Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ದೇಶಕ್ಕಾಗಿ ಹೋರಾಡಿದವನು ಕಲ್ಲೇಟು ತಿಂದು ಮಡಿದ!

Thursday, 18.01.2018, 3:05 AM       No Comments

ಸಾವರ್​ಕರ್ ಸೋದರರೆಂದರೆ ಹಿಂದೂ ಸಮಾಜಕ್ಕಾಗಿ ಸರ್ವಸ್ವವನ್ನೂ ಮುಡಿಪಿಟ್ಟ ಚೇತನಗಳು. ಬ್ರಿಟಿಷರ ದಾಸ್ಯದ ವಿರುದ್ಧ ಅಸಾಧಾರಣ ಸಂಘರ್ಷ ನಡೆಸಿದರು. ಭೌತಿಕ ಸುಖ ತೊರೆದು ಸ್ವಾತಂತ್ರ್ಯಪ್ರಾಪ್ತಿಗಾಗಿ ಧೀರೋದಾತ್ತ ಹೋರಾಟ ನಡೆಸಿದರು. ಆದರೆ, ಈ ತ್ಯಾಗಮಯಿ ಕುಟುಂಬಕ್ಕೆ ನಮ್ಮವರು ಕೃತಜ್ಞತೆ ಸಲ್ಲಿಸುವುದು ಬಿಟ್ಟು ಕೃತಘ್ನರಾದದ್ದು ಇತಿಹಾಸದ ದೊಡ್ಡ ದುರಂತ.

 ಅಭಿನವ ಭಾರತದ ಅನ್ಯಾನ್ಯ ಶಾಖೆಗಳಲ್ಲಿ ಬಾಂಬ್ ತಯಾರಿಕೆ ತರಬೇತಿ ನೀಡಲಾಗುತ್ತಿದೆ ಎಂಬ ಮಾಹಿತಿ ದೊರೆತ ನಂತರ ಬಾಬಾರಾವ್ ಸಾವರ್​ಕರ್ ಮೇಲೆ ತೀವ್ರವಾದ ಪೊಲೀಸ್ ಬೇಹುಗಾರಿಕೆ ಶುರುವಾಯಿತು. ಇದಕ್ಕೆ ಇನ್ನೊಂದು ಮುಖ್ಯ ಕಾರಣ ಬ್ರಿಟಿಷರ ಒಲವನ್ನು ಗಳಿಸಿದ್ದ ಮಂದಗಾಮಿಗಳ ನಾಯಕ ಗೋಪಾಲಕೃಷ್ಣ ಗೋಖಲೆಯವರು ತಿಲಕ್ ಮತ್ತು ಬಾಬಾರಾವ್ ನಡುವೆ ಅತ್ಯಂತ ಘನಿಷ್ಠ ಸಂಪರ್ಕ ಇದೆ ಎಂದು ಸರ್ಕಾರಕ್ಕೆ ತಿಳಿಸಿದ್ದೂ ಆಗಿತ್ತು. ಆಗ ಬಾಬಾರಾವ್ ಭೂಗತರಾಗಬೇಕಾಗಿ ಬಂತು. ಇದು 1909ರ ಫೆಬ್ರವರಿಯ ಮೊದಲೆರಡು ವಾರಗಳಲ್ಲಿ ಘಟಿಸಿತು.

