ಮಧ್ಯವರ್ತಿಗಳ ಮೊರೆ ಹೋಗಬೇಡಿ

ಹೂವಿನಹಿಪ್ಪರಗಿ: ಸಾಮಾಜಿಕ ಭದ್ರತಾ ಯೋಜನೆಗಳನ್ನು ನೈಜ ಫಲಾನುಭವಿಗಳಿಗೆ ದೊರಕಿಸಿಕೊಡುವ ಉದ್ದೇಶದಿಂದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಬಸವನಬಾಗೇವಾಡಿ ತಹಸೀಲ್ದಾರ್ ಎಂ. ಎನ್. ಚೋರಗಸ್ತಿ ಹೇಳಿದರು.

ಸಮೀಪದ ಬ್ಯಾಕೋಡದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಶನಿವಾರ ಕಂದಾಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ, ಅಂಗವಿಕಲರ ವೇತನಗಳನ್ನು ಪಡೆಯಲು ಅರ್ಹ ಲಾನುಭವಿಗಳು ಮಧ್ಯವರ್ತಿಗಳ ಮೊರೆ ಹೋಗಬಾರದು. ನೇರವಾಗಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಪಿಂಚಣಿ ಮಂಜೂರು ಮಾಡಿಸಿಕೊಳ್ಳಬೇಕು. ಹಣ ಕೇಳುವ ಮಧ್ಯವರ್ತಿಗಳ ವಿರುದ್ಧ ದೂರು ನೀಡಬೇಕು. ಪಿಂಚಣಿ ಅದಾಲತ್‌ನಲ್ಲಿ ಭಾಗವಹಿಸಿ ಪಿಂಚಣಿ ಸೌಲಭ್ಯ ಪಡೆಯಲು ಸಾಧ್ಯವಾಗದವರು ನಿರಾಶರಾಗದೆ ನಿರಂತರವಾಗಿ ಕಂದಾಯ ಇಲಾಖೆ ಸಂರ್ಪಕಿಸಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದು ಎಂದರು.

ಬ್ಯಾಕೋಡ ಗ್ರಾಮದ 32 ಲಾನುಭವಿಗಳ ಅರ್ಜಿ ಸ್ವೀಕರಿಸಲಾಯಿತು. 8 ಲಾನುಭವಿಗಳ ಅರ್ಜಿಗಳಿಗೆ ಸ್ಥಳದಲ್ಲೇ ಆದೇಶ ನೀಡಲಾಯಿತು. 7 ಲಾನುಭವಿಗಳ ಅರ್ಜಿಗಳನ್ನು ಪರಿಶೀಲನೆಗೆ ಸೂಚಿಸಿದ್ದು ಮತ್ತು 17 ಫಲಾನುಭವಿಗಳ ಅರ್ಜಿಗಳನ್ನುಅನರ್ಹಗೊಳಿಸಲಾಯಿತು.

ಕುದುರಿಸಾಲವಾಡಗಿಯಲ್ಲಿ ಕಳೆದ ಬಾರಿ ನಡೆದಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಯಡಿ ಮಂಜೂರಾಗಿದ್ದ 36 ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷ ಸಂಗನಗೌಡ ಬಿರಾದಾರ, ಶೇಖರಯ್ಯ ಹಿರೇಮಠ, ಬಿ. ಜಿ. ಬಿರಾದಾರ, ಉಪತಹಸೀಲ್ದಾರ್ ಜಿ.ಟಿ. ನಾಯಕ, ಕಂದಾಯ ನಿರೀಕ್ಷಕ ವಿ.ಜಿ. ಸಿಂದಗಿ, ಪಿಡಿಒ ಎಂ.ಬಿ. ಸೊನ್ನದ, ಗ್ರಾಮಲೆಕ್ಕಾಧಿಕಾರಿ ಎಸ್.ಬಿ. ನಂದಿ, ಸಲೀಮ್ ಯಲಗೋಡ, ಡಿ.ಬಿ. ಕುಮಟಗಿ, ಗ್ರಾಮ ಸಹಾಯಕ ಹೊನ್ನಪ್ಪ ವಾಲೀಕಾರ, ಚಿದಾನಂದ ನಾಟೀಕಾರ್, ಶಾಂತಾಬಾಯಿ ನಾಟೀಕಾರ ಮತ್ತಿತರರಿದ್ದರು.

 

Leave a Reply

Your email address will not be published. Required fields are marked *