Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಕಾರ್ಯಶೀಲ ಹೋರಾಟಗಾರ ಎಂ.ಪಿ.ಟಿ. ಆಚಾರ್ಯ

Thursday, 09.08.2018, 3:03 AM       No Comments

| ಡಾ. ಬಾಬು ಕೃಷ್ಣಮೂರ್ತಿ

ಲಂಡನ್ನಿನ ಇಂಪೀರಿಯಲ್ ಇನ್​ಸ್ಟಿಟ್ಯೂಟ್​ನ ಜಹಾಂಗೀರ್ ಹಾಲ್​ನಲ್ಲಿ 1909ರ ಜುಲೈ 1ರ ತಡರಾತ್ರಿ ಹಾರಿದ ಪಿಸ್ತೂಲು ಗುಂಡುಗಳು ಇಂಗ್ಲೆಂಡಿನಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಆಂದೋಲನ ಉಂಟುಮಾಡಿದ್ದವು. ಕಾರಣ ಮದನ್​ಲಾಲ್ ಧಿಂಗ್ರಾ ಎಂಬ ತರುಣ ಕರ್ಜನ್ ವಾಯಿಲಿ ಎಂಬ ಭಾರತ ವಿರೋಧಿ ಆಂಗ್ಲ ಅಧಿಕಾರಿಯನ್ನು ಯಮ ಸದನಕ್ಕಟ್ಟಿದ ರಾತ್ರಿ ಅದು.

‘ಹೇಗಿದೆ ಭಾರತದ ಲಾಠಿ ರುಚಿ?’: ಲಂಡನ್ನಿನಲ್ಲಿ ಹಿಡಿಯಷ್ಟು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿದ್ದರೆ ಅಪಾರ ಸಂಖ್ಯೆಯಲ್ಲಿ ಇಂಗ್ಲೆಂಡ್ ಭಕ್ತರಿದ್ದರು. ಧಿಂಗ್ರಾನ ಕೃತ್ಯವನ್ನು ಖಂಡಿಸಲು ಕ್ಯಾಕ್ಸ್​ಟನ್ ಹಾಲ್ ಎಂಬಲ್ಲಿ ಈ ಸಾಮ್ರಾಜ್ಯನಿಷ್ಠ ಭಕ್ತರು ಒಂದು ಸಭೆಯನ್ನು ಆಯೋಜಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರ ಮಂದವಾದಿ ನಾಯಕ ಸುರೇಂದ್ರನಾಥ ಬ್ಯಾನರ್ಜಿ ಕೂಡ ಇದ್ದ ಆ ಸಭೆಯಲ್ಲಿ ಆಗಾಖಾನ್ ಎಂಬ ಅಂದಿನ ಮುಂಚೂಣಿಯ ಮುಸ್ಲಿಂ ನಾಯಕ ಅಧ್ಯಕ್ಷ ಪೀಠದಲ್ಲಿ ಕುಳಿತಿದ್ದ. ನಿರ್ಣಯ ಮಂಡಿಸುವ ಸಮಯ ಬಂತು. ಆಗಾಖಾನ್ ನಿರ್ಣಯವನ್ನು ಓದಿ ‘ಈ ಸಭೆಯು ಸರ್ವಾನುಮತದಿಂದ ಧಿಂಗ್ರಾನನ್ನು ಖಂಡಿಸುತ್ತದೆ’ ಎಂದ. ಆತ ಹಾಗನ್ನುತ್ತಿದ್ದಂತೆ ಥಟ್ಟನೆ ಬಂತು ಪ್ರತಿಕ್ರಿಯೆ, ‘ಅಲ್ಲ. ಸರ್ವಾನುಮತದಿಂದ ಅಲ್ಲ’.

‘ಯಾರು ಹಾಗನ್ನುವವರು?’