ಬಾಬಾರಾವ್ ಭೂಗತರಾಗಲು ಪೂರ್ವಸಿದ್ಧತೆ ಮಾಡಿಕೊಳ್ಳತೊಡಗಿದಾಗ ಅವರನ್ನು ಕಾಡುತ್ತಿದ್ದ ದೊಡ್ಡ ಪ್ರಶ್ನೆ ತಮ್ಮನದಾಗಿತ್ತು. ಅತ್ಯಂತ ಹತಾಶ ಮನಃಸ್ಥಿತಿಯಲ್ಲಿ ಅವರು ಸಂರ್ಪಸಿದ್ದು ಅಭಿನವ ಭಾರತದ ಸಕ್ರಿಯ ಸದಸ್ಯ ಹಾಗೂ ವ್ಯಕ್ತಿಗತವಾಗಿಯೂ ಆಪ್ತಮಿತ್ರನಾಗಿದ್ದ ಗೋಪಾಲಕೃಷ್ಣ ಪಾಟನ್​ಕರ್​ನನ್ನು. ಅವನು ಆಗ ಮುಂಬೈಯಲ್ಲಿ ಇನ್ಸೂರೆನ್ಸ್ ಏಜೆಂಟನಾಗಿದ್ದ. ಅವನನ್ನು ಒಂದು ನಡುರಾತ್ರಿ ಭೇಟಿ ಮಾಡಿದ ಬಾಬಾರಾವ್, ‘ನನ್ನ ಎರಡನೆಯ ತಮ್ಮ ತಾತ್ಯಾ ಇಂಗ್ಲೆಂಡಿನಲ್ಲಿದ್ದಾನೆ. ‘ಮ್ಯಾಝಿನಿ’ ಪುಸ್ತಕದ ಕಾರಣ ಅವನು ತಾಯ್ನಾಡಿನ ಮಣ್ಣಿನ ಮೇಲೆ ಕಾಲಿರಿಸುವುದು ದುಸ್ಸಾಧ್ಯ. ನಾನು ಈಗ ಭೂಗತನಾಗದಿದ್ದರೆ ಸರ್ಕಾರ ಬಂಧಿಸಿ ಕಠಿಣ ಶಿಕ್ಷೆ ನೀಡಿ ಜೈಲಿಗೆ ತಳ್ಳುತ್ತದೆ. ದೇಶಕಾರ್ಯದ ನಿಮಿತ್ತ ನಾನು ಇಂದಲ್ಲ ನಾಳೆ ಜೈಲಿಗೆ ಹೋಗುವವನಾದ್ದರಿಂದ ಕಿರಿಯ ತಮ್ಮ ಬಾಳಾ ದಿಕ್ಕಿಲ್ಲದ ಅನಾಥನಂತಾಗುತ್ತಾನೆ. ನಾನು ನಿನ್ನನ್ನು ದುಡ್ಡು ಕಾಸು ಕೇಳುವುದಿಲ್ಲ. ದಯವಿಟ್ಟು ಅವನನ್ನು ಕಾಪಾಡುವೆ ಎಂದು ನನಗೆ ಮಾತು ಕೊಡು. ನೀನು ಈ ವಚನ ನೀಡಿದರೆ ದೇಶಕ್ಕಾಗಿ ಬಲಿವೇದಿಯ ಮೇಲೆ ನಿಂತಿರುವ ಒಂದು ಸಂಸಾರವನ್ನು ಪೋಷಿಸಿದಂತಾಗುತ್ತದೆ. ನನಗೆ ಈ ಭಿಕ್ಷೆ ನೀಡು’ ಎಂದು ಗದ್ಗದ ಕಂಠದಲ್ಲಿ ಬೇಡಿಕೊಳ್ಳುತ್ತಾನೆ.

