Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಭಗತ್ ಸಿಂಗ್ ಈಕೆಯ ಕರುಳಕುಡಿ!

Thursday, 19.07.2018, 3:03 AM       No Comments

| ಡಾ. ಬಾಬು ಕೃಷ್ಣಮೂರ್ತಿ

ಅಂದು 1970ರ ನವೆಂಬರ್ 8! ಬೆಂಗಳೂರು ಮತ್ತು ಕನ್ನಡನಾಡಿಗೆ ಒಂದು ಅಪೂರ್ವ ಐತಿಹಾಸಿಕ ಸಂದರ್ಭ. ಆ ದಿನವನ್ನು ಕುರಿತು ಉತ್ತಮ ಪ್ರಚಾರವನ್ನೂ ಮಾಡಲಾಗಿತ್ತು. ಆದ್ದರಿಂದ ಕನ್ನಡ ಜನತೆ ಪುಳಕಿತರಾಗಿದ್ದರು.

ಅಂದು ಕರುನಾಡಿನ ಪವಿತ್ರ ನೆಲದ ಮೇಲೆ ಒಬ್ಬರು ಮಹಾನ್ ವ್ಯಕ್ತಿ ಕಾಲಿರಿಸಲಿದ್ದರು. ಅಂದು ನನ್ನ ಆಪ್ತಮಿತ್ರ ದೇಶಭಕ್ತ ಕವಿ ಶಿವರಾಮ್ ಅವರ ‘ಆತ್ಮಾಹುತಿ’ ಪುಸ್ತಕ ಬೆಂಗಳೂರು ಪುರಭವನದಲ್ಲಿ ಒಂದು ಭವ್ಯ ಸಮಾರಂಭದಲ್ಲಿ ಬಿಡುಗಡೆಯಾಗಲಿತ್ತು. ಅದರ ಬಿಡುಗಡೆಯೇ ಆ ಪುಣ್ಯಜೀವಿಯ ಬೆಂಗಳೂರು ಆಗಮನಕ್ಕೆ ಕಾರಣ. ಹಾಗೆ ನೋಡಿದರೆ ನನ್ನ ‘ಅಜೇಯ’ದ ಬಿಡುಗಡೆ ಮಾಡಲೆಂದು ಆಕೆಯನ್ನು ಬೆಂಗಳೂರಿಗೆ ಕರೆತರಬೇಕೆಂಬುದು ಪ್ರಕಾಶಕರಾದ ರಾಷ್ಟ್ರೋತ್ಥಾನ ಸಾಹಿತ್ಯದವರ ಅಭಿಲಾಷೆ ಆಗಿತ್ತು. ಪುಸ್ತಕ ಆ ವೇಳೆಗೆ ಸಿದ್ಧವಾಗಲಿಲ್ಲವೆಂಬ ಕಾರಣಕ್ಕಾಗಿ ಆ ಮಹಾವ್ಯಕ್ತಿಯ ಪವಿತ್ರ ಹಸ್ತಗಳಿಂದ ‘ಆತ್ಮಾಹುತಿ’ ಬಿಡುಗಡೆಗೊಂಡಿತ್ತು. ಕರ್ನಾಟಕದ ಹಲವು ಜಿಲ್ಲೆಗಳಿಂದ ಉತ್ಸಾಹಿ ಜನ ಬಂದು ಟೌನ್​ಹಾಲ್​ನಲ್ಲಿ ನೆರೆದಿದ್ದರು.

