ಜದುಗೋಪಾಲ ಎಂಬ ಚಿಂತನಶೀಲ ಕ್ರಾಂತಿಕಾರಿ

| ಡಾ.ಬಾಬು ಕೃಷ್ಣಮೂರ್ತಿ

ಯುವಜನರಲ್ಲಿ ಕ್ರಾಂತಿಕಾರಿ ವಿಚಾರ ಬಿತ್ತಿ ಕ್ರಾಂತಿ ಸಂಘಟನೆಗೆ ಸೇರಿಸುವ, ಬ್ರಿಟಿಷ್ ಪೊಲೀಸರ ಬೇಟೆಗೆ ಗುರಿಯಾದವರಿಗೆ ಗುಪ್ತ ಅಡಗುದಾಣಗಳ ವ್ಯವಸ್ಥೆ ಮಾಡಿ ಅವರನ್ನು ಕಾಪಾಡುವ ಹೊಣೆಹೊತ್ತಿದ್ದವನು ಜದುಗೋಪಾಲ. ಅಷ್ಟೇ ಅಲ್ಲ, ವಾಗ್ಮಿಯಾಗಿ, ಶಸ್ತ್ರಾಸ್ತ್ರ ಸಂಗ್ರಹಿಸಿಡುವ ಕಾರ್ಯನಿರ್ವಾಹಕನಾಗಿ ವಿವಿಧ ಜವಾಬ್ದಾರಿಗಳನ್ನು ದಕ್ಷತೆಯಿಂದ ನಿರ್ವಹಿಸಿದಾತ.

1905ರ ಬಂಗಾಳ ವಿಭಜನೆಯ ಕಾಲದಿಂದ ಬಂಗಾಳದಲ್ಲಿ ಕ್ರಾಂತಿಕಾರಿಗಳ ನಿರಂತರ ಹೋರಾಟ ಮುಂದುವರಿದಿತ್ತು. ಕ್ರಾಂತಿಕಾರಿಗಳ ಛಲ ಮತ್ತು ಹೋರಾಟದ ಕೆಚ್ಚನ್ನು ನೋಡಿ ಬ್ರಿಟಿಷ್ ಸರ್ಕಾರ ತತ್ತರಿಸಿಬಿಟ್ಟಿತ್ತು. ಅದೇ ಸಮಯದಲ್ಲಿ, ಬಾಘಾ ಜತೀನ್ (ಬರಿಗೈಯಲ್ಲಿ ರಾಯಲ್ ಬೆಂಗಾಲ್ ಟೈಗರ್ ಅನ್ನು ಕೊಂದಿದ್ದ ಧೀರ) ಸ್ವಾಮಿ ವಿವೇಕಾನಂದರಿಂದ ಮಾರ್ಗದರ್ಶನ ಪಡೆದು ಕ್ರಾಂತಿಕಾರಿಯಾದ. ನಿಷ್ಠೆ, ಸಂಘಟನಾ ಚಾತುರ್ಯ ಮುಂತಾದ ಸದ್ಗುಣಗಳ ಕಾರಣ ಅನುಶೀಲನ ಸಮಿತಿ ಮತ್ತು ಯುಗಾಂತರ ಕ್ರಾಂತಿ ಸಂಘಟನೆಗಳ ನಾಯಕನಾದ. ಚದುರಿ ಹೋಗಿದ್ದ ಕ್ರಾಂತಿ ಸಂಘಟನೆಗಳನ್ನು ಒಗ್ಗೂಡಿಸಿದ.

