ರಾಕ್ ​ಗಾರ್ಡನ್ ಸೃಷ್ಟಿಕರ್ತನಿಗೆ ಗೌಡಾ

ಹಾವೇರಿ: ಜನಪದ ರಂಗಕಲೆ ದೊಡ್ಡಾಟದ ಪುನರುಜ್ಜೀವನಕ್ಕೆ ಶ್ರಮಿಸುತ್ತಿರುವ ಹಾಗೂ ವಿಶ್ವದ ಗಮನ ಸೆಳೆದ ಗೊಟಗೋಡಿಯ ಉತ್ಸವ ರಾಕ್​ ಗಾರ್ಡನ್ ಸೃಷ್ಟಿಕರ್ತರಾದ ಹಿರಿಯ ಕಲಾವಿದ ಟಿ.ಬಿ. ಸೊಲಬಕ್ಕನವರ ಅವರು ಜಾನಪದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್​ಗೆ ಭಾಜನರಾಗಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಜನಪ್ರಿಯವಾದ ದೊಡ್ಡಾಟ ಕಲೆಯ ಸಂಶೋಧನೆ ಮತ್ತು ತರಬೇತಿ ಕೇಂದ್ರ ಆರಂಭಿಸಿ, ಪರಿಷ್ಕರಣೆಗೊಳಪಡಿಸಿ ಬೆಳೆಸುವಲ್ಲಿ ಸೊಲಬಕ್ಕನವರ ಪಾತ್ರ ಅಪಾರ. ಜನಪದ ಪ್ರದರ್ಶನ ಕಲೆಗಳನ್ನು ಜೀವಂತವಾಗಿಡಲು ಅವಿರತ ಶ್ರಮಿಸುತ್ತಿರುವ ಸಾವಿರಾರು ಕಲಾವಿದರು ಜಾಗತೀಕರಣ ಪ್ರಭಾವದಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಧೈರ್ಯ ತುಂಬಿ ಸವಾಲುಗಳನ್ನು ಎದುರಿಸಲು ಅಗತ್ಯ ತಂತ್ರಗಳನ್ನು ಸೊಲಬಕ್ಕನವರ ವಿಭಿನ್ನ, ವಿಶಿಷ್ಟ ಪ್ರಯೋಗಗಳಿಂದ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.

ಇವರ ಕಲಾ ಪ್ರತಿಭೆಗೆ ಸೃಜನಶೀಲ ವಿನ್ಯಾಸಗಳು ಕನ್ನಡಿಯಂತಿವೆ. ಗೊಟಗೋಡಿಯ ಉತ್ಸವ ರಾಕ್​ಗಾರ್ಡನ್ ರೂವಾರಿಯಾದ ಇವರಿಗೆ ಕರ್ನಾಟಕ ರಾಜ್ಯೋತ್ಸವ ಸೇರಿ ಅನೇಕ ಪ್ರಶಸ್ತಿಗಳು ಸಂದಿವೆ. ವಿವಿಧತೆಯಲ್ಲಿ ಏಕತೆ ಮೌಲ್ಯ ಪ್ರತಿಬಿಂಬಿಸುವ ಇವರ ಸೃಜನಶೀಲ ಕಲಾಶಿಲ್ಪಗಳ ರೂಪಣೆಗೆ 8ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

ಮನಸೆಳೆಯುವ ಉದ್ಯಾನಗಳು: ಶಿಗ್ಗಾಂವಿ ತಾಲೂಕಿನ ಹುಲಸೋಗಿ ಗ್ರಾಮದಲ್ಲಿ 1947ರಲ್ಲಿ ಜನಿಸಿದ ಇವರು, 20 ವರ್ಷ ದಾವಣಗೆರೆ ಲಲಿತಕಲಾ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸಿನಿಮಾ ನಿರ್ದೇಶನ, ವಿವಿಧ ಪತ್ರಿಕೆಗಳಲ್ಲಿ ಕಲಾಕಾರರಾಗಿ ಕಾರ್ಯನಿರ್ವಹಿಸಿದ್ದು, ಚಾರ್​ಕೋಲ್, ಪೆನ್ ಮತ್ತು ಇಂಕ್ ಮೀಡಿಯಾದಲ್ಲಿ ನೈಪುಣ್ಯತೆ ಸಾಧಿಸಿದ್ದಾರೆ. ಉತ್ಸವ ರಾಕ್​ಗಾರ್ಡನ್ ಅಷ್ಟೇ ಅಲ್ಲದೇ, ಆಲಮಟ್ಟಿ ರಾಕ್ ಗಾರ್ಡನ್, ಕೃಷ್ಣಾ ಗಾರ್ಡನ್, ಲವಕುಶ ಗಾರ್ಡನ್, ಬಾಗಲಕೋಟೆಯ ಜಾನಪದ ವಸ್ತುಸಂಗ್ರಹಾಲಯ ಇವೆಲ್ಲವೂ ಇವರ ಕೈ ಚಳಕದಲ್ಲೇ ಮೈದಳೆದಿವೆ.

