Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಕ್ರಾಂತಿಕಾರ್ಯಕ್ಕೆ ಭದ್ರಬುನಾದಿ ಹಾಕಿದ ಸಂನ್ಯಾಸಿ

Thursday, 18.10.2018, 3:05 AM       No Comments

ಮಹಾನ್ ಸಾಹಸಿ ಜತೀಂದ್ರನಾಥ ಸೇನಾಶಿಕ್ಷಣ ಪಡೆದು, ಕ್ರಾಂತಿಕಾರಿ ಕಾರ್ಯದಲ್ಲಿ ಮುಂಚೂಣಿಯಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು, ಅಸಂಖ್ಯ ಜನರಿಗೆ ಪ್ರೇರಣೆ ನೀಡಿದರು. ಬಳಿಕ, ಸಂನ್ಯಾಸಿಯಾಗಿ ಅಧ್ಯಾತ್ಮದಲ್ಲೂ ಎತ್ತರದ ಸಾಧನೆ ಮಾಡಿ, ಕ್ರಾಂತಿಕಾರಿಗಳಿಗೆ ಮಾರ್ಗದರ್ಶನ ಮಾಡುತ್ತ ಸಾರ್ಥಕ ಜೀವನ ನಡೆಸಿದರು.

ಬಂಗಾಳದಲ್ಲಿ ಯುವಜನರಲ್ಲಿ ಕ್ಷಾತ್ರತೇಜದ, ಹೋರಾಟದ ಕೆಚ್ಚನ್ನು ಹುಟ್ಟಿಸಿದವರ ಸಂಖ್ಯೆ ಸಾಕಷ್ಟು ದೊಡ್ಡದು. ಆ ಕ್ರಾಂತಿ ಆಂದೋಲನ ಬಂಕಿಮ ಚಂದ್ರ ಚಟರ್ಜಿ, ರಾಜ ನಾರಾಯಣ ಬೋಸ್, ಬಿಪಿನ್ ಚಂದ್ರಪಾಲ್, ಅರವಿಂದ ಘೊಷ್, ಭಗಿನಿ ನಿವೇದಿತಾ ಮುಂತಾದ ನೂರಾರು ಮಂದಿಯಿಂದ ಪೋಷಿಸಲ್ಪಟ್ಟು ಉಗ್ರ ಸ್ವರೂಪವನ್ನು ಪಡೆಯಿತು. ಮನೆ ಮನೆಯಿಂದ ದೇಶ ಸ್ವಾತಂತ್ರ್ಯಕ್ಕಾಗಿ ಯುವಕರು ಹೊರಬಂದು ಬಲಿದಾನಕ್ಕೆ ಮುಂದಾದ ವಾತಾವರಣ ಉಂಟಾಯಿತು. ಅಂಥ ವಾತಾವರಣದ ಅತ್ಯಂತ ಸಮರ್ಥ ನೇತೃತ್ವದ ಗುಣ ಹೊಂದಿದ್ದ, ಸ್ವಾತಂತ್ರ್ಯ ಸಾಧನೆಯ ಕಳಕಳಿಯಿಂದ ತುಂಬಿಹೋಗಿದ್ದ ಮನುಷ್ಯ ಜತೀಂದ್ರನಾಥ ಬ್ಯಾನರ್ಜಿ (1877-1930).

ದೇಶಭಕ್ತಿಯ ಮೊಳಕೆ: ಇಪ್ಪತ್ತನೆಯ ಶತಮಾನದ ಆರಂಭದ ಮೊದಲ ದಶಕದಲ್ಲಿ ಬಂಗಾಳದಲ್ಲಿ ಭುಗಿಲೆದ್ದ ಕ್ರಾಂತಿಕಾರಿ ಚಟುವಟಿಕೆಗಳ ಸಮಯದಲ್ಲಿ ಮಿಂಚಿದ ಇಬ್ಬರು, ಆರಂಭದಲ್ಲಿ ಎಷ್ಟು ಕ್ರಿಯಾಶೀಲ ಕ್ರಾಂತಿಕಾರಿಗಳಾಗಿದ್ದರೋ ತದನಂತರ ಅಷ್ಟೇ ಕ್ರಿಯಾಶೀಲ ಅಧ್ಯಾತ್ಮ ಜೀವಿಗಳಾದರು. ಅವರಂತೆ ಅನೇಕ ಕ್ರಾಂತಿಕಾರಿ ಯುವಕರು ಒಂದು ಹಂತದ ಅನಂತರ ಕಾವಿ ಉಡುಪು ಧರಿಸಿ ಸರ್ವಸಂಗ ಪರಿತ್ಯಾಗಿಗಳಾಗಿ ಸಂನ್ಯಾಸಿಗಳಾಗಿದ್ದು ಬಂಗಾಳದ ವಿಶೇಷ.

