Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಮಹಾರಾಷ್ಟ್ರದ ಕುಸುಮ ದೇಶಕ್ಕೆ ಅರ್ಪಿತವಾಯಿತು

Thursday, 17.05.2018, 3:03 AM       No Comments

| ಡಾ. ಬಾಬು ಕೃಷ್ಣಮೂರ್ತಿ 

ದಾಸ್ಯದ ಸಂಕೋಲೆಯಲ್ಲಿ ಬಂದಿಯಾಗಿದ್ದ ತಾಯ್ನಾಡಿನ ವಿಮೋಚನೆಗೆಂದು ಅಹರ್ನಿಶಿ ದುಡಿದಾತ ವಿಷ್ಣು ಗಣೇಶ ಪಿಂಗಳೆ. ವಿವಿಧ ವೇಷ ಧರಿಸಿ, ಬಗೆಬಗೆಯ ಹೆಸರುಗಳೊಂದಿಗೆ ಅವಿಶ್ರಾಂತವಾಗಿ ಸಂಚರಿಸುತ್ತಿದ್ದ ಈತ, ಭಾರತ ಸ್ವಾತಂತ್ರ್ಯವೇ ತನ್ನುಸಿರು ಎಂಬಂತೆ ಜೀವಿಸಿದ ಧೀಮಂತ ಹೋರಾಟಗಾರ.

ಲೋಕಮಾನ್ಯ ಬಾಲಗಂಗಾಧರ ತಿಲಕರ ‘ಕೇಸರಿ’ ಪತ್ರಿಕೆ, ಸಾವರ್ಕರರ ಸ್ವದೇಶಿ ಆಂದೋಲನಗಳಿಂದ ಪ್ರೇರಿತನಾಗಿ ಸ್ವಾತಂತ್ರ್ಯ ಹೋರಾಟಕ್ಕೆ ತನ್ನನ್ನು ಸಮರ್ಪಿಸಿಕೊಂಡ ವಿಷ್ಣು ಗಣೇಶ ಪಿಂಗಳೆಯ ಜೀವನವೇ ಒಂದು ಅದ್ಭುತ. ಕರ್ತಾರ್​ಸಿಂಗ್ ಸರಾಭಾ ಜತೆ ಗಲ್ಲುಗಂಬವೇರಿದ ಪಿಂಗಳೆಯ ಜೀವನಪಯಣ ಸುದೀರ್ಘವಾದದ್ದು. ಆದರೆ ಅವನು ಜೀವಿಸಿದ್ದು ಕೇವಲ 26 ವರ್ಷಗಳು.

ಮಹಾರಾಷ್ಟ್ರದ ಪುಣೆ ಜಿಲ್ಲೆ ಶಿರೂರು ತಾಲೂಕಿನ ತಲೆಗಾಂವ್ ಢಮ್ೇರೇ ಎಂಬ ಗ್ರಾಮದಿಂದ ಆರಂಭವಾದ ವಿಷ್ಣು ಪಿಂಗಳೆಯ ಜೀವನಪಯಣ ಅವನನ್ನು ಎಲ್ಲೆಲ್ಲಿಗೋ ಕರೆದೊಯ್ದು ಲಾಹೋರ್ ಜೈಲಿನಲ್ಲಿ ಕೊನೆಮುಟ್ಟಿಸಿದ್ದು ರೋಮಾಂಚಕಾರಿಯಷ್ಟೇ ಅಲ್ಲ ಸಾಹಸಭರಿತ ಕೂಡ. ಭಾರತ ಸ್ವಾತಂತ್ರ್ಯವೇ ತನ್ನುಸಿರು ಎಂಬಂತೆ ಜೀವಿಸಿ, ‘ನನ್ನ ಜೀವನದ ಮಹತಾ್ವಕಾಂಕ್ಷೆ ಎಂದರೆ ನನ್ನ ತಾಯಿನಾಡು ಸ್ವತಂತ್ರಗೊಳ್ಳುವುದು. ನಾನು ಇಲ್ಲಿಯವರೆಗೆ ಮಾಡಿದ್ದೆಲ್ಲ ಅದರ ಸಲುವಾಗಿಯೇ. ನನಗೆ ನೆನಪಿರುವಂತೆ ನನ್ನ ಜೀವಮಾನದಲ್ಲಿ ಎಂದೂ ಒಬ್ಬ ವ್ಯಕ್ತಿ, ಜಾತಿ, ಕೋಮು ಅಥವಾ ಜನಾಂಗದ ವಿರುದ್ಧ ದ್ವೇಷದಿಂದ ನಡೆದುಕೊಂಡಿಲ್ಲ. ನೀಚವಾದ ಸ್ವಾರ್ಥಪಿಪಾಸೆಯನ್ನು ತೀರಿಸಿಕೊಳ್ಳಲು ನಾನೆಂದೂ ಯತ್ನಿಸಿಲ್ಲ. ಸ್ವಾತಂತ್ರ್ಯ ಒಂದೇ ನನ್ನ ಹೃದಯದ ತೀವ್ರತುಡಿತ, ಅದೊಂದೇ ನನ್ನ ಸುಂದರ ಸ್ವಪ್ನ’- ಹೀಗೆ ಗಲ್ಲಿಗೇರುವ ಮುನ್ನ ಅಂತಿಮ ಹೇಳಿಕೆ ನೀಡಿದ ಧೀರಚೇತನ ಅವನು.

