Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಅವರ ಕವಿತೆಗಳು ಪೀಳಿಗೆಗಳ ದೇಶಭಕ್ತಿಗೆ ಸ್ಪೂರ್ತಿ!

Thursday, 15.02.2018, 3:03 AM       No Comments

| ಡಾ. ಬಾಬು ಕೃಷ್ಣ ಮೂರ್ತಿ

ದೇಶಬಂಧುಗಳಲ್ಲಿ ದೇಶಭಕ್ತಿಯ ಸೆಲೆ ಚಿಮ್ಮಿಸುವುದಕ್ಕೆ ಅಹರ್ನಿಶಿ ದುಡಿದ ಸುಬ್ರಹ್ಮಣ್ಯ ಭಾರತಿಯವರು, ಕೊನೆಕೊನೆಗೆ ಹೆಂಡತಿ-ಮಕ್ಕಳಿಗೆ ಊಟ ಒದಗಿಸಲೂ ಸಾಧ್ಯವಾಗದ ಸ್ಥಿತಿ ತಲುಪಿದ್ದು ವಿಪರ್ಯಾಸ. ತಮ್ಮ ಎರಡನೆಯ ಮಗಳು ಸಾವು-ಬದುಕುಗಳ ನಡುವೆ ಹೋರಾಡುತ್ತಿದ್ದಾಗ ವೈದ್ಯರಿಗೆ ಹಣ ಕೊಡಲಾಗದ ಭಾರತಿ, ಇಡೀ ರಾತ್ರಿ ‘ಓಂ ಶಕ್ತಿ, ಓಂ ಶಕ್ತಿ’ ಎಂದು ಜಪಿಸುತ್ತಿದ್ದರು.

 ಕೊಲ್ಕತಾದಲ್ಲಿ 1906ರ ಡಿಸೆಂಬರ್ ತಿಂಗಳಿನಲ್ಲಿ ಕಾಂಗ್ರೆಸ್ಸಿನ ಅಧಿವೇಶನ ನಡೆಯಿತು. ಅದಕ್ಕೆ ಮೊದಲೇ ಸ್ವಾಮಿ ವಿವೇಕಾನಂದ, ಬಿಪಿನ್​ಚಂದ್ರ ಪಾಲ್ ಹಾಗೂ ರಾಮಕೃಷ್ಣ ಮಠದ ಯತಿವರ್ಯರುಗಳು ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಸ್ವದೇಶಿ, ಸ್ವರಾಜ್ಯ, ಸ್ವಧರ್ಮಗಳ ಭಾವನೆಗಳನ್ನು ಬಡಿದೆಬ್ಬಿಸಿದ್ದರು. ಅದರ ಪ್ರಭಾವದಿಂದಾಗಿ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಲು ಬಿಸಿನೆತ್ತರಿನ ತರುಣರ ಒಂದು ದೊಡ್ಡ ತಂಡವೇ ಆಗಮಿಸಿತ್ತು. ಆ ಪೈಕಿ 24ರ ಹರೆಯದ ಧೀರಯುವಕನೊಬ್ಬ ಪಾದರಸದೋಪಾದಿಯಲ್ಲಿ ಇಡೀ ಅಧಿವೇಶನದಲ್ಲಿ ಸಂಚರಿಸುತ್ತ ಎಲ್ಲ ಮುಂಚೂಣಿ ನಾಯಕರನ್ನು ಸಂರ್ಪಸಿ ಸ್ವದೇಶಿ ವಿಚಾರ ಕುರಿತು ರ್ಚಚಿಸುತ್ತಿದ್ದ. ಅಲ್ಲಿ ಅವನು ಒಂದು ಮುಖ್ಯಕೆಲಸ ಮಾಡುವುದಿತ್ತು. ಅದೇ- ಕೋಲ್ಕತಾದ ಪ್ರಸಿದ್ಧ ಬೋಸ್​ಪಾರಾ ರಸ್ತೆಯಲ್ಲಿದ್ದ ಓರ್ವ ಸ್ತ್ರೀಮೂರ್ತಿಯನ್ನು ಕಾಣುವುದು.