ಜತೀಂದ್ರ ಎಂಬ ಹೆಸರಿನಲ್ಲಿ ಅತ್ಯಂತ ಪ್ರಸಿದ್ಧರು ಮೂವರು. ಒಬ್ಬ ಬಾಘಾ ಜತೀನ್ ಎಂದು ಜನಜನಿತನಾಗಿ 1915ರಲ್ಲಿ ಹುತಾತ್ಮನಾದವನು. ಇನ್ನೊಬ್ಬ ಜತೀಂದ್ರನಾಥ ದಾಸ್. ರಾಜಕೀಯ ಕೈದಿಗಳನ್ನು ಕುರಿತ ಆಂಗ್ಲ ಪ್ರಭುತ್ವದ ಧೋರಣೆಯನ್ನು ಪ್ರತಿಭಟಿಸಲು 1931ರಲ್ಲಿ 63 ದಿವಸಗಳ ಉಪವಾಸ ಮಾಡಿ ಹುತಾತ್ಮನಾದ ಭಗತ್ ಸಿಂಗ್​ನ ಸಂಗಾತಿ. ಇವರಿಬ್ಬರಂತೆ ಮುಂಚೂಣಿಗೆ ಬರದಿದ್ದರೂ ತನ್ನ ಪ್ರೇರಣಾತ್ಮಕ ನಡೆ-ನುಡಿಗಳಿಂದ ಪೂರ್ವ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಬಿರುಗಾಳಿಯಂತೆ ಸಂಚರಿಸಿ ಅನುಶೀಲನ ಸಮಿತಿಯನ್ನು ಸಂಘಟಿಸಿ ಅದಕ್ಕೆ ಭದ್ರಬುನಾದಿ ನಿರ್ವಿುಸಿದ ಮೊದಲ ಶ್ರೇಣಿಯ ನೈಜ ನಾಯಕ ಜತೀಂದ್ರನಾಥ ಬ್ಯಾನರ್ಜಿ.

ಯೋಧ ಅರವಿಂದ ಘೊಷ್ ಯೋಗಿ ಮಹರ್ಷಿ ಅರವಿಂದ ಆದರೆ ಜತೀಂದ್ರನಾಥ ಬ್ಯಾನರ್ಜಿ ಸ್ವಾಮಿ ನಿರಾಲಂಬ ಎಂಬ ಸಂನ್ಯಾಸಿಯಾದರು.

1877ರ ನವೆಂಬರ್ 19ರಂದು ಬಂಗಾಳದ ಬರ್ದ್ವಾನ್ ಜಿಲ್ಲೆಯ ಛನ್ನಾ ಗ್ರಾಮದಲ್ಲಿ ಕಾಶೀಚರಣ್ ಬ್ಯಾನರ್ಜಿ ದಂಪತಿಗೆ ಜನಿಸಿದ ಜತೀಂದ್ರ. ತಂದೆ ಕಾಶೀಚರಣ್ ಸರ್ಕಾರಿ ಉದ್ಯೋಗದಲ್ಲಿದ್ದವರು. ರಾಮಕೃಷ್ಣ ಪರಮಹಂಸರ ವಿಚಾರಗಳಿಗೆ ಮನಸೋತಿದ್ದ ಧಾರ್ವಿುಕ ಜೀವಿ. ಬಂಗಾಳದ ಜೆಸ್ಸೂರ್ ಜಿಲ್ಲೆಯ (ಪ್ರಸ್ತುತ ಉತ್ತರ 24 ಪರಗಣ ಜಿಲ್ಲೆಯ) ಬನ್​ಗಾಂವ್​ನಲ್ಲಿ ಕಾಳಿಚರಣರ ಉದ್ಯೋಗ. ಮಧ್ಯಮ ವರ್ಗದ ಕುಟುಂಬ. ಜತೀಂದ್ರನ ಪ್ರಾಥಮಿಕ ಶಾಲಾಭ್ಯಾಸ ಛನ್ನಾ ಗ್ರಾಮದಲ್ಲಿಯೇ ಜರುಗಿತು. ನಂತರ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಕಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಸೇರಿದ. ಬರ್ದ್ವಾನಿನ ‘ಬರ್ದ್ವಾನ್ ರಾಜಾ ಕಾಲೇಜ್’ ಸೇರಿ ಕಲಾ ವಿಭಾಗದ ಎಫ್.ಎ. ಪರೀಕ್ಷೆ ಪಾಸು ಮಾಡಿದ. ಉತ್ತಮ ದರ್ಜೆಯಲ್ಲಿ ತೇರ್ಗಡೆಯಾದ ಜತೀಂದ್ರನಿಗೆ ಅದೇ ಕಾಲೇಜಿನಲ್ಲಿ ಬಿ.ಎ. ಡಿಗ್ರಿಗೆ ಸುಲಭವಾಗಿ ಪ್ರವೇಶ ದೊರೆಯಿತು.