ನಂಬಿಕೆಯ ಬಂಟ: ಅವನ ಜೀವನದ ತೀವ್ರತಮ ಕಾಲ ಆರಂಭಗೊಂಡಿದ್ದು 1914-15ರ ಕಾಲಖಂಡದಲ್ಲಿ. ಅವನು 1914ಕ್ಕೆ ಸ್ವಲ್ಪ ಮುನ್ನ ಸಂಸಾರ ಸಮೇತ ಕಾಶಿ, ಹರಿದ್ವಾರ, ಮಥುರಾಗಳಿಗೆ ಭೇಟಿ ನೀಡಿದ್ದ. ಆಗ ಮಥುರಾದಲ್ಲಿದ್ದ ಸ್ವಾಮಿ ಪ್ರಜ್ಞಾನಂದ ಸರಸ್ವತಿಗಳನ್ನು ಕಂಡು ಕ್ರಾಂತಿಯ ಮುಂದಿನ ಹೆಜ್ಜೆಗಳನ್ನು ಕುರಿತು ರ್ಚಚಿಸಿದಾಗ ಸ್ವಾಮಿಗಳು ಅವನಿಗೆ ಜರ್ಮನಿಯ ಪ್ರಸಿದ್ಧ ಸೈನ್ಯಾಧಿಕಾರಿ ಜನರಲ್ ವಾನ್ ಬರ್ನ್​ಹಾರ್ಡಿ ಬರೆದ “Germany and the Next World War’ ಎಂಬ ಪುಸ್ತಕ ನೀಡಿದಾಗ ಅವನಿಗೆ ತನ್ನ ಮುಂದಿನ ಹಾದಿ ಸ್ಪಷ್ಟಗೊಂಡಿತ್ತು. ಆಗ ಅವನಿಗೆ ರಾಸ್​ಬಿಹಾರಿ ಬೋಸ್​ರನ್ನು ಸ್ವಾಮಿಗಳು ಪರಿಚಯ ಮಾಡಿಕೊಟ್ಟಿದ್ದರು. ಜರ್ಮನಿ ಹಾಗೂ ಬ್ರಿಟನ್ ನಡುವೆ ಯುದ್ಧ ಅನಿವಾರ್ಯವಾಗಲಿದೆ ಎಂಬ ಸಂಗತಿ ನಿಚ್ಚಳವಾಯಿತು. ಇದು 1911ರ ಆರಂಭದಲ್ಲೇ ನಡೆದಿದ್ದ ಸಂಗತಿ.

ಆಗಲೇ ಬಾಘಾ ಜತೀನ್ ಜರ್ಮನಿ, ಕೆನಡಾ, ಅಮೆರಿಕ ಮುಂತಾದ ಪಾಶ್ಚಾತ್ಯ ದೇಶಗಳಿಗೆ ಭೂಪೇಂದ್ರನಾಥ ದತ್ತ, ಎಂ.ಎನ್. ರಾಯ್ (ಆಗ ನರೇಂದ್ರನಾಥ ಭಟ್ಟಾಚಾರ್ಯ), ತಾರಕನಾಥ ದಾಸ್ ಹಾಗೂ ಇನ್ನು ಕೆಲವರು ಕ್ರಾಂತಿಕಾರಿಗಳನ್ನು ಕಳುಹಿಸಿ ಆ ದೇಶಗಳಲ್ಲೂ ಮಹಾಯುದ್ಧದ ಸಂದರ್ಭದಲ್ಲಿ ಸಹಾಯ ಗಿಟ್ಟಿಸುವ ಸಲುವಾಗಿ ಪ್ರಯತ್ನ ಆರಂಭಿಸಿದ್ದ. ಜರ್ಮನಿಯಲ್ಲಿ ಇಂಡೋ ಜರ್ಮನ್ ಅಸೋಸಿಯೇಷನ್ ಎಂಬುದು ನಿರ್ವಣಗೊಂಡು ಜರ್ಮನಿಯ ಸಹಾಯ ಪಡೆಯುವ ಕೆಲಸವೂ ಒಂದು ಯಶಸ್ವಿ ಹಂತ ಮುಟ್ಟಿತ್ತು. ಆಗ ಅಲ್ಲಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ಪ್ರಯತ್ನ ನಡೆದು, ಜತೀನ್ ಕಲ್ಕತ್ತಾದಲ್ಲಿನ ಜರ್ಮನ್ ರಾಯಭಾರಿಯನ್ನು ಮಾರುವೇಷದಲ್ಲಿ ಸಂರ್ಪಸಿದ್ದ. ಅದೇ ವೇಳೆ ಬಂಗಾಳಿ ಬೇಹುಗಾರಿಕೆ ಪಡೆ ಬಾಘಾ ಜತೀನ್​ಗಾಗಿ ತೀವ್ರ ಹುಡುಕಾಟ ಆರಂಭಿಸಿತ್ತು.

ಅವನು ತಲೆಮರೆಸಿಕೊಂಡೇ ಕೆಲಸ ಮಾಡುತ್ತಿದ್ದ. ಪೊಲೀಸರ ಹುಡುಕಾಟ ತೀವ್ರಗೊಂಡಾಗ ತನ್ನ ಕಾರ್ಯಕ್ಷೇತ್ರವನ್ನು ಬದಲಾಯಿಸಬೇಕಾಗಿ ಬಂತು. ಅದೇ ವೇಳೆ ಎನ್.ಎಸ್. ಮೆವರಿಕ್ ಎಂಬ ಹಡಗಿನಲ್ಲಿ ಜರ್ಮನಿಯ ಶಸ್ತ್ರಾಸ್ತ್ರಗಳು ಬರುತ್ತಿದ್ದುದರಿಂದ ಅವನ್ನು ಬಾಲ್​ಸೋರ್ ಪಟ್ಟಣದ ಸನಿಹದ ಕಡಲತೀರದಲ್ಲಿ ಸಂಗ್ರಹಿಸಿಕೊಳ್ಳುವ ಕಾರ್ಯ ಅವನ ಪಾಲಿಗೆ ಬಂತು.