ಆಕೆ ಇದ್ದ ಮನೆಯನ್ನು ಪ್ರವೇಶಿಸಿದ ಆ ಯುವಕ, ಅಲ್ಲಿ ಮೇಜಿನ ಮುಂದೆ ಕುಳಿತು ಏನನ್ನೋ ಬರೆಯುತ್ತಿದ್ದ ದಿವ್ಯಮೂರ್ತಿಯನ್ನು ಕಂಡು ಆಶ್ಚರ್ಯಚಕಿತನಾದ. ಎಂಥ ತೇಜೋಮಯ ವ್ಯಕ್ತಿತ್ವವದು! ಭಾವಭರಿತನಾಗಿ ಕಂಗಳಲ್ಲಿ ಆನಂದಬಾಷ್ಪ ಸುರಿಸುತ್ತ ಆ ಸ್ತ್ರೀಮೂರ್ತಿಯ ಪಾದಗಳಿಗೆ ದೀರ್ಘದಂಡ ನಮಸ್ಕಾರ ಮಾಡಿ ಕಂಪಿಸುತ್ತ ಕೈಕಟ್ಟಿ ನಿಂತ. ಬಾಯಿಂದ ಮಾತುಗಳೇ ಹೊರಡುತ್ತಿಲ್ಲ. ಆಕೆಯೇ ಮುಗುಳುನಗೆ ಬೀರುತ್ತ ಬಾಯಿ ತೆರೆದಳು-‘ಎಲ್ಲಿಂದ ಬಂದಿರುವೆ ಮಗೂ?’.

‘ಮದ್ರಾಸ್​ನಿಂದ ಬಂದಿದ್ದೀನಿ. ನನ್ನ ಹೆಸರು ಸುಬ್ರಹ್ಮಣ್ಯ ಭಾರತಿ. ಈವರೆಗೆ ‘ಸ್ವದೇಶ ಮಿತ್ರನ್’ ಎಂಬ ತಮಿಳು ಪತ್ರಿಕೆಯಲ್ಲಿದ್ದೆ. ಅದರ ಮಾಲೀಕರು ಬ್ರಿಟಿಷ್ ವಿರೋಧಿಯಾದ ನನ್ನ ಖಾರವಾದ ಲೇಖನಗಳನ್ನು ಇಷ್ಟಪಡಲಿಲ್ಲ. ಅವನ್ನು ಮೆದುಗೊಳಿಸುವಂತೆ ಸೂಚಿಸಿದರು. ಹೀಗಾಗಿ ಅದನ್ನು ಬಿಟ್ಟು ಹೊರಬಂದೆ. ಈಗ, ಮಂಡಯಂ ತಿರುಮಲಾಚಾರಿ ಮತ್ತು ಮಂಡಯಂ ಶ್ರೀನಿವಾಸಾಚಾರಿ ಎಂಬುವವರು ನನ್ನ ಸಲುವಾಗಿಯೇ ‘ಇಂಡಿಯಾ’ ಎಂಬ ಪತ್ರಿಕೆ ಆರಂಭಿಸಿ ನನಗೊಪ್ಪಿಸಿದ್ದಾರೆ. ನನಗೆ ಸ್ವಾಮಿ ವಿವೇಕಾನಂದರೇ ಆರಾಧ್ಯದೈವ. ಆದ್ದರಿಂದ ಅವರು ಸಾರಿದ ‘ಉತ್ತಿಷ್ಠತಾ, ಜಾಗ್ರತಾ, ಪ್ರಾಪ್ಯ ವರಾನ್ನಿಬೋಧತ’ ಎಂಬ ಸಂದೇಶವನ್ನೇ ‘ಇಂಡಿಯಾ’ ಪತ್ರಿಕೆಯ ಧ್ಯೇಯವಾಕ್ಯವನ್ನಾಗಿರಿಸಿದ್ದೀನಿ’.

ಆ ಸ್ತ್ರೀಮೂರ್ತಿ ಅವನನ್ನೇ ದಿಟ್ಟಿಸುತ್ತಿದ್ದಳು. ‘ನಿನ್ನ ಕಣ್ಣುಗಳಲ್ಲಿ ಎಂಥ ಹೊಳಪಿದೆ ಮಗೂ! ಶಕ್ತಿದೇವತೆಯ ಪೂರ್ಣಾನುಗ್ರಹ ನಿನ್ನ ಮೇಲಿದೆ. ಸ್ವಾತಂತ್ರ್ಯ ಹೋರಾಟದ ಕೆಲಸದಲ್ಲಿ ನಿನಗೆ ಉಜ್ವಲ ಪಾತ್ರವಿದೆ’ ಎಂದಳು.

ಆ ಯುವಕ ರೋಮಾಂಚನಗೊಂಡ. ಮತ್ತೆ ಅವನ ಕಂಗಳಲ್ಲಿ ಆನಂದಬಾಷ್ಪ!

ಆ ಶೋಭಾಯಮಾನ ಸ್ತ್ರೀಮೂರ್ತಿಯೇ ಸಿಸ್ಟರ್ ನಿವೇದಿತಾ! ಆ ಭಾವಜೀವಿ ಯುವಕನೇ ತಮಿಳು ಮಹಾನ್ ಕವಿ, ದೇಶಭಕ್ತ, ತಮಿಳುನಾಡಿನ ಸ್ವಾತಂತ್ರ್ಯ ಹೋರಾಟದ ತ್ರಿಮೂರ್ತಿಗಳಲ್ಲಿ ಒಬ್ಬನಾದ ಸುಬ್ರಹ್ಮಣ್ಯ ಭಾರತಿ!