ಅಂದು ಎಲ್ಲರ ಗಮನ ಸೆಳೆದಿದ್ದು ಜೀವಂತ ದಂತಕತೆಯೆನಿಸಿದ್ದ ಹುತಾತ್ಮ ಭಗತ್ ಸಿಂಗ್​ನ ಜನ್ಮದಾತೆ ವಿದ್ಯಾವತಿ ದೇವಿ! ಪುರಭವನದ ವೇದಿಕೆಯ ಮೇಲೆ ಆಕೆಯ ದರ್ಶನವಾದ ಕೂಡಲೆ ರೋಮಾಂಚಿತರಾದ ಸಭಿಕರು ‘ಭಾರತ್ ಮಾತಾ ಕೀ ಜೈ’, ‘ಹುತಾತ್ಮ ಭಗತ್ ಸಿಂಗ್​ನ ಜನ್ಮದಾತೆಗೆ ಜೈ’, ‘ಕ್ರಾಂತಿಮಾತೆಗೆ ಜೈ’ ಎಂಬ ಜೈಕಾರಗಳಿಂದ ಪುರಭವನವನ್ನು ಸುದೀರ್ಘ ಕಾಲ ಅನುರಣನಗೊಳಿಸಿದರು. ಎಷ್ಟೋ ಸಭಿಕರು ಭಾವೋದ್ರಿಕ್ತರಾಗಿದ್ದರು. ಕೆಲವರು ಗದ್ಗದಿತರಾಗಿದ್ದರೆ ಇನ್ನು ಕೆಲವರ ಕಂಗಳಲ್ಲಿ ಅಶ್ರುಧಾರೆ! ಆಕೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ ಕೊನೆಗೆ ‘ಸಬ್ ಮಿಲ್ ಕೆ ದೇಶ್ ಕೀ ಸೇವಾ ಕರೆ ಔರ್ ದೇಶ್ ಕೋ ಊಂಛಾ ಕರೆ’ ಎಂದು ನಾಡಿಗೆ ಕರೆ ನೀಡಿದಾಗ ಸಭಿಕರು ಭಾವೋದ್ವೇಗದ ಪರಾಕಾಷ್ಠೆಯನ್ನು ತಲುಪಿದ್ದರು.

ಕ್ರಾಂತಿಕಾರಿಗಳ ಮನೆ ಸೇರಿದ ಮದುಮಗಳು: ವಿದ್ಯಾವತಿ ಮದುವೆಯಾಗಿ ಸೇರಿದ ಮನೆ, ದೇಶದ ಆಗುಹೋಗುಗಳೊಂದಿಗೆ ಸಮ್ಮಿಳಿತಗೊಂಡಿದ್ದ ಮನೆ. ಮಾವ ಅರ್ಜುನ ಸಿಂಹನೋ ಆರ್ಯಸಮಾಜಕ್ಕೆ ತನ್ನನ್ನು ಸಮರ್ಪಿಸಿಕೊಂಡಿದ್ದ ಜೀವ. ಗಂಡ, ಮೈದುನಂದಿರು ಮತ್ತು ದೊಡ್ಡ ಮಗ ಭಾರತದ ಸ್ವಾತಂತ್ರ್ಯ ಹೋರಾಟವನ್ನೇ ತಮ್ಮ ಉಸಿರಾಗಿರಿಸಿಕೊಂಡು ಅಹರ್ನಿಶಿ ಅದಕ್ಕಾಗಿಯೇ ಜೀವ ತೇಯುತ್ತಿದ್ದವರು. ಪರಿಸ್ಥಿತಿ ಹೀಗಿದ್ದ ಮೇಲೆ ಮನೆಯ ಆರ್ಥಿಕ ಸ್ಥಿತಿ ಸುಧಾರಿಸುವುದಾದರೂ ಹೇಗೆ? ಗಂಡ ಒಂದು ವಾರ ಮನೆಯಲ್ಲಿದ್ದರೆ ಮಿಕ್ಕ ಒಂದು ವರ್ಷದಲ್ಲಿ ಜೈಲೋ, ಹೋರಾಟವೋ, ಸಮಾಜಕಾರ್ಯವೋ ಎಂದು ಮನೆಯಿಂದ ದೂರವೇ ಉಳಿಯುತ್ತಿದ್ದ. ಹೀಗಾಗಿ ಮನೆಯ ಎಲ್ಲ ಜವಾಬ್ದಾರಿ ಮನೆಯ ಹಿರಿಯ ಸೊಸೆಯ ಭುಜಗಳ ಮೇಲೆಯೇ ಬಿದ್ದಿದ್ದು ಅನಿವಾರ್ಯವೇ ಆಗಿಬಿಟ್ಟಿತ್ತು. ಸಂಸಾರ ರಥವನ್ನು ಸಾಗಿಸುತ್ತಲೇ ವಿದ್ಯಾವತಿ ಹೇಗೆ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತ ಬಂದಳು ಎಂಬುದೇ ಒಂದು ವಿಶೇಷ.