ಜರ್ಮನಿ ಮತ್ತು ಗ್ರೇಟ್ ಬ್ರಿಟನ್ ನಡುವೆ 1914ರ ಜುಲೈ 28ರಂದು ಪ್ರಥಮ ಮಹಾಯುದ್ಧದ ಕಹಳೆ ಮೊಳಗಿಯೇಬಿಟ್ಟಿತು. ಆಗ ಇಡೀ ಭಾರತದಲ್ಲಿದ್ದ ಇಂಗ್ಲಿಷ್ ಸೈನಿಕರ ಸಂಖ್ಯೆ ಕೇವಲ 12 ಸಾವಿರ. ಯುದ್ಧದಲ್ಲಿ ಬ್ರಿಟನ್ ಪರ ಹೋರಾಡಲು ಕಳಿಸಲಾದ ಭಾರತೀಯ ಸೈನಿಕರ ಸಂಖ್ಯೆ ಎರಡು ಲಕ್ಷ ಹತ್ತು ಸಾವಿರ! ಹೀಗೆ ಭಾರತದಲ್ಲಿ ಇಂಗ್ಲಿಷರ ಸೈನ್ಯ ದುರ್ಬಲವಾಗಿದ್ದಾಗ ಹೊಡೆತ ಕೊಡುವ ರಣನೀತಿಯನ್ನು ಕ್ರಾಂತಿಕಾರಿಗಳು ಅನುಸರಿಸಿದರು.

ಹೆಗಲೇರಿದ ಯುಗಾಂತರದ ಹೊಣೆ: ಬಾಘಾ ಜತೀನ್ ಅಪಾಯದಲ್ಲಿದ್ದು, ಬಾಲ್​ಸೋರ್ ಪ್ರದೇಶಕ್ಕೆ ಹೋಗಿ ಅಲ್ಲಿ ಜರ್ಮನಿಯ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಮುನ್ನ, ಅವನ ನಂತರ ಯುಗಾಂತರ ಕ್ರಾಂತಿ ಸಂಘಟನೆಯ ನಾಯಕ ಯಾರು ಎಂಬ ಪ್ರಶ್ನೆ ಉದ್ಭವಿಸಿತು. ಅವನ ಕಣ್ಣಮುಂದೆ ಬಲಗೈ ಬಂಟರಾಗಿ ಅನೇಕರಿದ್ದರೂ ಇಬ್ಬರು ಅವರ ಪೈಕಿ ಮುಖ್ಯರಾಗಿದ್ದರು. ಒಬ್ಬ ಅತುಲ ಕೃಷ್ಣ ಘೊಷ್, ಇನ್ನೊಬ್ಬ ಜದುಗೋಪಾಲ ಮುಖರ್ಜಿ. 1915ರ ಸೆಪ್ಟೆಂಬರ್ 14ರಂದು ಬಾಲ್​ಸೋರ್ ನಗರಕ್ಕೆ ಸ್ವಲ್ಪ ದೂರದಲ್ಲಿದ್ದ ಚಾಸ್​ಖಂಡ್ ಎಂಬಲ್ಲಿ ಬಾಘಾ ಜತೀನನ ಬಲಿದಾನವಾಯಿತು. ತದನಂತರ ಅವನ ಸೂಚನೆಯಂತೆ ಯುಗಾಂತರದ ನಾಯಕತ್ವ ವಹಿಸಿಕೊಂಡವನೇ ಜದುಗೋಪಾಲ ಮುಖರ್ಜಿ!