ತಲೆಗಾಂವ್ ದಬಾಡೆ (ಢಮ್ೇರೆ) ಎಂಬಲ್ಲಿ, ಬಡಬ್ರಾಹ್ಮಣ ಕುಟುಂಬದ 9 ಮಕ್ಕಳ ಪೈಕಿ ಕೊನೆಯವನಾಗಿ 1888ರಲ್ಲಿ ಹುಟ್ಟಿದ ವಿಷ್ಣು ಗಣೇಶ ಪಿಂಗಳೆ, ಪ್ರಾಥಮಿಕ ವಿದ್ಯಾಭ್ಯಾಸವನ್ನು ತಲೆಗಾಂವ್​ನಲ್ಲೇ ಮುಗಿಸಿದ. 1905ರಲ್ಲಿ ಪುಣೆಗೆ ಬಂದು ಮಹಾರಾಷ್ಟ್ರ ವಿದ್ಯಾಲಯ ಸೇರಿದ. ಅದು ಆಗ ಬಾಂಬೆ ಯೂನಿವರ್ಸಿಟಿಗೆ ಸೇರಿದ್ದ ಶಾಲೆ.

ತಿಲಕರ ಸ್ಪೂರ್ತಿ, ಸಾವರ್ಕರ್ ಪ್ರೇರಣೆ: ಲೋಕಮಾನ್ಯ ತಿಲಕರ ಕಾಲ ಅದು. ಆಗಲೇ ಯೌವನದ ಹೊಸ್ತಿಲಲ್ಲಿದ್ದ ವಿನಾಯಕ ದಾಮೋದರ ಸಾವರ್ಕರ್, ಸ್ವಾತಂತ್ರ್ಯ ಹಾಗೂ ಸ್ವದೇಶಿ ಆಂದೋಲನವನ್ನು ಪುಣೆಯಲ್ಲಿ ಧೀರೋದಾತ್ತವಾಗಿ ನಡೆಸುತ್ತಿದ್ದರು. ಅವರ ಮೋಡಿಗೊಳಗಾದ 17 ವರ್ಷದ ವಿಷ್ಣು ಪಿಂಗಳೆ, 1905ರ ಅಕ್ಟೋಬರ್ 7ರಂದು ವಿದೇಶಿ ವಸ್ತ್ರದಹನ ಕಾರ್ಯಕ್ರಮದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡ. ಹೀಗೆ ಸ್ವಾತಂತ್ರ್ಯ ಹೋರಾಟದಲ್ಲಿ ಶ್ರೀಗಣೇಶ ಮಾಡಿದ ವಿಷ್ಣು ಮುಂದೆ ಬಹಳ ಎತ್ತರಕ್ಕೆ ಬೆಳೆದ. ಸ್ವದೇಶಿ ಉದ್ಯಮಕ್ಕೆ ಪೋ›ತ್ಸಾಹ ನೀಡಬೇಕೆಂದು ಲಾತೂರಿನಲ್ಲಿ ಚಿಕ್ಕ ಕೈಮಗ್ಗದ ಕಾರ್ಖಾನೆಯನ್ನೂ ಸ್ಥಾಪಿಸಿದ. ಅಮೆರಿಕಕ್ಕೆ ಹೋಗಿ ಅಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಿಕ್ಷಣ ಪಡೆಯುವ ಮಹತಾ್ವಕಾಂಕ್ಷೆ. ಅದಕ್ಕೆ ಹಣ ಬೇಕಲ್ಲ. ಮನೆಯಲ್ಲೋ ಕಿತ್ತುತಿನ್ನುವ ಬಡತನ.