ವಿದ್ಯಾವತಿ ಜನಿಸಿದ್ದು 1887ರಲ್ಲಿ, ಪಂಜಾಬಿನ ಹೋಷಿಯಾರ್​ಪುರ್ ಜಿಲ್ಲೆಯ ಮೋರನ್​ವಾಲಿ ಎಂಬ ಹಳ್ಳಿಯಲ್ಲಿ. ತಂದೆ ಬರ್ಯಾಮ್ಂಗ್ ಸಿಖ್ ಪಂಥೀಯ. ಊರಿನ ಗಣ್ಯವ್ಯಕ್ತಿ. ಸಜ್ಜನ. ಅವಳನ್ನು ಪ್ರೀತಿ ಮತ್ತು ಅಕ್ಕರೆಗಳಿಂದ ಸಾಕಲಾಗಿತ್ತು. ಮುಂದೊಮ್ಮೆ ಇಡೀ ದೇಶ ‘ಮಹಾಮಾತೆ’ ಎಂದು ಗುರುತಿಸಿದ ವಿದ್ಯಾವತಿ ತಮ್ಮ ವಿವಾಹದ ಬಗ್ಗೆ ಹೀಗೆ ಹೇಳಿದ್ದಾರೆ- ‘ಆಗ ನನಗಿನ್ನೂ 11-12 ವರ್ಷವಷ್ಟೆ. ನನಗೆ ಇಂದೀ ಎಂಬ ಹೆಸರಿತ್ತು. ನನ್ನ ಮದುವೆಯೇ ಒಂದು ಬಗೆಯ ವಿಚಿತ್ರದ್ದು. ನಮ್ಮ ಎರಡೂ ಪರಿವಾರಗಳು ಸಿಖ್ಖರವೇ. ಆದರೆ ಅತ್ತೆಯ ಮನೆಯಲ್ಲಿ ಆರ್ಯಸಮಾಜದ ವಿಶೇಷ ಪ್ರಭಾವವಿದ್ದ ಕಾರಣ ನನ್ನ ಮದುವೆ ಗುರು ಗ್ರಂಥಸಾಹಿಬ್ ಪದ್ಧತಿಯ ಬದಲು ಆರ್ಯಸಮಾಜದ ಶಾಸ್ತ್ರಪದ್ಧತಿಯಲ್ಲಿ ನಡೆಯಿತು. ವೇದ ಮಂತ್ರಗಳನ್ನು ಹೇಳುತ್ತಿದ್ದಾಗ ಹೋಮಕುಂಡದ ಸುತ್ತ ಸುತ್ತಿದೆವು. ನನ್ನ ಪತಿದೇವರು ಕೂಡ ಶಾಸ್ತ್ರಿಗಳೊಂದಿಗೆ ಮಂತ್ರಗಳನ್ನು ಹೇಳುತ್ತಲೇಹೋದರು. ಆಗಿನ ಕಾಲದಲ್ಲಿ ಇದು ಅತ್ಯಂತ ಅಸಾಧಾರಣ ಘಟನೆಯೇ ಆಗಿತ್ತು. ಇಡೀ ಹಳ್ಳಿಯಲ್ಲಿ ಸರ್ದಾರ್ ಬರ್ಯಾಮ್ ಸಿಂಹನ ಅಳಿಯನಿಗೆ ಎಲ್ಲ ಮಂತ್ರಗಳೂ ಬಾಯಿಗೆ ಬರುತ್ತವೆ ಎಂಬ ಮಾತು ಹರಡಿತ್ತು’.

ವಿದ್ಯಾವತಿಯ ತವರುಮನೆ ಕಡೆಯ ಪರಿವಾರ ಸರ್ವೆಸಾಮಾನ್ಯದ್ದಾಗಿತ್ತು. ವಿದ್ಯಾವತಿಗೆ ಓದು ಬರಹಗಳ ಕಿಂಚಿತ್ತು ಜ್ಞಾನವೂ ಇರಲಿಲ್ಲ. 1899ರಲ್ಲಿ ಅವಳ ಮದುವೆ ಆಗಿದ್ದು. 1900ರಲ್ಲಿ ಅತ್ತೆಯ ಮನೆಗೆ ಹೋದಳು.

