Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಭಗತ್ ಸಿಂಗ್ ಸ್ಫೂರ್ತಿಸೆಲೆ ಸರ್ದಾರ್ ಅಜಿತ್ ಸಿಂಗ್

Thursday, 31.05.2018, 3:03 AM       No Comments

| ಡಾ. ಬಾಬು ಕೃಷ್ಣಮೂರ್ತಿ

ಒಂಟಿಕೈ ವೀರ ಸೂಫಿ ಅಂಬಾ ಪ್ರಸಾದನ ಬಲಗೈ ಬಂಟ, ಸರ್ದಾರ್ ಭಗತ್ ಸಿಂಗನ ಚಿಕ್ಕಪ್ಪ ಸರ್ದಾರ್ ಅಜಿತ್ ಸಿಂಗನ ರಾಷ್ಟ್ರ ಸಮರ್ಪಿತ ಜೀವನದ ಬಗ್ಗೆ ಇಂದಿನವರಿಗೆ ಬಹುತೇಕ ಗೊತ್ತಿಲ್ಲ. ದೇಶ ವಿದೇಶಗಳಲ್ಲಿ ದೇಶಭಕ್ತಿಯ ಕಿಚ್ಚನ್ನೆಬ್ಬಿಸಿದ ಈ ಸಾಹಸಿ ಭಗತ್ ಸಿಂಗ್ ಕ್ರಾಂತಿಕಾರಿಯಾಗಲು ಪ್ರೇರಕಶಕ್ತಿಯೂ ಆಗಿದ್ದ. ಬಾಲ್ಯದಲ್ಲೇ ಭಗತ್​ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದವರು ಇಬ್ಬರು. ಒಬ್ಬ ಕರ್ತಾರ್ ಸಿಂಗ್ ಸರಾಭಾ. ಇನ್ನೊಬ್ಬ ಅಜಿತ್ ಸಿಂಗ್.

1857ರ ಸ್ವಾತಂತ್ರ್ಯ ಸಂಗ್ರಾಮದ ಸ್ಪೂರ್ತಿ, ದಯಾನಂದ ಸರಸ್ವತಿಗಳ ಆರ್ಯ ಸಮಾಜದ ವೈಚಾರಿಕತೆ, ಲೋಕಮಾನ್ಯ ತಿಲಕ್-ಲಜಪತ್​ರಾಯ್ರ ಸಾಂಗತ್ಯ, ಚಾಪೇಕರ್ ಸೋದರರ ಬಲಿದಾನ ಅಜಿತ್ ಸಿಂಗ್​ನಲ್ಲಿ ದೇಶಪ್ರೇಮದ ಮಹಾಪೂರವನ್ನೇ ಹರಿಸಿತು. ಅವನ ಮನಃಪಟಲದಲ್ಲಿ ಬ್ರಿಟಿಷರ ಘೊರ ದೌರ್ಜನ್ಯಗಳು ಒಂದೊಂದಾಗಿ ತೆರೆದುಕೊಂಡು ಅವನ ಸಿಖ್ ಆಕ್ರೋಶ ಅದಮ್ಯವಾಗಿ ಭುಗಿಲೇಳುತ್ತಿತ್ತು. ಅವನಿಗೆ ತನ್ನ ಸಂಸಾರ ಸಂಪೂರ್ಣ ಗೌಣವಾಯಿತು. 1857ರ ಸಂಗ್ರಾಮವನ್ನು ಮುಂದುವರಿಸುವ ಪ್ರಬಲ ಇಚ್ಛೆ ಗರಿಗೆದರಿತು. ಆ ದಿನಗಳಲ್ಲಿ ಅವನು ಪಂಜಾಬ್​ನಲ್ಲಿ ಉಂಟುಮಾಡಿದ ಜನ ಜಾಗೃತಿ ಮಹಾನ್ ಕ್ರಿಯಾಶೀಲ ದೇಶಭಕ್ತರಿಂದ ಮಾತ್ರ ಸಾಧ್ಯವಾಗುವಂತಹುದು.

