶತಪ್ರಯತ್ನ ಮಾಡಿದರೂ ಮನೆಯಿಂದ ಹಣ ಅಥವಾ ಒಡವೆ ಹಾರಿಸಿಕೊಂಡು ಬರಲಾಗಲಿಲ್ಲ. ಆ ವೇಳೆಗಾಗಲೇ ರೋಶನ್​ಲಾಲ್ ಮನೆಯಿಂದ ಹಣ ಹಾರಿಸಿಕೊಂಡು ಪರಾರಿಯಾಗಿದ್ದುದರಿಂದ ಅಮೃತಸರದ ಸಾಹುಕಾರರೆಲ್ಲ ತಂತಮ್ಮ ಗಂಡುಮಕ್ಕಳ ಬಗ್ಗೆ ಬಹಳ ಎಚ್ಚರಿಕೆ ವಹಿಸಿದರು. ಅಲ್ಲದೆ ಗೋವಿಂದರಾಮನು ರೋಷನ್​ಲಾಲನ ಗೆಳೆಯನಾಗಿದ್ದುದರಿಂದ ಅವನ ತಂದೆ ಮತ್ತಷ್ಟು ಎಚ್ಚರಿಕೆ ವಹಿಸಿದರು. ಗೋವಿಂದರಾಮ ಎರಡು ದಿವಸಗಳ ಅವಧಿ ಪೂರ್ತಿ ಆಗುವುದರೊಳಗೆ ಸಂಸ್ಥೆಯ ಮುಂದೆ ಹಾಜರಾದ; ಆದರೆ ಬರಿಗೈಯಲ್ಲಿ!

ಗೋವಿಂದರಾಮ ಒಬ್ಬಳು ಸುಂದರ ಯುವತಿಯೊಂದಿಗೆ ಅದೇ ತಾನೇ ವಿವಾಹವಾಗಿದ್ದ. ಸುಖ-ಸಂತೋಷದ ಆಸೆಗಳನ್ನು ಹೊತ್ತು ಗಂಡನ ಮನೆಗೆ ಬಂದಿದ್ದ ಆಕೆಗೆ ಎದುರಾಗಿದ್ದು ವಿಚಿತ್ರ ಸನ್ನಿವೇಶಗಳು. ಒಂದು ದಿವಸ ಗೋವಿಂದರಾಮ ಆಚೆ ಹೊರಡಬೇಕು. ಅಷ್ಟರಲ್ಲಿ ಹೆಂಡತಿ ಕೇಳಿದಳು; ‘ಎಲ್ಲಿಗೆ ಹೊರಟಿರಿ?’

‘ಆಂ…ಆಂ..?’ ತೊದಲುತ್ತ ಗೋವಿಂದರಾಮ ಉತ್ತರಿಸಿದ; ‘ಎಲ್ಲೂ ಇಲ್ಲ. ಪೇಟೆಗೆ ಹೋಗುತ್ತಿದ್ದೇನೆ. ಬರುವಾಗ ನಿನಗೆ ಬಿಸಿ ಕೇಸರಿ ಹಾಲು ಕೊಂಡು ತರುತ್ತೇನೆ’. ಅನಂತರ, ಹೆಜ್ಜೆ ಹೊರಕ್ಕೆ ಇಟ್ಟು ಶಾಂತವಾಗಿ ಹಿಂದಿರುಗಿ ನೋಡಿದ ಗೋವಿಂದರಾಮ ವರ್ಮ. ‘ಅಚ್ಛಾ’ ಎನ್ನುತ್ತ ತನ್ನ ಮನೆಗೆ ಅಂತಿಮ ನಮಸ್ಕಾರ ಹೇಳಿ ಹೊರಬಂದ.