ಜದುಗೋಪಾಲ ಹುಟ್ಟಿದ್ದು 1886ರ ಸೆಪ್ಟೆಂಬರ್ 18ರಂದು ಬಂಗಾಳದ ಮೇದಿನೀಪುರ (ಮಿಡ್ನಾಪುರ)ದ ರುದ್ರನಾರಾಯಣ ನದಿಯ ತೀರದ ತಮ್ಮುಕ್ ಎಂಬ ಹಳ್ಳಿಯಲ್ಲಿ. ಅವನ ತಂದೆ ಕಿಶೋರಿಲಾಲ್ ಮುಖರ್ಜಿ ಯಶಸ್ವಿ ವಕೀಲರಾಗಿದ್ದರು. ಅದಕ್ಕಿಂತಲೂ ಮಿಗಿಲಾಗಿ ಸಂಗೀತಗಾರರಾಗಿ ಪ್ರಸಿದ್ಧಿ ಗಳಿಸಿದ್ದರು. ಅವನ ತಾಯಿ ಭುವನ ಮೋಹಿನಿದೇವಿ ಮಕ್ಕಳಲ್ಲಿ ಧಾರ್ವಿುಕ ಭಾವನೆಗಳನ್ನು ಉಂಟುಮಾಡುವುದರಲ್ಲಿ, ಸತ್ಸಂಸ್ಕಾರ ನೀಡುವುದರಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಜದುಗೋಪಾಲನ ತಮ್ಮ ಧನ್​ಗೋಪಾಲ್ ನಂತರ ಅಮೆರಿಕದಲ್ಲಿ ನೆಲೆಸಿ ಪ್ರಸಿದ್ಧ ಲೇಖಕನೂ ಸಾಂಸ್ಕೃತಿಕ ರಾಯಭಾರಿಯೂ ಆದ.

ಜದುಗೋಪಾಲ 1900ರಲ್ಲಿ 14 ವರ್ಷದವನಾಗಿದ್ದಾಗ ಒಬ್ಬ ಭಾರತೀಯ ಪ್ರಯಾಣಿಕಳನ್ನು ಅದೇ ರೈಲಿನಲ್ಲಿ ಸಂಚರಿಸುತ್ತಿದ್ದ ಐರೋಪ್ಯ ಧೂರ್ತನೊಬ್ಬ ವಿನಾಕಾರಣ ಸಾಯ ಬಡಿದ. ಅವಳು ಈಗಲೋ ಆಗಲೋ ಎಂಬ ಸ್ಥಿತಿಯಲ್ಲಿ ಜದುಗೋಪಾಲನ ಮನೆಗೆ ಚಿಕಿತ್ಸೆ ಪಡೆಯಲು ಬಂದಳು. ಅವಳ ದುಃಸ್ಥಿತಿಯನ್ನು ಕಂಡು ಬಾಲ ಜದುಗೋಪಾಲನಲ್ಲಿ ಒಮ್ಮೆಲೆ ಬ್ರಿಟಿಷ್ ದ್ವೇಷ ಭುಗಿಲೆದ್ದಿತು.

ಜದುಗೋಪಾಲನ ಜೀವನದಲ್ಲಿ ಮಹತ್ವದ ಬದಲಾವಣೆ ಉಂಟಾಗಿದ್ದು, ಆಗಿನ ಎಲ್ಲ ಕ್ರಾಂತಿಕಾರಿಗಳಿಗಾದಂತೆ, 1905ರ ಆಸುಪಾಸಿನಲ್ಲೇ. ಕಲ್ಕತ್ತಾದ ಡಫ್ ಸ್ಕೂಲ್ ಎಂಬ ಶಾಲೆಯಲ್ಲಿ ಉನ್ನತ ತರಗತಿಯ ವಿದ್ಯಾರ್ಥಿಯಾಗಿ ಸೇರಿದಾಗಲೇ ಅನುಶೀಲನ ಸಮಿತಿಯ ಬ್ಯಾರಿಸ್ಟರ್ ಪ್ರಮಥನಾಥ ಮಿತ್ರ, ಸರಳಾದೇವಿ ಘೊಷಾಲ್, ಬಿಪಿನ್​ಚಂದ್ರಪಾಲ್ ಮೊದಲಾದ ಹತ್ತಾರು ಕ್ಷಾತ್ರಚೇತನಗಳ ಕಾರಣ ಕಲ್ಕತ್ತಾದಲ್ಲಿ ಯುವಜನರಲ್ಲಿ ಧೈರ್ಯ, ಸಾಹಸ, ಹೋರಾಟಗಳ ಮನೋಭಾವವನ್ನು ಬೆಳೆಸುವ ಅನೇಕ ಚಟುವಟಿಕೆಗಳು ಗರಿಗೆದರಿದ್ದವು. ಆಗ ಅನುಶೀಲನ ಸಮಿತಿಯ ಕಡೆಗೆ ಆಕರ್ಷಿತನಾದ ಜದುಗೋಪಾಲ ದಿನೇದಿನೆ ಅದರಲ್ಲಿ ತಲ್ಲೀನನಾಗಲಾರಂಭಿಸಿದ. ಆಗಲೇ ಏಕಾಕಿಯಾಗಿ ಬೆಂಗಾಲಿ ಹುಲಿಯನ್ನು ಕೊಂದುಹಾಕಿ ಬಾಘಾ ಜತೀನ್ ಎಂಬ ಅನ್ವರ್ಥನಾಮವನ್ನು ಪಡೆದ ಜತೀನ್ ಅವನಿಗೆ ಹೀರೋ ಆದ. ಆಗಿನಿಂದಲೇ ಜತೀನನ ಸಾಮೀಪ್ಯ ಶುರುವಾಯಿತು. ಎಂಟ್ರೆನ್ಸ್ ಪರೀಕ್ಷೆ ಮುಗಿಸಿ ಕಲ್ಕತ್ತಾ ಮೆಡಿಕಲ್ ಕಾಲೇಜು ಸೇರಿ ವೈದ್ಯಕೀಯ ಶಿಕ್ಷಣ ಮುಂದುವರಿಸಿದ.