1910ರ ವೇಳೆಗೆ ಮುಂಬಯಿ ಸೇರಿದ ವಿಷ್ಣು, ಗೋವಿಂದರಾವ್ ಪೋದ್ದಾರ್ ಎಂಬ ಸ್ವದೇಶಿ ವಿಚಾರಧಾರೆಯ ವ್ಯಕ್ತಿಯ ‘ಪಯನೀರ್ ಆಲ್ಕಲಿ ವರ್ಕ್ಸ್’ ಎಂಬ ಸಂಸ್ಥೆ ಸೇರಿ ಸ್ವಲ್ಪ ಹಣ ಸಂಗ್ರಹಿಸಿಕೊಂಡ. ಅದೇ ವೇಳೆ ತಿಲಕರ ಪತ್ರಿಕೆಗಳನ್ನು ಓದುವುದರ ಮೂಲಕ ದೇಶಪ್ರೇಮವನ್ನು ರಕ್ತಗತ ಮಾಡಿಕೊಂಡಿದ್ದ ಅವನು ‘ದಿ ಯಂಗ್ ಅಮೆರಿಕನ್’ ಎಂಬ ಪತ್ರಿಕೆಯ ಚಂದಾದಾರನಾಗಿ ಅದರಲ್ಲಿ ಬರುತ್ತಿದ್ದ ಅಮೆರಿಕದ ಸ್ವಾತಂತ್ರ್ಯ ಹೋರಾಟದ ಕತೆಯಿಂದ ಪ್ರೇರಿತನಾಗಿ ತಾನೂ ತನ್ನ ದೇಶಕ್ಕಾಗಿ ದುಡಿಯಬೇಕೆಂದು ಸಂಕಲ್ಪ ತೊಟ್ಟ.

1911ರಲ್ಲಿ ಒಂದು ದಿನ ಅಣ್ಣನನ್ನು ಪುಣೆಯ ರೈಲು ನಿಲ್ದಾಣಕ್ಕೆ ಕರೆದುಕೊಂಡು ಹೋಗಿ, ತಾನು ಅಮೆರಿಕಕ್ಕೆ ಹೋಗುತ್ತಿರುವುದಾಗಿ ಅವನಿಗೆ ತಿಳಿಸಿದ. ಅಲ್ಲಿ ಸಂಪಾದಿಸಿ ತನ್ನ ಬಡ ಕುಟುಂಬವನ್ನು ಚೆನ್ನಾಗಿ ಪೋಷಿಸಿ ಋಣ ತೀರಿಸುವುದಾಗಿ ಹೇಳಿದ. ಈ ಮಾತು ಕೇಳಿ ಅಣ್ಣ ಕೇಶವರಾವ್ ವಿಚಲಿತನಾದ. ತಾನು ಅಮೆರಿಕಕ್ಕೆ ಪಯಣಿಸಿದ ನಂತರ ಮನೆಯವರಿಗೆ ಸುದ್ದಿ ತಿಳಿಸಬೇಕೆಂದು ಅಣ್ಣನಿಂದ ವಚನ ತೆಗೆದುಕೊಂಡು ಹಾಂಕಾಂಗ್ ಮೂಲಕ ಅಮೆರಿಕ ಸೇರಿದ. ಲಾಲಾ ಹರ್​ದಯಾಳ್, ಭಾಯಿ ಪರಮಾನಂದರು ಅಮೆರಿಕದಲ್ಲಿದ್ದ ಸಿಖ್ ಕೂಲಿಗಳು, ವಿದ್ಯಾರ್ಥಿಗಳು, ಮಾಜಿ ಯೋಧರಲ್ಲಿ ದೇಶಪ್ರೇಮ ಹಾಗೂ ಸ್ವಾತಂತ್ರ್ಯ ಗಳಿಕೆಯ ಭಾವನೆಗಳನ್ನು ಬಡಿದೆಬ್ಬಿಸುತ್ತಿದ್ದ ಕಾಲಕ್ಕೆ ಸರಿಯಾಗಿ ಪಿಂಗಳೆಯ ಅಮೆರಿಕ ಪ್ರವೇಶವಾಯಿತು. ಅಲ್ಲಿ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿ ದಾಖಲೆಯಾದ.

ಬರ್ಕ್​ಲಿಯ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವನಿಗೆ ಕರ್ತಾರ್​ಸಿಂಗ್ ಸರಾಭಾನ ಪರಿಚಯವಾಯಿತು. ಅದಕ್ಕೂ ಮಿಗಿಲಾಗಿ ಬಂಗಾಳದ ಯುಗಾಂತರ ನಾಯಕ ಬಾಘಾ ಜತೀನನ ದೂತನಾಗಿ ಅಮೆರಿಕಕ್ಕೆ ಕಳಿಸಲ್ಪಟ್ಟಿದ್ದ ಸತ್ಯೇಂದ್ರನಾಥ ಭೂಷಣ್ ಸೇನ್ ಎಂಬ ಕ್ರಾಂತಿಕಾರಿಯ ಆತ್ಮೀಯ ಸ್ನೇಹವೂ ಲಭಿಸಿತು. ಹರ್​ದಯಾಳರು 1913ರ ಡಿಸೆಂಬರ್​ನಲ್ಲಿ ಅಮೆರಿಕದ ಸ್ಯಾಕ್ರೊಮೆಂಟೋ ಎಂಬಲ್ಲಿ ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ಪಂಜಾಬಿನ ಸಿಂಹದ ಮರಿ ಕರ್ತಾರ್ ಸಿಂಗನ ಭುಜಕ್ಕೆ ಭುಜ ನೀಡಿ ದುಡಿದು ಸಮಾವೇಶವನ್ನು ಯಶಸ್ವಿಗೊಳಿಸಿದವರಲ್ಲಿ ವಿಷ್ಣು ಪಿಂಗಳೆಯೂ ಒಬ್ಬ.

