Friday, 16th November 2018  

Vijayavani

Breaking News

ಭಗತ್​ನನ್ನು ದೇಶಕ್ಕೆ ನೀಡಿದ ವೀರರತ್ನ ಅರ್ಜುನ ಸಿಂಹ

Thursday, 12.07.2018, 3:03 AM       No Comments

| ಡಾ. ಬಾಬು ಕೃಷ್ಣಮೂರ್ತಿ

ಸ್ವಾತಂತ್ರ್ಯಪ್ರಾಪ್ತಿಗಾಗಿ ಸಂಘರ್ಷ ನಡೆಸಿ, ಕ್ರಾಂತಿಕಾರಿಗಳಿಗೆ ಪ್ರೇರಣೆ ತುಂಬಿದ ವೀರರತ್ನ ಅರ್ಜುನ ಸಿಂಹ. ಭಗತ್​ನಿಗೆ ಅದಮ್ಯ ರಾಷ್ಟ್ರಭಕ್ತಿಯ ಮೌಲ್ಯ ತಾತ ಅರ್ಜುನ ಸಿಂಹನ ಕೊಡುಗೆಯೇ. ಮೊಮ್ಮಗ ಭಗತ್ ಸಿಂಗ್​ನ ಸಾಹಸಗಳನ್ನು ಕೇಳಿ, ಪತ್ರಿಕೆಗಳಲ್ಲಿ ಓದಿ ಹೆಮ್ಮೆಯಿಂದ ಬೀಗುತ್ತಿದ್ದ ಆತ ನ್ಯಾಯಾಲಯ ಅವನಿಗೆ ಗಲ್ಲು ಶಿಕ್ಷೆ ವಿಧಿಸಿದಾಗ ಕುಸಿದುಹೋದ.

ತಾನು ಎತ್ತಿ ಆಡಿಸಿದ ಪ್ರೀತಿಯ ಮೊಮ್ಮಗ, ಕುಟುಂಬದ ಅಮೂಲ್ಯ ಕುಡಿ, ದೇಶದ ಹೆಮ್ಮೆಯ ಅರ್ನ್ಯಘ ರತ್ನ ಕೇವಲ ಇಪ್ಪತ್ತು ಮೂರು ವರ್ಷಗಳ ಭಗತ್ ಸಿಂಗ್​ನನ್ನು ಗಲ್ಲಿಗೇರಿಸುವ ಸಮಯದಲ್ಲಿ ‘ಇಂಕಿಲಾಬ್ ಜಿಂದಾಬಾದ್’, ‘ಭಗತ್ ಸಿಂಗ್ ಕೀ ಜಯ್’ ಎಂಬ ಜಯಘೊಷ ಮಾಡುತ್ತಿದ್ದ ಜನಜಂಗುಳಿಯ ಮಧ್ಯೆ ನೆಲಕ್ಕೆ ಕೋಲೂರಿ ನಿಂತು ಆ ದುರ್ಭರ ಕ್ಷಣದಲ್ಲಿ ಹೃದಯ ಕಿತ್ತು ಬರುವ ವೇದನೆಯನ್ನು ಅನುಭವಿಸುತ್ತ ನಿಂತ ತಾತ ಅರ್ಜುನ ಸಿಂಹ.

ಕಟ್ಟಿಕೊಂಡ ಹೆಂಡತಿಯನ್ನು ಅತಿ ಕಿರಿಯ ವಯಸ್ಸಿನಲ್ಲಿಯೇ ತನ್ನ ವಶಕ್ಕೆ ಒಪ್ಪಿಸಿ, ವಿದೇಶಗಳ ನೆಲೆಯಲ್ಲಿ ನಿಂತು ಸ್ವಾತಂತ್ರ್ಯ ಹೋರಾಟ ನಡೆಸಲು ದೇಶಬಿಟ್ಟು ಹೋಗಿ ಅವಳಿಗೆ ಮುಖದರ್ಶನ ನೀಡಲು 38 ವರ್ಷ ಕಾಯಿಸಿದ್ದವನು ಅವನ ಎರಡನೆಯ ಮಗ ಅಜಿತ್ ಸಿಂಗ್.

