ಗೌರವಧನ ಹೆಚ್ಚಳಕ್ಕೆ ಬಳ್ಳಾರಿಯಲ್ಲಿ ಆಶಾ ಕಾರ್ಯಕರ್ತೆಯರ ರ‌್ಯಾಲಿ

ಬಳ್ಳಾರಿ: ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಶುಕ್ರವಾರ ನಗರದ ಕಾಗೆ ಪಾರ್ಕ್‌ನಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಆರೋಗ್ಯ ಇಲಾಖೆಯ ಮಹತ್ತರ ಕಾರ್ಯಗಳನ್ನು ಆಶಾ ಕಾರ್ಯಕರ್ತೆಯರು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದಾರೆ. ಆದರೆ, ಅವರ ಜೀವನಕ್ಕೆ ಭದ್ರತೆ ಇಲ್ಲದಂತಾಗಿದೆ. ದರ ಏರಿಕೆ ದಿನಗಳಲ್ಲಿ ಕಡಿಮೆ ವೇತನದಲ್ಲಿ ಬದುಕು ಸಾಗಿಸುವುದು ಕಷ್ಟವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆ ಹಾಗೂ ಆರೋಗ್ಯದ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದು, ಇನ್ನಾದರೂ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಠ 12 ಸಾವಿರ ರೂ.ಗೌರವಧನ ನೀಡಬೇಕು. 10 ತಿಂಗಳಿಂದ ಬಾಕಿಯಿರುವ ಎಂಸಿಟಿಎಸ್ ಸೇವೆಗಳ ಆಶಾ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ನಿವೃತ್ತಿ ಹೊಂದುವ ಆಶಾಗಳಿಗೆ ಪಿಂಚಣಿ ಸೌಲಭ್ಯ, ಹೆರಿಗೆ ರಜೆ ನೀಡಬೇಕು. ಮೂರು ತಿಂಗಳಿಗೊಮ್ಮೆ ಆಶಾ ಕುಂದುಕೊರತೆ ನಿವಾರಣಾ ಸಭೆ ನಡೆಸಬೇಕು. ಪ್ರತಿ ತಿಂಗಳು ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು.

ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ರಾಜ್ಯ ಉಪಾಧ್ಯಕ್ಷ ಎ.ದೇವದಾಸ್, ಜಿಲ್ಲಾ ಗೌರವಾಧ್ಯಕ್ಷ ಎ.ಶಾಂತಾ, ಜಿಲ್ಲಾ ಅಧ್ಯಕ್ಷೆ ವೀರಮ್ಮ, ಜಿಲ್ಲಾ ಕಾರ್ಯದರ್ಶಿ ಎಂ.ಗೀತಾ, ಈಶ್ವರಿ ಸೇರಿ ನೂರಾರು ಆಶಾ ಕಾರ್ಯಕರ್ತೆಯರು ಇದ್ದರು.

Leave a Reply

Your email address will not be published. Required fields are marked *