‘ಮಗೂ, ಎಲ್ಲ ಕಾಲವೂ ನಿನ್ನ ಮನಸ್ಸನ್ನು ಮುಕ್ತವಾಗಿರಿಸಿಕೋ. ಪಕ್ಷ, ಪಂಗಡ, ಜಾತಿ, ಪಂಥಗಳ ಅನಾಗರಿಕ ಭೇದಭಾವವನ್ನು ದೂರಮಾಡಿ ದೇಶಕ್ಕಾಗಿ ದುಡಿ. ನಿನ್ನ ಹೃದಯಸಿಂಹಾಸನದಲ್ಲಿ ಉತ್ಕಟ ದೇಶಾಭಿಮಾನ, ಸ್ವಧರ್ಮಪ್ರೇಮ ನೆಲೆಸಲಿ. ಆಗ ನಿನ್ನ ಹೆಸರು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಅಂಕಿತಗೊಳ್ಳುತ್ತದೆ’ ಎಂದಳು ನಿವೇದಿತಾ.

‘ಅಮ್ಮ, ಧನ್ಯೋಸ್ಮಿ! ನಿಮ್ಮ ಮಾತುಗಳು ನನ್ನ ಭುಜಗಳಲ್ಲಿ ಸಾವಿರ ಆನೆಗಳ ಬಲ ತುಂಬಿದೆ ತಾಯಿ’ ಎಂದ ಸುಬ್ರಹ್ಮಣ್ಯ ಭಾರತಿ. ಮಾತು ಮುಂದುವರಿಯಿತು…..

‘ಭಾರತಿ, ನಿನಗೆ ಮದುವೆ ಆಗಿದೆಯೇ?’. ‘ಆಗಿದೆ. ಒಂದು ಹೆಣ್ಣುಮಗು ಇದೆ’.

‘ಹಾಗಾದರೆ ಕಾಂಗ್ರೆಸ್ ಅಧಿವೇಶನಕ್ಕೆ ನಿನ್ನ ಹೆಂಡತಿಯನ್ನೇಕೆ ಕರೆತರಲಿಲ್ಲ?’. ‘ನಮ್ಮ ಮನೆಗಳಲ್ಲಿ ಹೆಂಡತಿಯನ್ನು ಸಾರ್ವಜನಿಕ ಸ್ಥಳಗಳಿಗೆ ಕರೆದೊಯ್ಯುವ ರೂಢಿ ಇಲ್ಲ’. ತುಸು ಸಿಟ್ಟು ಬೆರೆತ ಮಾತುಗಳು ನಿವೇದಿತಾರಿಂದ ಹೊಮ್ಮಿದವು- ‘ಸಮಾಜದ ಅರ್ಧಭಾಗವು ಉಳಿದರ್ಧ ಭಾಗವನ್ನು ದಾಸ್ಯದಲ್ಲಿಟ್ಟು ಹೇಗೆ ತಾನೆ ಸ್ವಾತಂತ್ರ್ಯ ಗಳಿಸಬಲ್ಲದು? ನಿನ್ನ ಹೆಂಡತಿಯನ್ನು ಮೂಲೆಯಲ್ಲಿರಿಸಬೇಡ. ಅವಳು ನಿನ್ನ ಅರ್ಧಾಂಗಿ. ಅವಳನ್ನು ನಿನ್ನ ದೇವತೆಯಂತೆ ಆರಾಧಿಸು. ನಾರಿಯರನ್ನು ದೇವತೆಗಳಂತೆ ಆರಾಧಿಸಿದಂಥ ಪುಣ್ಯಭೂಮಿಯಲ್ಲವೇ ಇದು!’.

ಭಾರತಿ ನಿರ್ಗಮಿಸಲು ಸಿದ್ಧನಾದಾಗ ನಿವೇದಿತಾ ತನ್ನ ಚೀಲದಿಂದ ಒಣಗಿದ ಎಲೆಯೊಂದನ್ನು ಅವನಿಗೆ ನೀಡಿ ‘ಇದು ನಾನು ಹಿಮಾಲಯ ಪ್ರವಾಸಕಾಲದಲ್ಲಿ ಸಂಗ್ರಹಿಸಿದ್ದು. ನನ್ನ ನೆನಪಿಗಾಗಿ ಇದನ್ನು ಬಳಿಯಲ್ಲಿರಿಸಿಕೋ. ಕಳೆಯಬೇಡ’ ಎಂದಳು.