ಭ್ರಾತೃವಾತ್ಸಲ್ಯದ ಪರಿ: ಇನ್ನು ಅದೇ ತಮ್ಮನ ಬಗ್ಗೆ ಸ್ವಾತಂತ್ರ್ಯವೀರ ಸಾವರ್​ಕರ್ ಹೇಳುವುದನ್ನು ಕೇಳಿ, ‘…ಯಾವ ಬಾಳಾ ತನ್ನ ಹತ್ತನೆಯ ವಯಸ್ಸಿನಿಂದಲೇ ಸ್ವಾತಂತ್ರ್ಯದೇವಿಯ ಭಕ್ತನಾಗಿ ದುಡಿಯಲಾರಂಭಿಸಿದನೋ, ಇಬ್ಬರು ಅಣ್ಣಂದಿರು ಅಂಡಮಾನಿಗೆ ಸಾಗಿಸಲ್ಪಟ್ಟ ನಂತರವೂ ತನ್ನ ರಾಷ್ಟ್ರಸೇವಾ ವ್ರತವನ್ನು ಏಕನಿಷ್ಠೆಯಿಂದ ಮುಂದುವರಿಸಿದನೋ, ವಿದ್ಯಾರ್ಥಿದೆಸೆಯಲ್ಲೇ ಹಲವು ಬಾರಿ ಸೆರೆಮನೆ ವಾಸ ಹಾಗೂ ಪೊಲೀಸರ ಚಿತ್ರಹಿಂಸೆಗಳನ್ನು ಗಂಡೆದೆಯಿಂದ ಸಹಿಸಿದನೋ, ಖಾದಿ ತೊಟ್ಟುಕೊಂಡೇ ಸರ್ಕಾರಿ ಕಟ್ಟಡವನ್ನು ಪ್ರವೇಶಿಸುತ್ತೇನೆ ಎಂದು ಹಠ ತೊಟ್ಟು ಹಾಗೆಯೇ ನಡೆದುಕೊಂಡನೋ, ಸ್ವಾರ್ಥತ್ಯಾಗ, ದೇಶಸೇವೆ, ಬುದ್ಧಿಶಕ್ತಿ ಪರಾಕ್ರಮಗಳಲ್ಲಿ ಅದ್ವಿತೀಯನಾಗಿ ಮಹಾರಾಷ್ಟ್ರದ ಅಪ್ರತಿಮ ವಾಗ್ಮಿ ಎನ್ನಿಸಿಕೊಂಡಿದ್ದನೋ ಅಂಥವನು ತಾನು ಯಾರ ಸಲುವಾಗಿ ದುಡಿದನೋ ಅಂಥ ಸ್ವದೇಶ ಬಾಂಧವರ ಕಲ್ಲಿನೇಟುಗಳಿಂದಲೇ ಕೆಳಗೆ ಬಿದ್ದ! ಯಾವ ಪಾಪಕ್ಕೆ ಈ ಪ್ರಾಯಶ್ಚಿತ್ತ? ಬ್ರಿಟಿಷರ ದಾಸ್ಯದ ಹೊಡೆತಕ್ಕೆ ಜಗ್ಗದೆ ತಲೆ ಎತ್ತಿಕೊಂಡು ತಿರುಗುತ್ತಿದ್ದ ಆ ಸ್ವಾಭಿಮಾನಿ ಪುರುಷನು ಇಂದು ಸ್ವತಂತ್ರ ಭಾರತದಲ್ಲಿ ಸ್ವಜನರಿಂದಲೇ ಹುಚ್ಚುನಾಯಿಯಂತೆ ಹೊಡೆಸಿಕೊಂಡು ರಕ್ತದ ಮಡುವಿನಲ್ಲಿ ಅಸಹಾಯನಾಗಿ ಕುಸಿದು ಬಿದ್ದಿದ್ದ!’ ಗಾಂಧೀಜಿಯವರ ಹತ್ಯೆಯ ಸುಳ್ಳು ಆರೋಪದ ಮೇರೆಗೆ ದುಷ್ಟಶಕ್ತಿಗಳು ಸಾವರ್​ಕರ್ ಕುಟುಂಬ ಹಾಗೂ ಕಿರಿಯ ತಮ್ಮನ ಮೇಲೆ ದೌರ್ಜನ್ಯ ಮಾಡಿದಾಗ ಸ್ವಾತಂತ್ರ್ಯವೀರ ಸಾವರ್​ಕರರ ಹೃದಯದಾಳದಿಂದ ಹೊರಹೊಮ್ಮಿದ ದುಃಖಭರಿತ ನುಡಿಗಳು ಇವು.

ಅಣ್ಣಂದಿರ ಹಾದಿಯಲ್ಲಿ: ಸ್ವಾತಂತ್ರ್ಯವೀರ ಸಾವರ್​ಕರ್ ಬರೆದಿರುವ ಹನ್ನೊಂದು ನುಡಿಗಳ ‘ವೀರದೀಕ್ಷಾ’ ಎಂಬ ಚೌಪದಿಗಳ ಎರಡು ಪದ್ಯಗಳಲ್ಲಿ ಹೀಗಂದಿದ್ದಾರೆ; ‘ಹೇ ಮಾತೃಭೂಮಿ! ನಿನ್ನ ಬಲಿವೇದಿಯ ಮೇಲೆ ನನ್ನ ಮನೆ, ಮಠ, ಐಶ್ವರ್ಯಗಳನ್ನೆಲ್ಲ ಇಟ್ಟೆ. ಅತ್ತಿಗೆ, ಹೆಂಡತಿ, ಎಳೆಮಕ್ಕಳನ್ನೆಲ್ಲ ಕಾಳ್ಗಿಚ್ಚಿನಲ್ಲಿ ಹಾಕಿದೆ. ಅತುಲ ಧೈರ್ಯದ ಪರಮ ಕರುಣೆಯ ಸಿಂಧು ಅಣ್ಣನನ್ನು ನಿನಗಾಗಿಯೇ ಆಹುತಿ ಕೊಟ್ಟೆ. ಪ್ರೀತಿಯ ತಮ್ಮ ಬಾಳ ನಿನಗಾಗಿಯೇ ಮೀಸಲಾದ. ಈಗ ನನ್ನ ದೇಹವನ್ನೂ ಇಡುವ ಸರದಿ ಬಂದಿದೆ. ನನಗೆ ಏಳು ಜನ ಸೋದರರಿದ್ದರೂ ಅವರೆಲ್ಲರನ್ನು ನಿನಗಾಗಿ ಮುಡುಪಿಡುತ್ತಿದ್ದೆ…’