ತುಂಬು ಸಂಸಾರದ ಕುಡಿ: ಅಜಿತ್ ಸಿಂಗ್ ಹುಟ್ಟಿದ ಮನೆತನ ಸಿಖ್ ಸಂಪ್ರದಾಯದ್ದಾದರೂ ಅವನ ತಂದೆ ಅರ್ಜುನ್ ಸಿಂಗ್ ಆರ್ಯ ಸಮಾಜ ಪಂಥಾನುಯಾಯಿಯಾಗಿ ಸ್ವಾಮಿ ದಯಾನಂದ ಸರಸ್ವತಿಗಳ ವಿಚಾರಧಾರೆಯನ್ನು ಸ್ವೀಕರಿಸಿದ್ದ. ಅಂದಿನ ದಿನಗಳಲ್ಲಿ ಆರ್ಯ ಸಮಾಜವೆಂದರೆ ದೇಶಭಕ್ತಿ, ಆರ್ಯ ಚಿಂತನೆ, ವೇದಮಾರ್ಗ ಹಾಗೂ ದಿಟ್ಟತನಗಳಿಗೆ ಮತ್ತೊಂದು ಹೆಸರೇ ಆಗಿತ್ತು.

ಅಜಿತ್ ಸಿಂಗ್​ನ ಜನನ 1881ರ ಫೆಬ್ರವರಿ 23ರಂದು ಪಂಜಾಬಿನ ಜಲಂಧರ್​ನ ಖಟ್​ಕಡ್​ಕಲಾ ಎಂಬಲ್ಲಿ ಆಯಿತು. ಅವರದು ತುಂಬು ಸಂಸಾರ. ತಾಯಿ ಜಯಾಕೌರ್ ಅವರ ಮನೆಯಲ್ಲಿ ತಂದೆ ಮತ್ತು ಸೋದರರು ಹಾಗೂ ಇತರ ಬಂಧುವರ್ಗದವರ ನಡುವೆ ಮುಖ್ಯವಾಗಿ ನಡೆಯುತ್ತಿದ್ದ ಮಾತುಕತೆ ಬ್ರಿಟಿಷರನ್ನು ಮತ್ತು ದೇಶದ ಗುಲಾಮಗಿರಿಯನ್ನು ಕುರಿತೇ ಇರುತ್ತಿತ್ತು. ಎಳೆಯ ವಯಸ್ಸಿನಿಂದಲೇ ಅದರ ಪ್ರಭಾವ ಅಜಿತ್​ನ ಮೇಲೆ ಆಗುತ್ತಿತ್ತು.