‘ನಾನು ಸಾವರ್ಕರ್ ಹೇಳುತ್ತಿದ್ದೀನಿ ಅದು ಸರ್ವಾನುಮತದಿಂದ ಅಲ್ಲ’

ಒಂದು ಕ್ಷಣ ಇಡೀ ಸಭೆ ತಲ್ಲಣಿಸಿತು. ಮರುಕ್ಷಣವೇ ‘ಹೊಡೆಯಿರಿ, ಬಡಿಯಿರಿ’ ಎಂಬ ಕೂಗು ಅನೇಕ ಕಡೆಗಳಿಂದ ಅಣುರಣಿಸಿತು. ಪಾಮರ್ ಎಂಬ ಬಲಿಷ್ಠ ಬ್ಯಾರಿಸ್ಟರ್ ಸಾವರ್ಕರ್ ಬಳಿ ಸಾರಿ ಅವರ ಮುಖದ ಮೇಲೆ ಒಂದು ಬಲವಾದ ಮುಷ್ಟಿ ಪೆಟ್ಟು ಕೊಟ್ಟು ‘ಹೇಗಿದೆ ನನ್ನ ಮುಷ್ಟಿಯ ಹೊಡೆತ?’ ಎಂದ. ಸಾವರ್ಕರ್ ಮುಖದ ಮೇಲೆ ಗಾಯವಾಗಿ ರಕ್ತ ಚಿಮ್ಮಿತು. ಕನ್ನಡಕ ಮುರಿದು ಕೆಳಕ್ಕೆ ಬಿತ್ತು.

ಅವನ ಮುಷ್ಟಿ ಪ್ರಹಾರ ಆಗುತ್ತಿದ್ದಂತೆ ಪಾಮರ್​ನ ತಲೆಗೊಂದು ಬಲವಾದ ಲಾಠಿ ಪೆಟ್ಟು ಬಿತ್ತು. ಜತೆಯಲ್ಲೇ ಕೇಳಿ ಬಂತು ‘ಹೇಗಿದೆ ಭಾರತದ ಲಾಠಿಯ ರುಚಿ?’ ಅನಿರೀಕ್ಷಿತ ಆಘಾತದಿಂದ ಪಾಮರ್ ತತ್ತರಿಸಿ ಹೋಗಿ ತನ್ನ ಆಸನದಲ್ಲಿ ಕುಸಿದು ಬಿದ್ದ. ಸಭೆ ಚೆಲ್ಲಾಪಿಲ್ಲಿಯಾಯಿತು.

ಆ ಲಾಠಿ ಪೆಟ್ಟು ಕೊಟ್ಟ ಯುವಕನ ಹೆಸರು ಎಂ.ಪಿ.ಟಿ. ಆಚಾರ್ಯ. ಮಂಡಯಮ್ ಪಾರ್ಥಸಾರಥಿ ತಿರುಮಲ ಆಚಾರ್ಯ, ಆಗ್ಗೆ ಕೆಲ ತಿಂಗಳ ಕೆಳಗಷ್ಟೆ ‘ಇಂಡಿಯಾ ಹೌಸ್’ಗೆ ಸೇರಿಕೊಂಡಿದ್ದ. ಆಚಾರ್ಯನನ್ನು ಸಾವರ್ಕರ್ ತಮ್ಮ ಪರ ಸೀಕ್ರೆಟ್ ಏಜೆಂಟನಾಗಿ ನೇಮಿಸಿಕೊಂಡು ಬ್ರಿಟನ್ನಿನ ಗೂಢಾಚಾರ ಸಂಸ್ಥೆ ಸ್ಕಾಟ್​ಲ್ಯಾಂಡ್ ಯಾರ್ಡ್​ನ ಸಾಮ್ರಾಜ್ಯನಿಷ್ಠ ಇನ್​ಫಾರ್ಮರ್ ರೀತಿಯಲ್ಲಿ ನಟಿಸುವಂತೆ ಹೇಳಿ ಬಳಸುತ್ತಿದ್ದರು. ಆಚಾರ್ಯ ಅನೇಕ ತಿಂಗಳುಗಳ ಕಾಲ ಸ್ಕಾಟ್​ಲ್ಯಾಂಡ್ ಯಾರ್ಡ್​ನ ನಂಬಿಗೆಯ ಇನ್​ಫಾರ್ಮರ್ ಆಗಿ ದುಡಿಯುತ್ತ ತಿಂಗಳಿಗೆ ಐದು ಡಾಲರ್ ಸಂಪಾದಿಸುತ್ತಿದ್ದ. ಆದರೆ ಅವನು ನಿಜವಾಗಿ ಆಗಿದ್ದುದು ಸಾವರ್ಕರರ ಏಜೆಂಟ್!