ಇನ್ನು ಮೂರನೆಯ ಮಗ ಸ್ವರ್ಣ ಸಿಂಹನೋ ಬ್ರಿಟಿಷರ ಕ್ರೂರ, ಅನಾರೋಗ್ಯಕರ ಜೈಲುಗಳಲ್ಲಿ ಶಿಕ್ಷ ಅನುಭವಿಸುತ್ತ ಕ್ಷಯರೋಗವನ್ನು ಅಂಟಿಸಿಕೊಂಡು ಬಂದು ಹಾಸಿಗೆಯಿಂದ ಮೇಲೇಳದೆ ಹುತಾತ್ಮನಾದ. 18-20 ವರ್ಷಗಳ ಹೆಂಡತಿಯನ್ನು 56 ವರ್ಷಗಳ ವೈಧವ್ಯವನ್ನು ಅನುಭವಿಸಲು ತನ್ನ ತಂದೆಯ ಮಡಿಲಿಗೆ ಹಾಕಿ ಇಪ್ಪತ್ತು ಮೂರನೆಯ ವಯಸ್ಸಿನಲ್ಲೇ ಜೀವ ತೊರೆದವನು ಸ್ವರ್ಣ ಸಿಂಹ. ದೊಡ್ಡ ಮಗ ಕಿಶನ್ ಸಿಂಹನೋ ಅಹರ್ನಿಶಿ ದೇಶ ಸ್ವಾತಂತ್ರ್ಯ, ಸಮಾಜಸೇವೆಗಳಿಗಾಗಿ ಹೋರಾಡುತ್ತಿದ್ದ ಧೀರ.

ಆ ಮಹಾನ್ ಕುಟುಂಬದ ಸ್ಪೂರ್ತಿಯ ಸೆಲೆ: ಇಂಥ ಸಂಸಾರದ ಹಿರಿತಲೆ ಎಲ್ಲವನ್ನು ಕಣ್ಣಾರೆ ಕಂಡು ಸ್ವತಃ ಅನುಭವಿಸುತ್ತಿದ್ದರೂ ಕಿಂಚಿತ್ತೂ ವಿಚಲಿತನಾಗದ ಕರ್ಮಯೋಗಿಯಾಗಿದ್ದ ಅರ್ಜುನ ಸಿಂಹ. ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ವಲ್ಪ ಮೊದಲು ಪಂಜಾಬಿನ ಒಂದು ರೈತ ಕುಟುಂಬದಲ್ಲಿ ಜನಿಸಿದವನು ಅರ್ಜುನ ಸಿಂಹ. ತಂದೆ ಸರ್ದಾರ್ ಖೇಮ್ ಸಿಂಹ ನಿಷ್ಠಾವಂತ ಸಿಖ್ ಧರ್ವನುಯಾಯಿ. ಅರ್ಜುನ ಸಿಂಹನಿಗೆ ಒಬ್ಬ ಅಣ್ಣ, ಒಬ್ಬ ತಮ್ಮ. ಅಣ್ಣನ ಹೆಸರು ಸುರ್ಜನ ಸಿಂಹ. ತಮ್ಮ ಮೇಹರ ಸಿಂಹ.

ಅರ್ಜುನ ಸಿಂಹನು ಶ್ರದ್ಧೆಯಿಂದ ಧಾರ್ವಿುಕ ಜೀವನ ನಡೆಸುತ್ತ, ಬೇಸಾಯದ ಕಸುಬನ್ನು ಮಾಡುತ್ತಿದ್ದಾಗ ಅವನ ಜೀವನದಲ್ಲಿ ಬಿರುಗಾಳಿಯಂತೆ ಪ್ರವೇಶಿಸಿದವರು ಆ ಕಾಲದ ಧೀರ ಸಂನ್ಯಾಸಿ, ಆರ್ಯ ಸಮಾಜ ಸ್ಥಾಪಿಸಿ ತನ್ಮೂಲಕ ದೇಶದಲ್ಲಿ ನವಚೇತನವನ್ನು ನಿರ್ವಿುಸಿದ ಸ್ವಾಮಿ ದಯಾನಂದ ಸರಸ್ವತಿ. ಅದು ಭಾರತದ ಸನಾತನ ಧರ್ಮದ ಪುನುರೋತ್ಥಾನದ ಐತಿಹಾಸಿಕ ಪರ್ವ. ಸನಾತನ ಧರ್ಮದ ನವಪ್ರವರ್ತಕ ಸಿಂಹಸದೃಶ ದಯಾನಂದರು, ದೇಶದ ಉದ್ಧಾರವಾಗಬೇಕಾದರೆ ಬ್ರಿಟಿಷರು ಭಾರತದಿಂದ ಹೊರಹೋಗಬೇಕೆಂಬ ತಮ್ಮ ಸಂದೇಶ ಹಾಗೂ ಪ್ರೇರಣೆಗಳ ಮೂಲಕ ಅಂದಿನ ಪೀಳಿಗೆಯನ್ನು ಬಡಿದೆಬ್ಬಿಸಿ ಹೋರಾಟಕ್ಕೆ ಸಜ್ಜುಗೊಳಿಸಿದ ಆರ್ಯವೀರ ಸಂನ್ಯಾಸಿಯಾಗಿದ್ದರು.