ಅಜಿತ್ ಸಿಂಗನ ಸೋದರಮಾವ ಸರ್ದಾರ್ ಸುರ್ಜನ್ ಸಿಂಗ್ ನೂರಕ್ಕೆ ನೂರು ಭಾಗ ಬ್ರಿಟಿಷರ ಪಾದಸೇವಕ. ಅವನಿಗೂ ಇಂಗ್ಲಿಷನಾಗಿದ್ದ ಜಿಲ್ಲಾ ಕಲೆಕ್ಟರ್​ಗೂ ಬಲು ಸ್ನೇಹ. ಒಮ್ಮೆ ಆ ಕಲೆಕ್ಟರ್ ಸುರ್ಜನ ಸಿಂಹನ ಮನೆಗೆ ಆತಿಥ್ಯ ಸ್ವೀಕರಿಸಲು ಬಂದಿದ್ದಾಗ ಏಳೆಂಟು ವರ್ಷದ ಅಜಿತ್ ಸಿಂಗನೂ ಹುಡುಗರ ಜೊತೆ ಆಟವಾಡುತ್ತಾ ಅಲ್ಲಿಯೇ ಇದ್ದ. ಕಲೆಕ್ಟರ್ ಸಾಹೇಬನ ಕೆಂಪು ಮೂತಿ, ಹರಕು ಮುರಕು ಹಿಂದಿ ಅವನಲ್ಲಿ ಅಸಹ್ಯ ಮೂಡಿಸಿತ್ತು. ಕಲೆಕ್ಟರ್ ಸಾಹೇಬನಿಗೆ ನಮಸ್ಕಾರ ಮಾಡು ಎಂದು ಮಾವ ಹೇಳಿದಾಗ, ಅವನನ್ನು ಧಿಕ್ಕರಿಸಿ ಮನೆಯ ಹೊರಗಿನ ಒಂದು ಮರದ ಕೆಳಗೆ ಭುಸುಗುಡುತ್ತಾ ನಿಂತ. ಕಲೆಕ್ಟರ್ ಅಲ್ಲಿಂದ ಹೊರಟನಂತರ ಮಾವ ಇವನನ್ನು ತರಾಟೆಗೆ ತೆಗೆದುಕೊಂಡು ಎರಡು ಬಿಗಿದಾಗ, ‘ನಾನೇಕೆ ನಮಸ್ಕಾರ ಮಾಡಬೇಕು. ಅವನು ನಮ್ಮ ದುಷ್ಮನ್’ ಎಂದು ಪ್ರತ್ಯುತ್ತರ ನೀಡಿದ. ಬೆಳೆವ ಸಿರಿ ಮೊಳಕೆಯಲ್ಲಿ, ಅಲ್ಲವೆ? 1894ರಲ್ಲಿ ಸಾಯಿದಾಸ್ ಆಂಗ್ಲೋ ಸಂಸ್ಕೃತ್ ಹೈಸ್ಕೂಲ್​ನಿಂದ ಮೆಟ್ರಿಕ್ ಪಾಸ್ ಮಾಡಿದ ಅಜಿತ್​ಗೆ ಕಾಶಿಗೆ ಹೋಗಿ ಸಂಸ್ಕೃತ ಕಲಿಯುವ ಮಹದಾಸೆ ಇತ್ತು. ಆದರೆ ಮನೆಯವರ ಒತ್ತಡಕ್ಕೆ ಸಿಲುಕಿ ಸನಿಹದ ಬರೈಲಿಗೆ ಹೋಗಿ ಕಾನೂನು ಕಲಿಯಲಾರಂಭಿಸಿದಾಗಲೇ ಅವನ ಮನಸ್ಸು ದೇಶಸೇವೆಗೆ ತನ್ನ ಜೀವನ ಮುಡಿಪಾಗಬೇಕೆಂದು ಪ್ರೇರೇಪಿಸುತ್ತಿತ್ತು. ಲಾಹೋರಿನ ಡಿ.ವಿ.ಜಿ. ಕಾಲೇಜಿಗೆ ದಾಖಲಾದ. ಆಗಲೆ ದೇಶ ಬಿಡುಗಡೆ ಹೋರಾಟ ನಡೆಸುತ್ತಿದ್ದ ಅಂದಿನ ಏಕೈಕ ಸಂಘಟನೆ ಕಾಂಗ್ರೆಸ್ಸಿನ ಸದಸ್ಯನಾದ.

ರಾಜರನ್ನು ಸಂಘಟಿಸುವ ಯತ್ನ: 1903ರಲ್ಲಿ ಅವನಿಗೆ ಇಪ್ಪತ್ತೆರಡು ವರ್ಷ. ರಾಜ ಮಹಾರಾಜರನ್ನು ಬ್ರಿಟಿಷರ ವಿರುದ್ಧ ಸೆಣಸಾಡಲು ಸಿದ್ಧಗೊಳಿಸಲು ದಯಾನಂದರೂ, ವಿವೇಕಾನಂದರೂ ಮಾಡಿದ ಪ್ರಯತ್ನಗಳ ಪರಿಚಯ ಅಜಿತ್ ಸಿಂಗ್​ಗಿತ್ತು. 1857ರ ಸಂಗ್ರಾಮದಲ್ಲಿ ರಾಜರೂ ನವಾಬರೂ ವಹಿಸಿದ ಮಹತ್ತ್ವದ ಪಾತ್ರದ ಅರಿವೂ ಇತ್ತು. 1903ರಲ್ಲಿ ಅಂದಿನ ವೈಸ್ರಾಯ್ ಲಾರ್ಡ್ ಕರ್ಜನ್ ಬ್ರಿಟಿಷ್ ಪ್ರಭುತ್ವದ ಶಕ್ತಿ ಪ್ರದರ್ಶನ ಮಾಡಲು ದೆಹಲಿಯಲ್ಲಿ ವೈಭವೋಪೇತ ದರ್ಬಾರ್ ಆಯೋಜಿಸಿ, ಅದಕ್ಕೆ ದೇಶದ ಎಲ್ಲ ರಾಜ, ಮಹಾರಾಜ, ನವಾಬರನ್ನು ಆಹ್ವಾನಿಸಿ, ಅವರನ್ನು ತನ್ನ ನಾಯಿ ಕುನ್ನಿಗಳಂತೆ ಪ್ರದರ್ಶಿಸಿ ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯದ ಬುಡವನ್ನು ಭಾರತದಲ್ಲಿ ಭದ್ರಗೊಳಿಸಲು ಯೋಜನೆ ರೂಪಿಸಿದ್ದ. ಅದು ಅಜಿತ್ ಸಿಂಗ್​ಗೆ ಒಂದು ಸುವರ್ಣಾವಕಾಶವೆನಿಸಿತು. ಆತ ಹೇಗೋ ದೆಹಲಿ ದರ್ಬಾರ್​ಗೆ ಹೋಗಿ ಅನೇಕ ರಾಜರನ್ನು ಸಂರ್ಪಸಿದ. ಅವರ ಕ್ಷಾತ್ರಧರ್ಮವನ್ನು ನೆನಪಿಸಿ ಆಕ್ರಮಣಕಾರರಾದ ಬ್ರಿಟಿಷರ ವಿರುದ್ಧ ಹೋರಾಡಿ ಭಾರತವನ್ನು ಸ್ವತಂತ್ರಗೊಳಿಸಬೇಕೆಂದು ವಿನಂತಿಸಿದ. ಬರೋಡಾದ ಗಾಯಕವಾಡ್ ಮಹಾರಾಜ, ಕಾಶ್ಮೀರದ ದೊರೆ, ಅವನೇನಾದರೂ ಮಾಡುವುದಾದರೆ ಅದಕ್ಕೆ ತಮ್ಮ ಸಹಕರಿಸುವ ವಚನ ನೀಡಿದರು. ಇನ್ನು ಕೆಲವರು ಸರ್ದಾರರೂ ಸಹಕರಿಸಲು ಮುಂದಾದರು.