ಅಂದು ಅಲ್ಲಿ ನೆರೆದಿದ್ದವರಲ್ಲಿ ಸ್ವಾತಂತ್ರ್ಯ ಸಮರದ ಉತ್ಸಾಹದ ಬುಗ್ಗೆ ಚಿಮ್ಮಿತು. ಸರಾಭಾ, ಪಿಂಗಳೆ ಮತ್ತು ಸತ್ಯೇನ್ ಸೇನ್​ರು ಭಾರತಕ್ಕೆ ತೆರಳಿ ಕ್ರಾಂತಿಯನ್ನು ಸಂಘಟಿಸಬೇಕೆಂಬ ಆದೇಶ ಆಗ ಗದರ್ ನಾಯಕರಿಂದ ಬಂತು. ‘ಚಲೋ ಚಲೀಯೇ ದೇಶ್ನು ಯುದ್ಧ ಕರನ್….’ ಎಂದು ಹಾಡುತ್ತ ಗುಂಪುಗುಂಪಾಗಿ ಹೊರಟರು. ತಾವು ಭಾರತ ತಲುಪುವ ವೇಳೆಗೆ ಅಲ್ಲಿ ಸೈನ್ಯದ ಪಾಳಯಗಳಲ್ಲಿ ಸೈನಿಕರು ಬಂಡಾಯವೇಳಲು ಸಿದ್ಧರಾಗಿರುತ್ತಾರೆಂಬ ಭ್ರಮೆಗೆ ಒಳಗಾಗಿದ್ದರು. ಭಾರತದಲ್ಲೂ ಸೈನಿಕ ಪಾಳಯಗಳಲ್ಲಿ ಬಂಡಾಯ ಕುರಿತು ಸೂಚನೆಗಳು ಹರಿದಾಡುತ್ತಿದ್ದವು. ಆದರೆ ಕಾಲ ಪರಿಪಕ್ವವಾಗಿರಲಿಲ್ಲ. ನೂರಾರು ಸಿಖ್ ಯೋಧರ ಸಂಗಡ ಈ ಮೂವರು ಎಸ್.ಎಸ್. ಸಲಾಮಿ ಎಂಬ ಹಡಗಿನಲ್ಲಿ ಭಾರತದತ್ತ ಪ್ರಯಾಣ ಆರಂಭಿಸಿದರು.

ಬಂಡಾಯಕ್ಕೆ ಸಿದ್ಧತೆ: 1914ರ ನವೆಂಬರ್​ನಲ್ಲಿ ಪಿಂಗಳೆ, ಸರಾಭಾ ಮತ್ತು ಸತ್ಯೇನ್ ಸೇನರು ಕೊಲ್ಕತ ತಲುಪಿದರು. ಸತ್ಯೇನ್ ತನ್ನ ಇಬ್ಬರು ಸಂಗಾತಿಗಳನ್ನು ಕರೆದುಕೊಂಡು ಹೋಗಿ ಭೂಗತನಾಗಿದ್ದ ಬಾಘಾ ಜತೀನ್ ಅಥವಾ ಜತೀನ್ ಮುಖರ್ಜಿಗೆ ಪರಿಚಯ ಮಾಡಿಸಿದ. ಬಂಗಾಳ ವ್ಯಾಘ್ರ ಬಾಘಾ ಜತೀನ ದರ್ಶನ ಮಾಡಿದ ಪಿಂಗಳೆ, ಸರಾಭಾರ ಹೋರಾಟದ ಕೆಚ್ಚು ನೂರ್ಮಡಿಯಾಯಿತು. ಪಿಂಗಳೆ ಕೈಗೆ ಒಂದು ಪರಿಚಯ ಪತ್ರ ನೀಡಿದ ಬಾಘಾ ಜತೀನ್, ಕಾಶಿಯಲ್ಲಿದ್ದ ರಾಸ್​ಬಿಹಾರಿ ಬೋಸರನ್ನು ಕಂಡು ಅವರ ಸೂಚನೆಯಂತೆ ಮುಂದುವರಿಯಲು ತಿಳಿಸಿದ.