ಅವರದು ಬಿರುಗಾಳಿಯ ಪ್ರವಾಸ. ಅಂಥ ಒಂದು ಸುಮುಹೂರ್ತದಲ್ಲಿ ಅರ್ಜುನ ಸಿಂಹನಿಗೆ ದಯಾನಂದರ ದರ್ಶನವಾಯಿತು. ಅವನದು ಗುರು ತೇಗ ಬಹದ್ದೂರ್, ಗುರು ಗೋವಿಂದ ಸಿಂಹರ ಕ್ಷಾತ್ರತೇಜದ ಸಿಖ್ ಪಂಥವಾಗಿದ್ದರೂ ಸ್ವತಃ ದಯಾನಂದರಿಂದಲೇ ಯಜ್ಞೋಪವೀತವನ್ನು ಹಾಕಿಸಿಕೊಂಡು ವೇದ ಮಾರ್ಗಾನುಯಾಯಿಯಾಗಿ ಅದರ ಪ್ರಬಲ ಪ್ರಚಾರಕನೂ ಆದ. ಭಗತ್ ಸಿಂಗ್​ನಂಥ ಭಾರತ ರತ್ನನ ಜನನವಾಗಿದ್ದು, ಬೆಳೆದಿದ್ದು ಇಂಥ ಆರ್ಯ ವಾತಾವರಣದಲ್ಲಿ ಎಂಬುದು ಗಮನಾರ್ಹ.

ಧರ್ಮ-ಸ್ವರಾಜ್ಯ ಅವನ ಎರಡು ಕೈಗಳು: ದಯಾನಂದರ ಶಿಷ್ಯತ್ವ ಸ್ವೀಕರಿಸಿ ಆರ್ಯ ಸಮಾಜದ ಪ್ರಚಾರಕನಾದ ಮೇಲೆ ಮಾಂಸಭಕ್ಷಣ, ಅಪೇಯಪಾನಗಳನ್ನು ವರ್ಜಿಸಿದ್ದು ಮಾತ್ರವಲ್ಲದೆ ತನ್ನ ಕುಟುಂಬವೂ ಆ ಮಾರ್ಗವನ್ನು ಅನುಸರಿಸುವಂತೆ ಮಾಡಿದ ಅರ್ಜುನ ಸಿಂಹ. ಪಂಜಾಬಿನಲ್ಲಿ ಶಾಸ್ತ್ರಾರ್ಥಗಳು ನಡೆದ ಕಡೆಗಳಲ್ಲಿ ಸನಾತನ ಧರ್ವಿುಯ ಪಂಡಿತರ ಜೊತೆ ವಾದಿಸಲು ಹೋಗುತ್ತಿದ್ದವನು ಅರ್ಜುನ ಸಿಂಹನೇ. ಯುನಾನಿ ವೈದ್ಯ ಪದ್ಧತಿಯನ್ನು ಕಲಿತಿದ್ದ ಅವನು ಅದನ್ನು ದೀನ ದಲಿತರ, ಸಮಾಜಸಂತ್ರಸ್ಥರ ಸೇವೆಗಾಗಿ ಬಳಸಿದ. ಅದರಲ್ಲಿ ನಿಷ್ಣಾತನೆನಿಸಿ ಎಲ್ಲರ ಮೆಚ್ಚುಗೆಯನ್ನೂ ಗಳಿಸಿದ.