ಅಮೃತಸರದಲ್ಲಿ ರೈಲು ಹತ್ತಿ ಗೋವಿಂದರಾಮ್ ಇಂದ್ರಸಿಂಹಮುನಿ, ರೋಶನ್ ಲಾಲ್ ಮತ್ತು ಹೀರಾಲಾಲ್ ಕಪೂರ್ ಮದರಾಸಿಗೆ ಬಂದಿಳಿದರು. ಅವರ ಚಟುವಟಿಕೆಗಳಿಗೆ ಪಂಜಾಬಿನಿಂದ ಮಿಕ್ಕ ಕ್ರಾಂತಿಕಾರಿಗಳು ಹಣ ಕಳಿಸುವರೆಂದು ಕಾದು ಸಾಕಾಯಿತು. ಅದು ಮಾತ್ರ ಬರಲೇ ಇಲ್ಲ. ಆದ್ದರಿಂದ ಉದಕಮಂಡಲದ ಬ್ಯಾಂಕನ್ನು ದೋಚಿದರು. ಆಗ ಗೋವಿಂದರಾಮ ಮದ್ರಾಸಿನಲ್ಲಿದ್ದ. ಉದಕಮಂಡಲದಲ್ಲಿ ಬ್ಯಾಂಕನ್ನು ದೋಚಿ ಹಿಂದಿರುಗುವಾಗ ನಿತ್ಯಾನಂದ ಮತ್ತು ಖುಷಿರಾಮ ಮೆಹತಾ ಎಂಬಿಬ್ಬರು ಈರೋಡು ರೈಲು ನಿಲ್ದಾಣದಲ್ಲಿ ಪೊಲೀಸರೊಂದಿಗೆ ಕಾದಾಡುತ್ತ ಬಂಧಿಗಳಾದರು. ಜತೆಯಲ್ಲಿದ್ದ ಬಚ್ಚಾಲಾಲ್ ಮತ್ತು ಬಂಟಾ ಸಿಂಹರು ಪೊಲೀಸರ ಮೇಲೆ ಗುಂಡಿನ ಮಳೆ ಸುರಿಸಿ ಪಾರಾಗಿ ಬಂದರು. ಶಂಭುನಾಥ್ ಆಜಾದ್ ಸುರಕ್ಷಿತವಾಗಿ 29ರಂದು ಮದ್ರಾಸ್ ತಲುಪಿದ.

ನಿತ್ಯಾನಂದ ಪೊಲೀಸ್ ನಿರ್ಬಂಧದಲ್ಲಿ ಚಿತ್ರಹಿಂಸೆಗೆ ಬಗ್ಗಿ ಅಪೂ›ವರ್ ಆದ. ಕೂಡಲೇ ಕ್ರಾಂತಿಕಾರಿಗಳು ಮದ್ರಾಸಿನ ಹಳೆಯ ನಿವಾಸ ತೆರವು ಮಾಡಿ ತಂಬೂಚೆಟ್ಟಿ ರಸ್ತೆಯಲ್ಲಿ ಹೊಸ ಮನೆ ಬಾಡಿಗೆಗೆ ಪಡೆದರು. ಮೇ 1ನೇ ತಾರೀಖು ರಾಯಪುರಮ್ ಸಮುದ್ರದಂಡೆಯ ಬಳಿ ಸಿಡಿಗುಂಡನ್ನು ಪರೀಕ್ಷಿಸುವಾಗ ರೋಶನ್​ಲಾಲ್ ಅಸುನೀಗಿದ. ಇದರಿಂದ ಮದ್ರಾಸಿನಲ್ಲಿ ಕ್ರಾಂತಿಕಾರಿಗಳು ಇದ್ದರೆಂಬುದು ಪೊಲೀಸರಿಗೆ ಖಚಿತವಾಯಿತು. ಹಾಗಾಗಿ, ಮದ್ರಾಸಿನಲ್ಲಿ ಉಳಿಯುವುದೇ ಕಷ್ಟವಾಯಿತು.

1933ರ ಮೇ 4. ಕ್ರಾಂತಿಕಾರಿಗಳೆಲ್ಲರೂ ತಂಬೂಚೆಟ್ಟಿ ರಸ್ತೆಯ ಮನೆಯಲ್ಲಿ ಸೇರಿದ್ದರು. ಚರ್ಚೆ, ವಿಚಾರ ವಿನಿಮಯ ಸಾಗುತ್ತಿತ್ತು. ಆಗ ಬೆಳಗ್ಗೆ 10 ಗಂಟೆ.