ಅವನು ಆಯಾ ಆಸ್ಥಾನದ ವಿದ್ವಾಂಸರು ಮತ್ತು ಪಂಡಿತರ ಮೂಲಕ ರಾಜರ ಜೊತೆಗೆ ಸಂಪರ್ಕವಿರಿಸಿಕೊಂಡು ರಾಜರಲ್ಲಿ ವೈಚಾರಿಕವಾಗಿ ಕ್ರಾಂತಿಯನ್ನುಂಟು ಮಾಡುತ್ತಿದ್ದುದು ಬ್ರಿಟಿಷರಿಗೆ ತಿಳಿದು ಅದು ವೈಸ್ರಾಯ್ಗೂ ತಲಪಿತ್ತು. ಅವನು ಪ್ರಮುಖ ರಾಜರಿಗೆ ಪತ್ರ ಬರೆದು, ‘ನಿಮ್ಮ ರಾಜ್ಯಗಳಲ್ಲಿ ಹರಡುತ್ತಿರುವ ಅಶಾಂತಿ ಹಾಗೂ ಏಳುತ್ತಿರುವ ಕ್ರಾಂತಿಭಾವನೆಗಳನ್ನು ದಮನ ಮಾಡಲು ಕ್ರಮ ಕೈಗೊಳ್ಳತಕ್ಕದ್ದು’ ಎಂದು ಫರ್ವನು ಹೊರಡಿಸಲಿಕ್ಕೆ ಅಜಿತ್ ಸಿಂಗ್​ನ ಪ್ರಯತ್ನವೂ ಕಾರಣವಾಗಿತ್ತು.