ಆರ್ಯ ಸಮಾಜ ಮತ್ತು ದಯಾನಂದರೆಂದರೆ ಬ್ರಿಟಿಷರಿಗೆ ಸಿಂಹಸ್ವಪ್ನ. ಅವರಿಗೆ 1857ರ ಸ್ವಾತಂತ್ರ್ಯ ಸಂಗ್ರಾಮದ ಬೀಜಾರೋಪಣವಾಗಿದ್ದು ಧಾರ್ವಿುಕ ನಾಯಕರಿಂದಲೇ ಎಂಬುದು ಚೆನ್ನಾಗಿ ಅನುಭವಕ್ಕೆ ಬಂದಿತ್ತು. ಆದ್ದರಿಂದ ಆರ್ಯ ಸಮಾಜ ಬೆಳೆಯದಂತೆ ನೋಡಿಕೊಳ್ಳಲು ತಮ್ಮದೇ ಆದ ಪಿತೂರಿ ಮಾಡುತ್ತಿದ್ದರು. ಅಂತಹುದೊಂದು ಪಿತೂರಿ ಸಿಖ್ ಹಾಗೂ ಆರ್ಯ ಸಮಾಜಗಳ ಬಾಂಧವ್ಯದಲ್ಲಿ ಬಿರುಕು ಮೂಡಿಸುವುದೇ ಆಗಿತ್ತು. ಕೆಲವರು ಸಿಖ್​ರನ್ನು ಪ್ರಚೋದಿಸಿ ‘ಆರ್ಯ ಸಮಾಜವು ಸಿಖ್ಖರ ಪವಿತ್ರ ಗ್ರಂಥ ಗ್ರಂಥಸಾಹಿಬ್​ಗೆ ಅಪಚಾರ ಮಾಡುತ್ತಿದೆ’ ಎಂದು ಪಟಿಯಾಲಾ ಕೋರ್ಟಿನಲ್ಲಿ ದಾವೆ ಹೂಡಿದಾಗ ಇಡೀ ದೇಶದಲ್ಲಿನ ಧರ್ಮನಿಷ್ಠರು ಅದು ಸುಳ್ಳೆಂದು ಹೇಳುತ್ತ ಆರ್ಯ ಸಮಾಜದ ಪರ ನಿಂತರು. ಕೋರ್ಟಿನಲ್ಲಿ ಆರ್ಯ ಸಮಾಜದ ಪರ ವಾದಿಸುವ ಮಂಡಲಿಯ ನೇತಾರ ಅರ್ಜುನ ಸಿಂಹನೇ! ಅನೇಕ ಹಿಂದೂ ಶಾಸ್ತ್ರಗಳು ಹಾಗೂ ಗ್ರಂಥ ಸಾಹಿಬ್​ನಿಂದ ಏಳು ನೂರು ಶ್ಲೋಕಗಳನ್ನು ಆರಿಸಿ ವೇದ ಹಾಗೂ ಗ್ರಂಥ ಸಾಹಿಬ್​ಗಳ ಸಂದೇಶ ಒಂದೇ ಹಾಗೂ ಸಮಾನ ರೂಪದಲ್ಲಿವೆ ಎಂದು ಬಲವಾಗಿ ಪ್ರತಿಪಾದಿಸಿ ಕೋರ್ಟಿನಲ್ಲಿ ಹೂಡಲಾಗಿದ್ದ ದಾವೆ ಅನೂರ್ಜಿತವಾಗುವಂತೆ ಮಾಡಿದ ಶ್ರೇಯಸ್ಸು ಅರ್ಜುನ ಸಿಂಹನದೇ ಆಗಿತ್ತು.

ಅವನ ಮೂಲನಂಬಿಕೆ ಆರ್ಯ ಸಮಾಜ. ಅಂದಿನ ಕಾಲ ಧರ್ಮದಂತೆ ಸ್ವಾತಂತ್ರ್ಯ ಚಳವಳಿಯ ಅವನ ಸಾಧನ ಕಾಂಗ್ರೆಸ್. 1920ರ ಅಸಹಕಾರ ಚಳವಳಿಯಲ್ಲಿ ‘ಓಂ’ ಎಂಬ ಅಕ್ಷರವಿದ್ದ ಕೇಸರಿ ಆರ್ಯ ಸಮಾಜದ ಧ್ವಜದ ಜೊತೆಗೆ ಚರಕದ ಚಿಹ್ನೆಯಿದ್ದ ತ್ರಿವರ್ಣ ಧ್ವಜವನ್ನು ಒಂದೊಂದು ಕೈಯಲ್ಲಿ ಹಿಡಿದು ‘ಜೋ ಬೋಲೆ ಸೋ ಅಭಯ್, ವೈದಿಕ್ ಧರ್ಮ ಕೀ ಜಯ್’ ಎಂಬ ಘೊಷಣೆಯ ಜೊತೆಗೆ ‘ಜೋ ಬೋಲೋ ಸೋ ಅಭಯ್ ಭಾರತ್ ಮಾತಾಕೀ ಜಯ್’ಎಂದು ಕೂಗುತ್ತ, ಪಂಜಾಬ್ ಸಿಂಹ ಲಾಲಾ ಲಜಪತರಾಯರಿಗೆ ಸಾಥ್ ನೀಡುತ್ತ ಸೆಣಸಾಡಿದ ಆರ್ಯವೀರ ಅರ್ಜುನ ಸಿಂಹ.

