ನೀರಿನ ಹಾಹಾಕಾರಕ್ಕೂ ಮುನ್ನ ಎಚ್ಚರ ವಹಿಸಿ

ಹೊನ್ನಾಳಿ: ಪಟ್ಟಣದ ಎಲ್ಲ 18 ವಾರ್ಡ್‌ಗಳಲ್ಲಿ ವಾಸವಿರುವ ಎಲ್ಲ ನಾಗರಿಕರು ತಮ್ಮ ಮನೆ ಮುಂಭಾಗದ ನಳಗಳಿಗೆ ಟ್ಯಾಪ್‌ಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಕುಡಿವ ನೀರಿಗಾಗಿ ಹಾಹಾಕಾರ ಏರ್ಪಡಲಿದೆ ಎಂದು ಪಪಂ ಮುಖ್ಯಾಧಿಕಾರಿ ಎಸ್.ಆರ್.ವೀರಭದ್ರಯ್ಯ ಹೇಳಿದರು.

ವಿಶ್ವ ಜಲ ದಿನದ ಅಂಗವಾಗಿ ಪಟ್ಟಣ ಪಂಚಾಯಿತಿಯಿಂದ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಮಾತನಾಡಿ, ಈಗಾಗಲೇ ಭೀಕರ ಬರಗಾಲದಿಂದಾಗಿ ನಾಡಿನಲ್ಲಿ ಕುಡಿವ ನೀರಿಗೆ ತಾತ್ವಾರ ಆರಂಭವಾಗಿದೆ. ಬೆಳೆದು ನಿಂತಿದ್ದ ತೋಟ-ಗದ್ದೆಗಳಲ್ಲಿ ನೀರಿಲ್ಲದೇ ಬೆಳೆಗಳು ಒಣಗುವ ಸ್ಥಿತಿಗೆ ಬಂದಿವೆ. ಹಳ್ಳ-ಕೊಳ್ಳಗಳಲ್ಲಿ ನೀರು ಬರಿದಾಗಿದೆ. ತುಂಗಭದ್ರಾ ನದಿಯಲ್ಲೂ ನೀರಿನ ಹರಿವು ದಿನೇ ದಿನೆ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೀಗಿರುವಾಗ ಹನಿ ಹನಿ ನೀರು ಜೀವಗಳಿಗೆ ಜೀವನಾಡಿಯಿದ್ದಂತೆ. ಆದ್ದರಿಂದ ನಳಗಳಲ್ಲಿ ಹರಿದು ಬರುವ ನೀರು ಚರಂಡಿ ಪಾಲಾಗುತ್ತಿದೆ. ಇದರಿಂದ ಯಾರಿಗೂ ಪ್ರಯೋಜನವಿಲ್ಲ. ನೀರಿನ ಅಗತ್ಯ ಅರಿತು ಅದನ್ನು ಪೋಲಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಪಪಂ ಆರೋಗ್ಯಾಧಿಕಾರಿ ನಾಗೇಶ್, ಶ್ರೀನಿವಾಸ್, ಆಟೋ ಸಂಘದ ಚಾಲಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.