ಇಲ್ಲೆಲ್ಲ ಉಲ್ಲೇಖವಾಗಿರುವ ಬಾಳ ಬೇರಾರೂ ಅಲ್ಲ ಸಾವರ್​ಕರ್ ಸೋದರರಲ್ಲಿ ಮೂರನೆಯವನು, ಎಲ್ಲರಿಗಿಂತ ಚಿಕ್ಕವನು, ನಾರಾಯಣರಾವ್ ಸಾವರ್​ಕರ್.

ದಾಮೋದರ್ ಪಂತ್ ಸಾವರ್​ಕರ್ ಮತ್ತು ರಾಧಾಬಾಯಿ ದಂಪತಿಯ ಮೂರನೆಯ ಮಗನಾದ ನಾರಾಯಣ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಅವನು ಮೂರು ವರ್ಷದವನಾಗಿದ್ದಾಗ ತಾಯಿ ರಾಧಾಬಾಯಿ ಕೊನೆಯುಸಿರೆಳೆಯುತ್ತ ಆತನನ್ನು ಹಿರಿಯ ಮಗ ಬಾಬಾನಿಗೆ ಒಪ್ಪಿಸಿದಳು. ಅಂದಿನಿಂದ ತನ್ನ ಕೊನೆಗಾಲದವರೆಗೂ ತಂದೆಯ ರಕ್ಷಣೆಯನ್ನೂ ತಾಯಿಯ ವಾತ್ಸಲ್ಯವನ್ನೂ ನೀಡಿ ಬಾಬಾನೇ ಬೆಳೆಸುತ್ತ ಬಂದ. ಅಷ್ಟೇ ಪ್ರೀತಿಯನ್ನು ವಿನಾಯಕ ಸಾವರ್​ಕರ್ ಕೂಡ ಧಾರೆ ಎರೆದರು. ಬಾಬಾ, ತಾತ್ಯಾ, ಬಾಳಾರ ಸೋದರಪ್ರೇಮ ಅಸೀಮ, ಅಪೂರ್ವ. ‘ಕ್ರಾಂತಿವೀರ ಬಾಬಾರಾವ್ ಸಾವರ್​ಕರ್’ ಎಂಬ ಜೀವನಚರಿತ್ರೆಯ ಲೇಖಕ ಡಿ.ಎನ್. ಗೋಖಲೆ ತಮ್ಮ ಪುಸ್ತಕದಲ್ಲಿ ಬಾಬಾ, ಬಾಳರ ಸಂಬಂಧವನ್ನು ಹೀಗೆ ತಿಳಿಸಿದ್ದಾರೆ: ‘ನಾರಾಯಣರಾವ್​ಗೆ ಮಾತೆಯ ಮಮತೆ, ತಂದೆಯ ಸ್ನೇಹ, ವಿಶ್ವಾಸಗಳನ್ನು ನೀಡಿ ಬಾಬಾನೇ ಪಾಲನೆ ಪೋಷಣೆ ಮಾಡಿದ. ತನ್ನ ಎರಡನೆಯ ತಮ್ಮ ತಾತ್ಯಾನಂತೆ ಇವನೂ ಮಹಾನ್ ದೇಶಭಕ್ತನಾಗಬೇಕೆಂದು ಬಯಸಿ ಅವನಿಗೆ ಶಿಕ್ಷಣ-ಸಂಸ್ಕಾರಗಳನ್ನು ನೀಡಿದ. ಬಾಬಾ, ತಾತ್ಯಾರಿಂದ ಅವನಿಗೆ ಯಾವ ಸ್ಪೂರ್ತಿ ದೊರೆಯಿತೋ ಅದರ ಮೂಲಕ ‘ಮಿತ್ರ ಸಮಾಜ’ ಎಂಬ ವಿದ್ಯಾರ್ಥಿ ಸಂಘಟನೆಯನ್ನು ವಿಸ್ತಾರಗೊಳಿಸಿದ. ತನ್ನ ಸಂಘಟನಾ ಚಾತುರ್ಯದ ಬಲದಿಂದ ಅನೇಕ ನವಯುವಕರನ್ನು ಆಕರ್ಷಿಸಿ ಕರೆತಂದು ಈ ಸಂಸ್ಥೆಯ ಸದಸ್ಯರನ್ನಾಗಿ ಮಾಡಿದ. ಅವನು ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಪ್ರೇರಣಾದಾಯಕ ಉತ್ಸಾಹಪೂರ್ಣ ಭಾಷಣಗಳಿಂದ ನವಯುವಕರ ಪ್ರೀತಿ ಹಾಗೂ ವಯೋವೃದ್ಧರ ಪ್ರಶಂಸೆಗೆ ಪಾತ್ರನಾಗಿದ್ದ’.