ಲಾರ್ಡ್ ಕರ್ಜನ್ ದಿಲ್ಲಿ ದರ್ಬಾರ್ ನಡೆಸಿ ಬ್ರಿಟಿಷ್ ಬಲವನ್ನು ಎಷ್ಟು ಪ್ರದರ್ಶಿಸಿದರೂ ಅವನ ಇನ್ನೊಂದು ಕಾರ್ಯ ಅವನ ಸಾಮ್ರಾಜ್ಯಕ್ಕೇ ಮುಳುವಾಗುವಂತಾಯಿತೆಂಬುದು ಇತಿಹಾಸದ ಮತ್ತೊಂದು ಅಧ್ಯಾಯ. ಅದೇ 1905ರ ಬಂಗಾಳ ವಿಭಜನೆ. ಅದು ಬ್ರಿಟಿಷರ ಒಡೆದು ಆಳುವ ನೀತಿಯ ಉತ್ತಮ ಉದಾಹರಣೆ. 1906ರಲ್ಲಿ ದಾದಾಭಾಯಿ ನವರೋಜಿ ನೇತೃತ್ವದಲ್ಲಿ ಕೊಲ್ಕತಾದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಹೋಗಿದ್ದಾಗ ಅಜಿತ್ ಸಿಂಗ್ ರಾಷ್ಟ್ರೀಯ ನಾಯಕರ ಕಣ್ಣಿಗೆ ಬಿದ್ದ. ಲೋಕಮಾನ್ಯ ತಿಲಕರಿಗೆ ಅವನು ಬಲು ಪ್ರಿಯನಾದ. ಲಾಲಾ ಲಜಪತರಾಯರಂತೂ ಮೊದಲಿನಿಂದಲೂ ಚಿರಪರಿಚಿತರೇ. ಇನ್ನು ಬಿಪಿನ್​ಚಂದ್ರಪಾಲರ ಭಾಷಣದಿಂದ ಅಜಿತ್ ಪ್ರೇರೇಪಿಸಲ್ಪಟ್ಟ. ಅಂದಿನಿಂದ ಅವನು ಲಾಲ್-ಬಾಲ್-ಪಾಲರ ನಿಷ್ಠಾವಂತ ಅನುಯಾಯಿಯಾದ. ‘ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು’ ಎಂಬ ತಿಲಕರ ಗರ್ಜನೆ ಅವನಿಗೆ ಮಾರ್ಗದರ್ಶಕವಾಯಿತು.

ಅದ್ಭುತ ವಾಗ್ಮಿ: ಕೊಲ್ಕತಾ ಕಾಂಗ್ರೆಸ್ ಅಧಿವೇಶನದಿಂದ ಪ್ರೇರಿತನಾದ ಅಜಿತ್ ಸಿಂಗ್ ಪಂಜಾಬಿನಲ್ಲಿ ಜನ ಸಂಘಟನೆ ಮಾಡಬೇಕೆಂದು ನಿರ್ಧರಿಸಿದ. ಅವನು ಜನಜಾಗೃತಿಯ ಕಾರ್ಯಕ್ಕಾಗಿ ‘ಭಾರತ್ ಮಾತಾ ಸೊಸೈಟಿ’ ಎಂಬ ಸಂಘಟನೆ ಆರಂಭಿಸಿದ. ‘ಜಮೀ ಉಲ್ ವತನ್’ ಪತ್ರಿಕೆಯಲ್ಲಿ ಬರೆದ ಆಂಗ್ಲ ಆಡಳಿತ ವಿರೋಧಿ ಲೇಖನಕ್ಕಾಗಿ 5 ವರ್ಷದ ಜೈಲು ಶಿಕ್ಷೆ ಅನುಭವಿಸಿ ಆಗಷ್ಟೇ ಹಿಂದಿರುಗಿದ್ದ ಒಂಟಿಕೈ ಕ್ರಾಂತಿಕಾರಿ ಸೂಫಿ ಅಂಬಾ ಪ್ರಸಾದ್ ಅವರು ಅಜಿತ್ ಸಿಂಗನ ಜೊತೆಗಾರರಾದರು. ಇಬ್ಬರೂ ಸೇರಿ ಕ್ರಾಂತಿಕಾರಿ ಸಾಹಿತ್ಯ ರಚಿಸಿ, ಪ್ರಕಟಿಸಿ, ಪ್ರಸರಿಸಿ ದೇಶದ ಮುಕ್ತಿಗಾಗಿ ಹೋರಾಡಬೇಕೆಂಬ ವಿಚಾರವನ್ನು ಜನರ ಮನಸ್ಸುಗಳಲ್ಲಿ ಬಿತ್ತುತ್ತಿದ್ದರು. ಇದೆಲ್ಲವನ್ನು ಗಮನಿಸುತ್ತಿದ್ದ ಸರ್ಕಾರ ಅವನನ್ನು ‘ಬಾಗೀ’ ಅಂದರೆ ಬಂಡಾಯಗಾರ ಎಂದು ಹೆಸರಿಸಿತ್ತು. ಅಂಬಾ ಪ್ರಸಾದ್ ಅವನನ್ನು ‘ಬಾಗೀ ಮಸೀಹಾ’ ಎಂದು ಕರೆಯುತ್ತಿದ್ದ. ಮಸೀಹಾ ಎಂದರೆ ಪ್ರವಾದಿ ಎಂಬ ಅರ್ಥ (‘ಬಂಡಾಯಗಾರ ಪ್ರವಾದಿ’).

