ಹೊನ್ನಾಳಿಯಲ್ಲಿ ನೆರವಿನ ಮಹಾಪೂರ

ಹೊನ್ನಾಳಿ: ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕಿನ ಜನರು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವು ನೀಡಲು ಹಣ, ಆಹಾರಧಾನ್ಯ, ಹೊಸ ಬಟ್ಟೆ ಸೇರಿ ವಿವಿಧ ವಸ್ತುಗಳನ್ನು ಸಂಗ್ರಹಿಸಿ ತಾಲೂಕು ಆಡಳಿತಕ್ಕೆ ನೀಡಿದ್ದಾರೆ.

ಕತ್ತಿಗೆ, ಮಲೆಕುಂಬಳೂರು, ಎಚ್.ಗೋಪಗೊಂಡನಹಳ್ಳಿ, ಜೀನಹಳ್ಳಿ, ಕ್ಯಾಸಿನಕೆರೆ, ಬೆನಕನಹಳ್ಳಿ, ಬೀರಗೊಂಡನಹಳ್ಳಿ, ದೇವರಹೊನ್ನಾಳಿ, ಅರಕೆರೆ, ಹೊಟ್ಯಾಪುರ, ಹಿರೇಬಾಸೂರು ಗ್ರಾಮಸ್ಥರು, ಹೊನ್ನಾಳಿಯ ಶ್ರೀ ಬೀರಲಿಂಗೇಶ್ವರ ಟ್ರಸ್ಟ್ ಸೇರಿ ಇತರ ಸಂಘ ಸಂಸ್ಥೆಗಳು 8.63 ಲಕ್ಷ ರೂ. ನಗದು 230 ಪ್ಯಾಕೆಟ್ ಅಕ್ಕಿ, ಒಂದು ಪ್ಯಾಕೇಟ್ ಬೇಳೆ ದೇಣಿಗೆ ನೀಡಿವೆ.

ಮಾರಿಕೊಪ್ಪದ ಶ್ರೀ ಹಳದಮ್ಮ ದೇವಸ್ಥಾನದಿಂದ 1ಸಾವಿರ ಸೀರೆ, ಅವಳಿ ತಾಲೂಕುಗಳಿಂದ 2300 ಸೇರಿ ಒಟ್ಟು 3300 ಸೀರೆಗಳನ್ನು ದಾನಿಗಳು ನೀಡಿದ್ದಾರೆ. ಇದಲ್ಲದೆ ಮಕ್ಕಳಿಗೆ ಟಿ ಶರ್ಟ್, ಲೆಗ್ಗಿನ್ಸ್ ಸೇರಿ ಇತರ ಹೊಸ ಬಟ್ಟೆಗಳನ್ನು ನೀಡಿ ನೆರವಿನ ಮಹಾಪೂರವನ್ನೇ ಹರಿಸಿದ್ದಾರೆ.

1 ಲಕ್ಷ ನೀಡಿದ ರೈತ: ತಾಲೂಕಿನ ಬೆನಕಹಳ್ಳಿ ಗ್ರಾಮದ ರೈತ ಮಹೇಂದ್ರಗೌಡ ಉತ್ತರ ಕರ್ನಾಟದ ಸಂತ್ರಸ್ತರಿಗೆ 1 ಲಕ್ಷ ರೂ. ಮೊತ್ತದ ಚೆಕ್ ನೀಡಿ ಎಲ್ಲರ ಮೆಚ್ಚುಗೆ ಪಡೆದರು.

ಹಣ ನೀಡಿ ರಸೀದಿ ಪಡೆಯಿರಿ: ಶಾಸಕ ಎಂ.ಪಿ.ರೇಣುಕಾಚಾರ್ಯ ಸಾರ್ವಜನಿಕರಿಂದ ಚೆಕ್, ಆಹಾರ ಪದಾರ್ಥ ಸ್ವೀಕರಿಸಿ, ಪ್ರವಾಹಕ್ಕೆ ಸಿಕ್ಕು ಪರದಾಡುತ್ತಿರುವ ಸಹೋದರರಿಗೆ ನೆರವು ನೀಡುವುದು ನಮ್ಮ ಕರ್ತವ್ಯ. ಅವಳಿ ತಾಲೂಕಿನ ಸಹೃದಯರು ಕೈಲಾದ ಹಣವನ್ನು ತಾಲೂಕು ಆಡಳಿತಕ್ಕೆ ನೀಡಿ ರಸೀದಿ ಪಡೆಯಿರಿ ಎಂದು ಮನವಿ ಮಾಡಿದರು.

ಸಿದ್ಧಪಡಿಸಿದ ಆಹಾರ ಬೇಡ: ರೊಟ್ಟಿ, ಚಟ್ನಿ ಸೇರಿದಂತೆ ಸಿದ್ದಪಡಿಸಿದ ಆಹಾರ ತಂದು ಕೊಡಬೇಡಿ. ಅಲ್ಲಿಗೆ ಕಳುಹಿಸುವ ಸಮಯಕ್ಕೆ ಅದು ಹಾಳಾಗುತ್ತದೆ. ಹೀಗಾಗಿ ಆಹಾರಕ್ಕೆ ತಗಲುವ ಹಣ ಕೊಟ್ಟು ರಸೀದಿ ಪಡೆಯಿರಿ ಎಂದು ತಹಸೀಲ್ದಾರ್ ತುಷಾರ್ ಬಿ.ಹೊಸೂರ ಮನವಿ ಮಾಡಿದರು.

Leave a Reply

Your email address will not be published. Required fields are marked *