ಅನುಶೀಲನ ಸಮಿತಿಯ ತರಬೇತಿ: ಬಾಳ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಮುಂದಿನ ಶಿಕ್ಷಣಕ್ಕಾಗಿ 1908ರಲ್ಲಿ ಬರೋಡಾಗೆ ತೆರಳಿದ. ಅಲ್ಲಿ ಅಭಿನವ ಭಾರತದ ಶಾಖೆಯನ್ನು ಆರಂಭಿಸಿ ಅದರಲ್ಲಿ ಇನ್ನೂರು ಮಂದಿ ಕಿಶೋರರನ್ನು ಸೇರ್ಪಡಿಸಿ ಅವರಿಗೆ ಪ್ರತಿಜ್ಞೆ ನೀಡಿದ. ಅದೇ ವೇಳೆ ಬರೋಡಾದ ಪ್ರಸಿದ್ಧ ಮಲ್ಲಯುದ್ಧ ಗುರು ಮಾಣಿಕ್​ರಾವ್​ನ ವ್ಯಾಯಾಮ ಶಾಲೆಯಲ್ಲಿ ಕುಸ್ತಿ, ಮಲ್ಲಕಂಬ, ಲಾಠಿ, ಕತ್ತಿ ವರಸೆ ಮುಂತಾದವನ್ನು ಕಲಿತು ಉತ್ತಮ ಕ್ರಾಂತಿಕಾರಿಯಾಗಲು ಅವಶ್ಯವೆನಿಸಿದ ತರಬೇತಿ ಪಡೆದ. ಅವನು ರಜೆಯ ದಿನಗಳಲ್ಲಿ ನಾಸಿಕ್​ಗೆ ಹೋದಾಗ ಅತ್ಯುತ್ಸಾಹದಿಂದ ಅಲ್ಲಿನ ಸದಸ್ಯರಿಗೆ ತಾನು ಕಲಿತ ವಿದ್ಯೆಯನ್ನು ಕಲಿಸುತ್ತಿದ್ದ. ಅವರ ನೇತೃತ್ವದಲ್ಲಿ ಚಿಂತನಶೀಲ ಬೌದ್ಧಿಕ ಚಟುವಟಿಕೆಗಳು ನಡೆದು ಕ್ರಾಂತಿಕಾರಿ ದೇಶಭಕ್ತಿಯ ಪ್ರೇರಣಾದಾಯಕ ಪುಸ್ತಕಗಳ ಚರ್ಚಾ ಕಾರ್ಯಕ್ರಮ ನಡೆಸುತ್ತಿದ್ದ. ಅಭಿನವ ಭಾರತದ ಈ ಕಾರ್ಯಚಟುವಟಿಕೆಗಳ ಪರಿಣಾಮ ಪೊಲೀಸರ ಗೃದ್ರದೃಷ್ಟಿ ಅವನ ಮೇಲೆ ಬಿದ್ದು ಆರು ತಿಂಗಳ ಸೆರೆವಾಸದ ‘ಗೌರವ’ವೂ ಲಭಿಸಿತು.

1909ರ ನವೆಂಬರ್ 21ರಂದು ಬಾಬಾರಾವ್​ಗೆ ಕರಿನೀರು ಶಿಕ್ಷೆ ಘೊಷಿಸಿದಾಗ ಅಹಮದಾಬಾದ್​ನಲ್ಲಿ ಬಾಂಬ್ ಆಸ್ಪೋಟವಾಯಿತು. ಅನಂತ ಲಕ್ಷ್ಮಣ ಕಾನ್ಹರೆ ಜಾಕ್ಸನ್ನನ ವಧೆ ಮಾಡಿದ. ಧಿಂಗ್ರಾ ಲಂಡನ್ನಿನಲ್ಲಿ ಕರ್ಜನ್ ವೈಲಿಯನ್ನು ಮುಗಿಸಿದ. ಈ ಹಿನ್ನೆಲೆಯಲ್ಲಿ ಹಾಗೂ ಅತ್ಯಂತ ಅಪಾಯಕಾರಿ ವ್ಯಕ್ತಿ ಸ್ವಾತಂತ್ರ್ಯವೀರ ಸಾವರ್​ಕರರ ಕಿರಿಯ ತಮ್ಮನೆಂಬ ಹೆಗ್ಗಳಿಕೆಯ ಕಾರಣದಿಂದಲೂ ಪದೇಪದೆ ಬಂಧನ, ಪೊಲೀಸ್ ಚಿತ್ರಹಿಂಸೆಗಳ ಸನ್ಮಾನಗಳೂ ಆಗಿ ಕಡೆಗೆ ಸಾಕ್ಷ್ಯಾಧಾರಗಳಿಲ್ಲದೆ ಬಿಡುಗಡೆಯೂ ಆಗುತ್ತಿತ್ತು.