ಒಮ್ಮೆಲೇ ಅವಳು ಒಂದು ವಿಭಿನ್ನ ವಾತಾವರಣದಲ್ಲಿ ಬಾಳಬೇಕಾಯಿತು. ಅಲ್ಲಿ ಪೂರ್ಣ ಆರ್ಯಸಮಾಜದ ವಾತಾವರಣ. ಮಂತ್ರಗಳು, ಹೋಮ-ಹವನಗಳು ದಿನಂಪ್ರತಿ ನಡೆಯುತ್ತಿದ್ದವು. ಅದು ಅವಳ ತವರುಮನೆಯ ಚಟುವಟಿಕೆಗಳಿಗಿಂತ ಸಂಪೂರ್ಣ ಬೇರೆಯದೇ ಆಗಿತ್ತು. ತಂದೆ ಬರ್ಯಾಮ್ ಸಿಂಹ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದ. ಇಲ್ಲಿ ಮಾವ ಅರ್ಜುನ ಸಿಂಹನೋ ಸದಾ ಧರ್ಮ, ಸಮಾಜ ಎಂದು ಅದರಲ್ಲೇ ತಲ್ಲೀನ. ಇನ್ನು ಗಂಡ ಕಿಶನ್ ಸಿಂಹ ಮತ್ತು ಮೈದುನರಾದ ಅಜಿತ್ ಸಿಂಹ ಹಾಗೂ ಸ್ವರ್ಣ ಸಿಂಹ ಸಮಾಜ ಸೇವೆ, ಸ್ವಾತಂತ್ರ್ಯ ಹೋರಾಟದಲ್ಲಿ ಸದಾ ನಿಮಗ್ನರು. ಮನೆಯ ಗಂಡಸರೆಲ್ಲರೂ ಮನೆಯನ್ನು ನಡೆಸುವುದರ ಕುರಿತು ಸ್ವಲ್ಪವೂ ತಲೆಗೆ ಹಚ್ಚಿಕೊಳ್ಳುತ್ತಿರಲಿಲ್ಲ. ತಾವಾಯಿತು ತಮ್ಮ ಹೊರಗಿನ ಚಟುವಟಿಕೆಗಳಾಯಿತು. ಆಗ ಅನಿವಾರ್ಯವಾಗಿ ಅತ್ತೆ ಜಯಾ ಕೌರ್ ಎಲ್ಲವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಸಂಸಾರ ರಥವನ್ನು ನಡೆಸುತ್ತಿದ್ದಳು. ದೊಡ್ಡ ಸೊಸೆ ವಿದ್ಯಾವತಿ ಅತ್ತೆಗೆ ಬಲಗೈ ಬಂಟಳು.

ಸಂಸಾರ ನಿರ್ವಹಣೆಗೆ ಬೇಕಾದ ಸ್ವಲ್ಪ ಹಣ ಸಂಪಾದನೆಯ ಕೆಲಸ ಮನೆಯ ಹೆಣ್ಣುಮಕ್ಕಳಿಂದಲೂ ನಡೆಯುತ್ತಿತ್ತು. ಅವರು ಚರಖಾದಲ್ಲಿ ದಾರ ತೆಗೆಯುತ್ತ ಅಲ್ಪಸ್ವಲ್ಪ ಆದಾಯಕ್ಕೆ ದಾರಿಯಾಗಿದ್ದರು. ಅರ್ಜುನ ಸಿಂಹ ಜಮೀನು ಕೆಲಸಗಳ ಕಡೆ ಕೊಂಚ ಗಮನ ಕೊಡುತ್ತಿದ್ದರೂ ಸಂಪೂರ್ಣ ಜವಾಬ್ದಾರಿ ಅತ್ತೆ ಜಯಾ ಕೌರ್​ಳದೇ.