ಎಂ.ಪಿ.ಟಿ. ಆಚಾರ್ಯ ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಹೇಗೋಗೋ ಜೀವನ ಸಾಗಿಸಿ 67 ವರ್ಷಗಳ ಕಾಲ ಬಾಳಿದ ಒಬ್ಬ ಅದ್ಭುತ ಜನ್ಮಜಾತ ಬಂಡಾಯಗಾರ! ಮೇಲುಕೋಟೆ ಯದುಗಿರಿ ಯತಿರಾಜ ಮಠದ ನಿಷ್ಠಾವಂತ ಭಕ್ತ ಸಮುದಾಯಕ್ಕೆ ಸೇರಿದ ಈ ಆಚಾರ್ಯನ ಪೂರ್ವಿಕರು ಮೈಸೂರಿನಲ್ಲಿ ನೆಲೆಸಿದ್ದವರು. ಇವನ ಹಿಂದಿನವರು ಯಾರೋ ಉದ್ಯೋಗವನ್ನರಸಿ ಮದ್ರಾಸ್ (ಈಗಿನ ಚೆನ್ನೈ) ಸೇರಿದ್ದರು. ತಂದೆ ಮಂಡಯಮ್ ಪ್ರತಿವಾದಿ ಭಯಂಕರಂ ನರಸಿಂಹಾಚಾರ್ಯ ಮದ್ರಾಸಿನಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ದುಡಿಯುತ್ತಿದ್ದರು.

ದೇಶಭಕ್ತ ಮನೆತನ: ಎಂಪಿಟಿ ಆಚಾರ್ಯರ ಸಮೀಪ ಬಂಧುಗಳು ಅನೇಕರು ದೇಶಭಕ್ತರು. ಅಷ್ಟೇ ಅಲ್ಲ. ದೇಶ, ಧರ್ಮ, ಸಂಸ್ಕೃತಿಗಳಿಗಾಗಿ ಸೆಣಸಾಡಿದವರು. ಒಬ್ಬ ಮಾವ ಪ್ರಸಿದ್ಧ ಎಂ.ಸಿ. ಅಳಸಿಂಗ ಪೆರುಮಾಳ್. ಚಿಕ್ಕಮಗಳೂರು ಜಿಲ್ಲೆಯ ಅಳಸಿಂಗರು ಸ್ವಾಮಿ ವಿವೇಕಾನಂದರ ಅದ್ಭುತ ಸಾಮರ್ಥ್ಯವನ್ನು ಗುರುತಿಸಿ ಅಮೆರಿಕದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಪ್ರೇರೇಪಿಸಿದವರು. ಅವರ ಖರ್ಚಿಗಾಗಿ ಹಣ ಸಂಗ್ರಹಿಸಿ ಕೊಟ್ಟು ವಿವೇಕಾನಂದರ ಪರಮಾಪ್ತರಾದವರು. ಎಂಪಿಟಿ ಆಚಾರ್ಯರಿಗೆ ಆಗಲೇ ವಿವೇಕಾನಂದರ ಪ್ರೇರಣೆಯೂ ದೊರೆಯಿತು.

ಇನ್ನೊಬ್ಬ ಮಾವ ಎಸ್.ಎನ್. ತಿರುಮಲಾಚಾರ್ಯ. ತಮಿಳುನಾಡಿನಲ್ಲಿ ಆ ಕಾಲದಲ್ಲಿ ಸಂಚಲನ ಉಂಟು ಮಾಡಿದ್ದ ರಾಷ್ಟ್ರೀಯ ನಿಯತಕಾಲಿಕ ‘ಇಂಡಿಯಾ’ ಪತ್ರಿಕೆಯನ್ನು ಆರಂಭಿಸಿ ನಿರ್ಭಯವಾಗಿ ಸರ್ಕಾರವನ್ನು ಟೀಕಿಸುತ್ತ ಬ್ರಿಟಿಷ್ ಸರ್ಕಾರದ ಕೆಂಗಣ್ಣಿಗೆ ಗುರಿಯಾದವರು.