ಇವನು ಇವೆಲ್ಲವುಗಳಿಂದ ಬಿಡುಗಡೆ ಪಡೆದಿದ್ದು 1911ರ ಜೂನ್ 21ರಂದು. ಯಾವ ಕಾರಣಕ್ಕೂ ವಿದ್ಯಾಭ್ಯಾಸ ನಿಲ್ಲಬಾರದೆಂದು ಬಾಬಾ, ತಾತ್ಯಾರ ಆಗ್ರಹವಿದ್ದ ಕಾರಣ, ಮಹಾರಾಷ್ಟ್ರದಲ್ಲಿ ಎಲ್ಲ ಕಾಲೇಜುಗಳಲ್ಲಿ ಅವನಿಗೆ ಪ್ರವೇಶ ನಿಷೇಧವಾಗಿದ್ದ ಕಾರಣ ಕೊಲ್ಕತಾದ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ದಾಖಲಾದ. ಅಲ್ಲಿ ಬಾಳನಿಗೆ ಮೆಡಿಕಲ್ ಶಿಕ್ಷಣ ಪಡೆಯಲು ಬಂದಿದ್ದ ಆರೆಸ್ಸೆಸ್ ಸಂಸ್ಥಾಪಕ ಕೆ.ಬಿ. ಹೆಡ್ಗೆವಾರರ ಘನಿಷ್ಠ ಸಂಬಂಧ ಏರ್ಪಟ್ಟಿತು. ಬಂಗಾಳದ ಪ್ರಸಿದ್ಧ ಕ್ರಾಂತಿಕಾರಿ ಸಂಘಟನೆ ಅನುಶೀಲನ ಸಮಿತಿಯಲ್ಲಿ ಇಬ್ಬರೂ ಪ್ರವೇಶ ಪಡೆದುಕೊಂಡು ಶಿಕ್ಷಣದ ಜೊತೆಗೆ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಬಾಳಾ ಅಲೋಪತಿ, ದಂತ ಚಿಕಿತ್ಸೆ ವಿಭಾಗಗಳಲ್ಲಿ ಶಿಕ್ಷಣ ಪಡೆದ. ಇವನ ಇಡೀ ಶಿಕ್ಷಣದ ಖರ್ಚನ್ನು ಭರಿಸಿದವಳು ಮೇಡಂ ಕಾಮಾ!

ಕೊಲ್ಕತಾದಲ್ಲಿ ಬಾಳಾ ಮತ್ತು ಹೆಡ್ಗೆವಾರರ ಸ್ನೇಹ ಎಷ್ಟು ಬಲಗೊಂಡಿತೆಂದರೆ ಅವರ ಸಂಬಂಧ ಹೆಡ್ಗೆವಾರ್ ಆರೆಸ್ಸೆಸ್ ಸ್ಥಾಪಿಸಿದ ಅನಂತರವೂ ಮುಂದುವರಿದು ಸಾವರ್​ಕರ್ ಸೋದರರಿಂದ ಆ ಸಂಘಟನೆಗೆ ಪುಷ್ಟಿ ದೊರೆಯಿತು. ಬಾಬಾ, ಬಾಳಾರು ಆರೆಸ್ಸೆಸ್​ಗೋಸ್ಕರ ಪ್ರವಾಸ ಮಾಡಿ ಪ್ರಚಾರ ಕೈಗೊಂಡಿದ್ದೂ ಉಂಟು.