ದೇಶದ ಚಿಂತೆಯ ಆ ಮನೆ: ಅತ್ತೆಯ ಮನೆಯಲ್ಲಿ ಹೊಟ್ಟೆಯ ಚಿಂತೆಗಿಂತಲೂ ಹೆಚ್ಚಿನ ಚಿಂತೆ ದೇಶವನ್ನು ಕುರಿತದ್ದಾಗಿತ್ತು. ಎಲ್ಲ ಚಟುವಟಿಕೆಗಳೂ ದೇಶಕೇಂದ್ರಿತವೇ. ಗಂಡಸರೆಲ್ಲರೂ ರಾಷ್ಟ್ರನಾಯಕರ ನಿರ್ಧಾರಗಳಂತೆ ಕಾರ್ಯನಿರತರಾಗುತ್ತಿದ್ದರು. ಹೀಗಾಗಿ ಕಿಶನ್ ಸಿಂಹನ ಮೇಲೆ ಯಾವಾಗಲೂ ಒಂದಲ್ಲ ಒಂದು ಕೋರ್ಟು ಕೇಸೋ, ಜೈಲುವಾಸವೋ ಇದ್ದೇ ಇರುತ್ತಿತ್ತು. ಒಮ್ಮೆ ದೊಡ್ಡಮೈದುನ ಅಜಿತ್ ಸಿಂಹ ಜೈಲಿಗೆ ಹೋದರೆ ಇನ್ನೊಮ್ಮೆ ಚಿಕ್ಕಮೈದುನ ಸ್ವರ್ಣ ಸಿಂಹನ ಜೈಲುಪಯಣ. ಹೀಗೆ ಆ ಮನೆ ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರಕಚೇರಿಯಾಗಿತ್ತು. ಕಾಂಗ್ರೆಸ್​ನವರು ಮತ್ತು ಕ್ರಾಂತಿಕಾರಿಗಳು ಸದಾ ಬಂದುಹೋಗುತ್ತಿದ್ದರು. ಜೇನುಗೂಡಿನಂತೆ ಅಲ್ಲಿನ ಚಟುವಟಿಕೆ. ರಹಸ್ಯ ಸಭೆಗಳೂ ಜರುಗುತ್ತಿದ್ದವು. ಪೊಲೀಸ್ ವಾರಂಟ್ ಹೊತ್ತ ಕ್ರಾಂತಿಕಾರಿಗಳ ಅಡುಗುದಾಣವೂ ಅದೇ ಆಗಿತ್ತು. ಲಜಪತ್​ರಾಯ್, ಭಾಯಿ ಪರಮಾನಂದ, ಲಾಲಾ ಹರದಯಾಳ್, ಲಾಲಾ ಹಂಸರಾಜ್, ಕರ್ತಾರ್​ಸಿಂಗ್ ಸರಾಬಾ ಮುಂತಾದ ಹಿರಿಯ, ಕಿರಿಯ ನಾಯಕರ ಆಗಮನ ನಿರ್ಗಮನ ಇದ್ದೇ ಇರುತ್ತಿತ್ತು. ಅವರ ಸತ್ಕಾರ ಮಾಡುವ ಜವಾಬ್ದಾರಿ ವಿದ್ಯಾವತಿಯದೇ. ಅದರಲ್ಲಿ ಸ್ವಲ್ಪ ಲೋಪವಾದರೂ ಗಂಡ ಕೋಪಾವಿಷ್ಟನಾಗುತ್ತಿದ್ದ.

ಮನೆಗೆ ಹೆಚ್ಚು ನಿಕಟವಾಗಿದ್ದವರ ಪೈಕಿ ಸಂತರಂತಿದ್ದ ಸೂಫಿ ಅಂಬಾಪ್ರಸಾದರು ಮುಖ್ಯರು. ಅವರು ಒಂದು ಕೋಣೆಯಲ್ಲಿ ಕುಳಿತು ಸದಾಕಾಲ ಬರವಣಿಗೆಯಲ್ಲಿ ನಿರತರಾಗಿರುತ್ತಿದ್ದರು, ಊಟ-ತಿಂಡಿಗಳತ್ತ ಗಮನವೇ ಇರುತ್ತಿರಲಿಲ್ಲ. ಹೀಗೆಯೇ ಒಮ್ಮೆ 3 ದಿನ ಕಳೆಯಿತು. ಪ್ರವಾಸದಿಂದ ಹಿಂದಿರುಗಿದ ಕಿಶನ್ ಸಿಂಹ 3 ದಿನಗಳಿಂದಲೂ ಅನ್ನಾಹಾರಗಳಿಲ್ಲದೆ ಅಂಬಾಪ್ರಸಾದ್ ಬರೆಯುತ್ತಿರುವುದನ್ನು ಕೇಳಿ ವಿದ್ಯಾವತಿಯನ್ನು ತರಾಟೆಗೆ ತೆಗೆದುಕೊಂಡ. ಅವನ ಉಗ್ರರೂಪದ ಮುಂದೆ ಅವಳು ನಿಲ್ಲಲಾರದಾದಳು. ಅಂದಿನಿಂದ ಅವಳು ಎಂದೂ ಕ್ರಾಂತಿಕಾರಿಗಳನ್ನು ನಿರ್ಲಕ್ಷಿಸಲಿಲ್ಲ.