ರಾಸ್​ಬಿಹಾರಿ ಬೋಸ್ ಕಾಶಿಯ ಬಂಗಾಳಿ ಟೋಲಾ ಎಂಬಲ್ಲಿ ಭೂಗತನಾಗಿದ್ದುಕೊಂಡು ಇಡೀ ಕ್ರಾಂತಿ ಸಂಘಟನೆಯನ್ನು ನಿಯಂತ್ರಿಸುತ್ತಿದ್ದ. ಅಲ್ಲಿ ಪಿಂಗಳೆ ರಾಸ್ ಬಿಹಾರಿಯನ್ನು ಭೇಟಿ ಮಾಡಿ ಅಮೆರಿಕದಲ್ಲಿ ನಡೆದಿದ್ದ ಗದರ್ ಸಿದ್ಧತೆಗಳನ್ನು ತಿಳಿಸಿ 4,000 ಮಂದಿ ಗದರ್ ಯೋಧರು ಪಂಜಾಬನ್ನು ತಲುಪಿದ್ದಾರೆಂದೂ, ಇನ್ನೂ 15,000 ಯೋಧರು ಸಿದ್ಧರಾಗಿದ್ದು ಪಯಣಿಸಲು ಕಾದಿದ್ದಾರೆಂದೂ ವರದಿ ನೀಡಿದ. ರಾಸ್​ಬಿಹಾರಿ, ಪಿಂಗಳೆಯ ಜತೆಗೆ ಶಚೀಂದ್ರನಾಥ ಸನ್ಯಾಲ್ ಎಂಬ ಹಿರಿಯ ಕ್ರಾಂತಿಕಾರಿಯನ್ನು ಜತೆ ಮಾಡಿ ಬಂಡಾಯದ ಸಿದ್ಧತೆಗಾಗಿ ಅಮೃತಸರಕ್ಕೆ ಕಳಿಸಿದ. ಪಂಜಾಬಿನಲ್ಲಿ ಬಿರುಗಾಳಿ ಪ್ರವಾಸ ಮಾಡಿದ ಸರಾಭಾ ಮತ್ತು ಪಿಂಗಳೆ ಅನೇಕ ಸೈನಿಕ ಪಾಳಯಗಳನ್ನು ರಹಸ್ಯವಾಗಿ ಸಂದರ್ಶಿಸಿ, ಅಲ್ಲಿನ ಯೋಧರು ಕೆಲವೇ ಸಂಖ್ಯೆಯಲ್ಲಿದ್ದ ಬ್ರಿಟಿಷ್ ಸೈನ್ಯಾಧಿಕಾರಿಗಳನ್ನು ಸಂಹರಿಸಿ ಸೈನ್ಯದ ಸೂತ್ರಗಳನ್ನು ತಾವೇ ಕೈಗೆ ತೆಗೆದುಕೊಂಡು ಸ್ವಾತಂತ್ರ್ಯವನ್ನು ಘೊಷಿಸಬೇಕೆಂಬ ಸಂದೇಶ ತಲುಪಿಸಿದರು.

1915ರ ಆರಂಭದ ದಿನಗಳವು. ಕ್ರಾಂತಿಯ ಮುಖ್ಯಸ್ಥರ ಒಂದು ಬಹುಮುಖ್ಯ ಸಭೆಯನ್ನು ರಾಸ್ ಬಿಹಾರಿ ಕಾಶಿಯಲ್ಲಿ ಆಯೋಜಿಸಿದ. ಪಿಂಗಳೆಯೂ ಹಾಜರಿದ್ದ ಆ ಸಭೆಯಲ್ಲಿ, ಫೆಬ್ರವರಿ 21ರಂದು ಪಂಜಾಬಿನ ಪೇಶಾವರ್​ನಿಂದ ಬಂಗಾಳದ ಢಾಕಾವರೆಗಿನ ಸೈನಿಕ ಕೇಂದ್ರಗಳಲ್ಲಿ ಒಮ್ಮೆಲೆ ಕ್ರಾಂತಿ ಏಳಬೇಕೆಂದು ತೀರ್ಮಾನ ಮಾಡಲಾಯಿತು. ಬಂಗಾಳದ ಬಾಘಾ ಜತೀನ್ ಮಾತ್ರ ಸಿದ್ಧತೆಗೆ ಸಮಯ ಸಾಲದೆಂಬ ಅಭಿಪ್ರಾಯ ತಿಳಿಸಿದ್ದ. ಈ ಸಿದ್ಧತೆಯ ಒಂದು ಮುಖ್ಯಭಾಗ ಬಾಂಬ್ ತಯಾರಿಕೆ. ಆ ಕೆಲಸಕ್ಕಾಗಿ ಅಮೃತಸರ, ಲೂಧಿಯಾನ, ಜಬೇವಲ್, ಲೋಹತ್​ವಾಡಿ ಮುಂತಾದ ಕಡೆ ಬಾಂಬ್ ತಯಾರಿಕೆ ಕೇಂದ್ರಗಳು ಕಾರ್ಯಾರಂಭ ಮಾಡಿದ್ದವು. ಬಂಗಾಳದಲ್ಲೂ ಶಸ್ತ್ರಸಂಗ್ರಹವಿತ್ತು. ಮಹಾರಾಷ್ಟ್ರದ ವಿನಾಯಕರಾವ್ ಕಾಪ್ಲೆ ಎಂಬುವನು ಅದನ್ನು ಪಂಜಾಬಿಗೆ ರವಾನಿಸುವ ಜವಾಬ್ದಾರಿ ಹೊತ್ತಿದ್ದ.