ಅರ್ಜುನ ಸಿಂಹನ ಮನೆ ಎಂದರೆ ಆಗಿನ ಎಲ್ಲ ಮಹಾನುಭಾವರ ತೀರ್ಥಕ್ಷೇತ್ರವಿದ್ದಂತೆ. ಲಜಪತರಾಯ್, ಲಾಲಾಹಂಸರಾಜ್, ಲಾಲಾ ಹರದಯಾಳ್, ಭಾಯಿ ಪರಮಾನಂದ ಮುಂತಾದ ಹತ್ತಾರು ಧೀಮಂತ ವ್ಯಕ್ತಿಗಳ ಪಾದಸ್ಪರ್ಶದಿಂದ ಪವಿತ್ರಗೊಂಡಿದ್ದ ತಾಣ.

ಅರ್ಜುನ ಸಿಂಹನಿಗೆ ಕ್ಷಾತ್ರದಲ್ಲಿ ನಂಬಿಕೆ. ಏಕೆಂದರೆ ಅವನು ಹುಟ್ಟಿದ್ದೇ ಕ್ಷಾತ್ರತೇಜದ ಸಿಖ್ ಪಂಥದಲ್ಲಿ ತಾನೇ. ಜತೆಗೆ ದಯಾನಂದರ ನೇರ ಶಿಷ್ಯತ್ವ. ದಯಾನಂದರು ಸಶಸ್ತ್ರ ಹೋರಾಟಕ್ಕೆ ಸದಾ ಉತ್ತೇಜನ ನೀಡಿದವರು. ಹೀಗಾಗಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಮನೋಧರ್ಮ ಅರ್ಜುನ ಸಿಂಹನದು. ಆದ್ದರಿಂದ ಸಂಘರ್ಷದಿಂದ ಎಂದೂ ಕಾಲನ್ನು ಹಿಂದೆಗೆಯಲಿಲ್ಲ. ಅವನ ತಮ್ಮ ಮೇಹರ್ ಸಿಂಹನ ಮಗ ಹರಿಸಿಂಹನೂ ಹೋರಾಟಗಾರನೇ. ಆ ದಿನಗಳಲ್ಲೇ ಮುಸಲ್ಮಾನರು ಹಿಂದೂಗಳ ಮೇಲೆ ಆಕ್ರಮಣ ಮಾಡುವುದು ಶುರುವಾಗಿತ್ತು. ದೇವಾಲಯ, ಗುರುದ್ವಾರಗಳನ್ನು ಅಪವಿತ್ರಗೊಳಿಸುವ ಕೆಲಸವೂ ಅವರಿಂದ ನಡೆದಿತ್ತು. ‘ದೀನ್ ದೀನ್…’ ಎಂದು ಕರ್ಣಕಠೋರವಾಗಿ ಕೂಗುತ್ತ ಅಲೆ-ಅಲೆಯಾಗಿ ಬರುತ್ತಿದ್ದ ಮುಸಲ್ಮಾನ್ ಸಮುದಾಯ ಹಿಂದೂ ಮೊಹಲ್ಲಾಗಳಲ್ಲಿ ಭಯಕಂಪನ ಮೂಡಿಸಿತ್ತು. ಹಿಂದೂಗಳು ಗುಬ್ಬಿಗಳು ಕೂರುವಂತೆ ಹೆದರಿ ಅಡಗಿಕೊಳ್ಳುತ್ತಿದ್ದರು. ಆಗ ಹರಿಸಿಂಹ ಹಿಂದೂ ಮತ್ತು ಸಿಖ್ಖರ ರಕ್ಷಣೆಗಾಗಿ ಸೊಂಟಕಟ್ಟಿ ನಿಂತು ಯುವಕರ ಒಂದು ಗುಂಪು ಕಟ್ಟಿದ.

