ಗಿರೀಶ ಕಾರ್ನಾಡ್​ಗೆ ನುಡಿನಮನ

ಬೆಂಗಳೂರು: ರಾಜ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಅನನ್ಯ ಸೇವೆ ನೀಡಿರುವ ಗಿರೀಶ ಕಾರ್ನಾಡ್ ಅವರಿಗೆ ಅನುಸಂಧಾನ ಹಾಗೂ ಮುಖಾಮುಖಿ ಎಂಬ ಎರಡು ಮಾರ್ಗಗಳಿದ್ದವು ಎಂದು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕಸಾಪದಲ್ಲಿ ಮಂಗಳವಾರ ಆಯೋಜಿಸಿದ್ದ ‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ ಕಾರ್ನಾಡ್ ನುಡಿನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಿರೀಶರ ಸಾಹಿತ್ಯ ಕೃಷಿಯಲ್ಲಿ ಅನುಸಂಧಾನ ಮಾರ್ಗ ಹಾಗೂ ಸಾರ್ವಜನಿಕ ವಲಯದಲ್ಲಿ ಮುಖಾಮುಖಿ ಮಾರ್ಗವನ್ನು ನಾವು ಕಾಣುತ್ತೇವೆ. ಇಂದು ಚರಿತ್ರೆಯನ್ನು ಪುರಾಣ ಮಾಡುವ

ಮತ್ತು ಪುರಾಣವನ್ನು ಚರಿತ್ರೆ ಮಾಡುವ ವಾತಾವರಣವಿದೆ. ಚರಿತ್ರೆ ಮತ್ತು ಪುರಾಣವನ್ನು ಅಪವ್ಯಾಖ್ಯಾನ ಮಾಡಲಾಗುತ್ತಿದೆ. ಪುರಾಣದ ಕೃತಿಗಳನ್ನು ಗರ್ಭಗುಡಿಯಲ್ಲಿ ಇಟ್ಟು ಯಾರಿಗೂ ಸಿಗದಂತೆ ಮಾಡುವುದು ಒಂದು ವರ್ಗವಿದ್ದರೆ, ಪುರಾಣಗಳಲ್ಲಿ ಏನೇನೂ ಇಲ್ಲ ಎಂದು ಕುರುಡಾಗಿ ನಿರಾಕರಣೆ ಮಾಡುವ ಇನ್ನೊಂದು ವರ್ಗವಿದೆ. ಈ ಎಲ್ಲ ಗೊಂದಲಗಳಿಗೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಸ್ಪಷ್ಟವಾಗಿ ಉತ್ತರ ಸಿಕ್ಕಿದೆ ಎಂದರು.

ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಮಾತನಾಡಿ, ಕಾರ್ನಾಡ್ ಒಳ್ಳೆಯ ಸಾಂಸ್ಕೃತಿಕ ಆಡಳಿತಗಾರ. ಅನ್ಯಾಯದ ವಿರುದ್ಧ ಮತ್ತು ಪ್ರಗತಿಪರ ನಿಲುವುಗಳ ಪರವಾಗಿ ಗಟ್ಟಿಯಾಗಿ ಹೋರಾಟ ಮಾಡಿದ್ದವರು. ನಾಡಿನ ಬಹು ದೊಡ್ಡ ಲೇಖಕರಾಗಿದ್ದ ಅವರು ಬರೆದಿರುವ ನಾಟಕಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತುಂಬಲಾರದ ನಷ್ಟ: ಬಹುಮುಖ ಪ್ರತಿಭೆ ಹೊಂದಿದ್ದ ಕಾರ್ನಾಡ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಬೆಳೆಸಿದ್ದಾರೆ. ಅವರ ಅಗಲಿಕೆಯಿಂದ ಸಾಹಿತ್ಯ ಹಾಗೂ ಚಳವಳಿ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಮರುಳಸಿದ್ದಪ್ಪ ಹೇಳಿದರು.

ಚರಿತ್ರೆಯ ಕಾಲಘಟ್ಟದಲ್ಲಿ ನಡೆದು ಹೋಗಿರುವ ಘಟನೆಗಳು ಮತ್ತು ಈಗ ನಡೆಯುತ್ತಿರುವ ಘಟನೆಗಳ ಬಗ್ಗೆ ಗಿರೀಶ ಕಾರ್ನಾಡ್ ರಚಿಸಿರುವ ಕೃತಿಗಳು ಬೆಳಕು ಚೆಲ್ಲುತ್ತವೆ. ಅಷ್ಟೆಲ್ಲ ನಾಟಕ ಕೃತಿಗಳನ್ನು ರಚಿಸಿರುವ ಅವರು ತಮ್ಮ ನಾಟಕದಲ್ಲಿ ಅಭಿನಯಿಸಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಸ್.ಜಿ. ಸಿದ್ದರಾಮಯ್ಯ ತಿಳಿಸಿದರು.

ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ನನಗಿಂತ ಒಂದು ವರ್ಷ ಹಿರಿಯರಾಗಿದ್ದ ಗಿರೀಶ ಮತ್ತು ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜತೆಯಲ್ಲೇ ಓದಿದ್ದೆ್ದವು. ಧಾರವಾಡದ ಮಣ್ಣಿನ ಮಹಿಮೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವುದಕ್ಕೆ ಪ್ರೇರಣೆ ಸಿಕ್ಕಿತ್ತು ಎಂದು ಹೇಳಿದರು.

ನೆಹರು ಕಾಲದಲ್ಲೇ ರಚಿಸಿದ್ದ ತುಘಲಕ್ ಕೃತಿಯಲ್ಲಿ ಆಡಳಿತ ಹಾಗೂ ರಾಜಕಾರಣದ ನ್ಯೂನತೆ ಬಗ್ಗೆ ವಿಸ್ತಾರವಾಗಿ ಬರೆದಿದ್ದರು. ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡಗೆ ನೀಡಿರುವ ಗಿರೀಶ ಕಾರ್ನಾಡ್ ಅವರದ್ದು ಸರಳ ವ್ಯಕ್ತಿತ್ವ.

| ಡಾ. ಮನು ಬಳಿಗಾರ್, ಕಸಾಪ ಅಧ್ಯಕ್ಷ

Leave a Reply

Your email address will not be published. Required fields are marked *