ಪಂಜಾಬ್​ಗೆ ಬಂದರು ಗದರ್ ವೀರರು: ತೋಸಾಮಾರು, ನಿಪ್ಪಾನ್ ಮಾರು ಎಂಬ ದೊಡ್ಡ ಜಪಾನಿ ಹಡಗುಗಳಲ್ಲಿ 1914ರ ಅಕ್ಟೋಬರ್, ನವೆಂಬರ್ ತಿಂಗಳುಗಳಲ್ಲಿ ಭಾರಿ ಸಂಖ್ಯೆಗಳಲ್ಲಿ ಅಮೆರಿಕದ ಗದರ್ ವೀರರು ಭಾರತವನ್ನು ತಲುಪಿ ವಿಶೇಷವಾಗಿ ಪಂಜಾಬ್​ನಲ್ಲಿ ಹರಡಿಕೊಂಡರು. ಸೈನಿಕ ಠಾಣೆಗಳಲ್ಲಿ ಕೆಲವರು, ಪಂಜಾಬಿನ ಗ್ರಾಮಗಳಲ್ಲಿ ಇನ್ನು ಕೆಲವರು ಜನಜಾಗೃತಿಯಲ್ಲಿ ತೊಡಗಿಕೊಂಡರು. ಶಚೀಂದ್ರ ಸನ್ಯಾಲನ ವಿನಂತಿಯಂತೆ ಪಂಜಾಬಿನ ಕ್ರಾಂತಿಯನ್ನು ನಿರ್ವಹಿಸಲು ರಾಸ್ ಬಿಹಾರಿ ಬೋಸ್ ಅಮೃತಸರಕ್ಕೆ ಬಂದರು. ಹೋರಾಟದ ಧ್ವಜಗಳು ಸಿದ್ಧಗೊಂಡವು. ಶಸ್ತ್ರಾಸ್ತ್ರಗಳು ಅಮಿತವಾಗಿ ಸಂಗ್ರಹಗೊಂಡಿದ್ದವು. ಗದರ್ ವೀರರು ಪಂಜಾಬಿನ ಹಳ್ಳಿಹಳ್ಳಿಗೆ ಹೋಗಿ ಹೋರಾಟದಲ್ಲಿ ರೈತರು ತೊಡಗಿಕೊಳ್ಳುವಂತೆ ಸಿದ್ಧತೆ ಮಾಡಿದ್ದರು. ಪಿಂಗಳೆ ಕ್ರಾಂತಿ ಸಂಘಟನೆಯ ಸಲುವಾಗಿ ಸೈನಿಕ ಠಾಣೆಗಳನ್ನು ಸಂದರ್ಶಿಸುತ್ತಿದ್ದಾನೆಂಬ ಮಾಹಿತಿ ಬ್ರಿಟಿಷ್ ಸರ್ಕಾರದ ಗುಪ್ತಚರ ಇಲಾಖೆಗೆ ದೊರಕಿತು. ಪಿಂಗಳೆ ಕುರಿತು ಮಾಹಿತಿ ನೀಡಿದವರಿಗೆ ಅಥವಾ ಅವನನ್ನು ಹಿಡಿದುಕೊಟ್ಟವರಿಗೆ ದೊಡ್ಡ ಮೊತ್ತದ ಬಹುಮಾನವನ್ನು ಸರ್ಕಾರ ಘೊಷಿಸಿತು.

ಪಿಂಗಳೆ ವಿವಿಧ ವೇಷಗಳನ್ನು ಧರಿಸಿ ಅವಿಶ್ರಾಂತವಾಗಿ ಸಂಚರಿಸುತ್ತಿದ್ದ. ಕೆಲವೊಮ್ಮೆ ಶ್ಯಾಮ್ಾಲ್ ಎಂಬ ಹೆಸರಿನ ಬಂಗಾಳಿಯಾಗಿ, ಕೆಲವೊಮ್ಮೆ ಗಣಪತ್ ಸಿಂಗ್ ಎಂಬ ಹೆಸರಿನಲ್ಲಿ ಸರ್ದಾರ್ಜಿಯಾಗಿ ವೇಷ ಹಾಕಿಕೊಂಡು ಕಾರ್ಯವನ್ನು ಮುಂದುವರಿಸುತ್ತಿದ್ದ. ನಿಶ್ಚಿತ ದಿವಸ, ಫೆಬ್ರವರಿ 21ರಂದು ಪಂಜಾಬಿನ 23ನೇ ಪದಾತಿ ರೆಜಿಮೆಂಟ್​ನ ಕ್ರಾಂತಿಕಾರಿಗಳು ತಮ್ಮೆಲ್ಲ ಆಂಗ್ಲ ಅಧಿಕಾರಿಗಳನ್ನು ಸಂಹರಿಸಿ ಕ್ರಾಂತಿಯನ್ನು ಆರಂಭಿಸುವ ಢಾಕಾದಲ್ಲಿದ್ದ ಸಿಖ್ ಸೈನಿಕ ರೆಜಿಮೆಂಟುಗಳನ್ನು ಸಂರ್ಪಸಿ ಸಿದ್ಧಗೊಳಿಸಿದ್ದರು.