ಕುಶಲ ಸಂಘಟಕ: 1913ರಲ್ಲಿ ದಾಮೋದರ ನದಿಯಲ್ಲಿ ಭಯಂಕರ ಪ್ರವಾಹ ಬಂದಾಗ ಜನರು ಬವಣೆಗೆ ಸಿಲುಕಿದರು. ಸಂತ್ರಸ್ತರ ಸೇವೆಗೆ ಜತೀನ್ ತನ್ನ ಯುವಪಡೆಯೊಂದಿಗೆ ಮುಂದಾದ. ಜತೀನನ ಬಲಗೈಯಂತೆ ದುಡಿದವನು ಜದುಗೋಪಾಲ. ಜತೀನನ ಮೇರುವ್ಯಕ್ತಿತ್ವವನ್ನು ಹತ್ತಿರದಿಂದ ನೋಡುವ ಅವಕಾಶ ದೊರೆತು ಅಂದಿನಿಂದ ಜತೀನ್ ಬಗ್ಗೆ ಅವನಿಗೆ ಆರಾಧನಾ ಮನೋಭಾವವೂ ಉಂಟಾಯಿತು. ಜತೀನ್ ಒಂದು ಕಡೆ ಸಂತ್ರಸ್ತರ ಸೇವೆಮಾಡುತ್ತ ಇನ್ನೊಂದೆಡೆ ಚದುರಿಹೋಗಿದ್ದ ಕ್ರಾಂತಿಸಂಸ್ಥೆಗಳನ್ನು ಒಗ್ಗೂಡಿಸುವ ಕೆಲಸ ಕೈಗೊಂಡಿದ್ದ. ಅವನಿಗೆ ಹೆಗಲಿಗೆ ಹೆಗಲು ಕೊಟ್ಟು ಕರ್ಮಯೋಗಿಯಂತೆ ದುಡಿದ ಜದುಗೋಪಾಲನಲ್ಲಿ ಜತೀನನಿಗೆ ಭರವಸೆ ಮೂಡಿದ್ದು ಆಗಲೇ. ತನ್ನ ಉದ್ದೇಶಾನುಸಾರ ಕ್ಯಾಲಿಫೋರ್ನಿಯಾಗೆ ಹೋಗಿದ್ದ ತಾರಕನಾಥ ದಾಸ್, ಜರ್ಮನಿ ಸೇರಿದ್ದ ವೀರೇಂದ್ರನಾಥ ಚಟ್ಟೋಪಾಧ್ಯಾಯ (ಸರೋಜಿನಿ ನಾಯ್ದು ತಮ್ಮ) ಮುಂತಾದವರೊಂದಿಗೆ ಸಂಪರ್ಕವಿರಿಸಿಕೊಳ್ಳುವ ಕೆಲಸವನ್ನು ಜತೀನ್ ಜದುಗೋಪಾಲನಿಗೆ ಒಪ್ಪಿಸಿದ್ದ.