ಬಾಲ್ಯದಿಂದಲೇ ಬಂಡಾಯ ಸ್ವಭಾವದ ಎಂಪಿಟಿ ಆಚಾರ್ಯ ಹನ್ನೆರಡು ಹದಿಮೂರು ವರ್ಷಕ್ಕೇ ತಿರುಮಲಾಚಾರ್ಯರ ಬಲಗೈ ಬಂಟನಾಗಿ ‘ಇಂಡಿಯಾ’ ಪತ್ರಿಕೆಯಲ್ಲಿ ದುಡಿದರು. ಅವರಿಗೆ ತಮಿಳು ಮಹಾಕವಿ ಹಾಗೂ ಮಹಾನ್ ದೇಶಭಕ್ತ ಸುಬ್ರಹ್ಮಣ್ಯ ಭಾರತಿಯವರ ಸಾಂಗತ್ಯವೂ ದೊರೆಯಿತು. ‘ಇಂಡಿಯಾ’ ಪತ್ರಿಕೆಯ ಮೇಲೆ ಸರ್ಕಾರದ ಉರಿಗಣ್ಣು ಬಿದ್ದಾಗ ಪತ್ರಿಕೆಯನ್ನು ಫ್ರೆಂಚ್ ವಸಾಹತಾಗಿದ್ದ ಪುದುಚೆರಿಗೆ ಸ್ಥಳಾಂತರಿಸಿದರು. ಅಲ್ಲಿಂದಲೇ ಪತ್ರಿಕೆಯನ್ನು ಪ್ರಕಟಿಸಿ ಆಚಾರ್ಯ ಹಾಗೂ ಭಾರತಿ ಅದರ ಪ್ರಸಾರವನ್ನು ದೇಶೋ ವಿಶಾಲವಾಗಿ ಹಬ್ಬಿಸಿದರು. ಆದರೆ ಪೊಲೀಸರ ಕಾಟ ಹೆಚ್ಚಾಗಿ ಆಚಾರ್ಯ ದೇಶ ತೊರೆಯಬೇಕಾಗಿ ಬಂತು. ಶ್ರೀವೈಷ್ಣವ ಸಂಪ್ರದಾಯಸ್ಥ ಬ್ರಾಹ್ಮಣರ ಗುರುತಾಗಿದ್ದ ನಾಮ ಧರಿಸುವುದನ್ನು ಬಿಟ್ಟು, ಉದ್ದವಾದ ಜಡೆಯಂತಿದ್ದ ಕೂದಲನ್ನು ಕತ್ತರಿಸಿ ಕ್ರಾಪ್ ಬಿಟ್ಟು ರೂಪಾಂತರ ಮಾಡಿಕೊಂಡ ಆಚಾರ್ಯ ಶಿಯಾಳಿ ಎಂಬಲ್ಲಿ ರುಗ್ಣ ಶಯ್ಯೆಯಲ್ಲಿದ್ದ ತಂದೆ ನರಸಿಂಹಾಚಾರ್ಯರನ್ನು ದರ್ಶಿಸಿ ಆಶೀರ್ವಾದ ಪಡೆದು ಜೇಬಿನಲ್ಲಿ ಮುನ್ನೂರು ರೂಪಾಯಿ ಇರಿಸಿಕೊಂಡು ಪುದುಚೆರಿಯಿಂದ ಕೊಲಂಬೋಗೆ ಪ್ರಯಾಣ ಬೆಳೆಸಿದ. ಆಗಿನಿಂದ ಅವನ ಸುದೀರ್ಘ ಸಂಘರ್ಷಮಯ ಜೀವನದ ಇನ್ನೊಂದು ಘಟ್ಟದ ಆರಂಭ.