ಆದರೆ ದ್ರೋಹಿಯೊಬ್ಬ ಹುಟ್ಟಿಕೊಂಡಿದ್ದ. ಅವನೇ ಕೃಪಾಲ್ ಸಿಂಗ್. 23ನೇ ಪದಾತಿ ದಳದ ಬಲವಂತ್ ಸಿಂಗ್ ಎಂಬುವನ ಸೋದರ ಸಂಬಂಧಿಯಾಗಿದ್ದ ಕೃಪಾಲ್, ಬಲವಂತ್ ಸಿಂಗ್​ನ ಪ್ರಭಾವದಿಂದಾಗಿ ದ್ರೋಹಕ್ಕೆ ಮುಂದಾದ. ರಾಸ್ ಬಿಹಾರಿ ಇದ್ದ ಲಾಹೋರ್ ಅಡುಗುದಾಣಕ್ಕೆ ಭೇಟಿ ನೀಡಿದ್ದ ಕೃಪಾಲ್, ಅಲ್ಲಿ ನಡೆಯುತ್ತಿದ್ದ, ಪಿಂಗಳೆಯೂ ಇದ್ದ, ರಹಸ್ಯಸಭೆಯ ವರದಿಯನ್ನು ಬ್ರಿಟಿಷ್ ಅಧಿಕಾರಿಗಳಿಗೆ ತಿಳಿಸಿಬಿಟ್ಟ. ಕೃಪಾಲ್ ಸಿಂಗನೂ ಬಂಡಾಯದ ಸಲುವಾಗಿ ಅಮೆರಿಕದಿಂದ ಬಂದ ಸಿಖ್ಖನೇ. ಈ ಸುದ್ದಿ ತಿಳಿದು ರಾಸ್ ಬಿಹಾರಿ ಕ್ರಾಂತಿಯನ್ನು ಫೆಬ್ರವರಿ 19ರಂದೇ ಆರಂಭಿಸಬೇಕೆಂದು ಆದೇಶಿಸಿದ. ಆದರೆ ಅದೇ ಎಡವಟ್ಟಾಯಿತು.

ವಿಶ್ವಾಸದ್ರೋಹ: ಪಿಂಗಳೆ ಯಾವ ಅಡೆತಡೆಯನ್ನೂ ಲೆಕ್ಕಿಸದೆ ಸೈನಿಕ ಠಾಣೆಗಳನ್ನು ಸಂದರ್ಶಿಸುವ ಕೆಲಸವನ್ನು ಮುಂದುವರಿಸಿದ. ಅವನ ಜತೆಗೆ ತಾನೂ ಕ್ರಾಂತಿಕಾರಿ ಎಂದು ತೋರ್ಪಡಿಸಿಕೊಳ್ಳುತ್ತಿದ್ದ ಒಬ್ಬ ಮುಸ್ಲಿಂ ಸದಾಕಾಲ ಇರುತ್ತಿದ್ದ. ಪಿಂಗಳೆ ಮೀರತ್​ನ ದಂಡು ಪ್ರದೇಶವನ್ನು ಛದ್ಮವೇಷಧಾರಿಯಾಗಿ ಪ್ರವೇಶಿಸುತ್ತಿದ್ದಂತೆ ಆ ಮುಸ್ಲಿಂ ‘ಸಹಕಾರಿ’ ಅಲ್ಲಿನ ಅಧಿಕಾರಿಗಳಿಗೆ ಪಿಂಗಳೆಯ ನಿಜಸ್ವರೂಪವನ್ನು ತೋರಿಸಿಕೊಟ್ಟುಬಿಟ್ಟ. ಕೂಡಲೇ ಪೊಲೀಸರು ಪಿಂಗಳೆಯನ್ನು ವಶಕ್ಕೆ ಪಡೆದುಕೊಂಡರು.