ಭಾರತಿ ಆ ಎಲೆಯನ್ನು ತಮ್ಮ ಜೀವಿತಾಂತ್ಯದವರೆಗೆ ಅಮೂಲ್ಯ ನಿಧಿಯಂತೆ ಕಾಪಾಡಿಕೊಂಡು ಬಂದರು. ಅದನ್ನು ನೋಡಿದಾಗಲೆಲ್ಲ ಅವರ ಸ್ಪೂರ್ತಿದೇವತೆಯ ದರ್ಶನ ಪಡೆದು ನವಚೈತನ್ಯವನ್ನು ಪಡೆಯುತ್ತಿದ್ದರು.

ಬಾಲಪ್ರತಿಭೆ ಅರಳಿತ್ತು: ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಎಟ್ಟಾಯಪುರಂ ಅವರ ಜನ್ಮಸ್ಥಳ. ಅದು ಒಬ್ಬ ಜಮೀನ್ದಾರನ ಆಡಳಿತಕ್ಕೊಳಪಟ್ಟಿದ್ದ ಪ್ರದೇಶ. ಚಿನ್ನಸ್ವಾಮಿ ಅಯ್ಯರ್ ಎಂಬ ಸ್ಮಾರ್ತಬ್ರಾಹ್ಮಣ ಇವನ ತಂದೆ. ತಾಯಿ ಲಕ್ಷ್ಮೀ. ಇವರಿಬ್ಬರ ಶಿಶುವೇ ಸುಬ್ರಹ್ಮಣ್ಯ ಅಯ್ಯರ್. ಸುಬ್ಬಯ್ಯ ಎಂದೇ ಅವನು ಊರಲ್ಲೆಲ್ಲ ಚಿರಪರಿಚಿತ. ಅವನು ಜನಿಸಿದ್ದು 1882ರ ಡಿಸೆಂಬರ್ 11ರಂದು.

ಸಣ್ಣ ಸಂಸ್ಥಾನದ ದೊರೆಯಂತೆಯೇ ಇದ್ದ ಎಟ್ಟಾಯಪುರಂ ಜಮೀನ್ದಾರ ರಾಜಾ ಜಗವೀರ ರಾಮ ಎಟ್ಟಪ್ಪ ನಾಯಕರ್​ನನ್ನು ಜನ ಪೂಜ್ಯಭಾವನೆಯಿಂದ ಕಾಣುತ್ತಿದ್ದರು. ಅವನು ಸಂಸ್ಕೃತಿ, ಸಾಹಿತ್ಯ ಪ್ರಿಯ. 15 ವರ್ಷದ ಚುರುಕು ಹುಡುಗ ಸುಬ್ಬಯ್ಯನನ್ನು ಕಂಡರೆ ಎಟ್ಟಪ್ಪನಿಗೆ ಬಲು ಅಚ್ಚುಮೆಚ್ಚು. ಒಂದು ದಿವಸ ರಾಜನ ಆಸ್ಥಾನದಲ್ಲಿ ವಿದ್ವತ್ ಸಭೆ. ಅಲ್ಲಿ ಮಹಾನ್ ವಿದ್ವಾಂಸರು ಶಿಕ್ಷಣನೀತಿಯ ಬಗ್ಗೆ ಘನವಾಗಿ ವಾದ ನಡೆಸುತ್ತಿದ್ದರು. ಆಗ ಮಧ್ಯೆ ಪ್ರವೇಶಿಸಿದ ಸುಬ್ಬಯ್ಯ ಶಿಕ್ಷಣನೀತಿ ಕುರಿತು ನಿರರ್ಗಳವಾಗಿ ಮಾಡಿದ ಆಶುಭಾಷಣವನ್ನು ಕೇಳಿ ಇಡೀ ಸಭೆ ಮಂತ್ರಮುಗ್ಧವಾಯಿತು. ಹಿರಿಯ ವಿದ್ವಾಂಸರೊಬ್ಬರು ‘ಮಗೂ ನಿನ್ನ ನಾಲಿಗೆಯಲ್ಲಿ ಸಾಕ್ಷಾತ್ ಸರಸ್ವತಿ ನೆಲೆಸಿದ್ದಾಳೆ. ನೀನೇ ‘ಭಾರತಿ’ಯಯ್ಯಾ….!’ ಎಂದು ಬಾಯ್ತುಂಬ ಹರಸಿದರು. ಅಂದಿನಿಂದಲೇ ಸುಬ್ಬಯ್ಯ ‘ಸುಬ್ರಹ್ಮಣ್ಯ ಭಾರತೀಯರ್’ ಆದ.

