ಮಾ.7ರಿಂದ ಹೊರನಾಡು ಅನ್ನಪೂರ್ಣೆಶ್ವರಿ ಜಾತ್ರೆ

ಕಳಸ: ಹೊರನಾಡಿನ ಶ್ರೀ ಅನ್ನಪೂರ್ಣೆಶ್ವರಿ ಸನ್ನಿಧಿಯಲ್ಲಿ ಮಾ.7ರಿಂದ 11ರವರೆಗೆ ಜಾತ್ರಾಮಹೋತ್ಸವ ನಡೆಯಲಿದೆ ಎಂದು ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ. ಐದು ದಿನ ವಿವಿಧ ಧಾರ್ವಿುಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಾ.7ರಂದು ರಥೋತ್ಸವ ಅಂಗವಾಗಿ ಶ್ರೀ ಗಣಪತಿ ಪೂಜೆ, ಶ್ರೀ ಗಣಪತಿ ಹೋಮ ಮತ್ತು ರಾತ್ರಿ ರಂಗ ಪೂಜೆ. 8ರಂದು ಮಧ್ಯಾಹ್ನ ಧ್ವಜಾರೋಹಣ, ರಾತ್ರಿ ಪುಷ್ಪಕಾರೋಹಣ, 9ರಂದು ಮಧ್ಯಾಹ್ನ 12.24ರ ವೃಷಭ ಲಗ್ನದಲ್ಲಿ ಶ್ರೀ ಬ್ರಹ್ಮರಥೋತ್ಸವ, ರಾತ್ರಿ 10 ಗಂಟೆಗೆ ಶ್ರೀಮನ್ ಮಹಾರಥೋತ್ಸವ ನಡೆಯಲಿದೆ. 10ರಂದು ಕುಂಕುಮೋತ್ಸವ, ಅವಭೃತ ಸ್ನಾನ, ರಾತ್ರಿ ಇಡಿಗಾಯಿ ಸೇವೆ, ಧ್ವಜಾವರೋಹಣ, 11ರಂದು ಸಂಪ್ರೋಕ್ಷಣೆ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದು ತಿಳಿಸಿದ್ದಾರೆ.