ತನ್ನವರಿಂದಲೇ ಮಾರಣಾಂತಕ ಕಲ್ಲೇಟು: ಸಾವರ್​ಕರ್ ಸೋದರರೆಂದರೆ ಹಿಂದೂ ಸಮಾಜಕ್ಕಾಗಿ ಸರ್ವಸ್ವವನ್ನೂ ಮುಡಿಪಿಟ್ಟ ಚೇತನಗಳು. ಮುಂಬೈ ಚೌಪಾಟಿ ಸಮುದ್ರ ತೀರದಲ್ಲಿ ಕ್ರೈಸ್ತ ಮಿಷನರಿಗಳು ಮತಾಂತರಕ್ಕಾಗಿ ಪ್ರಚಾರ ಮಾಡುತ್ತಿದ್ದರೆ ಬಾಳಾ ಗೆಳೆಯರನ್ನು ಕೂಡಿಸಿಕೊಂಡು ಅವರನ್ನು ಒದ್ದೋಡಿಸಿ ಮತ್ತೆ ಅವರು ಅಲ್ಲಿಗೆ ಮರಳದಂತೆ ಮಾಡುತ್ತಿದ್ದ. ಮುಂಬೈಯ ಗಿರ್​ಗಾಂವ್​ನಲ್ಲಿ ತಿಲಕರ ಸ್ಮಾರಕ ನಿರ್ವಿುಸುವುದರಲ್ಲಾಗಲಿ, ಅಬ್ದುಲ್ ರಶೀದ್ ಎಂಬ ಮುಸಲ್ಮಾನ್ ಹಂತಕ ಸ್ವಾಮಿ ಶ್ರದ್ಧಾನಂದರ ಕೊಲೆ ಮಾಡಿದಾಗ ಅವರ ನೆನಪಿಗಾಗಿ ‘ಶ್ರದ್ಧಾನಂದ’ ಮಾಸಪತ್ರಿಕೆ ಪ್ರಾರಂಭಿಸಿ ಹಿಂದೂ ಧರ್ಮ ಪ್ರಚಾರ ಮಾಡುವುದರಲ್ಲಾಗಲೀ, ಗೋವಾದಲ್ಲಿ ವಿನಾಯಕ್ ಮಹಾರಾಜ್ ಮಸೂರ್​ಕರ್ ಎಂಬ ಸಂನ್ಯಾಸಿಯು ಮತಾಂತರಗೊಂಡ ಹಿಂದೂಗಳ ಘರ್​ವಾಪ್​ಸಿ ಕೆಲಸದಲ್ಲಾಗಲೀ ನಾರಾಯಣರಾವ್​ದೇ ಮುಂದಾಳತ್ತ್ವ.

1925, 1937, 1939ರಲ್ಲಿ ಮುಂಬೈಯಲ್ಲಿ ಮತಾಂಧರು ಹಿಂದೂಗಳ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಮಾಡಿದಾಗ ಹಿಂದೂ ಯುವಕರನ್ನು ಸಂಘಟಿಸಿ ಆಕ್ರಮಣಕಾರರ ಎದುರು ಹೋರಾಡಿದ ವೀರಾಗ್ರಣಿ ನಾರಾಯಣ್ ಸಾವರ್​ಕರ್. ಕೊಲ್ಕತ್ತಾದಿಂದ ವೈದ್ಯಕೀಯ ಡಿಗ್ರಿ ಪಡೆದು ಬಂದ ನಾರಾಯಣರಾವ್ ಅತ್ತಿಗೆಯ ಸಲಹೆಯಂತೆ ವಿವಾಹ ಮಾಡಿಕೊಂಡು ಮುಂಬೈಯಲ್ಲಿ ಕ್ಲಿನಿಕ್ ಸ್ಥಾಪಿಸಿ ಸಾಂಸಾರಿಕ ಜೀವನ ಆರಂಭಿಸಿದ. ನಂತರವೂ ಆರೆಸ್ಸೆಸ್, ಹಿಂದೂ ಮಹಾಸಭಾಗಳ ಮೂಲಕ ಹಿಂದೂ ಸಮಾಜದ ಸೇವೆಯನ್ನು ನಿರಂತರ ನಡೆಸಿದ. ಅಣ್ಣಂದಿರಿಗಿದ್ದ ಲೇಖನ ಪ್ರತಿಭೆ ನಾರಾಯಣರಾವ್​ಗೂ ಇತ್ತು. ಹಲವು ಕಾದಂಬರಿಗಳನ್ನೂ ತಾತ್ಯಾ ಟೋಪೆಯವರ ಜೀವನ ಚರಿತ್ರೆ ಮತ್ತು ‘ಹಿಂದೂ ಚಾ ವಿಶ್ವ ವಿಜಯೀ ಇತಿಹಾಸ್’ ಎಂಬ ಪುಸ್ತಕಗಳನ್ನು ಬರೆದದ್ದಲ್ಲದೆ ಅಣ್ಣನ ‘ಹಿಂದುತ್ವ’ ಮತ್ತು ‘ಹಿಂದೂ ಪದಪಾದಷಾಹಿ’ ಇಂಗ್ಲಿಷ್ ಪುಸ್ತಕಗಳ ಮರಾಠಿ ಅನುವಾದ ಕೂಡ ಮಾಡಿದ. ಸಾವರ್​ಕರ್ ಸೋದರರ ಒಂದು ಬಲವಾದ ನಂಬಿಕೆ ಎಂದರೆ ಮುಸಲ್ಮಾನ್ ಮತ್ತು ಕ್ರೈಸ್ತರಿಂದ ಭಾರತಕ್ಕೆ ಎಂದಿದ್ದರೂ ಅಪಾಯವೇ ಎಂಬುದಾಗಿತ್ತು. ಆದ್ದರಿಂದ ಆ ಮೂವರೂ ಅವುಗಳ ವಿರುದ್ಧ ಹೋರಾಡಿ ಹಿಂದೂ ಧರ್ಮವನ್ನು ಕಾಪಾಡುವ ಪ್ರತಿಜ್ಞೆ ತಳೆದಿದ್ದರು. ಆದರೆ 1948ರ ಜನವರಿಯಲ್ಲಿ ನಡೆದ ಆ ದುರ್ಘಟನೆ ನಾರಾಯಣರಾವ್ ಜೀವನಕ್ಕೆ ಕೊಟ್ಟ ಅಂತಿಮ ಮರ್ವಘಾತವಾಗಿತ್ತು.