ಸುಬ್ರಹ್ಮಣ್ಯ ಭಾರತಿಗೆ ಪತ್ರಿಕೋದ್ಯಮದ ಬಾಗಿಲು ತೆರೆದುಕೊಂಡಿದ್ದು ಸೌಮ್ಯವಾದಿ ಕಾಂಗ್ರೆಸ್ಸಿಗರಾಗಿದ್ದ ಜಿ. ಸುಬ್ರಮಣಿಯ ಅಯ್ಯರ್​ರ ‘ಸ್ವದೇಶ ಮಿತ್ರನ್’ ಮೂಲಕ. ವಿಚಾರಗಳಿಗೆ, ಭಾವನೆಗಳಿಗೆ ಕೊರತೆ ಇರದಿದ್ದ ಭಾರತಿ, ವಿರೋಧಿಗಳನ್ನು ಛಿದ್ರಿಸುವ ಖಡ್ಗವನ್ನಾಗಿ ತಮ್ಮ ಲೇಖನಿಯನ್ನೇ ಬಳಸಿಕೊಂಡರು. ಆಗಲೇ ನಡೆಯಿತು ಐತಿಹಾಸಿಕ ಬಂಗಾಳ ವಿಭಜನೆ. ಭಾರತದ ರಾಜಕೀಯ ಚದುರಂಗವೇ ಬದಲಾಯಿತು.

ಪತ್ರಿಕಾ ವರದಿಗಾರರಾಗಿ ಕಾಂಗ್ರೆಸ್ ಅಧಿವೇಶನಗಳಲ್ಲಿ ಭಾಗವಹಿಸುತ್ತಿದ್ದುದರಿಂದ ರಾಷ್ಟ್ರ ರಾಜಕಾರಣ ಅವರಿಗೆ ಕರತಲಾಮಲಕವಾಯಿತು, ಚಿಂತನಾಮಾರ್ಗ ನಿಚ್ಚಳವಾಯಿತು. 1905ರಲ್ಲಿ ವಾರಾಣಸಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷ ಗೋಖಲೆಯವರ ಸೌಮ್ಯನೀತಿ ಸುಬ್ರಹ್ಮಣ್ಯ ಭಾರತಿಯವರಿಗೆ ಸ್ವಲ್ಪವೂ ಒಪ್ಪಿಗೆಯಾಗಲಿಲ್ಲ. ಶಕ್ತಿಯ ಆರಾಧಕರಾಗಿದ್ದ ಅವರು ಸೌಮ್ಯವಾದದ ವಿರೋಧಿಯಾಗಿದ್ದರು. 1907ರ ಸೂರತ್ ಕಾಂಗ್ರೆಸ್ ಅಧಿವೇಶನದಲ್ಲಿ ವಿ.ಒ. ಚಿದಂಬರಂ ಪಿಳ್ಳೆಯವರೊಂದಿಗೆ ಹೋಗಿ ಸಕ್ರಿಯವಾಗಿ ಭಾಗವಹಿಸಿದ್ದರು. ತಿಲಕರ ಪರ ಘರ್ಷಣೆಗೂ ನಿಂತರು.

ದೇಶಭಕ್ತಿಯನ್ನು ಪ್ರಚೋದಿಸಿದ ಕವಿಸಾಮ್ರಾಟ್: ಪತ್ರಕರ್ತರಾಗಿದ್ದ ಭಾರತಿ ಕವಿಯಾಗಿ ಪ್ರಸ್ತುತಗೊಳ್ಳುವ ಆಕಸ್ಮಿಕ ಸಂದರ್ಭ ಒದಗಿಬಂದು, ಮುಂದೆ ತಮಿಳಿನ ಮಹಾಕವಿಯಾದರು. ಅವರಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಿಸುವ ಹಾಡುಗಳ ಪುಸ್ತಕವೊಂದನ್ನು ಪ್ರಕಟಿಸುವ ಮನಸ್ಸಾಯಿತು. ‘ಸ್ವದೇಶ ಮಿತ್ರನ್’ ಮೂಲಕ ಕವಿಗಳಿಗೆ ಆಹ್ವಾನ ನೀಡಿದ್ದೂ ಆಯಿತು. ಆದರೆ ಅದಕ್ಕೆ ಉತ್ತರವಾಗಿ ಒಂದು ಕವನವೂ ಬರಲಿಲ್ಲ. ಅವರಿಗೆ ನಿರಾಶೆಯಾಯಿತು. ಆಗಿನ ದಿನಗಳಲ್ಲಿ ದೇಶಭಕ್ತಿಗೀತೆ ಹಾಡುವುದೆಂದರೆ ಅದೊಂದು ಮಹಾಪರಾಧ. ‘ವಂದೇ ಮಾತರಂ’ ಗಾಯನವನ್ನೇ ಬ್ರಿಟಿಷ್ ಸರ್ಕಾರ ನಿರ್ಬಂಧಿಸಿರಲಿಲ್ಲವೇ!