ಆಕ್ರಮಣ ಮಾಡಲು ಮೊಚ್ಚು, ಕತ್ತಿ, ಕಠಾರಿ ಮುಂತಾದ ಮಾರಕಾಸ್ತ್ರಗಳನ್ನು ಹಿಡಿದು ಬರುತ್ತಿದ್ದ ಮತಾಂಧ ಗುಂಪುಗಳನ್ನು ಹೆದರಿಸಿ ಹಿಮ್ಮೆಟ್ಟಿಸಲು ಅವುಗಳ ಮೇಲೆ ಬಾಂಬ್​ಗಳನ್ನು ಎಸೆಯುವುದೊಂದೇ ದಾರಿಯೆಂದು ತಾತ ಅರ್ಜುನ ಸಿಂಹನ ನೇತೃತ್ವದಲ್ಲಿ ಹರಿ ಸಿಂಹ ಬಾಂಬುಗಳನ್ನು ತಯಾರಿಸಲು ತೊಡಗಿದ. ಆಗ ಅಕಸ್ಮಾತ್ ಒಂದು ಬಾಂಬ್ ಸ್ಪೋಟಿಸಿತು. ಆ ಸುದ್ದಿ ಪೊಲೀಸ್ ಠಾಣೆಗೂ ತಲಪಿ ಪೊಲೀಸ್ ಅಧಿಕಾರಿಗಳು ವಿಚಾರಣೆ ಶುರು ಹಚ್ಚಿಕೊಂಡರು. ಅನುಮಾನ ಬಂದ ಮನೆಗಳ ತಪಾಸಣೆ ನಡೆಸಿದರು. ಅವರು ಅರ್ಜುನ ಸಿಂಹನ ಮನೆಯನ್ನು ಬಿಟ್ಟು ಬಿಡುವವರೇ. ಆದರೆ ಮನೆಯ ಬಾಗಿಲಲ್ಲೇ ಹಗ್ಗದ ಮಂಚದ ಮೇಲೆ ಕುಳಿತಿದ್ದ ಅರ್ಜುನ ಸಿಂಹನ ಮುಂದೆ ಬಂದು ನಿಂತ ಪೊಲೀಸರಿಗೆ ಅವನ ಮಾತುಗಳು ಅವರನ್ನು ನಿರುತ್ತರಗೊಳಿಸಿ ಹಿಂದಿರುಗುವಂತೆ ಮಾಡಿದವು.

ಗಂಡನ ನಿಜವಾದ ಸಹಧರ್ವಿುಣಿ: ಅರ್ಜುನ ಸಿಂಹ ಹೆಂಡತಿ ಜಯಾ ಕೌರ್ ಅವನ ಹೋರಾಟಗಳಲ್ಲಿ ಭುಜಕ್ಕೆ ಭುಜ ಕೊಟ್ಟು ನಿಂತವಳು. ಬಾಂಗಾ ಗ್ರಾಮದ ಅವರ ವಿಶಾಲ ಅಂಗಳದ ಹಲವು ಕೋಣೆಗಳ ಮನೆ ಅನೇಕ ಕ್ರಾಂತಿಕಾರಿಗಳ ಅಡಗುದಾಣವೂ ಆಗಿತ್ತು. ಆ ಸಮಾಚಾರ ಗುಪ್ತಚರರ ಮೂಲಕ ಪೊಲೀಸರನ್ನು ಮುಟ್ಟಿ ಪೊಲೀಸ್ ಪಡೆ ತೋಪುಗಳನ್ನು ತಂದು ಇಡೀ ಹಳ್ಳಿಯನ್ನು ಸುತ್ತುವರಿಯಿತು. ಆ ಸಲ ಅವರು ಬಂದಿದ್ದು ಅಜಿತ್ ಸಿಂಗ್ ಮತ್ತು ಸೂಫಿ ಅಂಬಾಪ್ರಸಾದರನ್ನು ಬಂಧಿಸುವ ಸಲುವಾಗಿ. ಅಜಿತ್ ಸಿಂಗ್ ಪರಾರಿಯಾಗಿದ್ದರೂ ಅಂಬಾಪ್ರಸಾದ್ ಅರ್ಜುನ ಸಿಂಹನ ಮನೆಯಲ್ಲಿಯೇ ಅಡಗಿಕೊಂಡಿದ್ದುದು ನಿಜವಾಗಿತ್ತು.