ಭಾರತ್ ಮಾತಾ ಸೊಸೈಟಿಯ ಪ್ರಮುಖ ವಕ್ತಾರನಾದ ಅವನ ಭಾಷಣ ಕೇಳಲು ಜನ ಮುಗಿಬೀಳುತ್ತಿದ್ದರು. ಅವನ ವಕ್ತತ್ವ ಶಕ್ತಿಯ ಅಭಿವ್ಯಕ್ತಿಗೆ ಆಂಗ್ಲಷಾಹಿಯೇ ಸುವರ್ಣಾವಕಾಶ ಒದಗಿಸಿಕೊಟ್ಟಿತು. ಬಂಗಾಳ ವಿಭಜನೆಯ ಅಂಗವಾಗಿ ಮೂಡಿಬಂದ ಸ್ವದೇಶಿ ಚಳವಳಿಗೆ ಪಂಜಾಬ್ ರೈತ ಚಳವಳಿ ಜೋಡಿಯಾಯಿತು. ಈ ರೈತ ಚಳವಳಿಯ ಪ್ರೇರಕ, ಪೋಷಕ, ನಾಯಕ ಅಜಿತ್ ಸಿಂಗನೇ ಆಗಿದ್ದ.

ಪಂಜಾಬ್ ಸರ್ಕಾರ ‘ನ್ಯೂ ಕಲೋನೈಜೇಷನ್ ಆಕ್ಟ್’ ಎಂಬ ಕಾಯಿದೆ ಮಾಡಿ ರೈತಾಪಿ ಜನರ ಕುತ್ತಿಗೆಯನ್ನೇ ಹಿಸುಕಲು ಹೆಜ್ಜೆ ಇಟ್ಟಿತು. ಭಾರತದಲ್ಲಿ ರೈತರೇ ಬಹುಸಂಖ್ಯಾತರು. ಪಂಜಾಬಿನಲ್ಲೂ ಅಷ್ಟೆ. ಭೂಕಂದಾಯ ಮತ್ತು ನೀರಾವರಿ ತೆರಿಗೆ ಹೆಚ್ಚಿಸಲಾಯಿತು. ಕಬ್ಬಿನ ಗದ್ದೆಯ ತೆರಿಗೆಯನ್ನು ಒಮ್ಮೆಲೆ ಮೂರುಪಟ್ಟು ಹೆಚ್ಚಿಸಿದ್ದರಿಂದ ರೈತರು ಅಸಂತುಷ್ಟಿಯಿಂದ ಕುದಿಯಲಾರಂಭಿಸಿದ್ದರು. ಆಗ ಅವರ ನೋವು ಸಂಕಟಗಳಿಗೆ ಧ್ವನಿಯಾದವನೇ ಅಜಿತ್ ಸಿಂಗ್. ಆ ಚಳವಳಿ ‘ಪಗ್ಡಿ ಸಂಭಾಲೋ ಜತ್ಥಾ’ ಎಂಬ ಹೆಸರು ಪಡೆಯಿತು.

ಅವನ ವಾಗ್ಝರಿ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ಪಂಜಾಬಿನ ಮೂಲೆ ಮೂಲೆಯಿಂದ ಅವನ ಭಾಷಣಗಳಿಗೆ ಬೇಡಿಕೆಗಳು ಬಂದವು. ರೈತರೆಲ್ಲ ಏಕವ್ಯಕ್ತಿಯಂತೆ ಎದ್ದು ನಿಂತಿದ್ದರು. ರೈತ ಹೋರಾಟಗಾರರನ್ನು ಸ್ವಾತಂತ್ರ್ಯ ಹೋರಾಟಗಾರರಾಗಿ ಪರಿವರ್ತಿಸಿದ್ದ ಮಾತಿನ ಜಾದೂಗಾರನಾದ ಅಜಿತ್ ಸಿಂಗ್. ಅವನ ಸಭೆಯ ವಿಷಯಗಳತ್ತ ಕಣ್ಣು ಹಾಯಿಸಿದರೆ ಅವೆಷ್ಟು ಕ್ಷಾತ್ರತೇಜದಿಂದ ಕೂಡಿದ್ದವು ಎಂಬುದು ಮನದಟ್ಟಾಗುತ್ತದೆ: ಭಾರತದಲ್ಲಿನ ಬ್ರಿಟಿಷರ ವಧೆಯೇ ಸೂಕ್ತ ಪರಿಹಾರ, ರಾಜ ನೈತಿಕ ಪರಿಸ್ಥಿತಿ-ಉಪಾಯ -ಬ್ರಿಟಿಷರನ್ನು ಹೊಡೆದೋಡಿಸುವುದು, ವೃತ್ತ ಪತ್ರಿಕೆಗಳ ದಮನ ವಿರುದ್ಧ ಹೋರಾಟ, ತೆರಿಗೆ ಹೆಚ್ಚಳ ವಿರುದ್ಧ ಪ್ರತಿಭಟನೆ… ಇತ್ಯಾದಿ.