ಇಂಥ ಪರಿಸ್ಥಿತಿಯಲ್ಲಿ, ಜನರನ್ನು ಬಡಿದೆಬ್ಬಿಸುವ, ಹೋರಾಟಕ್ಕೆ ನುಗ್ಗುವಂತೆ ಪ್ರೇರಣೆ ನೀಡುವ ಬೆಂಕಿಯ ಚೆಂಡುಗಳಂಥ ಕವಿತೆಗಳನ್ನು ಸುಬ್ರಹ್ಮಣ್ಯ ಭಾರತಿಯವರೇ ರಚಿಸಿದರು. ಆದರೆ ಅದಕ್ಕೆ ಹಣ ಹೂಡುವವರು?

ವಿ. ಕೃಷ್ಣಸ್ವಾಮಿ ಅಯ್ಯರ್ ಎಂಬ ಹಿರಿಯ ಕಾಂಗ್ರೆಸ್ಸಿಗರು ಸಹಾಯ ಮಾಡಬಹುದೆಂದು ನಟೇಶನ್ ಎಂಬ ಯುವ ಪ್ರಕಾಶಕ ಸಲಹೆ ನೀಡಿದ. ಆದರೆ ಭಾರತೀಯವರಿಗೆ ಅದು ದುಸ್ಸಾಧ್ಯ ಎನಿಸಿತು. ಏಕೆಂದರೆ ಕೃಷ್ಣಸ್ವಾಮಿಯವರನ್ನು ತಮ್ಮ ಲೇಖನಿಗೆ ಆಹಾರವಾಗಿಸಿ ಅವರ ತೇಜೋವಧೆಯನ್ನು ಮಾಡಿದ್ದರು ಭಾರತಿ. ನಟೇಶನ ಬಲವಂತಕ್ಕೆ ಕೃಷ್ಣಸ್ವಾಮಿ ಅಯ್ಯರ್ ಮನೆಗೆ ಅನುಮಾನದಿಂದಲೇ ಹೋಗಿ ಅವರ ಎದುರು ‘ವಂದೇ ಮಾತರಂ’ ಗೀತೆಯನ್ನು ಭಾವಪೂರ್ಣವಾಗಿ ಹಾಡಿದಾಗ ಭಾರತೀಯವರ ಕಟ್ಟಾವಿರೋಧಿಯಾಗಿದ್ದ ಕೃಷ್ಣಸ್ವಾಮಿ ರೋಮಾಂಚಿತರಾಗಿ ಕೂಡಲೇ ಆ ಕವನ ಸಂಗ್ರಹಕ್ಕೆ ಹಣನೀಡಿ ಪ್ರಾಯೋಜಕರಾದರು.

1909ರಲ್ಲಿ ‘ಜನ್ಮಭೂಮಿ’ ಕವನ ಸಂಕಲನ ಹೊರಬಿತ್ತು. ಅದರ ಒಂದೊಂದು ಕವನವೂ ಜನಗಳ ಬಾಯಲ್ಲಿ ನರ್ತಿಸತೊಡಗಿತು. ಕಾಳ್ಗಿಚ್ಚಿನಂತೆ ಹಬ್ಬಿದ ಅವರ ಹಾಡುಗಳು ದೇಶಪ್ರೇಮ, ಸ್ವರಾಜ್ಯ, ಸ್ವಧರ್ಮ, ಪ್ರಜಾತಂತ್ರದ ಸಂದೇಶಗಳು ತಮಿಳುನಾಡಿನಾದ್ಯಂತ ಪಸರಿಸಿ ಜನರ ಹೃದಯ ತಟ್ಟುವಂತೆ, ಮನಮುಟ್ಟುವಂತೆ, ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಿಯಾಶೀಲರಾಗುವಂತೆ ಮಾಡಿದವು. ಅವರ ಹಾಡುಗಳಿಲ್ಲದ ಸಭೆ-ಮೆರವಣಿಗೆ-ಚಳವಳಿಗಳಿರಲಿಲ್ಲ. ಭಾರತೀಯವರ ಹಾಡುಗಳು ಕುಂಪಣಿ ಸರ್ಕಾರದ ಸಿಂಹಾಸನಕ್ಕೆ ಬೆಂಕಿ ಹಚ್ಚಿತು. ಸರ್ಕಾರಕ್ಕೆ ಅದರ ಬಿಸಿ ತಡೆಯಲಾರದಾಗಿ ಅವರನ್ನು ಬಂಧಿಸುವ ತಯಾರಿ ನಡೆಸಿದ ಸುದ್ದಿ ಭಾರತೀ ಗೆಳೆಯರಿಗೆ ತಲುಪಿ, ಫ್ರೆಂಚ್ ವಸಾಹತಾಗಿದ್ದ ಪಾಂಡಿಚೆರಿಗೆ ಅವರನ್ನು ಬಲವಂತವಾಗಿ ಸಾಗಿಸುವಂತಾಯಿತು. ಇದು ನಡೆದದ್ದು 1908ರಲ್ಲಿ.