ಪೊಲೀಸರು ಅವರ ಮನೆಗೆ ಬಂದಾಗ ಒಳಗಿದ್ದವರನ್ನು ಅಪಾಯದಿಂದ ಪಾರುಮಾಡುವ ಹೊಣೆ ಹೊತ್ತವಳು ಜಯಾ ಕೌರ್. ಬಾಗಿಲಿನಲ್ಲೇ ಪೊಲೀಸರನ್ನು ತಡೆದು ನಿಲ್ಲಿಸಿದ ಆಕೆ ಅವರು ಬಂದಿದ್ದೇಕೆಂದು ಪ್ರಶ್ನಿಸಿದಳು. ಅವರು ನಿಮ್ಮ ಮನೆ ತಲಾಶ್ ಮಾಡಬೇಕು ಎಂದರು. ‘ಮಾಡಿ. ಆದರೆ ಮನೆಯ ಹೆಂಗಸರು ಹೊರಗೆ ಹೋದ ಮೇಲೆ ನಿಮಗಿಷ್ಟ ಬಂದಷ್ಟು ಸಮಯ ತಲಾಶ್ ಮಾಡಿ’ ಎಂದಳು ಜಯಾ ಕೌರ್. ಈಕೆಯ ವ್ಯಕ್ತಿತ್ವ, ಮಾತಿನ ಗಾಂಭೀರ್ಯದಿಂದ ಪ್ರಭಾವಿತರಾದ ಪೊಲೀಸರಿಗೆ ಅವಳು ಹೇಳಿದಂತೆ ನಡೆಯದೆ ಬೇರೆ ದಾರಿ ಇರಲಿಲ್ಲ. ಮನೆಯಿಂದ ಕೆಲವರು ಬುರ್ಖಾಧಾರಿ ಹೆಂಗಸರು ಹೊರಕ್ಕೆ ಹೊರಟು ಹೋದರು. ಪೊಲೀಸರು ಮನೆಯ ಅಂಗುಲ ಅಂಗುಲವನ್ನು ಹುಡುಕಿದರೂ ಯಾವ ಕ್ರಾಂತಿಕಾರಿಯೂ ಸಿಗಲಿಲ್ಲ. ತಪ್ಪುಮಾಹಿತಿಯಿಂದಾಗಿ ತಾವು ತಲಾಶ್​ಗೆ

ಬಂದುದಾಗಿ ತಪ್ಪೊಪ್ಪಿಕೊಂಡು ಕ್ಷಮೆ ಕೇಳಿ ಹಿಂದಿರುಗಿದ ಪೊಲೀಸರಿಗೆ ಹೊರಕ್ಕೆ ಹೋದ ಬುರ್ಖಾಧಾರಿ ಹೆಂಗಸರ ಗುಂಪಿನಲ್ಲಿ ಅಂಬಾಪ್ರಸಾದನೂ ಇದ್ದನೆಂಬುದು ತಿಳಿಯಲೇ ಇಲ್ಲ.

ಮೊಮ್ಮಗ ಭಗತ್ ಸಿಂಗ್​ನ ಸಾಹಸಗಳನ್ನು ಕೇಳಿ, ಪತ್ರಿಕೆಗಳಲ್ಲಿ ಓದಿ ಹೆಮ್ಮೆಯಿಂದ ಬೀಗುತ್ತಿದ್ದ ಅರ್ಜುನ ಸಿಂಹ ನ್ಯಾಯಾಲಯ ಅವನಿಗೆ ಗಲ್ಲು ಶಿಕ್ಷೆ ವಿಧಿಸಿದಾಗ ಇದ್ದಕ್ಕಿದ್ದಂತೆ ಕುಸಿದುಹೋದ. ಆವೇಳೆಗೆ ವೃದ್ಧಾಪ್ಯವನ್ನು ಮುಟ್ಟಿದ್ದ ಅವನು ಮೊಮ್ಮಗನಿಗುಂಟಾಗಿದ್ದ ದುರುವಸ್ಥೆಯನ್ನು, ಅವನು ಅನುಭವಿಸುತ್ತಿದ್ದ ದಾರುಣ ಹಿಂಸೆಯನ್ನು ನೋಡಿ ದುಃಖತಪ್ತನಾಗಿ ಕಣ್ಣೀರು ಸುರಿಸಿದ. ಪತ್ರಿಕೆಗಳಲ್ಲಿ ಮೊಮ್ಮಗನ ಧೀರೋದಾತ್ತ ಹೇಳಿಕೆಗಳನ್ನು ನೋಡಿ ಒಂದು ಕಡೆ ಹೆಮ್ಮೆ, ಅವನು ಗಲ್ಲಿಗೇರಬೇಕಲ್ಲ ಎಂದು ಇನ್ನೊಂದು ಕಡೆ ವೇದನೆ.