‘ದಪ್ ದಪ್… ದಪ್ ದಪ್’ ಬಾಗಿಲ ಬಡಿತ. ಎಲ್ಲರ ಕಣ್ಣುಗಳೂ ಗಮನವೂ ಬಾಗಿಲ ಕಡೆಗೆ. ಜತೆಯಲ್ಲೇ ಮನೆಯೊಡತಿ ಇವರನ್ನು ಕರೆಯುತ್ತಿರುವ ದನಿ. ಕ್ರಾಂತಿಕಾರಿಗಳಿಗೆ ಸಂಶಯ, ಕುತೂಹಲ. ಚಟಕ್ಕನೆ ಮೇಲೆದ್ದ ಶಂಭುನಾಥ ಮತ್ತು ಗೋವಿಂದರಾಮರು ತುಂಬಿದ ಪಿಸ್ತೂಲುಗಳನ್ನು ಹಿಡಿದು ಬಾಗಿಲ ಬಳಿಗೆ ಹೋದರು. ಬಾಗಿಲ ಪಕ್ಕದಲ್ಲೇ ಕಿಟಕಿ. ಹೊರಗಡೆ ಮನೆಯ ಯಜಮಾನಿಯ ಹಿಂದೆ ಶಸ್ತ್ರಸನ್ನದ್ಧ ಪೊಲೀಸರು ಮೆಟ್ಟಿಲುಗಳ ಮೇಲೆ ನಿಂತಿದ್ದರು. ಇವರಿಬ್ಬರೂ ಪಿಸ್ತೂಲುಗಳಿಂದ ಕಿಟಕಿಯ ಮೂಲಕ ಗುಂಡು ಹಾರಿಸಲಾರಂಭಿಸಿದರು. ಪೊಲೀಸರು ಹೊರಗಡೆ ಬಾಗಿಲು ಬೀಗ ಹಾಕಿಬಿಟ್ಟರು. ಅಷ್ಟರಲ್ಲಿ ಅವರೆಲ್ಲ ಸೇರಿ ಗುಪ್ತಪತ್ರಗಳು, ಲೂಟಿ ಮಾಡಿದ ಬ್ಯಾಂಕಿನ ದೊಡ್ಡಮೊತ್ತದ ನೋಟುಗಳು ಬೆಂಕಿಯಪಾಲು ಮಾಡಿ ಶಸ್ತ್ರಗಳನ್ನು ಹಿಡಿದು ಮನೆಯ ಮೇಲಕ್ಕೆ ಹೋದರು.

ಪೊಲೀಸರ ಬಂದೂಕುಗಳಿಂದ ಗುಂಡುಗಳು ಹಾರಲಾರಂಭಿಸಿದವು. ಗೋವಿಂದರಾಮ ತನ್ನ ‘ಫಟ್​ಫೇರಾ’ ರೈಫಲ್ ಹಿಡಿದು ಅವರಿಗೆ ಮಾರುತ್ತರ ಕೊಟ್ಟ. ನೋಡುತ್ತಿದ್ದಂತೆಯೇ ಮೂರು ಲಾರಿಗಳ ತುಂಬ ಸನ್ನದ್ಧ ಪೊಲೀಸರು ಬಂದು ಮನೆಯನ್ನು ಸುತ್ತುವರಿದರು, ಅಷ್ಟರಲ್ಲೇ ಮೆರವಣಿಗೆಯೊಂದು ಅಲ್ಲಿ ಹೋಗುತ್ತಿತ್ತು. ಕಳ್ಳರು ಮನೆಯ ಮೇಲಿದ್ದಾರೆ, ಹಿಡಿಯಲು ಸಹಾಯ ಮಾಡಿರೆಂದು ಪೊಲೀಸರು ಮೆರವಣಿಗೆಯಲ್ಲಿದ್ದವರನ್ನು ಕೇಳಿಕೊಂಡರು.