ಪ್ರಸಿದ್ಧ ಇತಿಹಾಸಕಾರ ಆರ್.ಸಿ. ಮಜುಂದಾರ್ ಜದುಗೋಪಾಲನನ್ನು ಕುರಿತು ಹೀಗೆ ಬರೆದಿದ್ದಾರೆ- ‘ಯುವಜನರಲ್ಲಿ ಕ್ರಾಂತಿಕಾರಿ ವಿಚಾರಗಳನ್ನು ಬಿತ್ತುವ, ಹೊಸಹೊಸ ಯುವಕರನ್ನು ಕ್ರಾಂತಿ ಸಂಘಟನೆಗೆ ಸೇರಿಸುವ ಮುಖ್ಯಪಾತ್ರವನ್ನು ಬಾಘಾ ಜತೀನ್ ಜದುಗೋಪಾಲನಿಗೆ ವಹಿಸಿದ್ದ. ಯುಗಾಂತರದ ನಾಯಕನಾಗಿ ಬೆಳೆದು ಅದರ ರಣತಂತ್ರವನ್ನು ರೂಪಿಸಿದ್ದ ತಂತ್ರಗಾರನಾಗಿ, ಅಂತಾರಾಷ್ಟ್ರೀಯ ಸಂಪರ್ಕಗಳನ್ನು ರೂಢಿಸಿಕೊಂಡ ತಜ್ಞನಾಗಿ, ಉತ್ತಮ ವಾಗ್ಮಿಯಾಗಿ ವಿವಿಧ ಜವಾಬ್ದಾರಿಗಳನ್ನು ದಕ್ಷತೆಯಿಂದ ನಿರ್ವಹಿಸಿದ ವ್ಯಕ್ತಿ ಜದುಗೋಪಾಲ್’.

ಬಾಘಾ ಜತೀನ್ ಹೌತಾತ್ಮ್ಯದ ನಂತರ ಜದುಗೋಪಾಲ್ ಹೆಗಲಿಗೆ ಕ್ರಾಂತಿಸಂಸ್ಥೆಯ ನಾಯಕತ್ವ ವರ್ಗಾವಣೆಯಾಗುತ್ತಿದ್ದಂತೆ ಸರ್ಕಾರಿ ಬೇಹಗಾರಿಕೆ ಇಲಾಖೆಗೆ ಸುದ್ದಿ ತಲಪಿ ಅವನ ಸುದ್ದಿ ತಿಳಿಸಿದವರಿಗೆ ಅಥವಾ ಹಿಡಿದುಕೊಟ್ಟವರಿಗೆ 20 ಸಾವಿರ ರೂ. ಬಹುಮಾನ ಘೊಷಿಸಿತು. ಅಂದಿನಿಂದ ವಿವಿಧ ವೇಷಗಳನ್ನು ಧರಿಸಿ ಎಲ್ಲೆಡೆ ಸಂಚರಿಸುತ್ತ ಯುವಕರನ್ನು ಸಂಘಟಿಸಿದ್ದು ಅವನ ಜಾಣತನಕ್ಕೆ ಸಾಕ್ಷಿ. ಪೊಲೀಸರ ಕಾಟ ಹೆಚ್ಚಾದಂತೆ ಜದುಗೋಪಾಲ ಅಸ್ಸಾಂ-ಬರ್ವ ಮತ್ತು ಟಿಬೆಟ್-ಭೂತಾನ್ ಗಡಿಪ್ರದೇಶಗಳ ಅರಣ್ಯಗಳಲ್ಲಿ ತಲೆಮರೆಸಿಕೊಂಡೇ ಸಂಘಟನೆಯ ಕೆಲಸ ಮಾಡಬೇಕಾಯಿತು. 1921ರವರೆಗೆ ಹೀಗೇ ಕೆಲಸ ಮಾಡುತ್ತಿದ್ದ, ನಂತರ ಮನೆಗೆ ಹಿಂದಿರುಗಿ ಮತ್ತೆ ವೈದ್ಯಕೀಯ ಪದವಿಯನ್ನು ಉತ್ತಮ ಶ್ರೇಣಿಯಲ್ಲಿ ಗಳಿಸಿದ.