ಸೃಜನಶೀಲ ಕಲಾಪ್ರತಿಭೆಗೆ ಗೌಡಾ: ರಾಕ್​ಗಾರ್ಡನ್​ನಲ್ಲಿ ಗ್ರಾಮೀಣ ಜೀವನ ಪದ್ಧತಿಯ ಯಥಾವತ್ ರೂಪಗಳನ್ನು ಸೃಜಿಸುವ ಮೂಲಕ ಜಾನಪದ ಸೊಗಡನ್ನು ಸೊಲಬಕ್ಕನವರ ಹಿಡಿದಿಟ್ಟಿದ್ದಾರೆ. ‘120 ಅಡಿ ಉದ್ದದ ಅಣುಶಕ್ತಿಯ ಯುದ್ಧ ನಿಲ್ಲಿಸಿ’ ಎಂಬ ಪೇಂಟಿಂಗ್ ಮೂಲಕ ನಡೆಸಿದ ಜಾಗೃತಿ ಅಭಿಯಾನ ಗಮನ ಸೆಳೆದಿದೆ. ಜನಪದ ಕಲೆ ಕುರಿತು ಪ್ರಾಯೋಗಿಕತೆ, ಜನಪದ ಪ್ರದರ್ಶನ ಕಲೆ ಉಳಿವಿಗಾಗಿ ಅವಿರತ ಶ್ರಮಿಸುತ್ತಿದ್ದಾರೆ. ಜನಪದ ರಂಗಕಲೆಯಾದ ದೊಡ್ಡಾಟಕ್ಕೆ ಅವರು ನೀಡಿದ ಕೊಡುಗೆ, ಶಿಲ್ಪ ಕಲಾಕೃತಿಗಳ ಮೂಲಕ ಗ್ರಾಮೀಣ ಸಂಸ್ಕೃತಿ ಬಿಂಬಿಸುವ ಇವರ ಸೃಜನಶೀಲ ಕಲಾಪ್ರತಿಭೆಯನ್ನು ಗುರುತಿಸಿ ಜಾನಪದ ವಿಶ್ವವಿದ್ಯಾಲಯವು ಅ. 31ರಂದು ನಡೆಯುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ. ಇದು ಜಿಲ್ಲೆಯ ಕಲಾವಿದರೊಬ್ಬರಿಗೆ ಸಿಗುತ್ತಿರುವ ದೊಡ್ಡ ಗೌರವ. ಈ ಮೂಲಕ ವಿವಿ ಸ್ಥಾಪನೆಯಾಗಿ ಐದು ವರ್ಷಗಳಿಂದ ಸ್ಥಳೀಯರಿಗೆ ಆದ್ಯತೆ ನೀಡುತ್ತಿಲ್ಲ ಎಂಬ ಆರೋಪದಿಂದಲೂ ವಿವಿ ಮುಕ್ತವಾದಂತಾಗಿದೆ.

ನನ್ನನ್ನು ಗುರುತಿಸಿ ಜಾನಪದ ವಿವಿ ಗೌರವ ಡಾಕ್ಟರೇಟ್ ನೀಡುತ್ತಿರುವುದಕ್ಕೆ ಸಹಜವಾಗಿ ಖುಷಿಯಾಗಿದೆ. ಇದು ನನಗೆ ಎನ್ನುವುದಕ್ಕಿಂತ ಸಮಸ್ತ ಜಾನಪದ ಕಲಾವಿದರಿಗೆ ಸಿಕ್ಕ ಗೌರವ. ಇದರಿಂದ ನನ್ನ ಮೇಲಿನ ಜವಾಬ್ದಾರಿ ಹೆಚ್ಚಿದೆ. ದೊಡ್ಡಾಟ ಕಲೆ ಉಳಿಸಿ ಬೆಳೆಸುವಲ್ಲಿ ಪ್ರೋತ್ಸಾಹ ಸಿಕ್ಕಂತಾಗಿದೆ.

| ಟಿ.ಬಿ. ಸೊಲಬಕ್ಕನವರ, ಜಾವಿವಿ, ಗೌಡಾ ಪುರಸ್ಕೃತ ಕಲಾವಿದ