ಪೊಲೀಸ್ ಮತ್ತು ಮೆರವಣಿಗೆಗಾರರು ಒಂದಾದರು. ಅಂಗಡಿ, ಮನೆಗಳ ಹಿಂದಿನಿಂದ ಪೊಲೀಸರಿಂದ ಗುಂಡುಗಳು. ಮೆರವಣಿಗೆಗಾರರು ಸುತ್ತಮುತ್ತಲಿನ ಮನೆಗಳ ಮೇಲೆ ಏರಿದರು. ಸೋಡಾಶೀಷೆ, ಕಲ್ಲು, ಇಟ್ಟಿಗೆ ಚೂರುಗಳ ಮಳೆ ಸುರಿಸಿದರು. ತಾವು ಸ್ವಾತಂತ್ರ್ಯ ಹೋರಾಟಗಾರರೆಂದು ಜನತೆಗೆ ತಿಳಿಸಲು ಕ್ರಾಂತಿಕಾರಿಗಳು ಪ್ರಯತ್ನಿಸಿದರೂ ಸಫಲರಾಗಲಿಲ್ಲ. ಕೊನೆಗೆ ವಿಧಿಯಿಲ್ಲದೆ ಗೋವಿಂದರಾಮನು ಅವರ ಕಡೆ ರೈಫಲ್ ತೋರಿಸಿ ಗುಂಡು ಹಾರಿಸಿದ. ಅದರಿಂದ ಜನರು ಓಡಲಾರಂಭಿಸಿದರು. ಸಂಜೆ ಆಂಗ್ಲ ಸಿಪಾಯಿಗಳ ತುಕಡಿಯೊಂಡು ಅಲ್ಲಿಗೆ ಬಂತು. ಅಲ್ಲಿದ್ದ ಪೊಲೀಸರೂ ಸೈನಿಕರು ವ್ಯವಸ್ಥಿತವಾಗಿ ವ್ಯೂಹ ರಚಿಸಿ ಹೋರಾಟ ಮುಂದುವರಿಸಿದರು. ಕ್ರಾಂತಿಕಾರಿಗಳ ಬಳಿ ಉಳಿದ್ದುದು ಒಂದೇ ಒಂದು ಸಿಡಿಗುಂಡು.

ಅಷ್ಟರಲ್ಲಿ ಇವರು ಒಂದು ಯುಕ್ತಿ ಹೂಡಿದರು. ಶ್ವೇತವಸ್ತ್ರವನ್ನು ಬಿದಿರು ಕಡ್ಡಿಗೆ ಕಟ್ಟಿ ಶರಣು ಎಂಬಂತೆ ಸಂಕೇತ ಮಾಡಿದರು. ಕ್ರಾಂತಿಕಾರಿಗಳು ಬಳಲಿದ್ದಾರೆಂದು ಪೊಲೀಸರು ಮತ್ತಷ್ಟು ಬಿರುಸಾಗಿ ಗುಂಡು ಚಲಾಯಿಸುತ್ತ ಬೇಗ ಬೇಗ ಇವರಿದ್ದ ಮನೆಯ ಕಡೆ ಬರಲಾರಂಭಿಸಿದರು. ಶಂಭುನಾಥ್ ಸಿಡಿಗುಂಡನ್ನು ಮೇಲೆತ್ತಿ ಗುರಿಯಿಟ್ಟು ಪೊಲೀಸರ ಕಡೆಗೆ ಬೀಸಿದ. ನೆಲಕ್ಕೆ ಬಡಿದ ಸಿಡಿಗುಂಡು ಭಯಂಕರ ಶಬ್ದ ಮಾಡಿತು. ನಾಲ್ಕು ದಿಕ್ಕುಗಳಲ್ಲೂ ಹೊಗೆಯೋ ಹೊಗೆ, ಅಷ್ಟರಲ್ಲಿ ಇಂದ್ರ ಸಿಂಹ ಎಲ್ಲ ಕ್ರಾಂತಿಕಾರಿಗಳಿಗೂ ತನ್ನ ಬಳಿ ಇದ್ದ ಹಣದ ನೋಟುಗಳನ್ನು ಹಂಚಿದ. ಎಲ್ಲರೂ ಅವರವರಿಗೆ ತೋಚಿದಂತೆ ಅಲ್ಲಿಂದ ಪಾರಾಗಲು ಶಂಭುನಾಥ್ ಸೂಚನೆ ಕೊಟ್ಟ.