ಅಜ್ಞಾತವಾಸದಲ್ಲಿ ಲೇಖನಿ ಕೂರಸಿಯಾಗಿ: ಅವರ ಹಿಂದೆಯೇ ಮಂಡಯಂ ಸೋದರರ ‘ಇಂಡಿಯಾ’ ಪತ್ರಿಕೆ ಹಾಗೂ ಮುದ್ರಣಯಂತ್ರ ಪಾಂಡಿಚೆರಿಗೆ ಬಂದು ಭಾರತೀಯವರ ಪತ್ರಿಕೋದ್ಯಮ ಮುಂಚೆಗಿಂತಲೂ ಬಿರುಸಾಗಿ ಅಲ್ಲಿಂದಲೇ ಮುಂದುವರಿಯಿತು. ಕುಂಪಣಿ ಸರ್ಕಾರ ಬೆಂಬಿಡದ ಭೂತದಂತೆ ಗೂಢಚಾರರನ್ನು ಅಲ್ಲಿಗೆ ಕಳುಹಿಸಿ ಅವರನ್ನು ಬಂಧಿಸುವ ಪ್ರಯತ್ನದಲ್ಲಿ ತೊಡಗಿತು. ‘ಇಂಡಿಯಾ’ ಪತ್ರಿಕೆ ಮುಚ್ಚಿಹೋಯಿತು. ಮಹಾಕವಿಯ ಲೇಖನಿ ಸುರಿಸುತ್ತಿದ್ದ ಅಗ್ನಿವರ್ಷ ನಿಂತುಹೋಯಿತು.

ಭಾರತಿ ಖಿನ್ನತೆಗೊಳಗಾದರು. 1910ರ ಮಧ್ಯದ ವೇಳೆಗೆ ತಮ್ಮ ಹೆಂಡತಿ-ಮಕ್ಕಳಿಗೆ ಒಪ್ಪೊತ್ತು ಊಟ ಒದಗಿಸಲು ಸಹ ಸಾಧ್ಯವಾಗದ ಸ್ಥಿತಿ ತಲುಪಿದರು. 1915ರ ಆಸುಪಾಸಿನ ಅವರ ಡೈರಿಯ ದಾಖಲೆಗಳನ್ನು, ಅದರಲ್ಲಿ ಉಲ್ಲೇಖವಾಗಿರುವ ಅವರ ಘನಘೊರ ಬಡತನದ ಸ್ಥಿತಿಯನ್ನು ಓದಿದರೆ ಮಮ್ಮಲ ಮರುಗುವಂತಾಗುತ್ತದೆ. ಅವರ ಎರಡನೆಯ ಮಗಳು ಕಾಯಿಲೆಯಿಂದಾಗಿ ಸಾವು-ಬದುಕುಗಳ ನಡುವೆ ಹೋರಾಡುತ್ತಿದ್ದಾಗ ವೈದ್ಯರಿಗೆ ಹಣ ಕೊಡಲಾಗದ ಸ್ಥಿತಿಯಲ್ಲಿದ್ದ ಭಾರತಿ, ಇಡೀ ರಾತ್ರಿ ‘ಓಂ ಶಕ್ತಿ, ಓಂ ಶಕ್ತಿ’ ಎಂದು ಜಪಿಸುತ್ತಿದ್ದರು.

ಈ ದುಸ್ಥಿತಿಯಲ್ಲಿ ಮದ್ರಾಸಿಗೆ ಹಿಂದಿರುಗುವ ಮನಸ್ಸಾಯಿತು. ಆದರೆ ಅವರ ವಿರುದ್ಧ ಪೊಲೀಸ್ ವಾರಂಟ್ ಇನ್ನೂ ಜೀವಂತವಿತ್ತು. ಅವರು ಧೈರ್ಯ ಮಾಡಿ ಫ್ರೆಂಚ್ ವಸಾಹತನ್ನು ತೊರೆದು, ಕಡಲೂರ್ ಎಂಬ ಊರಿನ ಮೂಲಕ ಇಂಡಿಯಾವನ್ನು ಪ್ರವೇಶಿಸಿದಾಗ ಪೊಲೀಸರು ಅವರನ್ನು ಬಂಧಿಸಿ ಕಡಲೂರ್ ಸಬ್-ಜೈಲ್​ನಲ್ಲಿ ಕೂಡಿಹಾಕಿದರು. ‘ಸ್ವದೇಶ ಮಿತ್ರನ್’ ಪತ್ರಿಕೆಯ ಎ. ರಾಮಸ್ವಾಮಿ ಅಯ್ಯಂಗಾರ್ ಮದ್ರಾಸಿನಲ್ಲಿ ಪೊಲೀಸ್ ಇನ್ಸ್​ಪೆಕ್ಟರ್ ಜನರಲ್​ರನ್ನು ಸಂರ್ಪಸಿ ಒಂದು ರಾಜಿಸೂತ್ರ ರಚಿಸಿ ಭಾರತಿ ಮುಕ್ತರಾಗುವಂತೆ ಮಾಡಿದರು.