ಬಂಧಿಸಲು ಸಿದ್ಧತೆ: 1907ರ ಮೇ 10ರಂದು 1857ರ ಬಂಡಾಯದ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸರ್ದಾರ್ ಅಜಿತ್ ಸಿಂಹ ಮತ್ತು ಅವನ ಪಕ್ಷವು ಹೊಸ ಬಂಡಾಯವನ್ನು ಆರಂಭಿಸಲಿದೆ ಎಂದು ಸರ್ಕಾರಕ್ಕೆ ಗುಪ್ತಚರ ವಿಭಾಗವು ವರದಿ ನೀಡಿತು. ಇದರ ಅನಂತರ ಒಂದರ ಹಿಂದೊಂದರಂತೆ ಗುಪ್ತಚರ ವರದಿಗಳು ಸರ್ಕಾರಕ್ಕೆ ಹೋದವು.

ಇದೆಲ್ಲದರ ಪರಿಣಾಮವಾಗಿ ಪಂಜಾಬಿನ ಗವರ್ನರ್​ನು ವೈಸ್ರಾಯ್ ಲಾರ್ಡ್ ಹಾರ್ಡಿಂಜ್​ಗೆ, ಪಂಜಾಬಿನಲ್ಲಿ ಉಗ್ರ ಕ್ರಾಂತಿಯಾಗಲಿದೆ. ಅದರ ನಾಯಕತ್ವವನ್ನು ಅಜಿತ್ ಸಿಂಗ್ ಮತ್ತು ಅವನ ಪಾರ್ಟಿಯವರು ವಹಿಸುತ್ತಾರೆ ಎಂದು ಬರೆದ. ಹೀಗಾಗಿ ಅವನನ್ನು ಹಿಡಿದು ಹಾಕಲು ಪಂಜಾಬ್ ಸರ್ಕಾರ ಯೋಜನೆ ಸಿದ್ಧಪಡಿಸಿತ್ತು.

1907ರ ಮೇ 7ರಂದು ಅಜಿತ್ ಸಿಂಗ್ ಮತ್ತು ಲಜಪತ್​ರಾಯರ ವಿರುದ್ಧ ಸರ್ಕಾರ ಅರೆಸ್ಟ್ ವಾರಂಟ್ ಹೊರಡಿಸಿತು. ಮೇ 9ರಂದು ಲಾಲಾಜಿಯನ್ನು ಬಂಧಿಸಿ ಬರ್ವದ ಮಾಂಡಲೆ ಜೈಲಿಗೆ ರವಾನಿಸಲಾಯಿತು.

