ಹೊಳಲ್ಕೆರೆ: ಪೌರತ್ವ ಕಾಯ್ದೆಯಿಂದ ದೇಶದ ನಾಗರಿಕರಿಗೆ ಯಾವುದೇ ತೊಂದರೆ ಇಲ್ಲ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಇತ್ತೀಚೆಗೆ ಆಯೋಜಿಸಿದ್ದ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರಿಗೆ ಕಡಿವಾಣ ಹಾಕಿ ದೇಶದಲ್ಲಿ ಭದ್ರತೆ ಕಾಪಾಡುವ ಉದ್ದೇಶದಿಂದ ಪೌರತ್ವ ಕಾಯ್ದೆ ಜಾರಿಗೊಳಿಸಲಾಗಿದೆ ಎಂದರು.
ಕಾಯ್ದೆ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಸೇರಿ ಯಾವುದೇ ಧರ್ಮದ ಪ್ರಜೆಗೆ ಅನ್ಯಾಯವಾಗದು ಎಂದು ಹೇಳಿದರು.
ಆರೇಳು ದಶಕಗಳಿಂದ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಈಗ ಅಧಿಕಾರ ಕಳೆದುಕೊಂಡು ಹತಾಶೆಗೊಂಡಿದೆ. ಹೀಗಾಗಿ ಅದು ಅಪಪ್ರಚಾರಕ್ಕೆ ಮುಂದಾಗಿದೆ ಎಂದು ದೂರಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ, ಪೌರತ್ವ ತಿದ್ದುಪಡಿ ಬಿಲ್ ಮಂಡಿಸುವಾಗ ಸಂಸತ್ತಿನಲ್ಲಿಯೇ ಏಕೆ ಪ್ರತಿಭಟಿಸಲಿಲ್ಲ? ಈಗ ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದು ಸಂವಿಧಾನ ಬಾಹಿರ ಎಂದು ಹೇಳಿದರು.
ಜಿಲ್ಲಾ ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ಮಂಡಲ ನೂತನ ಅಧ್ಯಕ್ಷ ಸಿದ್ದೇಶ್, ಜಿಪಂ ಸದಸ್ಯರಾದ ತಿಪ್ಪೇಸ್ವಾಮಿ, ಲಿಂಗರಾಜು, ಪಪಂ ಸದಸ್ಯ ಕೆ.ಸಿ.ರಮೇಶ್, ಎಪಿಎಂಸಿ ಅಧ್ಯಕ್ಷ ರಾಮಣ್ಣ, ಮುಖಂಡರಾದ ನುಲೇನೂರು ಈಶ್ವರಪ್ಪ, ಡಿ.ಸಿ.ಮೋಹನ್, ರಾಮಗಿರಿ ರಾಮಣ್ಣ, ಗ್ರಾಪಂ ಅಧ್ಯಕ್ಷ ಈಶ್ವರಪ್ಪ, ಇಂದ್ರಪ್ಪ, ರೂಪಾ ಸುರೇಶ್, ಮರುಳಸಿದ್ದಪ್ಪ ಇದ್ದರು.