1920ರಲ್ಲಿ ರಾಮಸ್ವಾಮಿ ಅಯ್ಯಂಗಾರರ ಆಹ್ವಾನದಂತೆ ಭಾರತಿ ಮತ್ತೆ ‘ಸ್ವದೇಶ ಮಿತ್ರನ್’ ಸಂಪಾದಕೀಯ ವರ್ಗ ಸೇರಿ ಸ್ವಲ್ಪ ನೆಮ್ಮದಿಯ ದಿನಗಳನ್ನು ಕಾಣುವಂತಾಯಿತು.

ಆಗ ಅವರ ಮನೆ ಇದ್ದಿದ್ದು ಮದ್ರಾಸಿನ ಟ್ರಿಪ್ಲಿಕೇನ್​ನಲ್ಲಿ. ಒಂದು ಸಂಜೆ ಸನಿಹದ ಪಾರ್ಥಸಾರಥಿ ದೇವಾಲಯಕ್ಕೆ ಹೋದರು. ಕೈಯಲ್ಲಿ ಬೆಲ್ಲ, ಕೊಬ್ಬರಿ, ಬಾಳೆಹಣ್ಣು ಹಿಡಿದುಕೊಂಡು ದೇವಸ್ಥಾನದ ಆನೆಗೆ ತಿನ್ನಿಸಲು ಮುಂದಾದರು. ಅಷ್ಟರಲ್ಲಿ ಆನೆಗೆ ಯಾರೇನು ಮಾಡಿದರೋ, ರೋಷದಿಂದ ಸೊಂಡಿಲೆತ್ತಿ ಅಪ್ಪಳಿಸಿತು! ಭಾರತಿ ಜ್ಞಾನತಪ್ಪಿ ಆನೆಯ ಕಾಲಬಳಿ ಬಿದ್ದರು. ಅದು ಅವರನ್ನು ಕಾಲಿನಿಂದ ತುಳಿಯುವ ಮುನ್ನ ಜತೆಯಲ್ಲಿದ್ದ ಆಪ್ತಶಿಷ್ಯ ಕುವಲೈ ಕಣ್ಣನ್ ಎಂಬುವನು ಕೂಡಲೇ ಧಾವಿಸಿ ಜ್ಞಾನತಪ್ಪಿ ಬಿದ್ದಿದ್ದ ತನ್ನ ಗುರುವನ್ನು ಎತ್ತಿಕೊಂಡು ಹೋಗಿ ಮನೆ ಸೇರಿಸಿದ. ಅವರು ಚೇತರಿಸಿಕೊಂಡು ಕೆಲಕಾಲ ‘ಸ್ವದೇಶ ಮಿತ್ರನ್’ ಕಚೇರಿಗೆ ಹೋಗಿ ಕೆಲಸವನ್ನೂ ಮಾಡಿದರು. ಆನೆಯ ಸೊಂಡಿಲ ಹೊಡೆತದ ಕಾರಣವೋ ಏನೋ ಕೆಲ ಸಮಯದ ನಂತರ ಹಾಸಿಗೆ ಹಿಡಿದರು. ಹಾಗೆಯೇ ಅರೆಜ್ಞಾನದ ಸ್ಥಿತಿ ತಲುಪಿದರು. 1921ರ ಸೆಪ್ಟೆಂಬರ್ 12ರ ಬೆಳಗಿನ ಝಾವದಲ್ಲಿ ಶಾಂತಿಯಿಂದ ಅಂತಿಮಯಾತ್ರೆ ಕೈಗೊಂಡರು.

ಅವರು ಬರೆದ ಕವನಗಳಲ್ಲಿ ಶೇ. 20 ಮಾತ್ರ ದೇಶಭಕ್ತಿ ಗೀತೆಗಳು; ಆದರೆ ಇಂದಿಗೂ ಅವರು ಹೆಸರಾಗಿರುವುದು ‘ದೇಶಭಕ್ತ ಕವಿ’ ಎಂದೇ. ಒಂದು ಸ್ಯಾಂಪಲ್ ಚರಣ ನೋಡಿ-

‘ವಂದೇ ಮಾತರಂ!

ವಿಜಯವೇ ದೊರಕಲಿ

ಸಾವು ಸೋಲುಗಳೇ ಬರಲಿ

ನಾವೆಲ್ಲ ನಿಲ್ಲುವೆವು ಒಂದಾಗಿ

ಘೊಷಿಸುವೆವು ವಂದೇ ಮಾತರಂ! ವಂದೇ ಮಾತರಂ’.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top