ಅಜಿತ್ ಸಿಂಗ್​ಗೆ ವಾರಂಟ್ ಕುರಿತು ಅರಿವಿದ್ದರೂ ಮಾಡಬೇಕಿದ್ದ ಕೆಲಸಗಳಿದ್ದುದರಿಂದ ಭೂಗತನಾಗಿ ಅವುಗಳಲ್ಲಿ ಒಂದೊಂದಾಗಿ ಕೆಲಸಗಳನ್ನು ಮುಗಿಸುತ್ತಿದ್ದ. ಆದರೆ ಪೊಲೀಸರು ಜೂನ್ 2ನೇ ತಾರೀಕು ಅಮೃತಸರದಲ್ಲಿ ಅವನನ್ನು ಬಂಧಿಸಿದರು. ಆನಂತರ ಗೈಡ್ ಎಂಬ ವಿಶೇಷ ಉಗಿಬಂಡಿಯಲ್ಲಿ ಅವನನ್ನೂ ಮಾಂಡಲೆ ಜೈಲಿಗೆ ಸೇರಿಸಲಾಯಿತು. ಅಲ್ಲೇನು ಅವನಿಗೆ ಹೆಚ್ಚು ಕೆಲಸಗಳಿರಲಿಲ್ಲ. ಒಳ್ಳೆಯ ಬಂಗಲೆಯಲ್ಲಿ ಸೆರೆ ಇಟ್ಟಿದ್ದರು. ಆದರೆ ಅವನ ಬಂಧನದ ವಿಷಯ ಅದೇ ಮಾಂಡಲೆ ಜೈಲಿನಲ್ಲಿದ್ದ ಲಾಲಾಜಿಗೆ ತಿಳಿದಿರಲೇ ಇಲ್ಲ. ಇಬ್ಬರೂ ಒಂದೇ ಜೈಲಿನಲ್ಲಿದ್ದರೂ ಬಹುಕಾಲ ಒಬ್ಬರನ್ನೊಬ್ಬರು ಭೇಟಿ ಮಾಡಲು ಆಗಲಿಲ್ಲ.

ಸೌಮ್ಯವಾದಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಗೋಖಲೆಯವರು ಲಾಲಾಜಿ ಬಿಡುಗಡೆಗೆ ವೈಸ್ರಾಯ್ ಆಪ್ತ ಕಾರ್ಯದರ್ಶಿಗೆ ಪತ್ರ ಬರೆದರು. ಆದರೆ ಅದರಲ್ಲಿ ಅಜಿತ್ ಸಿಂಗ್​ನ ಬಗ್ಗೆ ನೇತ್ಯಾತ್ಮಕವಾಗಿ ಬರೆದರು.

ಮಾಂಡಲೆ ಜೈಲಿನಲ್ಲಿ ಒಂದು ಅಲೌಕಿಕ ಘಟನೆ ನಡೆಯಿತು. ಒಂದು ರಾತ್ರಿ ಅಜಿತ್ ಸಿಂಗ್​ಗೆ ಸ್ವಪ್ನ. ಅದರಲ್ಲಿ ಕರ್ತಾರ್ ಸಿಂಗ್ ಸರಾಬಾ ಕಾಣಿಸಿಕೊಂಡು, ‘ಸರ್ದಾರ್​ಜೀ, ನವೆಂಬರ್ 11ರಂದು ನೀವು ಬಿಡುಗಡೆಯಾಗಲಿದ್ದೀರಿ’ ಎಂದು ಹೇಳಿ ಮಾಯವಾದ. ಅದರಂತೆ ಆ ದಿನದಂದೇ ಅವನ ಬಿಡುಗಡೆಯಾಯಿತು. ನವೆಂಬರ್ 18ರಂದು ಅವನು ವಿಶೇಷ ರೈಲಿನಲ್ಲಿ ಲಾಹೋರ್ ತಲಪಿದ. ಅದು ಪತ್ರಿಕೆಗಳಲ್ಲಿ ಪ್ರಕಟವಾಗಿ ಅಜಿತ್ ಸಿಂಗ್ ಇನ್ನಷ್ಟು ಜನಪ್ರಿಯನಾದ. ಅವನಿಗೆ ಜನ ಅದ್ಭುತ ಸ್ವಾಗತ ನೀಡಿದರು. ಇದನ್ನು ಕಂಡ ಸರ್ಕಾರ ಆತನನ್ನು ಬಿಡುಗಡೆ ಮಾಡಿ ತಪ್ಪು ಎಸಗಿದಂತೆ ಕೈ ಕೈ ಹಿಸುಕಿಕೊಂಡಿತು.

(ಮುಂದುವರಿಯುವುದು)

(ಅಜಿತ್ ಸಿಂಗ್​ನ ಸಾಹಸಗಾಥೆಯ ಹೆಚ್ಚಿನ ವಿವರಗಳನ್ನು ಅರಿಯಲು ಇದೇ ಅಂಕಣಕಾರರ ‘ಯುಗದ್ರಷ್ಟ ಭಗತ್​ಸಿಂಗ್’ ಓದಿ. ಪ್ರತಿಗಳಿಗಾಗಿ ಸಂರ್ಪಸಿ: 9448110034)

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top