ಒಡೆದಾಳುವುದು ಕಾಂಗ್ರೆಸ್ ಸಂಸ್ಕೃತಿ

ಮಾಜಿ ಸಿಎಂ ಜಗದೀಶ ಶೆಟ್ಟರ್ ಗುಟುರು ರಾಜ್ಯದಲ್ಲಿ ಬಿಜೆಪಿಗೆ 22 ಸ್ಥಾನ

ಹೂವಿನಹಡಗಲಿ: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ದೇಶ, ಭಾಷೆ, ಧರ್ಮ, ಜಾತಿ ಒಡೆಯಲು ಮುಂದಾಗುತ್ತಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇಶದಲ್ಲಿ ನರೇಂದ್ರ ಮೋದಿ ಪರ ಸುನಾಮಿ ಅಲೆ ಎದ್ದಿದೆ. ಮೋದಿ ವಿರುದ್ಧ ರಚನೆಯಾದ ಮಹಾಘಟಬಂಧನ್ ಭ್ರಷ್ಟಾಚಾರದ ಕೂಟವಾಗಿದೆ. ಎನ್‌ಡಿಎ ಒಕ್ಕೂಟ 300ಕ್ಕೂ ಹೆಚ್ಚು ಸ್ಥಾನ ಗೆದ್ದು, ಮತ್ತೆ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ 22 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದೆ.

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದಾರೆ. ಕುಮಾರಸ್ವಾಮಿ ಸಿಎಂ ಎಂಬುದನ್ನು ಮರೆತು ಮಗನಿಗಾಗಿ ಮಂಡ್ಯದಲ್ಲಿ ಬೀಡು ಬಿಟ್ಟಿದ್ದಾರೆ. ಸೋಲುವ ಭೀತಿ ಬಂದಾಗ ಕಣ್ಣೀರು ಸುರಿಸಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಇವರಿಗೆ ಕಣ್ಣೀರು ಪೇಟೆಂಟ್ ನೀಡಬೇಕಿದೆ. ಈ ಬಾರಿ ಜನ ಇವರನ್ನು ಮನೆಗೆ ಕಳಿಸುತ್ತಾರೆ ಎಂದು ಕುಟುಕಿದರು.

ಮುಖಂಡರಾದ ಬಿ.ಚಂದ್ರನಾಯ್ಕ, ನೇಮಿರಾಜ ನಾಯ್ಕ, ಚನ್ನಬಸವನಗೌಡ, ಎಂ.ಬಿ.ಬಸವರಾಜ, ಕೆ.ಗೋವಿಂದರೆಡ್ಡಿ, ಮಧು ನಾಯ್ಕ, ಪೂಜೆಪ್ಪ, ಈಟಿ ಲಿಂಗರಾಜ, ದೂದಾನಾಯ್ಕ, ಶಿವಪುರ ಸುರೇಶ, ಸೋಮಿನಾಯ್ಕ ಇತರರಿದ್ದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ 580 ಕೋಟಿ ರೂ. ಅನುದಾನದಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ 45ಸಾವಿರ ಎಕರೆ ನೀರಾವರಿ ಸೌಲಭ್ಯ, ಪಟ್ಟಣಕ್ಕೆ 2ನೇ ಹಂತದ ಕುಡಿವ ನೀರಿನ ಯೋಜನೆ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, 100 ಹಾಸಿಗೆ ಆಸ್ಪತ್ರೆ, 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿ ಸಾವಿರಾರು ಕೋಟಿ ರೂ. ಅನುದಾನದಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಲಾಗಿದೆ.
| ಜಗದೀಶ ಶೆಟ್ಟರ್ ಮಾಜಿ ಮುಖ್ಯಮಂತ್ರಿ

Leave a Reply

Your email address will not be published. Required fields are marked *