1948 ಜನವರಿ 30ರ ಸಂಜೆ ದೆಹಲಿಯ ಬಿರ್ಲಾ ಭವನದಲ್ಲಿ ಹಾರಿದ ಗುಂಡುಗಳು ಗಾಂಧೀಜಿಯವರ ಹತ್ಯೆಗೈದಿತ್ತು. ಅದರ ತತ್​ಕ್ಷಣದ ಪರಿಣಾಮ ದುಷ್ಟಶಕ್ತಿಗಳು ಸಾವರ್​ಕರ್ ಕುಟುಂಬ ಮತ್ತು ಇತರ ಹಿಂದೂ ಕಾರ್ಯಕರ್ತರ ಮೇಲೆ ಭೀಕರ ಹಿಂಸಾಚಾರ ನಡೆಸಿದವು. ಮುಂಬೈಯ ದಾದರ್​ನಲ್ಲಿದ್ದ ನಾರಾಯಣರಾವ್ ಸಾವರ್​ಕರ್ ಮನೆ ಮೇಲೆ ಮುಗಿಬಿದ್ದ ನೂರಾರು ಜನರ ಗುಂಪು ನಾರಾಯಣ್​ರನ್ನು ಮನೆಯಿಂದ ಹೊರಗೆಳೆದು ಅವರ ಮೇಲೆ ಕಲ್ಲುಗಳ ಸುರಿಮಳೆಗರೆದು ಜಝುರಿತರನ್ನಾಗಿ ಮಾಡಿ ರಕ್ತದ ಮಡುವಿನಲ್ಲಿ ಕೆಡವಿತು. ಆನಂತರ ಆಸ್ಪತ್ರೆಯಲ್ಲಿ ಶುಶ್ರೂಷೆಯಾದರೂ ಆತ ಆ ಆಘಾತಗಳಿಂದ ಚೇತರಿಸಿಕೊಳ್ಳಲಿಲ್ಲ. ಅನಂತರ ಪಾರ್ಶ್ವವಾಯು ಬಡಿದು ಹಾಸಿಗೆ ಹಿಡಿದ ನಾರಾಯಣರಾವ್ ಸಾವರ್​ಕರ್ 1949ರ ಅಕ್ಟೋಬರ್ 19ರಂದು ಕೊನೆಯುಸಿರೆಳೆದರು. ಈ ಲೇಖನದ ಆರಂಭದಲ್ಲಿ ಕೊಟ್ಟಿರುವ ಸ್ವಾತಂತ್ರ್ಯವೀರ ಸಾವರ್​ಕರ್ ಮಾತುಗಳು ಆತನ ಸಾವಿನ ಸಮಯದ್ದೇ!

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top