ಭಗತ್ ಸಿಂಗ್​ನ ಗಲ್ಲಿಗೆ ಇಪ್ಪತ್ತು ದಿನಗಳ ಮೊದಲು ಅವನ ಅಂತಿಮ ದರ್ಶನಕ್ಕಾಗಿ ಲಾಹೋರ್ ಜೈಲಿಗೆ ಹೋದಾಗ ಅವನನ್ನು ಮಾತನಾಡಿಸಲಾಗದ ಸ್ಥಿತಿ ಅವನದಾಗಿತ್ತು. ಅವನ ಗಂಟಲು ಕಟ್ಟಿತ್ತು. ಬಾಯಿ ಬಿಟ್ಟರೆ ದುಃಖ ಉಮ್ಮಳಿಸಿ ಬರುತ್ತಿತ್ತು. ಆದ್ದರಿಂದ ಮೌನವಾಗಿ ದೂರದಲ್ಲೇ ನಿಂತು ಕಣ್ಣೀರು ಸುರಿಸುತ್ತಿದ್ದ.

ಮೊಮ್ಮಗ ಗಲ್ಲಿಗೇರಿದಾಗಿನಿಂದ ಪೂರಾ ಅಂತಮುಖಿಯಾದ. ದೇಶಭಕ್ತಿ ಗೀತೆಗಳನ್ನು ಹೇಳಿಕೊಳ್ಳುತ್ತ ಕಾಲ ಕಳೆಯುತ್ತಿದ್ದ. ಒಂದು ದಿನ ಪೇಪರ್ ಕೊಳ್ಳಲು ಅಂಗಡಿಗೆ ಹೋದಾಗ ಪಾರ್ಶ್ವವಾಯು ಬಡಿಯಿತು. ಮಾತು ನಿಂತಿತು. ಎಲ್ಲ ಮಾತು ಬರವಣಿಗೆಯಲ್ಲಿಯೇ. ಒಮ್ಮೆ ಬರೆದಿದ್ದ: ‘ಯಾವ ಹೊರೆಯನ್ನು ಎಸೆಯಬೇಕಾದ ಸಂದರ್ಭ ಬಂದಾಗಲೂ ಅದನ್ನು ಹೊತ್ತುಕೊಂಡು ನಡೆಯುವುದು ಪ್ರಪಂಚದ ಎಲ್ಲಕ್ಕಿಂತ ದೊಡ್ಡ ಮೂರ್ಖತನ’.

ಅವನ ಈ ಮಾತನ್ನು ನಿಜ ಮಾಡಲು ಔಷಧ ನಿಲ್ಲಿಸಿದ. ಆಹಾರವನ್ನು ಕಡಿತಗೊಳಿಸಿದ. 1932ರ ಜುಲೈ ತಿಂಗಳಿನ ಒಂದು ದಿನ ತನ್ನ ಎಂಬತ್ತನೆಯ ವಯಸ್ಸಿನಲ್ಲಿ ದೇವರ ಪಾದ ಸೇರಿಕೊಂಡ. ಭಗತ್ ಸಿಂಗ್, ಅಜಿತ್ ಸಿಂಗ್​ರ ಹೆಸರನ್ನು ಚರಿತ್ರೆಯಲ್ಲಿ ಅಲ್ಲಿಲ್ಲಿ ಕಾಣಬಹುದು. ಅಂಥವರನ್ನು ನೀಡಿದ ಅರ್ಜುನ ಸಿಂಹ? ಜಯಾ ಕೌರ್?

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top