ಆರ್ವಿುಯ ಸಂವಿಧಾನಕರ್ತೃ: ಚೌರಿ ಚೌರಾದಲ್ಲಿ ಹಿಂಸಾಕಾಂಡ ನಡೆಯಿತೆಂದು ಗಾಂಧಿಯವರು ಅಸಹಕಾರ ಆಂದೋಲನವನ್ನು ಹಿಂತೆಗೆದುಕೊಂಡಾಗ, ಅಲ್ಲಿಯವರೆಗೆ ಯಾವುದೋ ನಿರೀಕ್ಷೆ ಇರಿಸಿಕೊಂಡಿದ್ದ ಯುಗಾಂತರದ ಕ್ರಾಂತಿಕಾರಿಗಳು ನಿರಾಶೆಗೊಂಡು, ಆಗಷ್ಟೇ ದೇಶಬಂಧು ಚಿತ್ತರಂಜನದಾಸರು ಇತರ ನಾಯಕರೊಡನೆ ಸೇರಿ ಆರಂಭಿಸಿದ್ದ ಸ್ವರಾಜ್ಯ ಪಕ್ಷವನ್ನು ಸೇರಿದರು. ಆದರೆ ಸ್ಪಷ್ಟ ಕಾರ್ಯಕ್ರಮವಿಲ್ಲದ ಅವರು ಗೊಂದಲದಲ್ಲಿ ಸಿಲುಕಿದ್ದರು. ಆಗ ಉತ್ತರ ಪ್ರದೇಶದ ಷಹಜಹಾನ್​ಪುರದಲ್ಲಿ ಪಂಡಿತ್ ರಾಮ್್ರಸಾದ್ ಬಿಸ್ಮಿಲ್ಲನ ನಾಯಕತ್ವದಲ್ಲಿ ಹೊಸ ಕ್ರಾಂತಿಕಾರಿಗಳ ಪಡೆ ನಿರ್ವಣಗೊಳ್ಳಲಾರಂಭವಾಗಿತ್ತು. ಅದಕ್ಕೊಂದು ಲಿಖಿತ ಸಂವಿಧಾನದ ಆವಶ್ಯಕತೆ ಕಂಡುಬಂದಾಗ ಲಾಲಾ ಹರದಯಾಳರು ವಾರಾಣಸಿಯಲ್ಲಿ ತಂಗಿದ್ದ ಜದುಗೋಪಾಲನನ್ನು ಕಾಣುವಂತೆ ಬಿಸ್ಮಿಲ್ಲನಿಗೆ ಸೂಚಿಸಿದರು. ಅಲ್ಲಿಗೆ ಹೋದಾಗ ಕ್ರಾಂತಿಕಾರಿಗಳ ಹಳೆಯ ಹುಲಿ ಶಚೀಂದ್ರನಾಥ್ ಸನ್ಯಾಲ್ ಕೂಡ ದೊರೆತರು. ಮೂವರೂ ಸೇರಿ ಹಿಂದುಸ್ಥಾನ್ ರಿಪಬ್ಲಿಕನ್ ಆರ್ವಿುಯ ಸಂವಿಧಾನವನ್ನು ತಯಾರಿಸಿದರು.

ಈ ಸಂವಿಧಾನವನ್ನು ಹಳದಿ ಕಾಗದದ ಮೇಲೆ ಅಲಹಾಬಾದ್​ನಲ್ಲಿ ಮುದ್ರಿಸಲಾಯಿತು. ಆದ್ದರಿಂದ ಅದಕ್ಕೆ ‘ಢಛ್ಝಿ್ಝಡಿ ಟಚಟಛ್ಟಿ’ ಎಂಬ ಸಾಂಕೇತಿಕ ಹೆಸರು ಬಂತು. ಈ ‘ಢಛ್ಝಿ್ಝಡಿ ಟಚಟಛ್ಟಿ’ ಹಿಂದಿನ ಮಿದುಳು ಯಾರದು ಎಂದು ಪೊಲೀಸರು ತಪಾಸಣೆ ಆರಂಭಿಸಿದಾಗ ಅವರು ಹುಡುಕುತ್ತಿದ್ದ ಜದುಗೋಪಾಲನ ಹೆಸರೂ ಅವರಿಗೆ ತಿಳಿದುಬಂತು. ಅವನ ಬಂಧನವಾಗಿ 4 ವರ್ಷಗಳ ಜೈಲುಶಿಕ್ಷೆಯೂ ಆಯಿತು. 1927ರಲ್ಲಿ ಬಿಡುಗಡೆಯಾದರೂ ಬಂಗಾಳದಿಂದ ಅವನನ್ನು ಬಹಿಷ್ಕರಿಸಲಾಯಿತು. ರಾಂಚಿಗೆ ಹೋಗಿ ಅಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತ 1934ರಲ್ಲಿ ಅಮಿಯಾ ಚೌಧುರಿ ಎಂಬಾಕೆಯನ್ನು ವಿವಾಹವಾದ. ಆಗಲೇ ಯುಗಾಂತರ ಮತ್ತು ಅನುಶೀಲನ ಸಮಿತಿಯ ಚದುರಿಹೋಗಿದ್ದ ಕ್ರಾಂತಿಕಾರಿಗಳನ್ನು ಸೇರಿಸಿ ‘ಕರ್ವಿುಸಂಘ’ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಆದರೆ ಸುಭಾಷ್​ಚಂದ್ರ ಬೋಸ್ ಮತ್ತು ಯುಗಾಂತರದ ಕೆಲ ನಾಯಕರಿಗೆ ಈ ಸಂಸ್ಥೆಯ ಬಗ್ಗೆ ಭರವಸೆ ಮೂಡಲಿಲ್ಲ ಎಂಬ ಕಾರಣ ಅದು ಅಲ್ಪಕಾಲೀನ ಸಂಸ್ಥೆಯಾಗಿ ಅಂತಿಮವಾಗಿ ಕೊನೆಯುಸಿರೆಳೆಯಿತು.