1904ರಲ್ಲಿ ಅವಳಿಗೆ ದೊಡ್ಡಮಗ ಜಗತ್ ಸಿಂಹ ಹುಟ್ಟಿದ. ಭಗತ್ ಸಿಂಗನ ಜನನವಾದ ದಿನವೇ ಅವನ ತಂದೆ ಕಿಶನ್ ಸಿಂಹ ಮತ್ತು ಚಿಕ್ಕಪ್ಪಂದಿರು ಜೈಲುಗಳಿಂದ ಬಿಡುಗಡೆ ಪಡೆದು ಬಂದಿದ್ದರಿಂದ ಅತ್ತೆ ಜಯಾ ಕೌರ್ ವಿದ್ಯಾವತಿಯನ್ನು ಹೊಗಳಿದ್ದೂ ಹೊಗಳಿದ್ದೆ. ಅದೃಷ್ಟಶಾಲಿ ಮಗುವಿಗೆ ಜನ್ಮ ನೀಡಿದವಳೆಂದು ಊರೆಲ್ಲ ಶ್ಲಾಘನೆಗಳ ಸುರಿಮಳೆ ಸುರಿಸಿತು.

ಆದರೆ ಈ ಸಂತಸವೆಲ್ಲ ಅಲ್ಪಕಾಲದ್ದು. ಮತ್ತೆ ಸಮಸ್ಯೆಗಳ ಪರಂಪರೆ. 1909ರಲ್ಲಿ ಅಜಿತ್ ಸಿಂಹ ವಿದೇಶಿ ನೆಲೆಗಳಿಂದ ಸ್ವಾತಂತ್ರ್ಯ ಹೋರಾಟ ನಡೆಸಲು ನಿರ್ಧರಿಸಿ ಒಮ್ಮೆಲೆ ಮಾಯವಾದ. ಅಂದಿನಿಂದ ಶುರುವಾಯಿತು ಅವನ ಹೆಂಡತಿ ಹರ್​ನಾಮ್ ಕೌರ್​ಳ 48 ವರ್ಷಗಳ ಗಂಡನ ನಿರೀಕ್ಷೆಯ ಘೊರಯಾತನೆ. ಅವಳಿಗೆ ಸಾಂತ್ವನ ಹೇಳುವುದೇ ವಿದ್ಯಾವತಿಯ ದೊಡ್ಡ ಕೆಲಸವಾಯಿತು. ಅಷ್ಟು ಕಾಲ ಅವನು ಬರುತ್ತಾನೆ ಬರುತ್ತಾನೆ ಎಂದು ಕಾಲ ತಳ್ಳಿದ್ದಾಯಿತು. ಕಿರಿಯ ಓರಗಿತ್ತಿಯ ಕತೆ ಇನ್ನೂ ದಾರುಣ. ಸ್ವರ್ಣ ಸಿಂಹ ಜೈಲುಶಿಕ್ಷೆ ಅನುಭವಿಸುತ್ತ ಕ್ಷಯರೋಗ ಅಂಟಿಸಿಕೊಂಡು ಹಾಸಿಗೆ ಹಿಡಿದ. ಅವನು ತೀರಿಕೊಳ್ಳುವವರೆಗೆ ಅವನ ಶುಶ್ರ್ರೂಷೆ. ನಂತರ ಕಿರಿಯ ಓರಗಿತ್ತಿಯ ಭಾರ ವಿದ್ಯಾವತಿಯ ಹೆಗಲಿಗೇ. ಹೀಗೆ ಸಾಂಸಾರಿಕ ಸಮಸ್ಯೆಗಳ ನಿವಾರಣೆಗೆ ಅವಳೇ ಮುಂದಾಗಬೇಕಾಗುತ್ತಿತ್ತು.