ಪರಕೀಯ ಆಡಳಿತದ ವಿರುದ್ಧ ಆಕ್ರೋಶ: ಆಗ ಭಾರತದ ರಾಜಕೀಯ ಪರಿಸ್ಥಿತಿಯ ಕಡೆಗೆ ಅವನ ಗಮನ ತಿರುಗಿತು. ‘ಶಠಂ ಪ್ರತಿ ಶಾಠ್ಯಂ’ ಎಂಬ ತಂತ್ರವೇ ಬ್ರಿಟಿಷರಿಗೆ ಬುದ್ಧಿ ಕಲಿಸಲು ಇರುವ ಏಕೈಕ ಮಾರ್ಗವೆಂದು ಅವನ ಮನಸ್ಸು ಕೂಗಿ ಹೇಳಿತು. ಆಗ ಅವನಿಗೆ ಹೊಳೆದದ್ದೇ ಸಮರ ತಂತ್ರವನ್ನು ಅರಿಯಬೇಕೆಂಬ ವಿಚಾರ. ಮೊದಲಿಗೆ ಸೈನ್ಯಕ್ಕೆ ಭರ್ತಿಯಾಗಿ ಸೈನಿಕ ಶಿಕ್ಷಣ ಪಡೆದು ಯುದ್ಧದ ರೀತಿನೀತಿಗಳನ್ನು ತಿಳಿದುಕೊಂಡು ನಂತರ ಅದನ್ನು ಬಳಸಿಕೊಂಡು ಧೈರ್ಯಶಾಲಿ ಯುವಕರ ಪಡೆ ಕಟ್ಟಬೇಕೆಂಬ ದೂರಗಾಮಿ ಆಲೋಚನೆಯನ್ನು ಹೊಂದಿ ಅದಕ್ಕಾಗಿ ಸೈನ್ಯದಲ್ಲಿ ದಾಖಲಾಗಲು ಸುತ್ತಾಡಲಾರಂಭಿಸಿದ.

ಆ ಪ್ರಯತ್ನದಲ್ಲೇ ಇರುವಾಗ ಬರೋಡಾದ ಮಹಾರಾಜಾ ಗಾಯಕವಾಡರ ಆಪ್ತವರ್ಗದಲ್ಲಿ ಅರವಿಂದ ಘೊಷ್ ಎಂಬ ಬಂಗಾಳಿ ಮನುಷ್ಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾನೆಂಬ ವರ್ತಮಾನ ತಿಳಿಯಿತು. ಬರೋಡಾಕ್ಕೆ ಹೋದಾಗ ಅರವಿಂದ ಘೊಷರನ್ನು ಭೇಟಿ ಮಾಡುವುದು ಅವನಿಗೆ ಕಷ್ಟವಾಗಲಿಲ್ಲ.