ಲಂಡನ್ನಿಗೆ ಪಯಣ: ಜುಟ್ಟು ಕತ್ತರಿಸಿದ್ದರೂ ಮೊದ ಮೊದಲು ಆಚಾರ್ಯನಲ್ಲಿ ಮನೆ ಮಾಡಿದ್ದ ಸಂಪ್ರದಾಯ ನಿಷ್ಠೆಗೆ ಧಕ್ಕೆ ಬಂದಿರಲಿಲ್ಲ. ಹೀಗಾಗಿ ಅವನು ಕೊಲಂಬೋದಿಂದ ಹಡಗಿನಲ್ಲಿ ಪ್ರಯಾಣ ಮಾಡುವಾಗ ಶಾಕಾಹಾರ ದೊರೆಯದ ಕಾರಣ ಇಪ್ಪೆತ್ತೆರಡು ದಿವಸ ಉಪವಾಸ ಮಾಡಿದನಂತೆ! ಹೀಗೆಯೇ ಪಯಣಿಸುತ್ತ ಪ್ಯಾರಿಸ್ ತಲುಪಿದ ಆಚಾರ್ಯ ತಿರುಚಿನಾಪಳ್ಳಿ ಮೂಲದ ವಕೀಲ ವಿ.ವಿ.ಎಸ್. ಅಯ್ಯರ್​ಗೆ ಪತ್ರ ಬರೆದು ಅವರ ಮಾರ್ಗದರ್ಶನ ಕೇಳಿದಾಗ ಅಯ್ಯರ್ ಆಚಾರ್ಯನಿಗೆ ಲಂಡನ್ನಿಗೆ ಬರುವಂತೆ ಆಹ್ವಾನಿಸುತ್ತಾರೆ. ಹೀಗಾಗಿ ಆಚಾರ್ಯ ಲಂಡನ್ನಿಗೆ ಬಂದು ವಿ.ಡಿ. ಸಾವರ್ಕರರ ‘ಇಂಡಿಯಾ ಹೌಸ್’ಗೆ ಸೇರಿ ಅವರ ಕ್ರಾಂತಿಕಾರಿ ಗೆಳೆಯರ ಬಳಗದ ಭಾಗವಾದ. ಸಾವರ್ಕರರ ಪ್ರೀತಿ, ಅಭಿಮಾನ ಗಳಿಸಿದ. ಮದನ್​ಲಾಲ್ ಧಿಂಗ್ರಾ ಕರ್ಜನ್ ವಾಯಿಲಿಯನ್ನು ಮುಗಿಸಿ ಹಾಕಿದ ನಂತರ, ಸಾವರ್ಕರ್ ಬಂಧನವಾಗಿ ಕರಿನೀರು ಶಿಕ್ಷೆಗೆ ಒಳಗಾದರು. ಸಾವರ್ಕರರ ‘”1857- The Indian war of independence’ ’ ಎಂಬ ಪ್ರಸಿದ್ಧ ಗ್ರಂಥವನ್ನು ಸಿದ್ಧಗೊಳಿಸುವುದರಲ್ಲಿ, ಪ್ರಕಟಿಸುವುದರಲ್ಲಿ ಪ್ರಧಾನ ಪಾತ್ರ ವಹಿಸಿದ್ದು ಆಚಾರ್ಯನೇ. 1909ರಲ್ಲಿ ಸಾವರ್ಕರ್ ಬಂಧನದೊಂದಿಗೆ ಇಂಡಿಯಾ ಹೌಸ್​ನ ದ್ವಾರಗಳು ಮುಚ್ಚಿದವು.

1910ರಲ್ಲಿ ಪ್ಯಾರಿಸ್​ಗೆ ತೆರಳಿ ಅಲ್ಲಿ ಮೇಡಂ ಕಾಮಾರ ‘ವಂದೇಮಾತರಂ’ ಹಾಗೂ ‘ತಲ್​ವಾರ್’ ಪತ್ರಿಕೆಗಳ ಪ್ರಕಟಣೆಯಲ್ಲಿ ಸಹಕಾರ ನೀಡಿದ. ಅವು ಭಾರತ ಮತ್ತು ಇತರ ದೇಶಗಳಲ್ಲಿ ವಿಶಾಲ ಪ್ರಮಾಣದಲ್ಲಿ ಪ್ರಸಾರವಾಗುವಂತೆ ವ್ಯವಸ್ಥೆ ಮಾಡಿದ. ಅಲ್ಲಿ ಪ್ಯಾರಿಸ್ ಸೋಷಿಯಲಿಸ್ಟ್ ಪಾರ್ಟಿಯ ಸಂಪರ್ಕಕ್ಕೆ ಬಂದು ಸಮಾಜವಾದದಲ್ಲಿ ಆಸಕ್ತಿ ತೋರಿದ. ಹುಟ್ಟು ಬಂಡಾಯಗಾರ ಆಚಾರ್ಯ ನಾಲ್ಕಾರು ಬಗೆಯ ಸಾಹಸಗಳನ್ನು ಕೈಗೊಂಡ ವ್ಯಕ್ತಿ.