ಕೋಪಿಷ್ಠ ಗಂಡ: ಈ ಮಧ್ಯೆ ಗದರ್ ಆಂದೋಲನ ಪ್ರಾರಂಭವಾಯಿತು. ಅವರ ಮನೆ ಮುಂಚಿನಿಂದಲೂ ಕ್ರಾಂತಿಕಾರಿಗಳ ಕೇಂದ್ರವಾಗಿದ್ದರಿಂದ ಗದರ್ ಕ್ರಾಂತಿಕಾರಿಗಳಿಗೂ ಅದು ಕೇಂದ್ರವಾಯಿತು. ಯಾವಾಗೆಂದರೆ ಆವಾಗ ಅವರು ಬಂದು ಮನೆಬಾಗಿಲು ತಟ್ಟುತ್ತಿದ್ದರು. ಪೊಲೀಸರಿಗೆ ಇದೇ ಕ್ರಾಂತಿಕಾರಿಗಳ ಅಡ್ಡೆ ಎಂಬುದರ ಸ್ಪಷ್ಟ ಅರಿವು ಇದ್ದರೂ ಅಲ್ಲಿ ಯಾರನ್ನೂ ಬಂಧಿಸಲಾಗಲಿಲ್ಲ. ಆ ಮನೆಯ ಹೆಂಗಸರ, ಮುಖ್ಯವಾಗಿ ವಿದ್ಯಾವತಿಯ ಚಾಕಚಕ್ಯತೆಯೇ ಪೊಲೀಸರ ಈ ವೈಫಲ್ಯಕ್ಕೆ ಕಾರಣವಾಗಿತ್ತು. ಆ ಮನೆಗೆ ಪೊಲೀಸರ ಕಾಟ ಅವ್ಯಾಹತ. ಹೀಗಾಗಿ ಅವರ ಜೀವನ, ‘ಕ್ಷಣಗಂಡ ಪೂರ್ಣಾಯಸ್ಸು’ ಎಂಬಂತೆ ಸಾಗುತ್ತಿತ್ತು.

ಗೃಹವಲಯದಲ್ಲಿ ಎಲ್ಲವೂ ಸರಿಯಾಗಿರಲಿಲ್ಲ. ಮನೆ ಎಂದಮೇಲೆ ಕೋಪತಾಪಗಳು, ಸಣ್ಣಪುಟ್ಟ ಸಂಘರ್ಷ ಇದ್ದದ್ದೇ. ಮಾವ ಅರ್ಜುನ ಸಿಂಹ ದೂರ್ವಾಸ ಮುನಿ. ಹಿರಿಯ ಮಗ ಕಿಶನ್ ಸಿಂಹ ಸ್ವಾತಂತ್ರ್ಯ ಚಳವಳಿಯಲ್ಲೇ ಮುಳುಗಿಹೋಗಿದ್ದುದರಿಂದ ಅವನ ಸಂಪಾದನೆ ಶೂನ್ಯ! ಹೀಗಾಗಿ ಕೆಲಕಾಲ ವಿದ್ಯಾವತಿಯನ್ನು ತವರುಮನೆಯಲ್ಲಿ ಬಿಟ್ಟುಬಂದಿದ್ದ. ಅದೇ ವೇಳೆ, ಅವನ ಸಂಪಾದನೆಯ ವಿಷಯವಾಗಿ ತಂದೆ-ಮಗನಿಗೆ ಘರ್ಷಣೆಯಾಗಿ ಕಿಶನ್ ಸಿಂಹ ಮನೆ ಬಿಟ್ಟುಹೋಗಿ ಹೊಲದಲ್ಲಿ ನೆಲೆಸಿ ಬೇಸಾಯ ಮಾಡುತ್ತಿದ್ದ. ದೀಪಾವಳಿ ಬಂತು. ಮಾವ ಬರ್ಯಾಮ್ ಸಿಂಹ ತನ್ನ ಮಗಳು ಗಂಡನ ಮನೆಯಲ್ಲಿ ದೀಪಾವಳಿ ಪರ್ವದ ಸಂತೋಷ ಸಂಭ್ರಮಗಳಲ್ಲಿ ಕಾಲ ಕಳೆಯಲಿ ಎಂದು ಬಂಗಾಗೆ ಕಳಿಸಿದ. ಅವಳ ದಾರಿಯಲ್ಲೇ ಹೊಲ ಇದ್ದಿದ್ದರಿಂದ, ಗಂಡನನ್ನು ಸಂಧಿಸಲು ಉತ್ಸಾಹದಿಂದ ಹೊಲದಲ್ಲಿದ್ದ ಅವನ ಬಳಿಗೆ ಧಾವಿಸಿದಳು.