ಜತೀಂದ್ರನ ದಷ್ಟಪುಷ್ಟ ಶರೀರ ಹಾಗೂ ಮುಖದಲ್ಲಿನ ತೇಜಸ್ಸನ್ನು ಕಂಡು ಪ್ರಭಾವಿತರಾದ ಅರವಿಂದರು ಶಾಂತಚಿತ್ತದಿಂದ ಅವನ ಎಲ್ಲ ಮಾತುಗಳನ್ನು ಆಲಿಸಿ, ಜೀವನಗುರಿಯನ್ನು ಮೆಚ್ಚಿಕೊಂಡು ಅವನಿಗೆ ಬೇಕಾದ ಎಲ್ಲ ಸಹಾಯವನ್ನು ಮಾಡಲು ನಿರ್ಧರಿಸಿದರು. ಅರವಿಂದರು ಮಹಾರಾಜಾ ಸಯ್ಯಾಜಿರಾವ್ ಗಾಯಕವಾಡರ ಪತ್ರ ವ್ಯವಹಾರ ಮುಂತಾದವನ್ನು ನೋಡಿಕೊಳ್ಳುತ್ತಿದ್ದ ಆಪ್ತರ ವರ್ಗಕ್ಕೆ ಸೇರಿದವರಾದ್ದರಿಂದ ಅವರಿಗೆ ಮಹಾರಾಜರ ಬಳಿ ಜತೀಂದ್ರನ ಪ್ರಸ್ತಾವ ಮಾಡುವುದು ಕಷ್ಟವಾಗಲಿಲ್ಲ. ಪ್ರಾಥಮಿಕ ಸಂದರ್ಶನದ ನಂತರ ಅರವಿಂದರ ಶಿಫಾರಸಿನಿಂದಾಗಿ 1897ರಲ್ಲಿ ಜತೀಂದ್ರ ಮಹಾರಾಜರ ಅಂಗರಕ್ಷಕ ಪಡೆಗೆ ಸೇರಿಸಲ್ಪಟ್ಟ. ಸನಿಹದಲ್ಲೇ ಮಹಾರಾಜರ ನಂಬಿಕಸ್ಥ ಅಂಗರಕ್ಷಕನಾದ. ಮಹಾರಾಜರ ಸೈನ್ಯದ ನುರಿತ ಅಧಿಕಾರಿಗಳ ಸ್ನೇಹ ಸಂಪಾದಿಸಿ ಅನೇಕ ರಹಸ್ಯಗಳನ್ನು ಅರಿತುಕೊಂಡ.

ಅರವಿಂದರ ಪ್ರತಿನಿಧಿ: ಈ ಮಧ್ಯೆ ಇನ್ನೊಂದು ಬೆಳವಣಿಗೆ ಆಯಿತು. ಭಗಿನಿ ನಿವೇದಿತಾ ಮಹಾರಾಜರನ್ನು ಭೇಟಿ ಮಾಡಲು ಬರೋಡಾಗೆ ಬಂದವರು ಅರವಿಂದರ ಜತೆ ಮಾತನಾಡಲು ಅವಕಾಶ ಪಡೆದರು. ಇಬ್ಬರೂ ಅಗ್ನಿಶಿಖೆಗಳು! ಅರವಿಂದರ ಲೇಖನಗಳ ಮೂಲಕ ಅವರ ವಿಚಾರಗಳನ್ನು ಅರಿತಿದ್ದ ನಿವೇದಿತಾ ಬಂಗಾಳಿ ಕ್ರಾಂತಿಕಾರಿ ಚಟುವಟಿಕೆಗಳಿಗೆ ಪುಷ್ಟಿ ನೀಡಲು ಅವರು ಬಂಗಾಳಕ್ಕೆ ಬರುವುದು ಅವಶ್ಯವಿದೆ ಎಂದು ತಿಳಿಸಿದರು. ಆದರೆ ಅರವಿಂದರು ತಕ್ಷಣವೇ ಬರೋಡಾ ಹುದ್ದೆ ಬಿಡುವ ಹಾಗಿರಲಿಲ್ಲ. ಹೀಗಾಗಿ ನಿವೇದಿತಾರ ಅಭಿಪ್ರಾಯವನ್ನು ಒಪ್ಪಿ ತಾವು ಕಲ್ಕತ್ತಾಗೆ ತೆರಳುವ ಮುನ್ನ ತಮ್ಮ ಪ್ರತಿನಿಧಿಗಳನ್ನು ಕಳಿಸುವುದಾಗಿ ವಚನ ನೀಡಿದರು. ಅದರಂತೆ ಕಳಿಸಲಾದವರೇ ಜತೀಂದ್ರ ಮತ್ತು ಅರವಿಂದರ ತಮ್ಮ ಬಾರೀಂದ್ರ ಘೊಷ್.