1938ರವರೆಗೆ ಅಸ್ತಿತ್ವದಲ್ಲಿದ್ದ ಯುಗಾಂತರ ಸಂಘಟನೆಯನ್ನು ವಿಸರ್ಜಿಸಿ ಅದರ ಕ್ರಾಂತಿಕಾರಿಗಳು ಕಾಂಗ್ರೆಸ್​ಗೆ ಬೆಂಬಲ ನೀಡಬೇಕೆಂದು ಜದುಗೋಪಾಲ್ ನಿರ್ಧರಿಸಿದ್ದು ಅನೇಕರಿಗೆ ಪಥ್ಯವಾಗಲಿಲ್ಲ. ಆದರೆ ಜದುಗೋಪಾಲ್ 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಏನೋ ಭರವಸೆಯನ್ನು ಕಂಡು ಅದರಲ್ಲಿ ಭಾಗವಹಿಸಿದ. ಆಗ ಬಂಧನವಾಗಿ ಮತ್ತೆರಡು ವರ್ಷಗಳು ಹಜಾರಿಬಾಗ್ ಜೈಲಿನಲ್ಲಿ ಜೈಲುವಾಸ ಮಾಡಿದ. ಆಗ ಜಯಪ್ರಕಾಶ ನಾರಾಯಣ್ ಅವನೊಂದಿಗೆ ಜೈಲಿನ ಸಹವಾಸಿಯಾಗಿದ್ದರು. ಆದರೆ ಅಖಂಡ ಭಾರತದ ಕನಸು ಹೊತ್ತಿದ್ದ ಜದುಗೋಪಾಲ್ ಭಾರತ ವಿಭಜನೆಗೊಂಡದ್ದನ್ನು ಒಪ್ಪದೆ ಕಾಂಗ್ರೆಸ್​ನೊಡನೆ ಭಿನ್ನಾಭಿಪ್ರಾಯ ಹೊಂದಿ ಕಾಂಗ್ರೆಸ್ಸಿಗೆ 1947ರಲ್ಲಿ ರಾಜೀನಾಮೆ ನೀಡಿದ. ಆವೇಳೆಗೆ ಕ್ರಾಂತಿಮಾರ್ಗದ ಬಗ್ಗೆಯೂ ಅವನದು ಮರುಚಿಂತನೆ ನಡೆದಿತ್ತು.

ಭಾರತ ವಿಭಜನೆಯಿಂದ ಖಿನ್ನನಾಗಿದ್ದ ಜದುಗೋಪಾಲ ಮೌನವಾಗಿ ವೈದ್ಯವೃತ್ತಿಯ ಮೂಲಕ ಜನಸೇವೆ ಮಾಡುತ್ತ 90 ವರ್ಷಗಳು ಬದುಕಿದ್ದು 1976ರ ಆಗಸ್ಟ್ 30ರಂದು ವಯೋಸಹಜ ಸಮಸ್ಯೆಗಳಿಂದಾಗಿ ದೇಹ ತೊರೆದ. ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರು ಜದುಗೋಪಾಲ ಮುಖರ್ಜಿಯನ್ನು ಬಿಹಾರದ ರಾಜ್ಯಪಾಲನಾಗುವಂತೆ ವಿನಂತಿಸಿದಾಗ ವಿನಯಪೂರ್ವಕವಾಗಿ ನಿರಾಕರಿಸಿದ. ಪ್ರಸಿದ್ಧ ಬಂಗಾಳಿ ಕಾದಂಬರಿಕಾರ ಶರತ್​ಚಂದ್ರ ಚಟರ್ಜಿ ‘ಪಾಥೇರ್ ಡಾಬಿ’ ಎಂಬ ತಮ್ಮ ಕಾದಂಬರಿಯ ಕಥಾನಾಯಕ ಸವ್ಯಸಾಚಿ ಪಾತ್ರವನ್ನು ಜದುಗೋಪಾಲನ ವ್ಯಕ್ತಿತ್ವವನ್ನು ಆಧರಿಸಿಯೇ ಸೃಷ್ಟಿಸಿದರೆಂಬುದು ಅವರ ಮಗ ಡಾ. ಸಿದ್ಧಾರ್ಥ ಮುಖರ್ಜಿ ಹೇಳಿಕೆ.

(ಲೇಖಕರು ಹಿರಿಯ ಪತ್ರಕರ್ತರು)