‘ಲಾಹೋರ್ ಷಡ್ಯಂತ್ರ ಮೊಕದ್ದಮೆ’ ಎಂದು ಬ್ರಿಟಿಷರು ಹೆಸರಿಸಿದ ಮೊಕದ್ದಮೆ ಆರಂಭವಾಯಿತು. 61 ಮಂದಿಯನ್ನು ಆಪಾದಿತರನ್ನಾಗಿ ಹೇಳಿತು. ಅವರ ಪೈಕಿ ಕರ್ತಾರ್ ಸಿಂಗ್ ಮತ್ತು ವಿಷ್ಣು ಗಣೇಶ ಪಿಂಗಳೆ ಮುಖ್ಯರು. ಈ ಇಬ್ಬರೂ ಕೋರ್ಟ್​ನಲ್ಲಿ, ತಾವೇ ಬಂಡಾಯ ಹೂಡಲು ಸೈನಿಕರನ್ನು ಪ್ರೇರೇಪಿಸಿದವರೆಂದು ಧೈರ್ಯವಾಗಿ ಘೊಷಿಸಿದರು. 24 ಮಂದಿಗೆ ಮರಣದಂಡನೆಯಾಯಿತು. ಅವರ ಪೈಕಿ ಕರ್ತಾರ್ ಹಾಗೂ ಪಿಂಗಳೆ ಕೂಡ ಇದ್ದರು. ಕರ್ತಾರ್ ಸಿಂಗನಿಗೂ ಗಲ್ಲಾಯಿತು. ಅಂದು ಕೊನೆಯ ಸರದಿ ಪಿಂಗಳೆಯದು. ಅವನನ್ನು ಗಲ್ಲಿಗೇರಿಸಬೇಕಾದ ಅಧಿಕಾರಿ ಕುಚೋದ್ಯ ಮಾಡುತ್ತ, ‘ನಿನಗೆ ಈ ಭೂಮಿಯಲ್ಲಿ ಬದುಕಿರಲು ಅತಿಹೆಚ್ಚು ಸಮಯ ನೀಡಿದ್ದೀನಿ. ಅದಕ್ಕಾಗಿಯೇ ನಿನ್ನನ್ನು ಕಡೆಯದಾಗಿ ನೇಣು ಹಾಕುತ್ತಿದ್ದೀನಿ’ ಎಂದ.

‘ನೀನೊಂದು ದೊಡ್ಡತಪ್ಪು ಮಾಡಿದೆ ಜೈಲರ್. ನನ್ನನ್ನು ಮೊದಲಿಗೆ ಗಲ್ಲಿಗೆ ಹಾಕಿದ್ದರೆ ಪರಲೋಕಕ್ಕೆ ಹೋಗಿ ನನ್ನ ಮಿಕ್ಕ ಸಂಗಾತಿಗಳ ಸ್ವಾಗತಕ್ಕೆ ಅಣಿ ಮಾಡುತ್ತಿದ್ದೆ. ನೀನು ನನಗೆ ಆ ಅವಕಾಶ ತಪ್ಪಿಸಿದೆ. ನನಗೆ ಆ ಭಾಗ್ಯ ತಪ್ಪಿಸಿದ ನಿಷ್ಕರುಣಿ ನೀನು’ ಎಂದುತ್ತರಿಸಿದ ಪಿಂಗಳೆ.

ಕೊನೆಗೆ ತನ್ನ ಬೇಡಿಗಳನ್ನು ಕ್ಷಣಕಾಲ ಕಳಚುವಂತೆ ಕೇಳಿದ. ಬೇಡಿ ತೆಗೆದ ಕೈಗಳಿಂದ ನೆಲದ ಮಣ್ಣನ್ನು ಎತ್ತಿ ಹಣೆಗೆ ಹಚ್ಚಿಕೊಂಡು ‘ಭಗವಂತನೇ! ನಿನಗೆ ನಮ್ಮ ಆಶಯ ಗೊತ್ತು. ನಾವು ಯಾವ ಮಹದೋದ್ದೇಶಕ್ಕಾಗಿ ಪ್ರಾಣಗಳನ್ನು ನೀಡುತ್ತಿದ್ದೇವೆಯೋ ಅದನ್ನು ಶೀಘ್ರವೇ ಪೂರೈಸು ತಂದೆ’ ಎಂದು ಪ್ರಾರ್ಥಿಸಿ ಜೈಲರ್ ಕಡೆ ತಿರುಗಿ, ‘ನಡೆಯಿರಿ ಹೋಗೋಣ’ ಎಂದ.

ಕುಟುಂಬದ ಋಣ ತೀರಿಸಲು ಅಮೆರಿಕಕ್ಕೆ ಸಂಪಾದನೆಗಾಗಿ ಹೋದ ವಿಷ್ಣು ಗಣೇಶ್ ಪಿಂಗಳೆ ಕೊನೆಗೆ ತನ್ನ ತಾಯ್ನಾಡಿನ ಋಣವನ್ನು ಹೀಗೆ ತೀರಿಸಿದ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top