ಆವೇಳೆಗೆ ನಿವೇದಿತಾರ ಸಕ್ರಿಯ ಮಾರ್ಗದರ್ಶನದಲ್ಲಿ ಬಂಗಾಳದಲ್ಲಿ ಅನುಶೀಲನ ಸಮಿತಿ ಕಾರ್ಯನಿರತವಾಗಿತ್ತು. ಬ್ಯಾರಿಸ್ಟರ್ ಪ್ರಮಥನಾಥ ಮಿತ್ರರಂಥ ಸಿಂಹಸದೃಶ ವ್ಯಕ್ತಿ ಬಂಗಾಳವಿಡೀ ಸಂಚರಿಸಿ ಪುಲಿನ್​ಬಿಹಾರಿ ದಾಸ್, ಹೇಮಚಂದ್ರ ಘೊಷ್, ಬಾಘಾ ಜತೀನರಂಥ ಸಮರ್ಥ ಸಂಘಟಕರನ್ನು ಒಟ್ಟುಮಾಡಿದ್ದರು. ಆಗ ಹಲವು ಹತ್ತು ಚಿಕ್ಕ ದೊಡ್ಡ ಕ್ರಾಂತಿಕಾರಿ ಗುಂಪುಗಳು ಕಾರ್ಯನಿರತವಾಗಿದ್ದವು. ಅವುಗಳನ್ನೆಲ್ಲ ಒಂದೆಡೆ ಕೂಡಿಹಾಕಿ ಒಂದು ಸಂಘಟನೆ ರಚಿಸುವ ಕಾರ್ಯ ಮಾಡಬೇಕಾದ್ದನ್ನು ನಿವೇದಿತಾ, ಪ್ರಮಥನಾಥ ಮಿತ್ರ ಮುಂತಾದವರು ಮನಗಂಡರು. ಪ್ರಮಥನಾಥರು ಬಂಗಾಳದ ಮುಖ್ಯಕೇಂದ್ರಗಳಲ್ಲಿ ಸಂಚರಿಸುತ್ತ ಎಲ್ಲ ಕ್ರಾಂತಿಕಾರಿ ಸಂಸ್ಥೆಗಳನ್ನೂ ಒಟ್ಟುಗೂಡಿಸುವ ಕೆಲಸದಲ್ಲಿ ಮುಂದಾಳತ್ವ ವಹಿಸಿದರು. ಅನುಶೀಲನ ಸಮಿತಿ ನಿರ್ವಣಗೊಂಡು ವೈಚಾರಿಕ ಸೈನಿಕ ಶಿಕ್ಷಣಗಳನ್ನು ಯುವಕರಿಗೆ ನೀಡಲಾರಂಭಿಸಲಾಯಿತು. ಅರವಿಂದರಿಂದ ನಿಯೋಜಿಸಲ್ಪಟ್ಟ ಜತೀಂದ್ರನಾಥ ಬ್ಯಾನರ್ಜಿ ಕಲ್ಕತ್ತಾಗೆ ಬಂದು ಅನುಶೀಲನ ಸಮಿತಿಯ ಸೈನಿಕ ತರಬೇತಿಯ ವಿಭಾಗದ ಮುಖ್ಯಸ್ಥನಾಗಿ ಜವಾಬ್ದಾರಿ ಹೊತ್ತ. ಅದು ಜತೀಂದ್ರನ ಅಭಿರುಚಿಯ ಕ್ಷೇತ್ರವೂ ಹೌದು. ಅನುಶೀಲನ ಸಮಿತಿಯಲ್ಲಿ ವೈಚಾರಿಕ ಶಿಕ್ಷಣದ ವ್ಯವಸ್ಥೆಯೂ ಇತ್ತು. ನಿವೇದಿತಾ, ರಾಮಕೃಷ್ಣ ಮಠದ ಶಾರದಾನಂದ, ಸಖಾರಾಮ್ ದೇವಸ್ಕರ್, ಪ್ರಮಥನಾಥರು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಜತೀಂದ್ರ ವರ್ತಮಾನ ರಣನೀತಿ, ಬ್ರಿಟಿಷರ ಧೂರ್ತತನಗಳನ್ನು ವಿವರಿಸುವ ತರಗತಿ ತೆಗೆದುಕೊಳ್ಳುತ್ತಿದ್ದ. ಆಗ ಗುರುದೇವ ರವೀಂದ್ರನಾಥ ಟ್ಯಾಗೋರ್ ಕುಟುಂಬದ ಕೆಲವರು ಕ್ರಾಂತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ರವೀಂದ್ರರ ಅಣ್ಣಂದಿರಾದ ಜ್ಯೋತಿರಿಂದ್ರ ಟ್ಯಾಗೋರ್ ಮತ್ತು ಸೋದರ ಸಂಬಂಧಿ ಸುರೇಂದ್ರನಾಥ ಟ್ಯಾಗೋರರು ಕ್ರಾಂತಿ ಸಂಘಟನೆಯ ಸೂತ್ರಧಾರಿಗಳಾಗಿ ದುಡಿಯುತ್ತಿದ್ದರು. ಅವರ ಕುಟುಂಬದ ಸರಳಾದೇವಿ ಘೊಷಾಲ್ ಕ್ರಾಂತಿ ಚಟುವಟಿಕೆಗಳ ಮುಂಚೂಣಿಯಲ್ಲಿದ್ದ ಹೆಣ್ಣುಮಗಳು. ಉತ್ಸಾಹಿಯೂ ಮುನ್ನುಗ್ಗುವ ಸ್ವಭಾವದವಳೂ ಆಗಿದ್ದ ಈಕೆ ‘ವೀರ್ವಾಷ್ಟಮಿ’ ಮತ್ತು ಪ್ರತಾಪಾದಿತ್ಯನ ದಿನಾಚರಣೆಯ ಮೂಲಕ ಅಂದಿನ ಯುವಜನರಲ್ಲಿ ರಾಷ್ಟ್ರೀಯ ಭಾವನೆ ಹಾಗೂ ಹೋರಾಟದ ಮನೋಧರ್ಮವನ್ನು ಬೆಳೆಸಲು ಪ್ರಯತ್ನಿಸಿದವಳು. ಜತೀಂದ್ರ ಅವಳೊಂದಿಗೆ ಕೈ ಜೋಡಿಸಿ ಸಾರ್ವಜನಿಕವಾಗಿ ಯುವಕರಿಗೆ ಯುದ್ಧ ವಿದ್ಯೆಗಳ ಸ್ಪರ್ಧೆಯನ್ನು ಏರ್ಪಡಿಸಿ ಆ ಮೂಲಕ ಅನುಶೀಲನ ಸಮಿತಿಗೆ ಯೋಗ್ಯ ಯುವಕರನ್ನು ಸೇರಿಸಿಕೊಳ್ಳುತ್ತಿದ್ದ.

