ಬೆಂಗಳೂರು: ದೀಪಾವಳಿ ಹಬ್ಬವು ಬೆಳಕಿನ ಮೂಲಕ ಜೀವನದಲ್ಲಿ ಭರವಸೆ ಮೂಡಿಸುತ್ತದೆ. ಹೊಸ ಯೋಚನೆ, ಯೋಜನೆಗಳನ್ನು ಆರಂಭಿಸಲು ಇದು ಶುಭ ಘಳಿಗೆ. ಕಳೆದ ಎರಡು ದಿನಗಳಿಂದ ಎಲ್ಲೆಡೆ ಸಂಭ್ರಮಿಸುತ್ತಿರುವ ದೀಪಾವಳಿ ಹಬ್ಬವು ಈ ಬಾರಿ ನಟಿಯರಾದ ಸೋನಲ್ ಮೊಂಟೇರೊ ಹಾಗೂ ಮಮತಾ ರಾಹುತ್‌ಗೆ ವಿಶೇಷವಾಗಿದೆ. ಇಬ್ಬರೂ ತಮ್ಮ ದೀಪಾವಳಿ ಸಡಗರವನ್ನು ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.
ಸೋನಲ್‌ಗೆ ಸೀರೆಯ ಉಡುಗೊರೆ
ಮದುವೆ ಬಳಿಕ ಸೋನಲ್ ಮೊಂಟೇರೊಗೆ ಇದು ಮೊದಲ ದೀಪಾವಳಿ. ಅಲ್ಲದೇ ಪತಿ ತರುಣ್ ವಿಶೇಷ ಉಡುಗೊರೆ ನೀಡಿದ್ದು, ಇದು ಹಬ್ಬದ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆಯಂತೆ. ‘ಚಿಕ್ಕದಿನಿಂದಲೂ ನಮ್ಮ ಮನೆಯಲ್ಲಿ ದೀಪಾವಳಿ ಆಚರಿಸುತ್ತಿದ್ದೆವು. ಇಡೀ ಕುಟುಂಬ ಸೇರುವುದರಿಂದ ಶೂಟಿಂಗ್ ಬಿಡುವು ಮಾಡಿಕೊಂಡು ಮಂಗಳೂರಿಗೆ ತೆರಳುತ್ತಿದ್ದೆ. ಮದುವೆಯಾಗಿದ್ದರಿಂದ ಈ ಬಾರಿ ಬೆಂಗಳೂರಿನಲ್ಲಿಯೇ ಆಚರಿಸುತ್ತಿದ್ದೇನೆ. ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಅಷ್ಟು ಮಾಹಿತಿ ಇರಲಿಲ್ಲ. ಅತ್ತೆ ಮಾಲತಿ ಅವರು ಪೂಜೆ ಕ್ರಮಗಳ ಬಗ್ಗೆ ಹೇಳಿಕೊಡುತ್ತಿದ್ದಾರೆ. ಅದನ್ನು ಅನುಸರಿಸಿ ಮನೆಯಲ್ಲಿ ಪೂಜೆ ಮಾಡುತ್ತಿದ್ದೇನೆ. ಇಡೀ ಮನೆಯನ್ನು ನಾನೇ ಅಲಂಕರಿಸಿದ್ದೇನೆ. ನನಗೂ, ಅತ್ತೆಗೂ ತರುಣ್ ಸೀರೆ ಉಡುಗೊರೆಯಾಗಿ ನೀಡಿದ್ದಾರೆ. ಜೀವನದಲ್ಲಿ ಬೆಳಕು ವಿಶೇಷವಾದುದು. ಸಾಮಾನ್ಯವಾಗಿ ಪ್ರತಿ ದಿನ ನಾವು ರಸ್ತೆಯಲ್ಲಿ ಓಡಾಡುವಾಗ ಕತ್ತಲು ಕಾಣಬಹುದು. ಆದರೆ, ದೀಪಾವಳಿ ಸಂದರ್ಭ ಹಾಗಲ್ಲ. ಎಲ್ಲಿ ನೋಡಿದರೂ ದೀಪದ ಬೆಳಕು, ಪಟಾಕಿ ಸದ್ದು ಕೇಳುತ್ತೇವೆ. ಇದನ್ನು ನೋಡುವುದೇ ಚೆಂದ. ನಾನು ನಟಿಸಿರುವ ‘ಮಾದೇವ’, ‘ಬುದ್ಧಿವಂತ-2’ ಬಿಡುಗಡೆಗೆ ಸಿದ್ಧವಾಗಿವೆ. ‘ಪರವಶ’, ‘ರಾಧೇಯ’, ‘ತಲ್ವಾರ್‌ಪೇಟ್’ ಚಿತ್ರಗಳ ಶೂಟಿಂಗ್ ಅಂತಿಮ ಹಂತದಲ್ಲಿವೆ. ಮದುವೆ ಬಳಿಕ ಸ್ವಲ್ಪ ಗ್ಯಾಪ್ ತೆಗೆದುಕೊಂಡಿದ್ದೆ. ಈಗ ಎರಡು-ಮೂರು ಸ್ಕ್ರಿಪ್ಟ್ ಓದುತ್ತಿದ್ದೇನೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ.
ಕರಾವಳಿಯಲ್ಲಿ ಹಬ್ಬದ ಸಂಭ್ರಮ
‘ಗೂಳಿಹಟ್ಟಿ’, ‘ರೂಪ’, ‘ತಾರಿಣಿ’ ಸಿನಿಮಾಗಳ ಖ್ಯಾತಿಯ ನಟಿ ಮಮತಾ ರಾಹುತ್ ಮದುವೆಯಾದ ಬಳಿಕವೂ ನಟನೆಯಲ್ಲಿ ಬಿಜಿಯಾಗಿದ್ದಾರೆ. ಈ ಬಾರಿ ಪತಿಯ ಊರಾದ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಹಬ್ಬ ಆಚರಿಸುತ್ತಿದ್ದಾರೆ. ‘ಈ ಬಾರಿ ಮೂಲ್ಕಿಯಲ್ಲಿ ಹಬ್ಬ ಆಚರಿಸುತ್ತಿದ್ದೇವೆ. ಕರಾವಳಿ ಭಾಗದಲ್ಲಿ ಹಬ್ಬದ ದಿನದಂದು ಬಲೀಂದ್ರನನ್ನು ಕರೆಯುತ್ತಾರೆ. ಇದು ನನಗೆ ವಿಶೇಷ ಎನಿಸುತ್ತದೆ. ನಮ್ಮದು ಮರಾಠಿ ಸಂಪ್ರದಾಯ. ಆ ಆಚರಣೆಗೂ ಇದಕ್ಕೂ ಸ್ವಲ್ಪ ವಿಭಿನ್ನ ಎನಿಸುತ್ತದೆ. ದೀಪಾವಳಿ ನಮ್ಮ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವ ಹಬ್ಬ. ನಮ್ಮದೇ ಸ್ವಂತ ಬ್ಯಾನರ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಪ್ರಾರಂಭಿಸುತ್ತಿರುವುದೇ ಈ ಬಾರಿಯ ನಮ್ಮ ದೀಪಾವಳಿ ಸ್ಪೆಷಲ್. ನಾನು ನಟಿಸಿರುವ ‘ಮುರುಗ ಸನ್ ಆ್ ಕಾನೂನು’ ಹಾಗೂ ತೆಲುಗಿನ ‘ಶಿವನಾಗಿನಿ’ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.