ಶಂಭುನಾಥ್ ಮತ್ತು ಹೀರಾಲಾಲ್ ಒಂದು ದಿಕ್ಕಿನಲ್ಲಿ ಓಡತೊಡಗಿದರು. ಗೋವಿಂದರಾಮ ಇನ್ನೊಂದು ದಿಕ್ಕಿನಲ್ಲಿ ಓಡಿದ. ಕೆಲವು ಹೆಜ್ಜೆ ಹೋಗುವಷ್ಟರಲ್ಲೇ ಅಲ್ಲಿ ಪೊಲೀಸರ ತುಕಡಿ ಪ್ರತ್ಯಕ್ಷವಾಯಿತು. ಗೋವಿಂದರಾಮ ಶರವೇಗದಲ್ಲಿ ಓಡಿ ಮನೆಯೊಂದನ್ನು ಹೊಕ್ಕು ಅಡುಗೆಮನೆಯಲ್ಲಿ ಅವಿತಿಟ್ಟುಕೊಂಡು ಕತ್ತಲಾದ ಆನಂತರ ಅಲ್ಲಿಂದ ಹೋಗಬೇಕೆಂದು ಯೋಚಿಸುತ್ತಿದ್ದ. ಇತ್ತ ಶಂಭುನಾಥ್ ಮನೆಯಮಾಳಿಗೆಯಿಂದ ಮಾಳಿಗೆಗೆ ಹಾರುತ್ತ ಇನ್ನೊಂದು ರಸ್ತೆ ಕಡೆಗೆ ಬಂದ. ಅಲ್ಲಿ ಮನೆಯ ಮಾಳಿಗೆಯಿಂದ ಕೆಳಕ್ಕೆ ಹಾರಿ ಓಡಲಾರಂಭಿಸಿದ. ಜನರು ಅವನನ್ನು ಹಿಂಬಾಲಿಸುತ್ತಲೇ ಇದ್ದರು. ಅವನು ತನ್ನ ಬಳಿ ಇದ್ದ ನೋಟುಗಳ ಕಂತೆಯನ್ನು ಎಸೆದರೂ ಜನರು ಅಟ್ಟಿಸಿಕೊಂಡು ಬರುವುದು ಬಿಡಲಿಲ್ಲ. ಕೊನೆಗೆ ಪೊಲೀಸರು ಮತ್ತು ಜನರು ಇವನನ್ನು ಹಿಡಿದುಹಾಕಿದರು. ಹಾಗೆಯೇ ಹೀರಾಲಾಲನೂ ಸಿಕ್ಕಿಬಿದ್ದ.

ಅವರಿಬ್ಬರನ್ನು ಪೊಲೀಸ್ ವಾಹನದಲ್ಲಿ ತಳ್ಳಿದರು. ಇಬ್ಬರು ಕೈಕೋಳ ಸಹಿತ ಕೈ ಮೇಲೆತ್ತಿ ‘ವಂದೇ ಮಾತರಂ’, ‘ಇನ್ಕಿಲಾಬ್ ಜಿಂದಾಬಾದ್’, ‘ಭಾರತ್ ಮಾತಾಕಿ ಜೈ’ ಎಂದು ಗರ್ಜಿಸಿದರು. ಅದನ್ನು ಕೇಳಿ ಇವರು ಕಳ್ಳರಲ್ಲ ಎಂದು ಆಗ ಜನರಿಗೆ ಅರಿವಾಯಿತು. ತಪ್ಪಿಗೆ ಪಶ್ಚಾತ್ತಾಪಪಟ್ಟು ಪೊಲೀಸ್ ವ್ಯಾನಿನ ಮೇಲೆ ಜನ ಲಗ್ಗೆ ಹಾಕಿದರು. ಆದರೇನು? ಕಾಲ ಮಿಂಚಿತ್ತು. ಇಬ್ಬರೂ ಪೊಲೀಸ್ ವಶವಾಗಿದ್ದರು.

ಇತ್ತ ಗೋವಿಂದರಾಮನು ಮಾಳಿಗೆಯ ಮೇಲೆ ಓಡುತ್ತಿದ್ದುದನ್ನು ಕಂಡ ಪೊಲೀಸರು ಅವನು ಬಚ್ಚಿಟ್ಟುಕೊಂಡಿದ್ದ ಮನೆಯ ಅಕ್ಕಪಕ್ಕದ ಮನೆಗಳನ್ನು ಶೋಧಿಸುತ್ತ ಅವನು ಅವಿತಿಟ್ಟುಕೊಂಡಿದ್ದ ಮನೆಗೂ ಬಂದರು.