ಇಂಡಿಯಾ ಕಮ್ಯುನಿಸ್ಟ್ ಪಾರ್ಟಿ ಜನಕರಲ್ಲೊಬ್ಬ: ಅಲ್ಲಿ ಕ್ರಿಯಾಶೀಲವಾಗಿದ್ದ ಬರ್ಲಿನ್ ಕಮಿಟಿಯ ಕಡೆ ಆಕರ್ಷಿತನಾಗಿ 1910ರಲ್ಲಿ ಬರ್ಲಿನ್​ಗೆ ಹೋಗುತ್ತಾನೆ. ಅಲ್ಲಿ ವಿ.ವಿ.ಎಸ್. ಅಯ್ಯರ್ ಕೂಡ ಸಿಗುತ್ತಾನೆ. ಬರ್ಲಿನ್ ಕಮಿಟಿಯೊಂದಿಗೆ ಸೇರಿ ಕಾರ್ಯಶೀಲನಾಗುತ್ತಾನೆ. ಅಲ್ಲಿಯೇ ಚಂಪಕರಮಣ್ ಪಿಳ್ಳೆ ರಚಿಸಿದ್ದ ‘ಇಂಡಿಯನ್ ರೆವಲ್ಯೂಷನರಿ ಗ್ರೂಪ್’ನಲ್ಲಿ ಸೇರಿ ಅವನೊಂದಿಗೆ ಕೆಲಸ ಮಾಡುತ್ತಾನೆ.

1911ರಲ್ಲಿ ಪುದುಚೆರಿಗೆ ಬರುತ್ತಾನೆ. ಆಗ ವಿ.ವಿ.ಎಸ್. ಅಯ್ಯರ್ ಕೂಡ ಅವನ ಜತೆಗಿರುತ್ತಾನೆ. ತಿನ್ನವೆಲ್ಲಿಯಲ್ಲಿ ಕಲೆಕ್ಟರ್ ಆಷ್​ನನ್ನು ವಾಂಚಿ ಅಯ್ಯರ್ ಹತ್ಯೆ ಮಾಡುವ ಮೊದಲು ಅವನಿಗೆ ಗುಂಡು ಹಾರಿಸುವ ತರಬೇತನ್ನು ನೀಡಿದವನೇ ಎಂಪಿಟಿ ಆಚಾರ್ಯನೆಂದು ಸೆಡಿಷನ್ ಸಮಿತಿ ವರದಿಯಲ್ಲಿ ಆರೋಪ ಮಾಡಿದೆ.

ರಷ್ಯಾದಲ್ಲಿ ಅಕ್ಟೋಬರ್ ಕ್ರಾಂತಿ ನಡೆದ ಅನಂತರ ಆಚಾರ್ಯ ರಷ್ಯಾಗೆ ಹೋಗುತ್ತಾನೆ. ಆ ವೇಳೆಗಾಗಲೇ ಎಮ್​ಎನ್. ರಾಯ್ ಅಲ್ಲಿ ಆಲ್ ಇಂಡಿಯಾ ಸೆಂಟ್ರಲ್ ರೆವಲ್ಯೂಷನರಿ ಕಮಿಟಿಯನ್ನು ಸ್ಥಾಪಿಸಿರುತ್ತಾನೆ. ಆದರೆ ಅವನಿಗೆ ಅಲ್ಲಿನ ಭಾರತೀಯರು ಬೆಂಬಲ ನೀಡುವುದಿಲ್ಲ. ಆಗ ಕಮ್ಯುನಿಸ್ಟ್ ಇಂಟರ್​ನ್ಯಾಷನಲ್ ಅಥವಾ ಕೊಮಿನ್​ಟರ್ನ್ ರಭಸದಿಂದ ಕೆಲಸ ಮಾಡುತ್ತಿರುತ್ತದೆ. ಅದರ ಎರಡು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸುತ್ತಾನೆ. ಒಂದು ಸಮ್ಮೇಳನದಲ್ಲಿ ಮತ್ತೊಮ್ಮೆ ಎಂ.ಎನ್. ರಾಯ್ ಭೇಟಿಯಾಗುತ್ತದೆ. ಅವರಿಬ್ಬರೂ ಸೇರಿ ಇಂಡಿಯಾ ಕಮ್ಯುನಿಸ್ಟ್ ಪಾರ್ಟಿ ಹುಟ್ಟು ಹಾಕುತ್ತಾರೆ.