ಮಿಲಿಟರಿ ಉಡುಪಿನಲ್ಲಿ ಎತ್ತರವಾದ ಕುದುರೆಯ ಮೇಲೆ ಕುಳಿತು ಕಲ್ಕತ್ತೆಯ ವಿವಿಧ ಪ್ರದೇಶಗಳಲ್ಲಿ ಸಂಚರಿಸುತ್ತ ಯುವಕರ ಸಭೆಗಳನ್ನು ನಡೆಸಿ ಹೋರಾಟಕ್ಕೆ ಅಣಿ ಮಾಡುತ್ತಿದ್ದ ಧೀರ ಗಂಭೀರ ಗಂಡುಗಲಿ ಜತೀಂದ್ರನಾಥ ಬ್ಯಾನರ್ಜಿಯನ್ನು ನೋಡಿದ ಅಂದಿನವರು ಅಂಥ ಒಂದು ಅವನ ಚಿತ್ರಣವನ್ನು ನೀಡಿದ್ದಾರೆ.

ಅಧ್ಯಾತ್ಮ ಮಾರ್ಗಕ್ಕೆ ಪದಾರ್ಪಣೆ: ಎಂಥ ದೊಡ್ಡ ಮನುಷ್ಯರಾದರೂ ಅಪರಿಪೂರ್ಣ. ಅರಿಷಡ್ವರ್ಗ ಅವನನ್ನು ಹಾಳು ಮಾಡುವುದು ನಿಸ್ಸಂದೇಹ. ನೆಪೋಲಿಯನ್​ನನ್ನು ನೆನಪಿಸುತ್ತಿದ್ದ ಜತೀಂದ್ರನಾಥನ ಮುನ್ನುಗ್ಗುವ ಸ್ವಭಾವ ಹಾಗೂ ಸಂಘಟನಾ ಕೌಶಲ್ಯ ಯುವಜನರಲ್ಲಿ ಅವನ ಬಗ್ಗೆ ಆಕರ್ಷಣೆಯನ್ನು ಉಂಟು ಮಾಡಿತ್ತು. ಅಷ್ಟೇ ಸಾಕಾಗಿತ್ತು ಕೆಲವರಿಗೆ ಅವನ ಕಡೆ ಈರ್ಷ್ಯೆಯಿಂದ ನೋಡಲು. ಅರವಿಂದರ ತಮ್ಮ ಬಾರೀಂದ್ರ ಕ್ರಾಂತಿಕಾರ್ಯಕ್ಕೆ ಜೀವ ಸಮರ್ಪಿಸಿದ್ದರೂ ಕೆಲವು ದೌರ್ಬಲ್ಯಗಳು ಅವನನ್ನು ಕಾಡುತ್ತಿದ್ದವು. ಪ್ರಮಥನಾಥರಿಗೂ ಜತೀಂದ್ರನನ್ನು ಕುರಿತು ಸ್ವಲ್ಪ ಭಿನ್ನ ಅಭಿಪ್ರಾಯವಿತ್ತು. ಇದರಿಂದ ಜತೀಂದ್ರನಾಥನ ಕೆಲಸಗಳಿಗೆ ಹೆಜ್ಜೆ ಹೆಜ್ಜೆಗೂ ಅಡ್ಡಿ ಆತಂಕಗಳು ಎದುರಾಗುತ್ತಿದ್ದವು. ಅವನ ಎಲ್ಲ ಪ್ರತಿಭಾ ಸಾಮರ್ಥ್ಯಗಳು ವ್ಯರ್ಥವಾದವು.

ಆಲಿಪುರ ಬಾಂಬ್ ಮೊಕದ್ದಮೆಯಲ್ಲಿ ಅರವಿಂದರೊಂದಿಗೆ ಬಂಧಿತನಾದ ಜತೀಂದ್ರ ನಂತರ ಬಿಡುಗಡೆಯಾದ. ಬಳಿಕ ಅವನ ಮನೆಯವರು ಜತೀಂದ್ರನನ್ನು ಗೃಹಸ್ಥ ಬಂಧನದಲ್ಲಿರಿಸಲು ಹಿರಣ್ಮಯಿ ಎಂಬ ಕನ್ಯೆಯೊಂದಿಗೆ ವಿವಾಹ ಮಾಡಿದರು. ಅದು ಅವನ ಇಚ್ಛೆಗೆ ವಿರುದ್ಧವಾಗಿ ನಡೆದ ಮದುವೆ. ಅವನ ಮನಸ್ಸು ಮಾತ್ರ ಅಧ್ಯಾತ್ಮದತ್ತಲೇ ಸೆಳೆಯುತ್ತಿತ್ತು. ಕ್ರಾಂತಿಮಾರ್ಗದಲ್ಲಿ ಆಸಕ್ತಿಯೂ ಹೋಯಿತು. ಅವನು ಒಬ್ಬ ಯೋಗ್ಯ ಗುರುವನ್ನು ಹುಡುಕಿಕೊಂಡು ಮನೆ ಬಿಟ್ಟು ಹೊರಟ. ಸೈನಿತಾಲ್​ನಲ್ಲಿ ಸೋಹಮ್ ಸ್ವಾಮಿ ಎಂಬ ಗುರು ಅವನಿಗೆ ದೊರೆತು ಅಧ್ಯಾತ್ಮ ಸಾಧನೆಯಲ್ಲಿ ಸಂನ್ಯಾಸಿಯಾಗಿ ಬಹು ಎತ್ತರಕ್ಕೆ ಬೆಳೆದ. ಜತೀಂದ್ರನಾಥ ಬ್ಯಾನರ್ಜಿ ಆದಿಶಂಕರರ ಅದ್ವೈತ ಸಾಹಿತ್ಯದಿಂದ ಪ್ರಭಾವಿತನಾಗಿ ಆ ಮಾರ್ಗವನ್ನು ಕ್ರಮಿಸಲು ಆರಂಭಿಸಿ ನಿಷ್ಠೆಯಿಂದ ಗುರುಸೇವೆ ಮಾಡಿದ. ಸಂನ್ಯಾಸದ ಅನಂತರ ಅವನ ಹೆಸರು ಸ್ವಾಮಿ ನಿರಾಲಂಬ ಎಂದಾಯಿತು.

ಕೆಲಕಾಲ ನಿರಾಲಂಬ ಸ್ವಾಮಿ ಮಥುರೆಯಲ್ಲಿ ನೆಲೆಸಿದ್ದಾಗ, ಸ್ವಲ್ಪ ನಿರಾಶೆಗೊಂಡಿದ್ದ ಬಾಘಾ ಜತೀನ್ (ಜತೀಂದ್ರನಾಥ ಮುಖರ್ಜಿ) ಅವರನ್ನು ಭೇಟಿಯಾಗಿ ತನ್ನ ಮುಂದಿದ್ದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಮುಂದೆ ಹೋರಾಟವನ್ನು ಹತ್ತು ಪಟ್ಟು ಹೆಚ್ಚಿಸಿ ಕೊನೆಗೊಮ್ಮೆ ಹುತಾತ್ಮನಾದ. ನಿರಾಲಂಬ ಸ್ವಾಮಿಗಳು ಬಾಘಾ ಜತೀನ್ ಹಾಗೂ ರಾಸ್ ಬಿಹಾರಿ ಬೋಸ್​ರನ್ನು ತಮ್ಮ ಮಥುರೆಯ ಆಶ್ರಮದಲ್ಲೇ ಭೇಟಿ ಮಾಡಿಸಿ ಅವರಿಬ್ಬರ ಪ್ರಯತ್ನಗಳಲ್ಲಿ ಏಕಸೂತ್ರತೆ ತರುವಲ್ಲಿ ಯಶಸ್ವಿಯಾದರು. ನಂತರ ಸ್ವಗ್ರಾಮ ಛನ್ನಾಗೆ ಹಿಂದಿರುಗಿ ಅಲ್ಲೊಂದು ಆಶ್ರಮ ಸ್ಥಾಪಿಸಿದರು. ಪೂರ್ವಾಶ್ರಮದ ಪತ್ನಿಯನ್ನು ಆಶ್ರಮ ಮಾತೆಯಾಗಿ ನೇಮಿಸಿ, ರಾಮಕೃಷ್ಣ ಪರಮಹಂಸರು ಶಾರದಾದೇವಿಯಲ್ಲಿ ಮಾತೃ ಸ್ವರೂಪವನ್ನು ಕಂಡಂತೆ ನಿರಾಲಂಬ ಸ್ವಾಮಿಯೂ ಪೂರ್ವಾಶ್ರಮದ ಪತ್ನಿಯಲ್ಲಿ ತಾಯಿಯನ್ನು ಕಾಣುತ್ತ ಸಂನ್ಯಾಸ ಜೀವನವನ್ನು ನಡೆಸಿದರು. ಆದರೆ ಹುಟ್ಟು ದೇಶಭಕ್ತರಾದ ಅವರು ಸಲಹೆಗಳಿಗಾಗಿ ಬಳಿ ಬರುತ್ತಿದ್ದ ಕ್ರಾಂತಿಕಾರಿಗಳಿಗೆ ಮಾರ್ಗದರ್ಶನ ಮಾಡುವುದನ್ನು ಕೊನೆಯವರೆಗೆ ಮುಂದುವರಿಸಿದರು.

ಭಗತ್ ಸಿಂಗ್ ಭೇಟಿ: 1929ರಲ್ಲಿ ಸ್ಯಾಂಡರ್ಸ್ ವಧಾ ಪ್ರಕರಣದ ಅನಂತರ ಕಲ್ಕತ್ತಾಗೆ ತಲೆಮರೆಸಿಕೊಂಡು ಬಂದಿದ್ದ ಭಗತ್ ಸಿಂಗ್ ಛನ್ನಾಗೆ ಹೋಗಿ ನಿರಾಲಂಬ ಸ್ವಾಮಿಯನ್ನು ಭೇಟಿಯಾಗಿ ಆವರೆಗೆ ನಡೆದ ಕ್ರಾಂತಿಕಾರಿ ವಿದ್ಯಮಾನಗಳನ್ನು ಕುರಿತು ರ್ಚಚಿಸಿದುದಾಗಿ ತನ್ನ ‘ನಾನೇಕೆ ನಾಸ್ತಿಕನಾದೆ?’ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾನೆ.

1930ರ ಸೆಪ್ಟೆಂಬರ್ 5ರಂದು ನಿರಾಲಂಬ ಸ್ವಾಮಿ ಬ್ರಹ್ಮಪಾದ ಸೇರಿದರು. ಒಂದು ಕಾಲದ ಕ್ರಾಂತಿಕಾರಿ ಲೋಕ ತ್ಯಜಿಸುವಾಗ ಒಬ್ಬ ದೊಡ್ಡ ಯೋಗಿಯಾಗಿ, ಸಂನ್ಯಾಸಿಯಾಗಿ ಜನರಿಗೆ ಬೋಧನೆ ಮಾಡಿ ಜೀವನಯಾತ್ರೆ ಮುಗಿಸಿದರು.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top