ಅವಳನ್ನು ನೋಡಿ ಸಂತೋಷಿಸುವ ಬದಲು ‘ನೀನೇಕೆ ಬಂದೆ ಈಗ? ನಾನೇ ಹೊಟ್ಟೆಗೆ ಹಿಟ್ಟಿಲ್ಲದೆ ಪರದಾಡುತ್ತಿದ್ದೀನಿ’ ಎಂದು ಕಿಶನ್ ಸಿಂಗ್ ಸಿಟ್ಟಿನಿಂದ ನುಡಿದ. ಮುಂದಿನದನ್ನು ವಿದ್ಯಾವತಿಯ ಮಾತುಗಳಲ್ಲೇ ಕೇಳಿ- ‘ಇದೇನಾಯಿತಪ್ಪಾ ಎಂದು ನನಗೆ ಆಶ್ಚರ್ಯವಾಯಿತು. ಆದರೆ ನಾನೇನು ಮಾಡಬೇಕಿತ್ತು? ವಾಪಸು ತವರುಮನೆಗೆ ಹೋದರೆ ಅಪ್ಪ-ಅಮ್ಮ ಏನಂದುಕೊಳ್ಳುತ್ತಾರೆ ಎಂಬ ಭಯ. ಇಲ್ಲಿಯೇ ಇರೋಣ ಎಂದರೆ ಇವರಿಗೆ ನನ್ನನ್ನು ಇಲ್ಲಿ ಇಟ್ಟುಕೊಳ್ಳುವುದೇ ಕಷ್ಟವಾಗಿದೆ. ಅವರೇ ಹೊಲದಲ್ಲಿ ವಾಸಿಸುತ್ತಿದ್ದಾರೆ. ಆದರೆ ನಾನು ಹಿಂದು-ಮುಂದು ನೋಡದೆ ಅತ್ತೆಮನೆಗೆ ಹೋಗಿಯೇಬಿಟ್ಟೆ. ನನ್ನನ್ನು ನೋಡಿ ಅತ್ತೆಗೆ ಬಹಳ ಸಂತೋಷವಾಯಿತು. ಆದರೆ ಪತಿ ಮಾತ್ರ ‘ಹೊರಟುಹೋಗು ವಾಪಸ್’ ಎನ್ನುತ್ತಲೇ ಇದ್ದರು. ಆಗ ಮಧ್ಯೆ ಪ್ರವೇಶಿಸಿದ ಅತ್ತೆ, ಇಲ್ಲೇ ಇರು ಎಂದರು. ಇದ್ದುಬಿಟ್ಟೆ’.

ಹೀಗೆ ಹಲವು ಜಂಜಾಟಗಳ ನಡುವೆ ಜೀವನ ಸಾಗಿಸುತ್ತಲೇ ವಿದ್ಯಾವತಿ 8 ಮಕ್ಕಳಿಗೆ ಜನ್ಮ ನೀಡಿದ್ದಳು. ಐವರು ಗಂಡುಮಕ್ಕಳು, ಮೂವರು ಹೆಣ್ಣುಮಕ್ಕಳು. ಮೊದಲ ಮಗ ಜಗತ್ ಸಿಂಗ್ ಶೈಶವದಲ್ಲೇ ತೀರಿಹೋಗಿದ್ದ. ನಂತರ 1907ರಲ್ಲಿ ಹುಟ್ಟಿದವನೇ ಭಗತ್ ಸಿಂಗ್. ಅವನು ಬಾಲಲೀಲೆಗಳಿಂದ ಮನೆ-ಮಂದಿಯನ್ನು ರಂಜಿಸುತ್ತ ಬೆಳೆದರೂ ಶೈಶವದಲ್ಲೇ ಹುಟ್ಟಿಕೊಂಡ ದೇಶಪ್ರೇಮ, ಹೋರಾಟದ ಕೆಚ್ಚು ಅವನನ್ನು ಧೀರ ಸ್ವಾತಂತ್ರ್ಯ ಯೋಧನನ್ನಾಗಿ ರೂಪಿಸಿದವು. ಅವನಲ್ಲಿ ತಾಯಿ ವಿದ್ಯಾವತಿಯ ಧೈರ್ಯ, ಸಾಹಸಗಳು ಮಡುಗಟ್ಟಿದ್ದವು. (ಮುಂದುವರಿಯುವುದು)

(ಲೇಖಕರು ಹಿರಿಯ ಪತ್ರಕರ್ತರು)

(ಈ ಕುರಿತಾದ ಹೆಚ್ಚಿನ ವಿವರಕ್ಕೆ ಇದೇ ಅಂಕಣಕಾರರ ‘ಯುಗದ್ರಷ್ಟ ಭಗತ್​ಸಿಂಗ್’ ಕೃತಿಯನ್ನು ಓದಿ. ವಿವರಗಳಿಗೆ ಸಂರ್ಪಸಿ: 94481 10034)

Leave a Reply

Your email address will not be published. Required fields are marked *

Back To Top