ಆಗ ಇಬ್ಬರಿಗೂ ಸೋವಿಯತ್ ರಷ್ಯಾ ಹಾಗೂ ಲೆನಿನ್ನರ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಆದರೆ ಎಂ.ಎನ್. ರಾಯ್ ಮತ್ತು ಆಚಾರ್ಯರ ಮಧ್ಯೆ ಬಿರುಕು ಮೂಡುತ್ತದೆ. ರಾಯ್ದು ಸರ್ವಾಧಿಕಾರಿ ಮನೋಭಾವ ಎನ್ನುವ ಆರೋಪ ಆಚಾರ್ಯನದು. ಇಬ್ಬರ ನಡುವೆ ವೈಚಾರಿಕ ಘರ್ಷಣೆಯೂ ನಡೆಯುತ್ತದೆ. ರಾಯ್ ಆಚಾರ್ಯನ ಮೇಲೆ ದೋಷಾರೋಪಣೆ ಮಾಡುತ್ತಾನೆ. ‘ಬಲವಂತದಿಂದ ಕಮ್ಯುನಿಸಂಗೆ ಮತಾಂತರ ಮಾಡುವುದನ್ನು ವಿರೋಧಿಸುತ್ತೇನೆ’ ಎಂಬ ಪ್ರಸಿದ್ಧ ಹೇಳಿಕೆ ನೀಡಿ ಆಚಾರ್ಯ ಸೋವಿಯತ್ ರಷ್ಯಾದಿಂದ ಹೊರನಡೆಯುತ್ತಾನೆ.

1919-21ರ ಕಾಲದಲ್ಲಿ ಯೆಹೂದಿ ಜನಾಂಗಕ್ಕೆ ಸೇರಿದ ಚಿತ್ರ ಕಲಾವಿದೆ ಮಾಗ್ದಾ ನಾಚ್​ವುನ್ ಎಂಬುವಳನ್ನು ಮದುವೆಯಾಗುತ್ತಾನೆ. ಭಾರತ ಬಿಡುವುದಕ್ಕೆ ಮೊದಲು ಶಾಸ್ತ್ರರೀತ್ಯಾ ಒಂದು ಮದುವೆಯಾಗಿರುತ್ತದೆ. ಆದರೆ ಅವನ ಮೊದಲ ಹೆಂಡತಿ ಚೆನ್ನೈನಲ್ಲಿಯೇ ಒಂಟಿ ಜೀವನ ಸಾಗಿಸುತ್ತಿರುತ್ತಾಳೆ.

ಅಶಾಂತ ಪಥಿಕ: ಮಂಡಯಂ ಪಾರ್ಥಸಾರಥಿ ತಿರುಮಲ ಆಚಾರ್ಯನ ಇಡೀ ಜೀವನ ರಾಜಕೀಯ ಜೀವನವೇ. ರಾಷ್ಟ್ರೀಯತೆಯಿಂದ ಪ್ರೇರಿತವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರವೇಶಿಸಿದ ಅವನು ವಿದೇಶಿ ನೆಲೆಗಳಿಂದ ಬಿಡುಗಡೆಯ ಹೋರಾಟ ನಡೆಸಲು ಭಾರತವನ್ನು ತೊರೆದ. ಕಮ್ಯುನಿಸಂ ಒಪ್ಪಿಕೊಂಡು ಕೆಲಕಾಲ ಅದಕ್ಕಾಗಿ ದುಡಿದ. ಲೆನಿನ್​ನನು ಆಚಾರ್ಯ ಮತ್ತು ಇತರ ಕೆಲವರನ್ನು ಜಡ್. ಸುರಿಟ್ಜ್ ಎಂಬ ಕಮ್ಯುನಿಸ್ಟ್​ನ ಜೊತೆಗೆ ಕಾಬೂಲ್​ನಲ್ಲಿ ಕೆಲಸ ಮಾಡಲು ಕಳುಹಿಸಿದ. ಅಫ್ಗಾನಿಸ್ತಾನದ ನಾಯಕ ಅಮಿರ್ ಹಬಿಬುಲ್ಲಾ ಇವರಿಗೆ ಪ್ರವೇಶವನ್ನೇ ನೀಡಲಿಲ್ಲ. 1921ರಲ್ಲಿ ತನ್ನನ್ನು ಕಮ್ಯುನಿಸ್ಟ್ ಎಂದು ಘೊಷಿಸಿಕೊಂಡಿದ್ದ ಆಚಾರ್ಯ ಎಂ.ಎನ್. ರಾಯ್ ಜತೆ ಭಿನ್ನಾಭಿಪ್ರಾಯ ಹೊಂದಿ ಹೊರಬಂದದ್ದು ಕೊಮಿನ್​ಟರ್ನ್ ಮತ್ತು ರಷ್ಯಾಗಳಿಂದಲೇ ದೂರವಾಗುವ ಹಾಗಾಯಿತು.