ಮದ್ರಾಸಿನ ಪೊಲೀಸ್ ಕಮಿಷನರ್ ಕಲ್ಯಾಣಸುಂದರಂ ನಾಯಕತ್ವದಲ್ಲಿ ಪೊಲೀಸರು ಗೋವಿಂದರಾಮನಿದ್ದ ಕೋಣೆಗೆ ನುಗ್ಗಿದರು. ತಾನು ಸಿಕ್ಕಿಬಿದ್ದಿದ್ದನ್ನು ಅರಿತ ಅವನು ಕೋಣೆಯಿಂದ ಹೊರ ನುಗ್ಗಿದ. ಕೂಡಲೇ ಕಲ್ಯಾಣಸುಂದರಂ ಮತ್ತು ಇನ್ನೊಬ್ಬ ಅಧಿಕಾರಿ ಪಿಸ್ತೂಲುಗಳಿಂದ ಒಮ್ಮೆಲೆ ಗುಂಡುಗಳನ್ನು ಹಾರಿಸಿದರು. 21 ವರ್ಷದ ಗೋವಿಂದರಾಮ ಉಬ್ಬಿ ನಿಂತ ಎದೆಗೆ ಅವು ಬಡಿದವು. ‘ಭಾರತ್ ಮಾತಾಕೀ ಜೈ’ ಎನ್ನುತ್ತ ಗೋವಿಂದರಾಮ ನೆಲಕ್ಕೆ ಕುಸಿದ. ಹಾಲು ತರುವೆನೆಂದು ಹೇಳಿ ಹೋದ ಗಂಡ ಜನ್ಮಭೂಮಿಗೆ ನೆತ್ತರಿನ ಅಭಿಷೇಕ ಮಾಡುತ್ತಿದ್ದನೆಂದು ಅಮೃತಸರದಲ್ಲಿದ್ದ ಆ ಯುವತಿಗೇನು ಗೊತ್ತಿತ್ತು? ಆ ವೇಳೆಗೆ ಜನರಿಗೆ ಆ ತರುಣರು ಯಾರೆಂದು ತಿಳಿದು ಗೋವಿಂದರಾಮನ ಅರೆಜೀವವಿದ್ದ ಶರೀರವನ್ನು ಇಟ್ಟಿದ್ದ ಜಗಲಿಯ ಬಳಿ ನೆರೆದರು. ಅವರ ಕಣ್ಣುಗಳಿಂದ ಅಶ್ರುಧಾರೆ. ತಲೆಗಳು ಬಾಗಿದವು. ಪೊಲೀಸರು ಅರೆಜೀವವಿದ್ದ ಗೋವಿಂದರಾಮನನ್ನು ವ್ಯಾನಿನಲ್ಲಿ ಹಾಕಿಕೊಂಡು ಹೋಗಲು ಮೇಲೆತ್ತಿದ್ದರು, ಗೋವಿಂದರಾಮ ಜನತೆಗೆ ಕೈ ಜೋಡಿಸಿ ನಮಸ್ಕರಿಸಿ ಕ್ಷೀಣದನಿಯಲ್ಲಿ-‘ಸೋದರರೇ, ನಮ್ಮ ನಾಡಿನ ಬಿಡುಗಡೆಗಾಗಿ ನಿರ್ಭೀತರಾಗಿ ಹೋರಾಡಿ. ಅಂತಿಮ ವಿಜಯ ನಮ್ಮದೇ…’ ಎಂದು ಹೇಳಿದ. ಅದೇ ದಿವಸ, 1933ರ ಮೇ 4ರಂದು ರಾತ್ರಿ 7 ಗಂಟೆಗೆ ಗೋವಿಂದರಾಮನ ಪ್ರಾಣಪಕ್ಷಿ ಹಾರಿಹೋಯಿತು, ಸ್ವಾತಂತ್ರ್ಯ ಯಜ್ಞಕುಂಡದಲ್ಲಿ ಹವಿಸ್ಸಾದ ಗೋವಿಂದರಾಮ ವರ್ಮ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *