Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಒಂಟಿ ಕೈ ಧೀರ, ಕ್ರಾಂತಿ ನೇತಾರ, ಸೂಫಿ ಅಂಬಾ ಪ್ರಸಾದ್

Thursday, 24.05.2018, 3:05 AM       No Comments

ಅಂಬಾ ಪ್ರಸಾದರು ಪತ್ರಿಕಾ ಬರಹಗಳ ಮೂಲಕ ದೇಶಭಕ್ತಿಯ ಕಿಡಿಗಳನ್ನು ಪಸರಿಸಿದರು, ಸಂಘಟನೆಯ ಮೂಲಕ ಕ್ರಾಂತಿ ಚಳವಳಿಗೆ ಹೊಸ ಕಸುವು ತುಂಬಿದರು. ಬಲಗೈ ಇಲ್ಲದಿದ್ದರೂ ಕಲಿತನಕ್ಕೆ ಅವರಲ್ಲಿ ಕೊರತೆಯೇನೂ ಇರಲಿಲ್ಲ. ತಮ್ಮ ಅಪ್ರತಿಮ ಕಾರ್ಯದಿಂದ ಬ್ರಿಟಿಷ್ ಆಡಳಿತಕ್ಕೆ ಹೆದರಿಕೆ ಹುಟ್ಟಿಸಿದರು.

‘ಭಾರತೀಯ ಕ್ರಾಂತಿಕಾರರ ಪ್ರಥಮ ಪಂಕ್ತಿಯಲ್ಲಿ ಒಬ್ಬರಿಗಿಂತ ಒಬ್ಬರು ಹೊಳೆಯುವ ವ್ಯಕ್ತಿಗಳಿದ್ದಾರೆ… ಅಸಂಖ್ಯ ಪ್ರಾತಃಸ್ಮರಣೀಯರಿದ್ದಾರೆ… ಸೂಫಿ ಅಂಬಾ ಪ್ರಸಾದರಂಥ ಅದ್ವಿತೀಯರೂ ಇದ್ದಾರೆ. ಅವರು ಕೆಂಗಣ್ಣು ಬಿಟ್ಟರೆ ಬ್ರಿಟಿಷ್ ಆಫೀಸರ್​ಗಳು ಗಡಗಡ ನಡುಗುತ್ತಿದ್ದರು; ಅವರು ಗರ್ಜಿಸಿದರೆ ಒಂದೇ ಉಸುರಿನಲ್ಲಿ ಓಡಿಹೋಗುತ್ತಿದ್ದರು. ಇಂತಹ ಸಿಂಹಸದೃಶ ವ್ಯಕ್ತಿ ನಿಜಕ್ಕೂ ಒಬ್ಬ ಆತ್ಮನಿರ್ಲಿಪ್ತ ಯೋಗಿಯೇ ಆಗಿದ್ದರು….’ -ಇದು ತಮ್ಮ ‘ಯುಗದ್ರಷ್ಟ ಭಗತ್ ಸಿಂಗ್’ ಎಂಬ ಅದ್ಭುತ ಜೀವನಗಾಥೆಯನ್ನು ಸೂಫಿ ಅಂಬಾ ಪ್ರಸಾದರಿಗೆ ಅರ್ಪಣೆ ಮಾಡುವಾಗ ಗ್ರಂಥ ಲೇಖಕಿ ಹಾಗೂ ಭಗತ್ ಸಿಂಗರ ತಮ್ಮ ಕುಲ್​ಪಾಲ್ ಸಿಂಗರ ಮಗಳು ಡಾ. ವೀರೇಂದ್ರ ಸಿಂಧು ಬರೆದಿರುವ ಭಾವಪೂರ್ಣ ಮಾತುಗಳು.

ನನ್ನ ಬಲಗೈ ಜೋಡಿಸಲು ಭಗವಂತ ಮರೆತ: ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮವನ್ನು ಬ್ರಿಟಿಷರು ದಮನ ಮಾಡಿದ ಅನಂತರ ಇನ್ನೂ ತಾತ್ಯಾಟೋಪೆ ಸಿಕ್ಕಿಬಿದ್ದಿರಲಿಲ್ಲ. ಭೂಗತನಾಗಿ ಸಂಚರಿಸುತ್ತಿದ್ದ. ಅಂಥ ಸಂದರ್ಭದಲ್ಲಿ 1858ರಲ್ಲಿ ಅಂಬಾ ಪ್ರಸಾದರ ಜನನ. ಉತ್ತರ ಪ್ರದೇಶದ ಮೊರಾದಾಬಾದ್​ನ ಮೊಹಲ್ಲಾ ಕಾನೂನ್​ಗಾಂವ್ ಎಂಬಲ್ಲಿ. ಗೋವಿಂದ ಪ್ರಸಾದ್ ಭಟ್ನಾಗರ್ ತಂದೆ. ಅವು ಆರ್ಯ ಸಮಾಜದ ಚಟುವಟಿಕೆಗಳು ಗರಿಗೆದರಿದ್ದ ದಿನಗಳು. ಗೋವಿಂದ ಪ್ರಸಾದರೂ ಅದರ ಪ್ರಭಾವಕ್ಕೊಳಗಾಗಿ ಮನೆಯಲ್ಲಿ ಹವನ, ವೇದ ಪಠಣಗಳನ್ನು ನಡೆಸುತ್ತಿದ್ದರು. ಅಂಥ ವಾತಾವರಣದಲ್ಲಿ ಬಾಲ್ಯ ಕಳೆದ ಅಂಬಾ ಪ್ರಸಾದ್ ಮೊರಾದಾಬಾದ್​ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಸನಿಹದ ಬರೈಲಿಯಲ್ಲಿ ಎಫ್.ಎ. ಮುಗಿಸಿ ಕಾನೂನು ಪದವೀಧರರೂ ಆದರು.

ಸ್ವಲ್ಪ ಕುಳ್ಳಗಿನ ಶರೀರದ ಅಂಬಾ ಪ್ರಸಾದ್ ಒಳ್ಳೆಯ ಹಾಸ್ಯಪ್ರಜ್ಞೆ ಇದ್ದವರು. ಎಲ್ಲರನ್ನೂ ಲಘುವಾಗಿ ತಮಾಷೆ ಮಾಡುತ್ತ ಬಳಿಗೆ ಸೆಳೆದುಕೊಳ್ಳುತ್ತಿದ್ದ ಅವರಿಗೆ ಹುಟ್ಟಿನಿಂದಲೇ ಬಲಗೈ ಇರಲಿಲ್ಲ. ಕೇವಲ ಎಡಗೈ ಒಂದರಲ್ಲೆ ಅವರ ಎಲ್ಲ ವ್ಯವಹಾರ. ‘ನಾನು 1857ರ ಸಂಗ್ರಾಮದಲ್ಲಿ ಆಂಗ್ಲರ ವಿರುದ್ಧ ಹೋರಾಡಿದ ಸೈನಿಕನಾಗಿದ್ದೆ. ಯುದ್ಧದಲ್ಲಿ ನನ್ನ ಬಲಗೈ ಕಡಿದು ಹೋಯಿತು. ಹಾಗೆಯೇ ನನ್ನ ಅಂತ್ಯವೂ ಆಯಿತು. ಪುನರ್ಜನ್ಮ ಆದಾಗ ಭಗವಂತ ಹಾಗೆಯೇ ನನ್ನನ್ನು ಭೂಲೋಕದಲ್ಲಿ ಹುಟ್ಟಿಸಿದ. ಬಲಗೈ ಸೇರಿಸುವುದನ್ನು ಮರೆತುಬಿಟ್ಟ!’ ಎಂದು ತಮ್ಮ ಬಲಗೈ ಇಲ್ಲದ ಬಗ್ಗೆ ಪರಿಹಾಸ್ಯ ಮಾಡಿಕೊಳ್ಳುತ್ತಿದ್ದರು. ಆದರೆ ಒಂದೇ ಕೈಯಲ್ಲಿ ಬ್ರಿಟಿಷರ ಮೇಲೆ ಗುಂಡು ಹಾರಿಸುತ್ತಿದ್ದರು. ಅದೇ ಕೈಯಲ್ಲಿ ಪುಂಖಾನುಪುಂಖವಾಗಿ ದೇಶಭಕ್ತಿಭರಿತ ಲೇಖನಗಳನ್ನು ಬರೆದರು.

ಕಾನೂನು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ವಕೀಲಿ ವೃತ್ತಿ ಸ್ವೀಕರಿಸಲಿಲ್ಲ. ಪತ್ರಿಕೋದ್ಯಮಕ್ಕೆ ಪದಾರ್ಪಣೆ ಮಾಡಿದರು. ಅಪೂರ್ವ ಕ್ರಾಂತಿಕಾರಿ, ಬ್ರಿಟಿಷ್​ವಿರೋಧಿ ಸಾಹಿತ್ಯ ಸೃಷ್ಟಿಸಿದ ದಿಟ್ಟ ಧೀಮಂತ ಪತ್ರಕರ್ತರಾಗಿ ಪ್ರಸಿದ್ಧಿ ಗಳಿಸಿ ಬ್ರಿಟಿಷ್ ಆಡಳಿತದ ದ್ವೇಷಕ್ಕೆ ಗುರಿಯಾದರು. ಅಂಬಾ ಪ್ರಸಾದ್ ತಮ್ಮ ಕ್ರಾಂತಿಕಾರಿ ವಿಚಾರಗಳನ್ನು ಪ್ರಕಟಗೊಳಿಸಲು ಮೊರಾದಾಬಾದ್​ನಲ್ಲಿ ಸ್ವಂತ ಮುದ್ರಣಾಲಯ ತೆರೆದು ‘ಸಿತಾರಾ ಇ ಹಿಂದ್’ ಎಂಬ ಪತ್ರಿಕೆಯನ್ನು ಆರಂಭಿಸಿದರು. 1890ರಲ್ಲಿ ‘ಜಮೀ ಉಲ್ ಉಲೂಮ್ ಎಂಬ ಉರ್ದು ಪತ್ರಿಕೆಯನ್ನು ಹೊರಡಿಸಿದರು. ಆ ದಿನಗಳಲ್ಲೇ ಸೂಫಿ ತತ್ತ್ವಜ್ಞಾನಕ್ಕೆ ಮನಸೋತು ಸೂಫಿ ಸಂತ ಸೈಯದ್ ಮಹಮ್ಮದ್ ಹುಸೇನ್ ಎಂಬುವರ ಬಳಿ ಆ ತತ್ತ್ವಜ್ಞಾನ ಅಭ್ಯಸಿಸಿದ್ದರಿಂದ ಅವರಿಗೆ ‘ಸೂಫಿ’ ಎಂಬ ಹೆಸರು ಅಂಟಿಕೊಂಡಿತು. ಅವರಿಗೆ ಹಿಂದೂ ಮತ್ತು ಮುಸ್ಲಿಮರ ಐಕ್ಯತೆಯ ಬಗ್ಗೆ ಬಹಳ ಕಾಳಜಿ ಇದ್ದು ಇಬ್ಬರನ್ನೂ ಸನಿಹಕ್ಕೆ ತರುವ ಕಾರ್ಯದಲ್ಲೂ ತೊಡಗಿಕೊಂಡಿದ್ದರು. ಆ ಕುರಿತು ಲೇಖನಗಳನ್ನೂ ಬರೆಯುತ್ತಿದ್ದರು. ಆ ದಿನಗಳಲ್ಲೇ ಅವರ ವಿವಾಹವೂ ಆಯಿತು. ಆದರೆ ಎರಡೇ ವರ್ಷಗಳಲ್ಲಿ ಪತ್ನಿ ದಿವಂಗತರಾದರು. ಅದರಿಂದ ಅವರ ಕ್ರಾಂತಿ ಚಟುವಟಿಕೆಗಳಿಗೆ ರಹದಾರಿ ದೊರೆತಂತಾಯಿತು.

ಬಂದಿಖಾನೆಯಲ್ಲಿ ನರಕಯಾತನೆ: ಅವರ ಉಗ್ರ ಲೇಖನಗಳ ಕಾರಣ 1898ರಲ್ಲಿ ಆಂಗ್ಲಷಾಹಿ ಅವರನ್ನು ಬಂಧಿಸಿ ಎರಡು ವರ್ಷಗಳ ಕಾಲ ಸೆರೆಯಲ್ಲಿಟ್ಟಿತ್ತು. ಬಿಡುಗಡೆಯಾದ ಅನಂತರ ಉತ್ತರ ಪ್ರದೇಶದ ಕೆಲವು ಸಣ್ಣ ಸಣ್ಣ ಸಂಸ್ಥಾನಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದುದನ್ನು ವಿರೋಧಿಸಿ ಅಲ್ಲಿನ ರೆಸಿಡೆಂಟನನ್ನು ತೀವ್ರ ತರಾಟೆಗೆ ತೆಗೆದುಕೊಂಡು ಅವನ ಅನೀತಿ, ದುರಾಡಳಿತಗಳನ್ನು ಬಯಲಿಗೆಳೆದ ಕಾರಣ ಅಂಬಾ ಪ್ರಸಾದ್ ವಿರುದ್ಧ ಆಂಗ್ಲಷಾಹಿ ಮೊಕದ್ದಮೆ ಹೂಡಿತು. ನ್ಯಾಯಾಂಗವೂ ಆಂಗ್ಲಪರವಾಗಿಯೇ ಇದ್ದುದರಿಂದ ಅವರಿಗೆ ಮತ್ತೆ ಆರು ವರ್ಷಗಳ ಕಠಿಣ ಶಿಕ್ಷೆಯಾಯಿತು. ಅಲ್ಲಿ ಘನಘೊರ ಚಿತ್ರಹಿಂಸೆಗೆ ಈಡಾದ ಅವರು ತೀವ್ರ ಅನಾರೋಗ್ಯಕ್ಕೊಳಗಾದರು. ಕೊಳಚೆ ಗುಂಡಿಯಂತಿದ್ದ ಒಂದು ಸೆಲ್​ನಲ್ಲಿ ಅವರನ್ನು ಇರಿಸಲಾಗಿತ್ತು. ಕಾಯಿಲೆಯಿಂದ ನರಳುತ್ತಿದ್ದರೂ ಔಷಧಿಯಾಗಲಿ ಶುಶ್ರೂಷೆಯಾಗಲಿ ಇಲ್ಲ. ನೀರು ಸಹ ಸಿಗದಂತೆ ಮಾಡಲಾಯಿತು. ಪೂರ್ಣಾವಧಿ ಶಿಕ್ಷೆ ಅನುಭವಿಸಿದ ಅನಂತರ 1906ರಲ್ಲಿ ಅವರ ಬಿಡುಗಡೆಯಾಯಿತು.

ಸರ್ದಾರ್ ಭಗತ್ ಸಿಂಗ್​ನ ಕುಟುಂಬಕ್ಕೂ ಅಂಬಾ ಪ್ರಸಾದ್​ಗೂ ಮುಂಚಿನಿಂದಲೂ ಬಲವಾದ ನಂಟು. ವೃದ್ಧರಾಗಿದ್ದ ಭಗತ್ ಸಿಂಗ್ ತಾತ ಅರ್ಜುನ್ ಸಿಂಹ ಚಿರಪರಿಚಿತರು. ಭಗತ್ ತಂದೆ ಕಿಶನ್ ಸಿಂಗರಂತೂ ಆತ್ಮೀಯ ಸಂಗಾತಿ.

ಆ ಮನೆತನದ ಇನ್ನೊಬ್ಬ ಮಹಾನ್ ಕ್ರಾಂತಿಕಾರಿ ಭಗತ್ ಚಿಕ್ಕಪ್ಪ ಮತ್ತು ಸ್ಪೂರ್ತಿದಾತ ಅಜಿತ್​ಸಿಂಗ್ ಮುಂಚಿನಿಂದಲೂ ಆತ್ಮೀಯ ಜತೆಗಾರ.

ಅಂಬಾ ಪ್ರಸಾದರ ಬರವಣಿಗೆಯ ಕರೆಗೆ ಮಾರುಹೋದವರಲ್ಲಿ ಹೈದರಾಬಾದ್​ನ ನಿಜಾಮನೂ ಒಬ್ಬ. ಅವರು ‘ಹಿಂದೂಸ್ತಾನ್’ ಪತ್ರಿಕೆಯಲ್ಲಿ ಕೆಲಸ ಮಾಡ ಹೊರಟಾಗ ‘ಹೈದರಾಬಾದ್​ಗೆ ಬನ್ನಿ. ನಿಮಗಾಗಿ ಒಳ್ಳೆಯ ಮನೆಯನ್ನು ಶೃಂಗರಿಸಿಟ್ಟಿದ್ದೀನಿ’ಎಂದು ನಿಜಾಮ ಹೇಳಿದನಂತೆ. ಅದಕ್ಕೆ ಇವರು ‘ಆ ಶೃಂಗರಿಸಿದ ಮನೆಯನ್ನು ಅಲಂಕರಿಸಲು ನಾನೂ ಸಿದ್ಧನಿದ್ದೀನಿ’ ಎಂದು ಚಟಾಕಿ ಹಾರಿಸಿದ್ದರಂತೆ. ‘ಹಿಂದೂಸ್ತಾನ್’ ಪತ್ರಿಕೆಯಲ್ಲಿನ ಅಂಬಾ ಪ್ರಸಾದರ ಬರವಣಿಗೆಯನ್ನು ನೋಡಿ ಅವರನ್ನು ಸರ್ಕಾರಿ ಏಜಂಟರನ್ನಾಗಿ ಮಾಡಲು ತಿಂಗಳಿಗೆ 1,500 ರೂ.ಗಳ ಪ್ರಲೋಭನೆಯನ್ನು ತೋರಲು ಹೋದ ಆಂಗ್ಲ ಅಧಿಕಾರಿ ಅವರಿಂದ ಛೀಮಾರಿ ಮಾಡಿಸಿಕೊಂಡು ಹಿಂದಿರುಗಬೇಕಾಯಿತು.

ಪಗ್ಡಿ ಸಂಭಾಲೋ ಜತ್ಥಾ: ಅದ್ವಿತೀಯ ಕ್ರಾಂತಿ ಶಿರೋಮಣಿ ಸರ್ದಾರ್ ಅಜಿತ್ ಸಿಂಗ್ ಸದಾ ಒಂದಲ್ಲ ಒಂದು ವಸಾಹತುಷಾಹಿ ವಿರೋಧಿ ಆಂದೋಲನವನ್ನುಂಟು ಮಾಡುತ್ತಿದ್ದ ಕ್ರಾಂತಿಚೇತನ. ಬ್ರಿಟಿಷ್ ಸರ್ಕಾರ ರೈತರ ಹಕ್ಕು ಚ್ಯುತಿ ಮಾಡಿ ದರಗಳ ಏರಿಕೆಯನ್ನು ಕಾನೂನು ಮಾಡಲು ಹೊರಟಾಗ ಇಡೀ ಪಂಜಾಬಿನ ರೈತ ಸಮೂಹ ಸಿಡಿದೇಳುವಂತೆ ಮಾಡಿದ್ದು ಅಜಿತ್ ಸಿಂಗರ ಸಂಘಟನಾ ಚಾತುರ್ಯ, ಅಂಬಾ ಪ್ರಸಾದರ ಲೇಖನಗಳ ಕೂರಂಬುಗಳು. ‘ಪಗ್ಡಿ ಸಂಬಾಲೋ ಜತಾ’ ಎಂಬ ಈ ರೈತ ಚಳವಳಿಗೆ ಪ್ರೇರಣೆಯ ಇಂಧನ ಪೂರೈಸಿದ್ದೇ ಅಂಬಾ ಪ್ರಸಾದರ ಲೇಖನಿ.

ರೈತ ಚಳವಳಿಯ ಮೂಲಕ ಆಂಗ್ಲಷಾಹಿಗೆ ಪೆಟ್ಟು ನೀಡುವುದು ಅಜಿತ್ ಸಿಂಗರ ಮೂಲ ಉದ್ದೇಶ. ಅದು ನಡೆಯುತ್ತಿರುವಾಗಲೇ ಪಂಜಾಬಿನ ಬ್ರಿಟಿಷ್ ಸೈನಿಕ ಪಾಳಯದಲ್ಲಿ ಬಂಡಾಯದ ಸುಳಿವು ಸಿಕ್ಕಿದ್ದರಿಂದ ಎರಡೂ ಕಡೆ ವಿರೋಧವನ್ನು ಕಟ್ಟಿಕೊಳ್ಳುವುದು ಸೂಕ್ತವಲ್ಲವೆಂದು ಚಾಣಾಕ್ಷರಾದ ಬ್ರಿಟಿಷರು ನಿರ್ಧರಿಸಿ ರೈತವಿರೋಧಿ ಕಾನೂನನ್ನು ಮಾಡುವ ಪ್ರಕ್ರಿಯೆಗೆ ವಿರಾಮ ಹಾಕಿದರು.

ಅಂಬಾ ಪ್ರಸಾದರ ಪತ್ರಿಕಾ ವೃತ್ತಿಜೀವನದಲ್ಲಿ ಕಾಶ್ಮೀರದ ರೆಸಿಡೆಂಟ್ ಪ್ರಕರಣ ಉಲ್ಲೇಖನೀಯ. ಕಾಶ್ಮೀರ ಸಂಸ್ಥಾನದಲ್ಲಿ ಪ್ರೋಡೆನ್ ಎಂಬ ರೆಸಿಡೆಂಟ್ ಅಲ್ಲಿನ ರಾಜಾ ಪ್ರತಾಪ ಸಿಂಹನ ವಿರುದ್ಧ ಕಾರಸ್ಥಾನ ನಡೆಸುತ್ತಿದ್ದ ಸುದ್ದಿ ತಿಳಿದು ಕಲ್ಕತ್ತೆಯ ‘ಅಮೃತ ಬಜಾರ್’ ಪತ್ರಿಕೆಯ ವಿಶೇಷ ವರದಿಗಾರರಾಗಿ ಶ್ರೀನಗರಕ್ಕೆ ಹೋದರು. ರೆಸಿಡೆಂಟ್ ಪೋ›ಡೆನ್ನನ ಮನೆಯ ಅಡುಗೆಭಟ್ಟನಾಗಿ ಕೆಲಸ ಗಿಟ್ಟಿಸಿಕೊಂಡು ಕೆಲಕಾಲ ದುಡಿದರು. ಆಗ ಆತನ ಅಂತರಂಗದ ಹಾಗೂ ಆಡಳಿತಾತ್ಮಕ ರಹಸ್ಯಗಳನ್ನು ಭೇದಿಸಿ ಸಿದ್ಧಪಡಿಸಿದ ಸುದೀರ್ಘ ವರದಿ ‘ಅಮೃತ್ ಬಜಾರ್ ಪತ್ರಿಕಾ’ದಲ್ಲಿ ಪ್ರಕಟಗೊಂಡು ಆಂಗ್ಲ ಆಡಳಿತ ವಲಯದಲ್ಲಿ ಅಲ್ಲೋಲಕಲ್ಲೋಲವನ್ನೇ ಉಂಟುಮಾಡಿತು. ಅದು ಪೋ›ಡೆನ್ನನ ವರ್ಗಾವಣೆಗೆ ಕಾರಣವೂ ಆಯಿತು. 1908ರಲ್ಲಿ ಲೋಕಮಾನ್ಯ ತಿಲಕರ ಹೆಸರಿನಲ್ಲಿ ತಿಲಕ್ ಆಶ್ರಮ ಸ್ಥಾಪಿಸಿ ‘ಪೇಶ್ವಾ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು.

ಇರಾನ್​ಗೆ ಪಯಣ: ತಮ್ಮ ವಿರುದ್ಧ ಅಂಬಾ ಪ್ರಸಾದ್ ಲೇಖನಿಯನ್ನೇ ಖಡ್ಗವನ್ನಾಗಿ ಮಾಡಿಕೊಂಡು ಅವಿರತ ಹೋರಾಟ ನಡೆಸುತ್ತಿದ್ದಾಗ ಬ್ರಿಟಿಷ್ ಆಡಳಿತ ಸುಮ್ಮನಿರಲು ಸಾಧ್ಯವೇ? ಅದು ಅಜಿತ್ ಸಿಂಗ್, ಅಂಬಾ ಪ್ರಸಾದರನ್ನು ಬಂಧಿಸಿ ಮತ್ತೆ ಜೈಲಿಗೆ ತಳ್ಳಲು ಯೋಜನೆ ಸಿದ್ಧಪಡಿಸಿತು. ಇದರ ಮುನ್ಸೂಚನೆ ಪಡೆದ ಇಬ್ಬರೂ ಪಂಜಾಬಿನಿಂದ ಇರಾನ್​ಗೆ ಓಡಿಹೋದರು. ಅಜಿತ್​ಸಿಂಗ್ ಇರಾನ್​ನಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದರೆ ಅಂಬಾ ಪ್ರಸಾದ್ ಇರಾನ್​ನ ಶಿರಾಜ್ ಪಟ್ಟಣದಲ್ಲಿ ನೆಲೆನಿಂತರು. ಹೀಗಿರುವಾಗಲೇ 1914ರಲ್ಲಿ ಮೊದಲ ಮಹಾಯುದ್ಧದ ಕಹಳೆ ಮೊಳಗಿತು. ಅಮೆರಿಕ, ಕೆನಡಾಗಳಲ್ಲಿ ಗದರ್ ಪಾರ್ಟಿಯ ಚಟುವಟಿಕೆಗಳು ಗರಿಗೆದರಿದವು. ಗದರ್ ಪಾರ್ಟಿಯವರು ಟರ್ಕಿ, ಜರ್ಮನಿ, ಮೆಸೊಪೊಟೋಮಿಯ ಹಾಗೂ ಪೂರ್ವ ಪ್ರಾಚ್ಯಗಳಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಆರ್ವಿು ಎಂಬ ಹೆಸರಿನಲ್ಲಿ ಭಾರತೀಯ ಯುದ್ಧ ಕೈದಿಗಳನ್ನು ಸಂಘಟಿಸಲು ಪ್ರಯತ್ನ ಆರಂಭಿಸಿದರು. ಇರಾನಿಯರಿಗೆ ಆಪ್ತರಾಗಿದ್ದ ಅಂಬಾ ಪ್ರಸಾದ್ ಇರಾನ್​ನ ಕ್ರಾಂತಿಕಾರಿಗಳು ಭಾರತೀಯ ಕ್ರಾಂತಿಕಾರಿಗಳಿಗೆ ಸಹಾಯ ನೀಡುವಂತೆ ಮಾಡುವಲ್ಲಿ ಯಶಸ್ವಿಯಾದರು.

ಗದರ್ ವೀರರು ಭಾರತ-ಇರಾನ್ ಗಡಿ ಪ್ರದೇಶದ ಕರ್ವನ್ ನಗರದ ಮೇಲೆ ದಾಳಿ ಮಾಡಿ ಅಲ್ಲಿದ್ದ ಬ್ರಿಟಿಷ್ ಕೌನ್ಸಲ್​ನನ್ನು ಬಂಧಿಸಿಟ್ಟು ಕರ್ವನನ್ನು ವಶಕ್ಕೆ ತೆಗೆದುಕೊಂಡು ಅದನ್ನೇ ಕೇಂದ್ರವನ್ನಾಗಿ ಮಾಡಿಕೊಂಡು ಬ್ರಿಟಿಷ್ ಸೈನಿಕರನ್ನು ಸೋಲಿಸಿ ಬಲೂಚಿಸ್ತಾನದ ಕರಮ್ೕರ್ ಎಂಬಲ್ಲಿಗೆ ಓಡಿಸಿದರು. ಗದರ್ ಪಡೆ ಭಾರತದ ಕರಾಚಿ ಕಡೆಗೆ ಹೋಗುವ ಹಾದಿಯಲ್ಲಿ ಬಲೂಚಿಸ್ತಾನದ ಗವಡೆರ್ ಮತ್ತು ದಾದರ್ ತಲಪಿತು. ಆ ವೇಳೆಗೆ ಯುರೋಪ್ ಯುದ್ಧರಂಗದಲ್ಲಿ ಬ್ರಿಟನ್ ಮೇಲುಗೈ ಸಾಧಿಸಿತ್ತು. ಟರ್ಕಿ ಸೋಲನುಭವಿಸಿತ್ತು. ಬಾಗ್ದಾದ್ ಬ್ರಿಟಿಷ್ ಪಾಲಾಯಿತು.

ಸಮಾಧಿ ಸ್ಥಿತಿಯಲ್ಲಿ ದೇಹತ್ಯಾಗ: ಇರಾನಿನಲ್ಲಿದ್ದುಕೊಂಡು ಭಾರತೀಯ ಗದರ್ ಕ್ರಾಂತಿಕಾರಿಗಳಿಗೆ ಬೆಂಬಲವಾಗಿ ಕೆಲಸ ಮಾಡುತ್ತಿದ್ದ ಜರ್ಮನ್ ಸರ್ಕಾರದ ವಿವಿಧ ಏಜೆನ್ಸಿಗಳು ಬ್ರಿಟನ್ನಿನ ಗೆಲುವಿನ ಸುದ್ದಿ ತಿಳಿದು ಹಠಾತ್ತನೆ ಅಲ್ಲಿಂದ ಕಾಲ್ತೆಗೆದು ಗದರ್ ಪಾರ್ಟಿಗೆ ಸರಬರಾಜಾಗುತ್ತಿದ್ದ ಶಸ್ತ್ರಾಸ್ತ್ರಗಳು, ಇತರ ವಸ್ತುಗಳು ಹಾಗೂ ಆರ್ಥಿಕ ಸಹಾಯ ಬಂದ್ ಆಗುವಂತಾಯಿತು.

ಟರ್ಕಿ ಮತ್ತು ಇರಾಕ್​ಗಳಲ್ಲಿ ಜಯಗಳಿಸಿದ ಬ್ರಿಟಿಷ್ ಪಡೆಗಳು ಇಂಡಿಯನ್ ಇಂಡಿಪೆಂಡೆನ್ಸ್ ಆರ್ವಿುಯ ಮೇಲೆ ದಾಳಿ ನಡೆಸಿ ಸುತ್ತುವರಿದು ಸಿಕ್ಕಿದವರನ್ನು ಕ್ರೂರವಾಗಿ ಹತ್ಯೆಗೈದರು. ಈ ಕಾರ್ಯಾಚರಣೆ ಮಾಡಿದ್ದು ಖಜಛಿ ಉಚಠಠಿ ಕಛ್ಟಿಠಜಿಚ್ಞ ಇಟ್ಟಛಟ್ಞ ಎಂಬ ಬ್ರಿಟಿಷ್ ಪಡೆ. ಅದರ ನಾಯಕ ಜಲಿಯನ್​ವಾಲಾ ಬಾಗ್ ಪ್ರಕರಣದ ಕುಖ್ಯಾತ ಬ್ರಿಗೇಡಿಯರ್ ಜನರಲ್ ರೆಗ್ನಾಲ್ಡ್ ಡಯರ್!

ಈ ದಾಳಿಯಲ್ಲಿ ಅಂಬಾ ಪ್ರಸಾದ್ ಮತ್ತು ಅವರ ಸಂಗಾತಿ ಕೇದಾರ್​ನಾಥ್ ಸೋಂಧಿ ಬ್ರಿಟಿಷರ ಬಂಧನಕ್ಕೊಳಗಾದರು. ತಮ್ಮನ್ನು ಬಂಧಿಸಲು ಬಂದಾಗ ಅಂಬಾ ಪ್ರಸಾದ್ ಎಡಗೈಯಿಂದಲೇ ಗುಂಡು ಹಾರಿಸುತ್ತ ಹೋರಾಡಿದರು. ಅವರಿಬ್ಬರ ವಿಚಾರಣೆ ನಡೆದು ಇಬ್ಬರನ್ನೂ ಗುಂಡಿಟ್ಟು ಕೊಲ್ಲಲು ಆದೇಶಿಸಲಾಯಿತು. 1917ರ ಜನವರಿ 20ರಂದು ಕೇದರ್​ನಾಥ್ ಸೋಂಧಿಯ ಕತೆಯನ್ನು ಬ್ರಿಟಿಷ್ ಪೊಲೀಸರು ಮುಗಿಸಿದರು. ಜ.21ರಂದು ಅಂಬಾ ಪ್ರಸಾದರನ್ನು ಗುಂಡಿಟ್ಟು ಕೊಲ್ಲುವ ಮುಹೂರ್ತ ನಿಶ್ಚಿತವಾಗಿತ್ತು. ಮಿಲಿಟರಿ ಪೊಲೀಸರು ಅವರಿದ್ದ ಸೆಲ್ಲಿನಿಂದ ದೂರ ಕರೆದೊಯ್ದು ಗುಂಡಿಟ್ಟು ಕೊಲ್ಲಬೇಕಿತ್ತು. ಬೆಳಗ್ಗೆ ಅವರು ಬಂದು ನೋಡಿದಾಗ ಅಚ್ಚರಿ ಕಾದಿತ್ತು!

ಅಂಬಾ ಪ್ರಸಾದ್ ಧ್ಯಾನ ಮಾಡುತ್ತಾ ಕುಳಿತಂತಿತ್ತು. ಪೊಲೀಸರು ‘ಏಯ್! ಏಳು. ನಿನ್ನನ್ನು ಕರೆದೊಯ್ಯಲು ಬಂದಿದ್ದೀವಿ’ ಎಂದಾಗ ಅವರಿಂದ ಉತ್ತರ ಬರಲಿಲ್ಲ. ಒಬ್ಬ ಪೊಲೀಸ್ ಧ್ಯಾನಸ್ಥಿತಿಯಲ್ಲಿ ಕುಳಿತಿದ್ದ ಅವರನ್ನು ಮುಟ್ಟಿದಾಗ ಮೂಟೆಯಂತೆ ಶರೀರ ಪಕ್ಕಕ್ಕೆ ಉರುಳಿತು. ಅಂಬಾ ಪ್ರಸಾದರು ಸಮಾಧಿ ಸ್ಥಿತಿಯಲ್ಲಿ ಶ್ವಾಸಬಂಧ ಮಾಡಿ ಯೋಗಿಯಂತೆ ದೇಹ ತೊರೆದಿದ್ದರು. ಸರ್ದಾರ್ ಅಜಿತ್ ಸಿಂಗ್ ತನ್ನ ಆ್ಟಛಿಛ ಅಜಿಡಛಿ ಎಂಬ ಪುಸ್ತಕದಲ್ಲಿ ತನ್ನ ಆಪ್ತಮಿತ್ರ, ಹೋರಾಟದ ಸಂಗಾತಿ ಅಂಬಾ ಪ್ರಸಾದ್ ಕುರಿತು ಹೀಗೆಂದಿದ್ದಾನೆ: ‘ಭಾರತೀಯರು ಒಂದಲ್ಲಾ ಒಂದು ದಿನ ಅವರ ಗೋರಿಯನ್ನಾಗಲೀ ಅಥವಾ ಕಡೇಪಕ್ಷ ಅವಶೇಷಗಳನ್ನಾಗಲೀ ಭಾರತಕ್ಕೆ ತರುವರೆಂದು ಆಶಿಸುವೆ’. ಅಜಿತ್ ಸಿಂಹರ ಆಶಯ ಪೂರೈಸಿತೋ ಇಲ್ಲವೋ ನನಗೆ ತಿಳಿಯದು.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top