1935-36ರಲ್ಲಿ ಭಾರತಕ್ಕೆ ಹಿಂದಿರುಗಿ ರಾಮ್ಾಸ್ ಭಾವನ್ ಲೋಟ್​ವಾಲಾ ಆರಂಭಿಸಿದ್ದ ‘ಇಂಡಿಯನ್ ಲಿಬಿರಿಟೆಯನ್ ಚಳವಳಿ’ಯಲ್ಲಿ ಭಾಗವಹಿಸಿದ. ಪತ್ರಿಕೆಗಳಿಗೆ ನಿಯಮಿತವಾಗಿ ಲೇಖನಗಳನ್ನು ಬರೆದ. ಲೋಟ್​ವಾಲಾನ ‘ಇಂಡಿಯನ್ ಲಿಬರಿಟೇರಿಯನ್’ ನಿಯತಕಾಲಕ್ಕೂ ಬರೆದ.

1950ರಲ್ಲಿ ಹೆಂಡತಿ ಮಾಗ್ದಾ ನಿಧನಳಾದಳು. ಅವನದು ಹೆಚ್ಚಿನ ಪಾಲು ಒಂಟಿ ಜೀವನ. ತನ್ನ ತೀಕ್ಷ್ಣ ಬುದ್ಧಿಮತ್ತೆ, ಚಿಂತನಶೀಲತೆ ಹಾಗೂ ವಿಮರ್ಶಾತ್ಮಕ ದೃಷ್ಟಿಯಿಂದ ಚಿಂತನೆ ನಡೆಸುತ್ತ ಸದಾ ಕಾರ್ಯಶೀಲನಾಗಿದ್ದ ಮಂಡಯಂ ಪಾರ್ಥಸಾರಥಿ ತಿರುಮಲ ಆಚಾರ್ಯ 1954 ಮಾರ್ಚ್ 20ರಂದು ಅಸುನೀಗಿದ. ತನ್ನ ಎರಡನೆಯ ಹೆಂಡತಿ ಮಾಗ್ದಾಳ ಕಲಾಕೃತಿಗಳ ಪ್ರದರ್ಶನವನ್ನು ಲಂಡನ್ನಿನಲ್ಲಿ ನಡೆಸಬೇಕೆಂದು ಯೋಜಿಸುತ್ತಿದ್ದಾಗಲೇ ಆಚಾರ್ಯ ಕೊನೆಯುಸಿರೆಳೆದ. ಐವತ್ತು ವರ್ಷಗಳ ಕಾಲ ಅವನಿಂದ ದೂರವಿದ್ದ ಅವನ ಮೊದಲ ಹೆಂಡತಿ ಬಂದು ಮಾಗ್ದಾಳ ಕಲಾಕೃತಿಗಳನ್ನು ತನ್ನ ವಶಕ್ಕೆ ತೆಗೆದುಕೊಂಡಳಂತೆ!

ರಾಷ್ಟ್ರೀಯತೆಯಿಂದ ಅರ್ನಾಸಂ, ಕಮ್ಯೂನಿಸಂಗಳವರೆಗೆ ಪಯಣ ಮಾಡಿದ ಎಂ.ಪಿ.ಟಿ. ಆಚಾರ್ಯ ಒಬ್ಬ ಅಪೂರ್ವ ಚಿಂತನಶೀಲ ಮನುಷ್ಯ. ಭಾರತೀಯರಿಗೆ ತಿಳಿಯದ ಹೋರಾಟಗಾರ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top